ಸರ್ಕಾರಕ್ಕಿಲ್ಲದ ‘ರೆಮ್ಡಿಸಿವಿರ್‌’ ಮುಕ್ತ ಮಾರುಕಟ್ಟೆಗೆ ಲಭ್ಯ; ಹೆಟಾರಿಯಾದಿಂದ 13.27ಕೋಟಿ ವಹಿವಾಟು?

ಬೆಂಗಳೂರು; ಕೋವಿಡ್‌ ರೋಗಿಗಳ ಪೈಕಿ ಅಗತ್ಯ ಇರುವವರಿಗೂ ರೆಮ್‌ಡಿಸಿವಿರ್‌ ದೊರಕದೇ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂಬ ಬಲವಾದ ಆರೋಪಗಳ ನಡುವೆಯೂ ಆಂಧ್ರ ಮೂಲದ ಹೆಟಾರಿಯೋ ಕಂಪನಿಯೂ ಸೇರಿದಂತೆ ಹಲವು ಕಂಪನಿಗಳು ಮುಕ್ತ ಮಾರುಕಟ್ಟೆಗೆ ಸಾವಿರಾರು ಸಂಖ್ಯೆಯಲ್ಲಿ ರೆಮ್‌ಡಿಸಿವಿರ್‌ನ್ನು ಸರಬರಾಜು ಮಾಡುತ್ತಿವೆ.

ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡುವ ಜತೆಯಲ್ಲಿಯೇ ಸರ್ಕಾರಕ್ಕೂ ನೀಡಬೇಕಿದ್ದ ಕಂಪನಿಗಳು ಕೇವಲ ಮುಕ್ತ ಮಾರುಕಟ್ಟೆಯೊಂದಕ್ಕೆ ಸರಬರಾಜು ಮಾಡುತ್ತಿರುವುದು ದಾಖಲೆಯಿಂದ ತಿಳಿದು ಬಂದಿದೆ. ಸಾವಿರಾರು ಸಂಖ್ಯೆಯಲ್ಲಿ ಮುಕ್ತ ಮಾರುಕಟ್ಟೆಗೆ ರೆಮ್‌ಡಿಸಿವಿರ್‌ ಸರಬರಾಜು ಆಗಿದೆ ಎಂಬ ಅಂಕಿ ಅಂಶ ದಾಖಲೆಯಲ್ಲಿವೆಯಾದರೂ ಈಗಲೂ ಮೆಡಿಕಲ್‌ ಶಾಪ್‌ ಮತ್ತು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯವಿಲ್ಲ ಎಂದು ಗೊತ್ತಾಗಿದೆ.

ರಾಜ್ಯಕ್ಕೆ ಈವರೆವಿಗೆ ಒಟ್ಟು 1,14,047 ರೆಮ್ಡಿಡಿಸಿವರ್ ಇಂಜೆಕ್ಷನ್‌ ಪೂರೈಕೆ ಆಗಿದೆಯಾದರೂ ಸಕ್ರಿಯ ಪ್ರಕರಣಗಳ (2,37,518) ಪೈಕಿ ಒಬ್ಬ ವ್ಯಕ್ತಿ ತಲಾ 7 ಡೋಸ್‌ ನೀಡಿದರೂ 10,000 ಚುಚ್ಚುಮದ್ದು ಕೊರತೆ ಕಂಡು ಬಂದಿದೆ.

2021ರ ಏಪ್ರಿಲ್‌ 21ರಿಂದ 29ರ ಅಂತ್ಯಕ್ಕೆ ಆಂಧ್ರ ಮೂಲದ ಹೆಟಾರಿಯಾ ಕಂಪನಿಯು ಅಂದಾಜು 13.27 ಕೋಟಿ ಮೌಲ್ಯದ 38,040 ರೆಮ್‌ಡಿಸಿವಿರ್‌ ಇಂಜೆಕ್ಷನ್‌ನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿದೆ. ಏಪ್ರಿಲ್‌ 28ರ ಒಂದೇ ದಿನದಲ್ಲಿ ಅಂದಾಜು 4.81 ಕೋಟಿ ರು. ಮೌಲ್ಯದ 13,800 ಇಂಜೆಕ್ಷನ್‌ ಪೂರೈಕೆ ಮಾಡಿದೆ. ಆದರೆ ಈ ಕಂಪನಿಯು ಏಪ್ರಿಲ್‌ 21ರಿಂದ 29ರವರೆಗೂ ಸರ್ಕಾರಕ್ಕೆ ಒಂದೇ ಒಂದು ಇಂಜೆಕ್ಷನ್‌ ಪೂರೈಕೆ ಮಾಡಿಲ್ಲ ಎಂಬುದು ಔಷಧ ನಿಯಂತ್ರಕರ ಕಚೇರಿಯ ದಾಖಲೆಯಿಂದ ತಿಳಿದು ಬಂದಿದೆ.

