ಬೆಂಗಳೂರು; ಕೈಗಾರಿಕೆ ಸ್ಥಾಪನೆಗೆ ಪಡೆದಿದ್ದ 146 ಎಕರೆ ವಿಸ್ತೀರ್ಣದ ಜಮೀನನ್ನು ಅನ್ಯ ಕಂಪನಿಗಳಿಗೆ ಮಾರಾಟ ಮಾಡಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಪಿಎಲ್ ಕಂಪನಿ ಪ್ರಕರಣದ ಕುರಿತಾದ ಲೋಕಾಯುಕ್ತ ತನಿಖೆಯು ಕಳೆದ 7 ವರ್ಷಗಳಿಂದಲೂ ತೆವಳುತ್ತಲೇ ಇದೆ. ಹಿಂದಿನ ಕೈಗಾರಿಕೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪಿಯಾಗಿರುವ ಈ ಪ್ರಕರಣದ ಕುರಿತಾದ ತನಿಖೆಯಲ್ಲಿ 2015ರಿಂದ 2020 ಅಂತ್ಯದವರೆಗೂ ಪರಿಶೀಲನೆಯಲ್ಲಿಯೇ ಕಾಲಹರಣ ಮಾಡಿದೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಕುಟುಂಬ ಸದಸ್ಯರೊಬ್ಬರ ಮಾಲೀಕತ್ವದಲ್ಲಿದ್ದ ಬಿಪಿಎಲ್ ಕಂಪನಿಗೆ ಹಂಚಿಕೆ ಮಾಡಿದ್ದ 149 ಎಕರೆ ಜಮೀನಿಗೆ ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿದ್ದ ಪ್ರಕರಣದಲ್ಲಿನ ಇಡೀ ವ್ಯವಹಾರವು ಸಂಶಯಾಸ್ಪದವಾಗಿ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರವು 2014ರಲ್ಲಿ ತನಿಖೆಗೆ ಲೋಕಾಯುಕ್ತಕ್ಕೆ ವರ್ಗಾಯಿಸಿತ್ತು. ಆ ನಂತರ 4 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ತನಿಖೆಯ ವೇಗಕ್ಕೆ ಚುರುಕು ನೀಡಿರಲಿಲ್ಲ.
ಪ್ರಕರಣದ ಕುರಿತು 2021ರ ಫೆಬ್ರುವರಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಶಾಸಕ ಡಾ ಕೆ ಶ್ರೀನಿವಾಸಮೂರ್ತಿ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕೇಳಿದ್ದರು. ಈ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು 2021ರ ಫೆ. 5ರಂದು ವಿಧಾನಸಭೆಗೆ ಲಿಖಿತ ಉತ್ತರಿಸಿದ್ದಾರೆ.
‘ಈ ಪ್ರಕರಣದ ವಿಚಾರಣೆಯು ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ಕೋರಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು 2020ರ ಫೆ.7ರಂದು ಬರೆದಿದ್ದ ಪತ್ರಕ್ಕೆ ವರ್ಷ ಕಳೆದರೂ ಮಾಹಿತಿ ಮತ್ತು ವರದಿಯನ್ನೂ ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿಲ್ಲ,’ ಎಂಬ ಸಂಗತಿ ಶೆಟ್ಟರ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
‘ಈ ಪ್ರಕರಣದಲ್ಲಿನ ಇಡೀ ವ್ಯವಹಾರವು ಸಂಶಯಾಸ್ಪದವಾಗಿದ್ದು ಸಮಗ್ರವಾದ ತನಿಖೆ ಅಗತ್ಯತೆಯನ್ನು ಸರ್ಕಾರವು ಮನಗಂಡಿರುತ್ತದೆ. ಅಂತೆಯೇ ಈ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕಲಂ 7ರ ಉಪ ಕಲಂ (2-ಎ) ಅನ್ವಯ ಸಮಗ್ರ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಿ ಆದೇಶಿಸಿತ್ತು,’.
