5 ದಿನ ಬಳಿಕ ಹಂಚಿಕೆಯಾಗಿದ್ದು 30,000 ವಯಲ್ಸ್‌?;18ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮುಂದೂಡಿಕೆ?

ಬೆಂಗಳೂರು; 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ಹಾಕಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆಯಾದರೂ ಕರ್ನಾಟಕ ಸರ್ಕಾರ ಅದನ್ನು ಇನ್ನಷ್ಟು ದಿನಗಳ ಕಾಲ ಮುಂದೂಡಲು ಯತ್ನಿಸಿದೆ.!

ಲಸಿಕೆ ಹಂಚಿಕೆಯಲ್ಲಿನ ವಿಳಂಬವನ್ನು ಮರೆಮಾಚಲು ಮುಂದಾದಂತಿರುವ ರಾಜ್ಯ ಬಿಜೆಪಿ ಸರ್ಕಾರವು ಮೇ 15ರ ನಂತರ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಯೋಜಿಸಿದೆ ಎಂದು ತಿಳಿದು ಬಂದಿದೆ.

ಹೀಗಾಗಿಯೇ ಇಲಾಖೆಯ ಯಾವೊಬ್ಬ ಅಧಿಕಾರಿ,ನೌಕರನ ಬಳಿ ಲಸಿಕೆ ಕುರಿತಾದ ಯಾವ ಮಾಹಿತಿಯೂ ಇಲ್ಲವಾಗಿದೆ. ಎಷ್ಟು ಲಸಿಕೆಗಳನ್ನು ಯಾವಾಗ ಸರಬರಾಜು ಮಾಡಲಾಗುವುದು ಎಂಬ ಮಾಹಿತಿಯನ್ನು ನೀಡುತ್ತಿಲ್ಲ. ಇದರಿಂದಾಗಿ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಿಗಧಿಪಡಿಸಿಕೊಂಡ ಸಮಯಕ್ಕೆ ಪೂರ್ಣಗೊಳಿಸುವುದು ಬಹುತೇಕ ಅನುಮಾನ. ಮೇ 1 ರ ನಂತರ ಲಸಿಕೆ ನೀಡುವಿಕೆ ಕಾರ್ಯಕ್ರಮದ ಕುರಿತು ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಯಾವೊಬ್ಬ ಶಾಸಕರ ಬಳಿಯೂ ಕನಿಷ್ಠ ಮಾಹಿತಿಯೂ ಇಲ್ಲವಾಗಿದೆ.

ಈ ನಡುವೆ ಉದ್ಭವಿಸಿರುವ ಲಸಿಕೆಗಳ ತೀವ್ರ ಕೊರತೆಯಿಂದಾಗಿ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್‌ ನೀಡಲು ಲಸಿಕೆಗಳಿಲ್ಲವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ 2ನೇ ಡೋಸ್‌ ನೀಡಲು ಲಸಿಕೆಗಳ ಅಭಾವ ಎದುರಾಗಿದೆ ಎಂದು ಗೊತ್ತಾಗಿದೆ.

ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರವೊಂದರಲ್ಲಿ 45 ವರ್ಷ ಮೇಲ್ಪಟ್ಟವರು ಮತ್ತು 18-44 ವರ್ಷದವರಿಗೆ ಲಸಿಕೆ ನೀಡಬೇಕಾದರೆ ಪ್ರತಿ ದಿನ 10,000 ಲಸಿಕೆಗಳ ಅಗತ್ಯವಿದೆ. ಇದೊಂದೇ ಕ್ಷೇತ್ರಕ್ಕೆ ಕನಿಷ್ಠ 8-10 ಲಕ್ಷ ಲಸಿಕೆಗಳ ಅಗತ್ಯವಿದೆ ಎಂದು ಶಾಸಕ ಕೃಷ್ಣಬೈರೇಗೌಡ ಅವರು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