ಏಪ್ರಿಲ್‌ 21ರಿಂದ 29ರವರೆಗೆ ರೆಮ್‌ಡಿಸಿವಿರ್‌ ಪೂರೈಕೆ ಮಾಡಿರುವ ಕಂಪನಿಗಳ ಪೈಕಿ ಆಂಧ್ರ ಮೂಲದ ಹೆಟಾರಿಯೋ ಕಂಪನಿ ಅಗ್ರ ಪಂಕ್ತಿಯಲ್ಲಿದೆ. ಈ ಮೂಲಕ ಮೈಲಾನ್‌ ಕಂಪನಿಯನ್ನು ಸರಿಗಟ್ಟಿದೆ. ವಿಶೇಷವೆಂದರೆ ಮೈಲಾನ್‌ ಕಂಪನಿಯು ಏಪ್ರಿಲ್‌ 27ರ ನಂತರ ಸರ್ಕಾರ ಮತ್ತು ಮುಕ್ತ ಮಾರುಕಟ್ಟೆಗೆ ಒಂದೇ ಒಂದು ಚುಚ್ಚುಮದ್ದನ್ನು ಪೂರೈಕೆ ಮಾಡಿಲ್ಲ ಎಂಬುದು ಗೊತ್ತಾಗಿದೆ.

ಏಪ್ರಿಲ್‌ 21ರಿಂದ 28ರವರೆಗೆ ಮೈಲಾನ್‌ ಸೇರಿದಂತೆ ಕೆಲ ಕಂಪನಿಗಳು ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಗೆ ರೆಮ್‌ಡಿಸಿವಿರ್‌ ಪೂರೈಕೆ ಮಾಡಿ ಒಟ್ಟು 20 ಕೋಟಿ ರು ವಹಿವಾಟು ನಡೆಸಿತ್ತು. ಮುಕ್ತ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ವಹಿವಾಟಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇನ್ನು ಡಾ ರೆಡ್ಡೀಸ್‌ ಮತ್ತು ಕ್ಯಾಡಿಲಾ ಕಂಪನಿಗಳು ಏಪ್ರಿಲ್‌ 21ರಿಂದ 29ರವರೆಗೆ ಸರ್ಕಾರ ಮತ್ತು ಮುಕ್ತ ಮಾರುಕಟ್ಟೆಗೆ ರೆಮ್‌ಡಿಸಿವಿರ್‌ ಇಂಜೆಕ್ಷನ್‌ನ್ನು ಪೂರೈಕೆ ಮಾಡಿಲ್ಲ ಎಂಬುದು ತಿಳಿದು ಬಂದಿದೆ.

ಸರ್ಕಾರದ ತನ್ನ ಅಧಿಕೃತ ದಾಖಲೆಗಳ ಪ್ರಕಾರ ಏಪ್ರಿಲ್‌ 29ರ ಅಂತ್ಯಕ್ಕೆ 13,800 ರೆಮ್ಡಿಸಿವಿರ್ ಇಂಜೆಕ್ಷನ್ ಗಳು ಮುಕ್ತ ಮಾರುಕಟ್ಟೆಗೆ ಬಿಡುಗಡೆಯಾಗಿವೆ ಎಂದು ತಿಳಿಸಿದೆ. ಆದರೆ ನಮಗೆ ನಿತ್ಯ ಔಷಧಿಗಳನ್ನು ಸರಬರಾಜು ಮಾಡುವ ಯಾವುದೇ ಸಗಟು ವ್ಯಾಪಾರಿಗಳ ಬಳಿ ಇಂಜೆಕ್ಷನ್ ಲಭ್ಯವಿಲ್ಲದಿರುವುದಿಲ್ಲ ಮತ್ತು ನಮ್ಮ ಲೈಫ್ ಕೇರ್ ಮೆಡಿಕಲ್ಸ್‌ನ ಯಾವ ಅಂಗಡಿಗೂ ಇಂಜೆಕ್ಷನ್ ಸರಬರಾಜು ಆಗಿರುವುದಿಲ್ಲ. ಆಗಿದ್ದಲ್ಲಿ ಈ ಇಂಜೆಕ್ಷನ್ ಗಳು ಏನಾದವು ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು.

ರಘು ಜಾಣಗೆರೆ
ಮುಖ್ಯಸ್ಥರು ಲೈಫ್ ಕೇರ್ ಮೆಡಿಕಲ್ಸ್

ಏಪ್ರಿಲ್‌ 21ರಿಂದ 28ರವರೆಗೆ ಈ ಎಲ್ಲಾ ಕಂಪನಿಗಳು ಸರ್ಕಾರಕ್ಕೆ 41,040 ಸರಬರಾಜು ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 59,207 ಚುಚ್ಚುಮದ್ದು ಸರಬರಾಜು ಆಗಿದೆ. ಸರ್ಕಾರಕ್ಕೆ ಒಂದೇ ಒಂದು ಔಷಧ ನೀಡದ ಜ್ಯುಬಿಲಿಯೆಂಟ್‌ ಕಂಪನಿಯು ಏಪ್ರಿಲ್‌ 27ರಂದು 600 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿದೆ. ಆ ನಂತರ ಸರ್ಕಾರ ಮತ್ತು ಮುಕ್ತ ಮಾರುಕಟ್ಟೆಗೆ ಒಂದೇ ಒಂದು ಚುಚ್ಚುಮದ್ದನ್ನು ಸರಬರಾಜು ಮಾಡಿಲ್ಲ. ಅದೇ ರೀತಿ ಸಿಪ್ಲಾ ಕಂಪನಿಯು ಸಹ ಒಟ್ಟು 2,432, ಸರಬರಾಜು ಮಾಡಿದೆ. ಮೈಲಾನ್‌ ಕಂಪನಿಯು ಮುಕ್ತ ಮಾರುಕಟ್ಟೆಗೆ 31,935 (ಸರ್ಕಾರಕ್ಕೆ 28,040), ಸಿನ್‌ಜಿನ್‌ 13,000 ಪೂರೈಕೆ ಮಾಡಿದೆ.

ರಾಜ್ಯದಲ್ಲಿ ಸದ್ಯ 2,37,518 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಒಬ್ಬ ವ್ಯಕ್ತಿಗೆ 7 ಡೋಸ್‌ ರೆಮ್ಡಿಸಿವಿರ್ ಚುಚ್ಚುಮದ್ದು ನೀಡಬೇಕು. ಇದರ ಪ್ರಕಾರ 16,62,626 ಚುಚ್ಚುಮದ್ದು ಬೇಕಾಗಲಿದೆ. ನೀಡಬೇಕು. ಶೇ.10ರಷ್ಟು ಚುಚ್ಚುಮದ್ದು ನೀಡಬೇಕಾದರೂ 1,66,263 ಚುಚ್ಚುಮದ್ದು ಬೇಕಾಗಲಿದೆ. ಶೇ.5ರಷ್ಟು ಎಂದಾದರೂ 7 ಡೋಸ್‌ ಪ್ರಕಾರ 83,132 ಡೋಸ್‌ ಬೇಕು. ಆದರೂ 10,000 ಚುಚ್ಚುಮದ್ದು ಕೊರತೆ ಕಂಡು ಬಂದಿದೆ.

ಕೋವಿಡ್‌ ರೋಗಿಗಳ ಪೈಕಿ ಅಗತ್ಯ ಇರುವವರಿಗೆ ಮಾತ್ರ ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು ಒದಗಿಸಬೇಕು. ಕೃತಕ ಅಭಾವಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಅಲ್ಲದೆ ಕಂಪನಿಗಳಿಂದ ನೇರವಾಗಿಯೇ 2 ಲಕ್ಷ ರೆಮ್ಡೆಸಿವಿರ್ ಔಷಧಿಯನ್ನು ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ನಾವು ವೈಯಕ್ತಿಕವಾಗಿ ಬಯೋಕಾನ್ ಎಂಡಿ ಕಿರಣ್ ಮಜುಂದಾರ್-ಶಾ ಅವರೊಂದಿಗೆ ಮಾತನಾಡಿದ್ದೇನೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts