2020-21ರ ಬಜೆಟ್‌ ಬಂಡವಾಳ; ವೆಚ್ಚ ನಿರ್ವಹಣೆ ಹೆಸರಿನಲ್ಲಿ 19,774 ಕೋಟಿ ಕಡಿತ

ಬೆಂಗಳೂರು: 2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿದ್ದ 1,965 ಕೋಟಿ ರು. ಮೊತ್ತದ 30ಕ್ಕೂ ಹೆಚ್ಚು ಯೋಜನೆಗಳನ್ನು ಕೈ ಬಿಟ್ಟಿರುವ ರಾಜ್ಯ ಬಿಜೆಪಿ ಸರ್ಕಾರವು ಕಳೆದ ವರ್ಷದ ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದ ಒಟ್ಟು ಅನುದಾನದ ಪೈಕಿ ಒಟ್ಟು 19,774.98 ಕೋಟಿ ರು. ಕಡಿತಗೊಳಿಸಿದೆ.

ಜೇವರ್ಗಿಯ ಶಾಸಕ ಅಜಯ್‌ ಧರ್ಮಸಿಂಗ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು 19,774.98 ಕೋಟಿ ರು.ಗಳನ್ನು ಕಡಿತಗೊಳಿಸಿ ವೆಚ್ಚಗಳನ್ನು ನಿರ್ವಹಿಸಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ. ಆದರೆ ಯಾವ ವೆಚ್ಚಗಳನ್ನು ನಿರ್ವಹಿಸಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ನಗರಾಭಿವೃದ್ಧಿ, ಲೋಕೋಪಯೋಗಿ, ಭಾರೀ ನೀರಾವರಿ ಇಲಾಖೆಗೆ 2020-21ರ ಆಯವ್ಯಯದಲ್ಲಿ ಘೋಷಿಸಿದ್ದ ಒಟ್ಟು ಅನುದಾನದ ಪೈಕಿ 12,334.08 ಕೋಟಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 2,149.89 ಕೋಟಿ ರು.ಗಳನ್ನು ಕಡಿತಗೊಳಿಸಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ. ವಿಶೇಷವೆಂದರೆ ವಸತಿ ಇಲಾಖೆಯಲ್ಲಿ ಕೇವಲ 1.69 ಕೋಟಿ ರು. ಮಾತ್ರ ಕಡಿತಗೊಳಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆಯಲ್ಲಿ 4,816.23 ಕೋಟಿ ರು., ಲೋಕೋಪಯೋಗಿ ಇಲಾಖೆಯಲ್ಲಿ 2,317.93 ಕೋಟಿ ರು., ಭಾರೀ ನೀರಾವರಿ ಇಲಾಖೆಯಲ್ಲಿ 3,713.44 ಕೋಟಿ ರು., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 1,486.48 ಕೋಟಿ ರು.ಗಳಿಗೆ ಕತ್ತರಿ ಹಾಕಲಾಗಿದೆ.

