ರೆಮ್‌ಡಿಸಿವರ್‌; ಮುಕ್ತ ಮಾರುಕಟ್ಟೆಗೆ ಹೆಚ್ಚು ಪೂರೈಸಿ 20 ಕೋಟಿ ವಹಿವಾಟು ನಡೆಸಿದ ಕಂಪನಿಗಳು?

ಬೆಂಗಳೂರು; ಸರಿಯಾದ ಸಮಯಕ್ಕೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ದೊರೆಯದ ಕಾರಣ ಕೋವಿಡ್‌ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಪರದಾಡುತ್ತಿದ್ದರೆ ಇತ್ತ ರೆಮ್‌ಡಿಸಿವಿರ್‌ ತಯಾರಿಕೆ ಕಂಪನಿಗಳು ಸರ್ಕಾರಕ್ಕಿಂತಲೂ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಮಾಡಿರುವುದು ಇದೀಗ ಬಹಿರಂಗವಾಗಿದೆ.

ಏಪ್ರಿಲ್‌ 21ರಿಂದ 28ರವರೆಗೆ ಮೈಲಾನ್‌ ಸೇರಿದಂತೆ ಕೆಲ ಕಂಪನಿಗಳು ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಗೆ ರೆಮ್‌ಡಿಸಿವಿರ್‌ ಪೂರೈಕೆ ಮಾಡಿ ಒಟ್ಟು 20 ಕೋಟಿ ರು ವಹಿವಾಟು ನಡೆಸಿದೆ ಎಂದು ತಿಳಿದು ಬಂದಿದೆ. ಕೇವಲ 7 ದಿನದಲ್ಲಿಯೇ 20 ಕೋಟಿ ವಹಿವಾಟು ನಡೆಸಿರುವ ಕಂಪನಿಗಳ ಲಾಭಕೋರತನಕ್ಕೆ ರಾಜ್ಯ ಬಿಜೆಪಿ ಸರ್ಕಾರ ಈವರೆವಿಗೂ ಕಡಿವಾಣ ಹಾಕಿಲ್ಲ. ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆ ಮಾಡುವ ಸಂಬಂಧ ನೀತಿ ಅಥವಾ ಮಾರ್ಗಸೂಚಿಗಳನ್ನು ರೂಪಿಸದೇ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

2021ರ ಏಪ್ರಿಲ್‌ 21ರಿಂದ 28ರವರೆಗೆ ಮೈಲಾನ್‌ ಕಂಪನಿ ಸರ್ಕಾರಕ್ಕೆ ಬಿಡುಗಡೆ ಮಾಡುವ ಜತೆಯಲ್ಲಿಯೇ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆ ಮಾಡಿವೆ. ಮೈಲಾನ್‌ ಕಂಪನಿಯು ಸರ್ಕಾರಕ್ಕೆ ಬಿಡುಗಡೆ ಮಾಡಿರುವ ವಯಲ್‌ಗಳಿಗಿಂತ ಹೆಚ್ಚುವರಿಯಾಗಿ 3,895 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿದೆ.

ಸರ್ಕಾರಕ್ಕೆ ಬಿಡುಗಡೆ ಮಾಡದಿರುವ ಸಿಪ್ಲಾ, ಹೆಟ್ರೋ , ಡಾ ರೆಡ್ಡೀಸ್‌, ಕೆಡಿಲಾ ಸೇರಿದಂತೆ ಹಲವು ಕಂಪನಿಗಳು  ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಏಪ್ರಿಲ್‌ 21ರಿಂದ 28ರವರೆಗೆ ಈ ಕಂಪನಿಗಳು ಸರಬರಾಜು ಮಾಡಿರುವ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಏಪ್ರಿಲ್‌ 21ರಿಂದ 28ರವರೆಗೆ ಒಟ್ಟು 1,00,247 ವಯಲ್‌ಗಳು ರಾಜ್ಯಕ್ಕೆ ಪೂರೈಕೆ ಆಗಿವೆ. ಈ ಪೈಕಿ ಮೈಲಾನ್‌ ಮತ್ತು ಸಿನ್‌ಜಿನ್‌ ಕಂಪನಿಗಳು ಸರ್ಕಾರಕ್ಕೆ 41,040 ಸರಬರಾಜು ಮಾಡಿವೆ. ಇದರಲ್ಲಿ ಮೈಲಾನ್‌ ಕಂಪನಿಯೊಂದೇ ಸರ್ಕಾರಕ್ಕೆ 28,040 ವಯಲ್‌ಗಳನ್ನು ಸರ್ಕಾರಕ್ಕೆ ಪೂರೈಕೆ ಮಾಡಿದೆ. ಒಟ್ಟಾರೆ ಮುಕ್ತ ಮಾರುಕಟ್ಟೆಗೆ 59,207 ವಯಲ್‌ನಷ್ಟು ಸರಬರಾಜು ಆಗಿದೆ. ಈ ಪೈಕಿ ಮೈಲಾನ್‌ ಮತ್ತು ಸಿನ್‌ಜಿನ್‌ ಹೊರತುಪಡಿಸಿದ ಕಂಪನಿಗಳು 27,272 ವಯಲ್‌ಗಳನ್ನು ಪೂರೈಕೆ ಮಾಡಿರುವುದು ತಿಳಿದು ಬಂದಿದೆ.