‘ದಿ ಫೈಲ್‌’ಗೆ ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯಕ್ಕೆ ಇಂದು ಬೆಳಗ್ಗೆ 30,000 ವಯಲ್‌ ಹಂಚಿಕೆಯಾಗಿದೆ. ಒಂದು ವಯಲ್‌ನಲ್ಲಿ 10 ಮಂದಿಗಷ್ಟೇ ಲಸಿಕೆ ಹಾಕಬಹುದು. ಹಂಚಿಕೆಯಾಗಿರುವ 30,000 ವಯಲ್‌ಗಳನ್ನು ರಾಜ್ಯದ ಅತಿ ದೊಡ್ಡ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬೆಳಗಾವಿ, ತುಮಕೂರು ಜಿಲ್ಲೆಗಳಿಗೆ 30,000 ವಯಲ್‌ಗಳಲ್ಲಿ ಬಹುಪಾಲು ಹಂಚಿಕೆಯಾದರೆ ಉಳಿದ ಜಿಲ್ಲೆಗಳಿಗೆ ಅತ್ಯಲ್ಪ ಪ್ರಮಾಣದ ವಯಲ್‌ಗಳಷ್ಟೇ ಲಭ್ಯವಾಗಲಿದೆ. ಹೀಗಾಗಿ ಲಸಿಕಾಕರಣ ಅಭಿಯಾನವು ಬಹುತೇಕ ಮುಗ್ಗರಿಸಿದಂತೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ದಿನವೊಂದಕ್ಕೆ 13,000 ವಯಲ್‌ಗಳ ಅಗತ್ಯವಿದೆ. ಇದು ಕೂಡ 45 ವರ್ಷ ಮೇಲ್ಪಟ್ಟವರಿಗಷ್ಟೇ. ಇದೇ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 4.17 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲ ಮತ್ತು ಎರಡನೇ ಡೋಸ್‌ ಸೇರಿದರೆ ಒಟ್ಟು 8.34 ಲಕ್ಷ ಲಸಿಕೆ ದಾವಣಗೆರೆ ಜಿಲ್ಲೆಯೊಂದಕ್ಕೆ ಬೇಕಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ನೋಂದಣಿ ಮಾಡಿಸಿಕೊಂಡವರಿಗೂ ಲಸಿಕೆ ಅಲಭ್ಯ?

ಲಸಿಕೆ ಹಂಚಿಕೆಯಲ್ಲಿ ಆಗಿರುವ ವಿಳಂಬ ಅಥವಾ ಕೊರತೆಯಿಂದಾಗಿ ಈಗಾಗಲೇ ನೋಂದಣಿ ಮಾಡಿಸಿಕೊಂಡ 18-45 ವಯೋಮಾನದವರಿಗೆ ಮೇ 1ರಿಂದ ಲಸಿಕೆ ಸಿಗುವುದು ಖಚಿತವಿಲ್ಲ. ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನ್ನೇ ಮುಂದಿರಿಸಿಕೊಂಡಂತಿರುವ ರಾಜ್ಯ ಬಿಜೆಪಿ ಸರ್ಕಾರವು ಮೇ 15ರ ನಂತರ ಲಸಿಕೆ ನೀಡಲು ಯೋಜಿಸಿದೆ ಎಂದು ಗೊತ್ತಾಗಿದೆ. ಒಂದು ವೇಳೆ ಸರ್ಕಾರದ ನಿಲುವು ಇದೇ ಆಗಿದ್ದರೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಕೋವಿಡ್‌ 2ನೇ ಅಲೆಯು ಇನ್ನಷ್ಟು ಹರಡಲು ಕಾರಣವಾಗಲಿದೆ ಎಂದು ಹೇಳಲಾಗಿದೆ.

ಬೆಂಗಳೂರು ನಗರವೊಂದರಲ್ಲಿ ದಿನವೊಂದಕ್ಕೆ 30-40 ಸಾವಿರ ಲಸಿಕೆ ಹಾಕಿಸಿದರೂ ಲಸಿಕಾಕರಣ ಅಭಿಯಾನ ಪೂರ್ಣಗೊಳ್ಳಲು ಕನಿಷ್ಠ 3ರಿಂದ 6 ತಿಂಗಳು ಬೇಕಾಗಲಿದೆ. ಒಬ್ಬರಿಗೆ ಲಸಿಕೆ ಹಾಕಿಸಿದರೆ ಆತನಿಂದ ಮೂವರಿಗೆ ಹರಡುವುದನ್ನು ತಪ್ಪಿಸಬಹುದು. 30-40 ಸಾವಿರ ಜನರಿಗೆ ಲಸಿಕೆ ಹಾಕಿಸಿದರೆ ಕನಿಷ್ಠ 1ಲಕ್ಷ ಜನರಿಗೆ ಕೋವಿಡ್‌ ಹರಡುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

ಇನ್ನು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ 7-8 ಲಕ್ಷ ಜನಸಂಖ್ಯೆ ಇದೆ. ಸ್ವಯಂ ಸೇವಕರು, ಆರೋಗ್ಯ ಇಲಾಖೆಯ ಸಿಬ್ಬಂಧಿಗಳ ತಂಡದ ಗರಿಷ್ಠ ಪ್ರಯತ್ನದಿಂದಾಗಿ ಇದುವರೆಗೆ 1.2 ಲಕ್ಷಕ್ಕೂ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ಆದರೂ ಇದೊಂದೇ ಕ್ಷೇತ್ರಕ್ಕೆ 3 ಲಕ್ಷ ಜನರಿಗೆ ಹೆಚ್ಚುವರಿಯಾಗಿ ಲಸಿಕೆ ಬೇಕಾಗಲಿದೆ.

ನಗರ ವ್ಯಾಪ್ತಿಯಲ್ಲಿ 7 ಸಾರ್ವಜನಿಕ ಆರೋಗ್ಯ ಕೇಂದ್ರಗಳಿವೆ. ಪ್ರತಿ ಸಾರ್ವಜನಿಕ ಆರೋಗ್ಯ ಕೇಂದ್ರವೂ 3 ಸಂಚಾರಿ ಲಸಿಕೆ ಹಾಕುವ ಘಟಕಗಳನ್ನು ಹೊಂದಿದೆ. ಒಂದು ಘಟಕಕ್ಕೆ ದಿನವೊಂದಕ್ಕೆ 200 ಲಸಿಕೆಗಳನ್ನು ನೀಡಲು ಮಾತ್ರ ಸಾಧ್ಯ. ಅಂದರೆ, 28 ಘಟಕಗಳಿಂದ ಗರಿಷ್ಠ 5,600 ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯ. ಇದೇ ಪ್ರಮಾಣದಲ್ಲಿ ಲಸಿಕೆ ನೀಡಿದರೆ ಕನಿಷ್ಠ 50 ದಿನಗಳು ಬೇಕಾಗುತ್ತವೆ. ಸಾಂಕ್ರಾಮಿಕವು ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ 50 ದಿನಗಳ ಅವಧಿ ಬಹಳ ದೀರ್ಘವಾಗುತ್ತದೆ ಎನ್ನುತ್ತಾರೆ ಮಾಜಿ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ.

ಇದರ ನಡುವೆ ಸರ್ಕಾರ ಮೇ 1 ರಿಂದ ಲಸಿಕೆ ಹಾಕಿಸಿಕೊಳ್ಳುವವರು ಆನ್ ಲೈನ್ ಮುಖಾಂತರ ನೋಂದಣಿ ಮಾಡಿಸಿಕೊಳ್ಳಬೇಕೆಂದು ಪ್ರಕಟಣೆ ಹೊರಡಿಸಿದೆ. ಬಹುತೇಕ ಕ್ಷೇತ್ರಗಳಲ್ಲಿ ಬಡವರು ಮತ್ತು ದುಡಿಯುವ ವರ್ಗಗಳಿಗೆ ಸೇರಿದವರು. ಲಸಿಕೆಗಾಗಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಬೇಕು ಎಂಬ ಸರ್ಕಾರದ ಪ್ರಕಟಣೆಯಿಂದಾಗಿ ಬಡವರ್ಗ ಮತ್ತು ದುಡಿಯುವ ವರ್ಗಗಳು ಇದರಿಂದ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚಿದೆ. ಈ ವರ್ಗದ ಜನರಿಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಲು ಯಾವುದೇ ತಂತ್ರಜ್ಞಾನದ ಅನುಕೂಲಗಳಿಲ್ಲ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳುವ ಈ ವರ್ಗಗಳ ಬೇಡಿಕೆಯನ್ನು ಮತ್ತು ಅವರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ.

SUPPORT THE FILE

Latest News

Related Posts