ಪ್ರಕರಣದ ಕುರಿತು 2014 ಮತ್ತು 2015ರವರೆಗೆ ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆಯನ್ನಷ್ಟೇ ನಡೆಸಿದ್ದ ಲೋಕಾಯುಕ್ತ ವಿಚಾರಣಾಧಿಕಾರಿ 5ವರ್ಷದ ಬಳಿಕ ಅಂತಿಮ ಪರಿಶೀಲನೆಗೆ ಬಾಕಿ ಉಳಿಸಿಕೊಂಡಿರುವುದು ಲೋಕಾಯುಕ್ತ ಸಂಸ್ಥೆಯ ದಾಖಲೆಯಿಂದ ತಿಳಿದು ಬಂದಿದೆ. 2015ರ ನಂತರ 5 ವರ್ಷಗಳವರೆಗೂ ತನಿಖೆಯು ತೆವಳುತ್ತಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪ್ರಕರಣದ ತನಿಖೆಗಾಗಿ ಸರ್ಕಾರವು ಎಲ್ಲಾ ದಾಖಲಾತಿ ಮತ್ತು ಕಡತಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿತ್ತು. 2017ರವರೆಗೂ ದಾಖಲಾತಿಗಳನ್ನು ಸಂಗ್ರಹಿಸುವುದರಲ್ಲೇ ಕಾಲಹರಣ ಮಾಡಿರುವ ಲೋಕಾಯುಕ್ತ ಸಂಸ್ಥೆಯು ಅಂತಿಮ ವರದಿ ತಯಾರಿಸಲು ಬಾಕಿ ಇರಿಸಿಕೊಂಡಿದೆ ಎಂದು ಸಂಸ್ಥೆಯ ರಿಜಿಸ್ಟ್ರಾರ್ ಎಚ್ ಎಂ ನಂಜುಂಡಸ್ವಾಮಿ ಅವರು ಸರ್ಕಾರಕ್ಕೆ 2017ರ ಮಾರ್ಚ್ 9ರಂದು ಮಾಹಿತಿ ಒದಗಿಸಿದ್ದರು. ಇದಾದ ನಂತರ ಸುಮಾರು 2 ವರ್ಷಗಳು ಕಳೆದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯು ಯಾವ ಹಂತದಲ್ಲಿದೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿಯನ್ನೇ ಒದಗಿಸಿರಲಿಲ್ಲ ಎಂಬುದು ಗೊತ್ತಾಗಿದೆ.
ಪ್ರಕರಣದ ಹಿನ್ನೆಲೆ
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಎಕರೆಗೆ 3.50 ಲಕ್ಷ ರು.ದರದಲ್ಲಿ 1995ರ ಮೇ 23ರಂದು 149 ಎಕರೆ 5.50 ಗುಂಟೆ ಜಮೀನು ಹಂಚಿಕೆ ಮಾಡಲಾಗಿತ್ತು. 1996ರಲ್ಲಿ ಗುತ್ತಿಗೆ ಕ್ರಯ ಪತ್ರ ಮಾಡಿಕೊಟ್ಟಿದ್ದರೂ ಒಟ್ಟು ಜಮೀನಿನ ಪೈಕಿ ಶೇ.5.12ರಷ್ಟು ಮಾತ್ರ ಬಳಸಿಕೊಂಡಿತ್ತು. ಗುತ್ತಿಗೆ ಕರಾರು ಪತ್ರದ ಪಿ(2)(1)ರ ಅಡಿಯಲ್ಲಿ ಷರತ್ತಿನ ಪ್ರಕಾರ ಹಂಚಿಕೆ ಮಾಡಲ್ಪಟ್ಟ ಪ್ರದೇಶದಲ್ಲಿ ಶೇ.50ರಷ್ಟು ವಿಸ್ತೀರ್ಣವನ್ನು ಬಳಸಿಕೊಂಡಿರಲಿಲ್ಲ. ಹೀಗಾಗಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಶುದ್ಧ ಕ್ರಯ ಪತ್ರವನ್ನು ಮಾಡಿಕೊಟ್ಟಿರಲಿಲ್ಲ.