 

ಸರ್ಕಾರಕ್ಕೆ ಒಂದೇ ಒಂದು ಔಷಧ ನೀಡದ ಜ್ಯುಬಿಲಿಯೆಂಟ್‌ ಕಂಪನಿಯು ಏಪ್ರಿಲ್‌ 27ರಂದು 600 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿದೆ. ಅದೇ ರೀತಿ ಸಿಪ್ಲಾ ಕಂಪನಿಯು ಸಹ ಒಟ್ಟು 2,432, ಹೆಟ್ರೋ ಕಂಪನಿಯು 24,240 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿದೆಯೇ ವಿನಃ ಸರ್ಕಾರಕ್ಕೆ ಒಂದೇ ಒಂದು ಔಷಧವನ್ನು ಸರಬರಾಜು ಮಾಡದಿರುವುದು ತಿಳಿದು ಬಂದಿದೆ.

ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಂದಿನಂತೆ ತಮ್ಮ ಬೇಜವಾಬ್ದಾರಿ ಮತ್ತು ಹಣದಾಸೆಗಾಗಿ ಈ ಬಾರಿ ಜನರ ಪ್ರಾಣವನ್ನೇ ಕೊಲ್ಲುತ್ತಿದ್ದಾರೆ. ರೆಮ್‌ಡಿಸಿವಿರ್‌ ವಿತರಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯೋಚಿತ ವ್ಯವಸ್ಥೆ ರೂಪಿಸಲಾರದೆ ಖಾಸಗಿ ಕಂಪನಿಗಳು ಕಾಳಸಂತೆಯಲ್ಲಿ ದುಡ್ಡು ಇರುವವರಿಗೆ ಅಗತ್ಯವಿರಲಿ, ಬಿಡಲಿ ಔಷಧ ಮಾರುವ ಹಾಗೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾವಿರಾರು ರೋಗಿಗಳಿಗೆ ರೆಮ್‌ಡಿಸಿವಿರ್‌ನಂತಹ ಜೀವ ರಕ್ಷಕ ಔಷಧ ಸಿಗದ ಹಾಗೇ ಮಾಡಿದ್ದಾರೆ. ರಾಜ್ಯ ಸರ್ಕಾರವು ಇಂತಹ ಸಂದರ್ಭದಲ್ಲಿ ತುರ್ತಾಗಿ ನಿಯಮ ಅಥವಾ ಮಾರ್ಗಸೂಚಿ ರೂಪಿಸುವ ಮೂಲಕ ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೆಮ್‌ಡಿಸಿವಿರ್‌ ಪೂರೈಸಲು ಕ್ರಮಕೈಗೊಳ್ಳಬೇಕು. ಉತ್ಪಾದನೆಯಾಗುತ್ತಿರುವ ರೆಮ್‌ಡಿಸಿವರ್‌ಗಳನ್ನು ಸರ್ಕಾರದ ಉಸ್ತುವಾರಿಯಲ್ಲಿಯೇ ಅಗತ್ಯ ಇರುವ ರೋಗಿಗಳಿಗೆ ಮಾತ್ರ ವಿತರಣೆ ಆಗುವ ಹಾಗೆ ನೋಡಿಕೊಳ್ಳಬೇಕಿತ್ತು.

ರವಿಕೃಷ್ಣಾರಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ

ಮೈಲಾನ್‌ ಕಂಪನಿಯು ಮುಕ್ತ ಮಾರುಕಟ್ಟೆಗೆ 31,935 (ಸರ್ಕಾರಕ್ಕೆ 28,040), ಸರ್ಕಾರಕ್ಕೆ  13,000 ವಯಲ್‌ ಪೂರೈಕೆ ಮಾಡಿರುವ ಸಿನ್‌ಜಿನ್‌ ಕಂಪನಿಯು ಮುಕ್ತ ಮಾರುಕಟ್ಟೆಗೆ ಪೂರೈಸಿಲ್ಲ.

