ರಮೇಶ್‌ ಜಾರಕಿಹೊಳಿಯ ಜಲ ಸಂಪನ್ಮೂಲ ಇಲಾಖೆಯಲ್ಲಿ ಹರಿದಿಲ್ಲ ಸಾಧನೆ ಹೊಳೆ

ಬೆಂಗಳೂರು: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ಸಲ್ಲಿಸಿರುವ ರಮೇಶ್‌ ಜಾರಕಿಹೊಳಿ ಅವರು ಸಚಿವರಾಗಿದ್ದ ಜಲ ಸಂಪನ್ಮೂಲ ಇಲಾಖೆಯು ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿನ ಪ್ರಗತಿ ಶೇ.51ರ ಗಡಿಯನ್ನೇ ದಾಟಿಲ್ಲ.

2020-21ನೇ ಸಾಲಿನ ಜನವರಿ ಅಂತ್ಯಕ್ಕೆ ಜಲ ಸಂಪನ್ಮೂಲ ಇಲಾಖೆಯು ಉಳಿದ ಇಲಾಖೆಗಳಿಗಿಂತ ಸಾಧನೆಯಲ್ಲಿ ಹಿಂದೆ ಬಿದ್ದಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಫೆಬ್ರುವರಿಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆಯ ಸಾಧನೆಯನ್ನೂ ಒರೆಗೆ ಹಚ್ಚಲಾಗಿದೆ. ಇಲಾಖೆಗಳ ಸಾಧನೆ ಪ್ರಗತಿಯ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

2020-21ನೇ ಸಾಲಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಉಪಯೋಜನೆಯಡಿ ಜಲ ಸಂಪನ್ಮೂಲ ಇಲಾಖೆಗೆ ಒಟ್ಟು ಒದಗಿಸಿದ್ದ ಅನುದಾನ 2296.14 ಕೋಟಿ ರು.ನಲ್ಲಿ ಡಿಸೆಂಬರ್‌ ಮತ್ತು ಜನವರಿ ಅಂತ್ಯಕ್ಕೆ 876.77 ಕೋಟಿ ರು.ಮಾತ್ರ ಖರ್ಚಾಗಿದೆ. ಒಟ್ಟು ಅನುದಾನಕ್ಕೆ ಶೇ.38.18ರಷ್ಟು ಮತ್ತು ಲಭ್ಯವಿರುವ ಅನುದಾನ (ಬಿಡುಗಡೆ ಮತ್ತು ಪ್ರಾಥಮಿಕ ಶಿಲ್ಕು)ಕ್ಕೆ ಶೇ.51.97ರಷ್ಟು ಮಾತ್ರ ವೆಚ್ಚವಾಗಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಅದೇ ರೀತಿ ಗಿರಿಜನ ಉಪ ಯೋಜನೆಯಡಿ 2020-21ನೇ ಸಾಲಿನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಒಟ್ಟು 1,464.99 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ ಡಿಸೆಂಬರ್‌ ಮತ್ತು ಜನವರಿ ಅಂತ್ಯಕ್ಕೆ 512.37 ಕೋಟಿ ರು.ಮಾತ್ರ ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ.34.97 ಮತ್ತು ಲಭ್ಯವಿರುವ ಅನುದಾನ (ಬಿಡುಗಡೆ ಮತ್ತು ಪ್ರಾಥಮಿಕ ಶಿಲ್ಕು)ಕ್ಕೆ ಶೇ. 46.47ರಷ್ಟು ವೆಚ್ಚವಾಗಿದೆ.

ಹಾಗೆಯೆ ಕೇಂದ್ರ ಪುರಸ್ಕೃತ ಯೋಜನೆಯಲ್ಲಿಯೂ ಜಲ ಸಂಪನ್ಮೂಲ ಇಲಾಖೆ ಸಾಧನೆಯಲ್ಲಿ ಹಿಂದೆ ಬಿದ್ದಿದೆ. ಕೇಂದ್ರ ಪುರಸ್ಕೃತ ಯೋಜನೆ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರವು ಜನವರಿ 2021ರ ಅಂತ್ಯಕ್ಕೆ ಒಟ್ಟು 431.35 ಕೋಟಿ ರು.ಅನುದಾನ ಒದಗಿಸಿದೆ. ಇದರಲ್ಲಿ 201.05 ಕೋಟಿ ರು. ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನಲ್ಲಿ ಶೇ.44.56ರಷ್ಟು ಮಾತ್ರ ಬಿಡುಗಡೆ ಮಾಡಿದೆ. ಡಿಸೆಂಬರ್‌ನಲ್ಲಿ 183.82 ಕೋಟಿ ರು. ವೆಚ್ಚಮಾಡಿದ್ದರೆ ಜನವರಿ ಅಂತ್ಯದವರೆಗೆ ನಯಾಪೈಸೆಯನ್ನೂ ಖರ್ಚು ಮಾಡಿಲ್ಲ. ಒಟ್ಟು ಅನುದಾನಕ್ಕೆ ಶೇ.46.62ರಷ್ಟು ಮಾತ್ರ ಸಾಧನೆ ತೋರಿರುವುದು ಗೊತ್ತಾಗಿದೆ.

ಇನ್ನು, ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ(ಇಆರ್‌ಎಂ)ಗೆ ಕೇಂದ್ರ ಸರ್ಕಾರವು 218.97 ಕೋಟಿ ಮತ್ತು ರಾಜ್ಯ ಸರ್ಕಾರವು 70.80 ಕೋಟಿ ರು. ಅನುದಾನ ನಿಗದಿಪಡಿಸಿತ್ತು. ಈ ಪೈಕಿ ಕೇಂದ್ರ ಸರ್ಕಾರ ಒಟ್ಟು ಅನುದಾನದ ಪೈಕಿ 109.48 ಕೋಟಿ ರು.ಮಾತ್ರ ಬಿಡುಗಡೆ ಮಾಡಿ ಬಾಕಿ ಅನುದಾನವನ್ನು ಜನವರಿ 2021ರ ಅಂತ್ಯದವರೆಗೂ ಬಿಡುಗಡೆ ಮಾಡಿಲ್ಲ. ಡಿಸೆಂಬರ್‌ನಲ್ಲಿ 110.76 ಕೋಟಿ ರು.ಖರ್ಚು ಮಾಡಿರುವ ಇಲಾಖೆಯು ಜನವರಿಯಲ್ಲಿ ನಯಾ ಪೈಸೆಯನ್ನೂ ಖರ್ಚು ಮಾಡಿಲ್ಲ. ಒಟ್ಟು ಅನುದಾನಕ್ಕೆ ಶೇ.38.22ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

ಕಾರಂಜಾ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಒಟ್ಟು 11.22 ಕೋಟಿ ರು. ಅನುದಾನ ನಿಗದಿಪಡಿಸಿದೆ. ಈ ಪೈಕಿ ಬಿಡುಗಡೆಯಾಗಿದ್ದ ಒಟ್ಟು 8.02 ಕೋಟಿ ರು.ನಲ್ಲಿ ಡಿಸೆಂಬರ್‌ ಮತ್ತು ಜನವರಿ ಅಂತ್ಯಕ್ಕೆ 0.27 ಕೋಟಿ ರು.ಮಾತ್ರ ಖರ್ಚಾಗಿದೆ. ಒಟ್ಟು ಬಿಡುಗಡೆಗೆ ಶೇ.3.37ರಷ್ಟು ಮತ್ತು ಒಟ್ಟು ಅನುದಾನಕ್ಕೆ ಶೇ .2.41ರಷ್ಟು ಮಾತ್ರ ಸಾಧನೆ ತೋರಿದೆ.

ಉಳಿದೆಲ್ಲ ಇಲಾಖೆಗಳಿಗಿಂತಲೂ ಜಲ ಸಂಪನ್ಮೂಲ ಇಲಾಖೆಗೆ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ಕಳೆದ ಹತ್ತಾರು ವರ್ಷಗಳಿಂದಲೂ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೂ ಅಡಚಣೆಯಾಗಿವೆ. ಆದರೆ ಜಲ ಸಂಪನ್ಮೂಲ ಸಚಿವರು ಮಾತ್ರ ಅನುದಾನ ಬಳಕೆ ಮಾಡಿಕೊಳ್ಳುವತ್ತ ಗಮನಹರಿಸಿಲ್ಲ ಮತ್ತು ಅಧಿಕಾರಿಗಳಿಗೆ ಚುರುಕನ್ನೂ ಮುಟ್ಟಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

the fil favicon

SUPPORT THE FILE

Latest News

Related Posts