ಶುದ್ಧ ಕ್ರಯ ಪತ್ರ ಮಾಡಿಕೊಡುವಂತೆ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬಿಪಿಎಲ್ ಕಂಪನಿಯ ಕೋರಿಕೆ ಮೇರೆಗೆ ಹಿಂದಿನ ಕೈಗಾರಿಕೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೂಚನೆ ಮೇರೆಗೆ ಮಂಡಳಿಯು 2006ರಲ್ಲಿ ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿತ್ತು. ಕೆಐಎಡಿಬಿಯ ಆಕ್ಷೇಪಣೆಯ ನಡುವೆಯೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸೂಚನೆ ಮೇರೆಗೆ 2006ರ ನವೆಂಬರ್ 28ರಂದು ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿತ್ತು.
ಶುದ್ಧ ಕ್ರಯ ಪತ್ರ ಕೈ ಸೇರುತ್ತಿದ್ದಂತೆಯೇ ಬಿಪಿಎಲ್ ಕಂಪನಿಯು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗೆ 33 ಎಕರೆ 14 ಗುಂಟೆ ಪರಭಾರೆ ಮಾಡಿತ್ತು. ಅಲ್ಲದೆ ಪಿಗಾಸ್ಯುಸ್ ಫೈನಾನ್ಷಿಯಲ್ ಇನ್ಸ್‌ಟಿಟ್ಯೂಷನ್ ಮೂಲಕ 87 ಎಕರೆಯನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಖರೀದಿಸಿತ್ತು. ಅಲ್ಲದೆ ಜಿಂದಾಲ್ ಅಲ್ಯುಮಿನಿಯಂ ಲಿಮಿಟೆಡ್‌ಗೆ 25 ಎಕರೆ 5.05 ಗುಂಟೆ, ಬಿಒಸಿ ಇಂಡಿಯಾ ಲಿಮಿಟೆಡ್‌ಗೆ 3.12 ಗುಂಟೆ ಜಮೀನನ್ನು ಪರಭಾರೆ ಮಾಡಿತ್ತು.
‘‘ಮುಖ್ಯಮಂತ್ರಿ ಸಹಿಯುಳ್ಳ ಉತ್ತರದಲ್ಲಿ ಹಿಂದಿನ ಸರಕಾರದ ನಿಲುವನ್ನು ಸಮರ್ಥಿಸಿದಂತಿದೆ. ಅಧಿಕಾರಿಗಳು ಸಿಎಂ ಹಾದಿ ತಪ್ಪಿಸಿದ್ದಲ್ಲದೆ, ಸತ್ಯಾಂಶ ಮರೆ ಮಾಚಲು ಯತ್ನಿಸಿದ್ದಾರೆ. ಸಂಪೂರ್ಣ ಕಡತವನ್ನು ಸದನದಲ್ಲಿ ಮಂಡಿಸಿದರೆ ಸತ್ಯ ಹೊರಬರಲಿದೆ. ಕಡಿಮೆ ಬೆಲೆಗೆ ಪಡೆದ ಜಮೀನನ್ನು ಮಾರಲು ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್ ಪಡೆದೇ ಮಂಜೂರು ನೀಡಿರುವುದನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಅಂದಿನ ವಿಧಾನಪರಿಷತ್ ಸದಸ್ಯ ಎಂ ಸಿ ನಾಣಯ್ಯ ಅವರು ಒತ್ತಾಯಿಸಿದ್ದರು.
ಒಂದು ಲಕ್ಷ ರೂ.ಗೆ ಜಮೀನು ಪಡೆದರೂ ಕೈಗಾರಿಕೆ ಸ್ಥಾಪಿಸದೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದು ತಪ್ಪು. ಈ ಪ್ರಕರಣಕ್ಕೂ ನಮಗೂ (ಈಗಿನ ಸರಕಾರ) ಯಾವುದೇ ಸಂಬಂಧ ಇಲ್ಲ. ಯಾರಿಗೂ ರಕ್ಷಣೆ ಕೊಡುವ ಅಗತ್ಯ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲಿ ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್‌ನಲ್ಲಿ ಉತ್ತರಿಸಿದ್ದನ್ನು ಸ್ಮರಿಸಬಹುದು.