ಹೈದರಾಬಾದ್‌ ಮೂಲದ ಡಾ ರೆಡ್ಡೀಸ್‌ ಲ್ಯಾಬ್‌ ಮುಕ್ತ ಮಾರುಕಟ್ಟೆಗೆ ಆರಂಭದಲ್ಲಿ 5,400 ರು. ನಿಗದಿಪಡಿಸಿತ್ತಾದರೂ ಇದೀಗ 2,700 ರು. ನಿಗದಿಪಡಿಸಿದೆ. ಅದೇ ರೀತಿ ಸಿಪ್ಲಾ ಕಂಪನಿಯು ಕೂಡ 3,000 (ಮೊದಲು 4,000 ರು), ಮೈಲಾನ್‌ ಕಂಪನಿಯು 3,400 (ಮೊದಲು 4,800), ಜ್ಯುಬಿಲಿಯೆಂಟ್‌ 3,400 (4,700) ರು. ಅದೇ ರೀತಿ ಹೆಟಾರಿಯೋ ಹೆಲ್ತ್‌ಕೇರ್‌ ಕಂಪನಿಯು 3,490 (ಮೊದಲು 5,400 ರು) ರು. ನಿಗದಿಪಡಿಸಿದೆ.

ಸರ್ಕಾರದ ಅಂಕಿ ಅಂಶಗಳಿಗೂ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ ಇರುವ ಔಷಧಕ್ಕೂ ತಾಳೆ ಆಗುತ್ತಿಲ್ಲ. ಕರ್ನಾಟಕ ಸರ್ಕಾರದ ಕೆಡಿಎಲ್‌ಡಬ್ಲ್ಯೂಎಸ್‌ ಇದರ ಮುಖಾಂತರ ಖರೀದಿ ಮಾಡಿದ ಅಷ್ಟೂ ಔಷಧ, ಚುಚ್ಚುಮದ್ದು ಎಲ್ಲಿಗೆ ವಿತರಣೆ ಆಗಿದೆ, ಯಾವ್ಯಾವ ವಿಭಾಗವಾರು ಎಷ್ಟೆಷ್ಟು ಹಂಚಿಕೆ ಆಗಿದೆ ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಎಷ್ಟು ಪ್ರಮಣದಲ್ಲಿ ಖರೀದಿಸಿವೆ. ಇದರ ಲೆಕ್ಕವನ್ನು ಮತ್ತು ಅಂಕಿ ಅಂಶಗಳನನ್ನು ಸರ್ಕಾರ ಬಿಡುಗಡೆ ಮಾಡಬೇಕು. ಲಭ್ಯ ಇರುವ ಸರ್ಕಾರಿ ದಾಖಲೆ ಪರಿಶೀಲಿಸಿದರೆ ಇದು ತಾಳೆಯಾಗುತ್ತಿಲ್ಲ. ರೆಮ್‌ಡಿಸಿವರ್‌ ಕೊರತೆ ಇದೆ ಎಂದು ಮಾಧ್ಯಮಮಗಳಲ್ಲಿ ವರದಿಯಾಗುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಕೋವಿಡ್‌ ರೋಗಿಗಳು ದಾಖಲಾಗುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಮಾಡುತ್ತಿರುವ ರೋಗಿಗಳ ಅಂಕಿ ಅಂಶಕ್ಕೂ ಮತ್ತು ರೆಮ್‌ಡಿಸಿವರ್‌ ಚುಚ್ಚುಮದ್ದು ಮತ್ತು ಔಷಧ ಲಭ್ಯತೆ ಮತ್ತು ಬಳಕೆ ಇದರ ನಡುವೆಯೂ ವ್ಯತ್ಯಾಸಗಳಿವೆ. ಔಷಧ ಖರೀದಿ, ದಾಸ್ತಾನು ಮತ್ತು ವಿತರಣೆ ಇದರ ನಡುವೆ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಖಾಸಗಿ ಕಂಪನಿಗಳ ಲಾಭಕೋರತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೀತಿ ಮತ್ತು ನಿಯಮಗಳಿದ್ದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಹೀಗಾಗಿಯೇ ಔಷಧ ಕಂಪನಿಗಳು ಸರ್ಕಾರಕ್ಕಿಂತಲೂ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆ ಮಾಡುತ್ತಿವೆ.

ಕೆ ಬಿ ಕೆ ಸ್ವಾಮಿ, ವಕೀಲರು

ಇದರ ಪ್ರಕಾರ ಮೈಲಾನ್‌ 10.86 ಕೋಟಿ (31,935 ವಯಲ್‌), ಸಿಪ್ಲಾ ಕಂಪನಿ 72,96,000 ರು.,(2,432 ವಯಲ್‌) ಜ್ಯುಬಿಲಿಯೆಂಟ್‌ 20,40,000 ರು.(ವಯಲ್‌) ಹೆಟಾರಿಯೋ ಕಂಪನಿಯು 8.46 ಕೋಟಿ ( 24,240 ವಯಲ್‌) ಸೇರಿದಂತೆ 20 ಕೋಟಿ ವಹಿವಾಟು ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ರೆಮ್‌ಡಿಸಿವಿರ್‌ ಚುಚ್ಚುಮದ್ದು ಹೆಸರಿನಲ್ಲಿ ದೊಡ್ಡ ದಂಧೆ ನಡೆಯುತ್ತಿದೆ. ಇದರಲ್ಲಿ ಸರ್ಕಾರ, ಔಷಧ ಕಂಪನಿಗಳು, ಔಷಧ ನಿಯಂತ್ರಕರ ಕಚೇರಿ ಹಾಗೂ ಕಾಳಸಂತೆಕೋರರು ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವರ್‌ ಸಿಗುತ್ತಿಲ್ಲ. ಖಾಸಗಿ ವೈದ್ಯರು ಚೀಟಿ ಕೊಟ್ಟರೂ ಮೆಡಿಕಲ್‌ ಶಾಪ್‌ಗಳಲ್ಲೂ ದೊರೆಯುತ್ತಿಲ್ಲ. ಸರ್ಕಾರಿ ದಾಖಲೆ ಪ್ರಕಾರ ಮುಕ್ತ ಮಾರುಕಟ್ಟೆಯಲ್ಲಿದೆ ಎಂದಿರುವ 59,047 ವಯಲ್‌ಗಳು ಯಾರ ಪಾಲಾಗಿದೆ. ಈಗಾಗಲೇ ಸಿಸಿಬಿ ಮತ್ತು ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಮ್‌ಡಿಸಿವರ್ ತೀರಾ ಅಗತ್ಯ ಮತ್ತು ಅನಿವಾರ್ಯವಾದರೆ ಅದರ ದರ ಕೈಗೆಟುಕುವಂತಿರಬೇಕು. ಮೆಡಿಕಲ್‌ ಶಾಪ್‌ ಅಥವಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯಬೇಕು. ಅದನ್ನು ಬಿಟ್ಟು ಕಾಳಸಂತೆಕೋರರ ಪಾಲಾಗುತ್ತಿರುವುದು ತೀರಾ ನಾಚಿಕೆಗೇಡಿನ ವಿಚಾರ. ಕೆಲ ರಾಜಕೀಯ ಮುಖಂಡರು ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುವುದಕ್ಕಿಂತಲೂ ವೈಯಕ್ತಿಕವಾಗಿ ರಾಜಕೀಯ ಪಕ್ಷದ ವರ್ಚಸ್ಸಿಗೆ ಮತ್ತು ತಮಗೆ ಬೇಕಾದವರಿಗೆ ಮಾತ್ರ ದೊರಕಿಸಿಕೊಟ್ಟಿರುವ ಸಾಧ್ಯತೆಗಳೇ ಹೆಚ್ಚು.

ದಿನೇಶ್‌ಕುಮಾರ್‌ ಎಸ್‌ ಸಿ
ಕರವೇ ಸಾಮಾಜಿಕ ಜಾಲತಾಣ ಮುಖ್ಯಸ್ಥರು

ಕಂಪನಿಗಳಿಂದ ನೇರವಾಗಿಯೇ 2 ಲಕ್ಷ ರೆಮ್ಡೆಸಿವಿರ್ ಔಷಧಿಯನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ನಾವು ವೈಯಕ್ತಿಕವಾಗಿ ಬಯೋಕಾನ್ ಎಂಡಿ ಕಿರಣ್ ಮಜುಂದಾರ್-ಶಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಇತ್ತೀಚೆಗಷ್ಟೇ ಸಚಿವ ಸುಧಾಕರ್‌ ಅವರು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts