ಬೆಂಗಳೂರು; ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್‌ವೊಂದರ ಮುಖ್ಯ ರಸ್ತೆಗೆ ಜಗಜ್ಯೋತಿ ಬಸವಣ್ಣ ಹೆಸರನ್ನು ನಾಮಕರಣ ಮಾಡಲು ಬಿಬಿಎಂಪಿ ಕೈಗೊಂಡಿದ್ದ ನಿರ್ಣಯವನ್ನು ರಾಜ್ಯ ಬಿಜೆಪಿ ಸರ್ಕಾರ ರದ್ದುಗೊಳಿಸಿದೆ.
ಬೆಂಗಳೂರು ಮಹಾನಗರಪಾಲಿಕೆಯ ಜೋಗುಪಾಳ್ಯ ವ್ಯಾಪ್ತಿಯ ಮುಖ್ಯ ರಸ್ತೆಗೆ ಜಗಜ್ಯೋತಿ ಬಸವಣ್ಣ ಎಂದು ನಾಮಕರಣ ಮಾಡಲು ಪಾಲಿಕೆಯಲ್ಲಿ 2020ರ ಜೂನ್ 30ರಂದು ನಡೆದಿದ್ದ ಸಾಮಾನ್ಯ ಸಭೆಯು ನಿರ್ಣಯ ಕೈಗೊಂಡಿತ್ತು. ಆದರೆ ಈ ನಿರ್ಣಯವನ್ನು ಏಕಪಕ್ಷೀಯವಾಗಿ ತೀರ್ಮಾನಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯು ನಿರ್ಣಯವನ್ನು ರದ್ದುಪಡಿಸಿ 2021ರ ಮಾರ್ಚ್ 4ರಂದು ಆದೇಶ ಹೊರಡಿಸಿದೆ. ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಲ್ಲದೆ ಬಿಬಿಎಂಪಿಯು ಕೈಗೊಂಡಿದ್ದ ನಿರ್ಣಯವು ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಸಾರ್ವಜನಿಕ ಸ್ಥಳಕ್ಕೆ ನಾಮಕರಣ ಮಾಡುವುದು) 2008ರ ನಿಯಮ 7ಕ್ಕೆ ವಿರುದ್ಧವಾಗಿತ್ತು ಎಂಬ ಅಂಶ ಆದೇಶದಿಂದ ತಿಳಿದು ಬಂದಿದೆ.
ಜೋಗುಪಾಳ್ಯ ಮುಖ್ಯ ರಸ್ತೆಗೆ ಜಗಜ್ಯೋತಿ ಬಸವಣ್ಣ ಎಂದು ನಾಮಕರಣ ಮಾಡಲು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಅಧಿನಿಯಮ 1976 293ನೇ ಪ್ರಕರಣದ 1ನೇ ಉಪಪ್ರಕರಣದಡಿಯಲ್ಲಿ ಪಾಲಿಕೆಯ ಕೌನ್ಸಿಲ್ ಸಭೆಯ (ವಿಷಯ ಸಂಖ್ಯೆ; 14(102)/2020-21)ಲ್ಲಿ ನಿರ್ಣಯ ಕೈಗೊಂಡಿತ್ತು.
‘1998ರ ಅಕ್ಟೋಬರ್ 27ರಂದು ಬಿಬಿಎಂಪಿ ವ್ಯಾಪ್ತಿಯ ಹನುಮಂತ ನಗರದ ಹಳೇ ವಾರ್ಡ್ ಸಂಖ್ಯೆ 52ರ ವ್ಯಾಪ್ತಿಯಲ್ಲಿನ ಶ್ರೀನಗರದ 4ನೇ ಮುಖ್ಯರಸ್ತೆಗೆ ಬಸವಣ್ಣ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಹೀಗಾಗಿ ಜೋಗುಪಾಳ್ಯ ಮುಖ್ಯ ರಸ್ತೆಗೆ ಜಗಜ್ಯೋತಿ ಬಸವಣ್ಣ ಎಂದು ನಾಮಕರಣ ಮಾಡಲು 2020ರ ಜೂನ್ 30ರಂದು ಕೈಗೊಂಡಿದ್ದ ನಿರ್ಣಯವು ನಿಯಮಗಳಿಗೆ ವಿರುದ್ಧವಾಗಿತ್ತು. ಹೀಗಾಗಿ ಕೆಎಂಸಿ ಕಾಯ್ದೆ 1976ರ ಕಲಂ 98ರ ಮೇರೆಗೆ ನಿರ್ಣಯವನ್ನು ರದ್ದುಗೊಳಿಸಲು ಸರ್ಕಾರವನ್ನು ಆಯುಕ್ತರು ಕೋರಿದ್ದರು.