ಇಲಾಖಾವಾರು ಕಡಿತ ವಿವರ 

ಇನ್ನುಳಿದಂತೆ ಕೃಷಿ ಇಲಾಖೆಯಲ್ಲಿ 671.95 ಕೋಟಿ ರು., ತೋಟಗಾರಿಕೆ 19.95 ಕೋಟಿ, ರೇಷ್ಮೆ 6.11 ಕೋಟಿ, ಪಶು ಸಂಗೋಪನೆಯಲ್ಲಿ 101.14 ಕೋಟಿ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 12.00 ಕೋಟಿ, ಮೀನುಗಾರಿಕೆ 51.00 ಕೋಟಿ, ಇ-ಆಡಳಿತ 10.00 ಕೋಟಿ, ಒಳಾಡಳಿತ 130.00 ಕೋಟಿ, ಸಾರಿಗೆ 333.36 ಕೋಟಿ, ಮೂಲಭೂತ ಸೌಕರ್ಯ 251.84 ಕೋಟಿ, ಅರಣ್ಯ 114.50 ಕೋಟಿ, ಪರಿಶಿಷ್ಟ ಜಾತಿಗಳ ಕಲ್ಯಾಣ 878.76 ಕೋಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣದಲ್ಲಿ 165.36 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ 651.77 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ 454.00 ಕೋಟಿ ರು., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 90.70 ಕೋಟಿ, ವಾರ್ತೆ 40.00 ಕೋಟಿ, ಪ್ರವಾಸೋದ್ಯಮ 121.56 ಕೋಟಿ, ಯುವಜನ ಸೇವೆ 65.34 ಕೋಟಿ, ಕಂದಾಯ 53.10 ಕೋಟಿ, ವಸತಿ 1.69 ಕೋಟಿ ರು., ಉನ್ನತ ಶಿಕ್ಷಣ 287.74 ಕೋಟಿ, ಪ್ರಾಥಮಿಕ,ಪ್ರೌಢಶಿಕ್ಷಣ 952.68 ಕೋಟಿ, ಕೈಮಗ್ಗ ಮತ್ತು ಜವಳಿ 2.00 ಕೋಟಿ, ಭಾರೀ ಮಧ್ಯಮ ಕೈಗಾರಿಕೆ 124.50 ಕೋಟಿ, ಸಣ್ಣ ಕೈಗಾರಿಕೆ 77.25 ಕೋಟಿ, ಗಣಿ 5.05 ಕೋಟಿ, ಸಣ್ಣ ನೀರಾವರಿ 353.70 ಕೋಟಿ, ವೈದ್ಯಕೀಯ ಶಿಕ್ಷಣ 353.70 ಕೋಟಿ, ಆರೋಗ್ಯ 192.62 ಕೋಟಿ, ಕಾರ್ಮಿಕ 27.00 ಕೋಟಿ, ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ ಜೀವನೋಪಾಯ 71.62 ಕೋಟಿ, ಕನ್ನಡ ಸಂಸ್ಕೃತಿ 46.53 ಕೋಟಿ, ಯೋಜನೆ ಸಾಂಖ್ಯಿಕ, ವಿಜ್ಞಾನ ತಂತ್ರಜ್ಞಾನ 419.07 ಕೋಟಿ, ಕಾನೂನು 6.53 ಕೋಟಿ, ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ 10.00 ಕೋಟಿ ರು.ಗಳನ್ನು ಕಡಿತಗೊಳಿಸಿರುವುದು ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

ಕೊರೊನಾ ಪೂರ್ವದಲ್ಲಿನ ರಾಜ್ಯ ಅರ್ಥಿಕ ಪರಿಸ್ಥಿತಿ ಮತ್ತು ಪ್ರಸಕ್ತ ವರ್ಷದ ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಸ್ವಂತ ತೆರಿಗೆ, ತೆರಿಗೆಯೇತರ ರಾಜಸ್ವ , ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ, ಕೇಂದ್ರ ಸರ್ಕಾರದ ಸಹಾಯಾನುದಾನದಲ್ಲೂ ಇಳಿಕೆಯಾಗಿದೆ. 2019-20ಲ್ಲಿ ಈ ಎಲ್ಲಾ ವಿಭಾಗಗಳಿಂದ ಒಟ್ಟು 2,26,707 ಕೋಟಿ ರು. ಇದ್ದರೆ 2020-21ರ (ಏಪ್ರಿಲ್‌-ಜನವರಿ)ಲ್ಲಿ 1,94,821 ಕೋಟಿ ರು. (31,886 ಕೋಟಿ ವ್ಯತ್ಯಾಸ) ಜಮೆಯಾಗಿತ್ತು.

ವಿಶೇಷ ಎಂದರೆ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಶೇ.40.75ರಷ್ಟು ಕಡಿಮೆ ಜಮೆಯಾಗಿದೆ. 2019-20ರಲ್ಲಿ 25,159 ಕೋಟಿ ರು. ತೆರಿಗೆ ಹಂಚಿಕೆಯಾಗಿದ್ದರೆ 2020-21ರಲ್ಲಿ 14,907 ಕೋಟಿ ರು. ಹಂಚಿಕೆಯಾಗಿದೆ. ಹಾಗೆಯೇ ಕೇಂದ್ರ ಸರ್ಕಾರದ ಸಹಾಯಾನುದಾನದಲ್ಲಿಯೂ ಶೇ.21.59ರಷ್ಟು ಕಡಿಮೆ ಜಮೆಯಾಗಿದೆ. 2019-20ರಲ್ಲಿ 29,282 ಕೋಟಿ ರು ಇದ್ದರೆ 2020-21ರಲ್ಲಿ 22,960 ಕೋಟಿ ರು. ಜಮೆಯಾಗಿರುವುದು ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts