ಹವಾಲಾ ವ್ಯವಹಾರ ಹೊರಗೆಡವಿದ್ದ ಅಧಿಕಾರಿಯನ್ನೇ ಸಿಲುಕಿಸಲೆತ್ನಿಸಿದ ಸರ್ಕಾರ?

ಬೆಂಗಳೂರು; ಸ್ಥಿರ ಸ್ವತ್ತಿನ ನೋಂದಣಿಗಾಗಿ ಪಾವತಿಸಲಾದ ಸರ್ಕಾರದ ಹಣವು ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗುತ್ತಿರುವ ಪ್ರಕರಣವನ್ನು ಪೊಲೀಸ್‌ ತನಿಖೆ ಮತ್ತು ಇಲಾಖಾ ವಿಚಾರಣೆ ನಡೆಸದೆಯೇ ಮುಕ್ತಾಯಗೊಳಿಸುವ ಭಾಗವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂಬ ಬಲವಾದ ಆರೋಪಕ್ಕೆ ನೋಂದಣಿ ಮುದ್ರಾಂಕ ಮತ್ತು ಖಜಾನೆ ಇಲಾಖೆ ಅಧಿಕಾರಿಗಳು ಗುರಿಯಾಗಿದ್ದಾರೆ.

ಪ್ರಕರಣವನ್ನು ಪರಿಶೀಲನೆಗೆ ಕೈಗೆತ್ತಿಕೊಂಡಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಖಜಾನೆ ಇಲಾಖೆ ಮತ್ತು ನೋಂದಣಿ ಮುದ್ರಾಂಕ ಇಲಾಖೆಯು ಸಲ್ಲಿಸಿರುವ ವರದಿಯು ಇಡೀ ಪ್ರಕರಣವನ್ನು ದಿಕ್ಕುತಪ್ಪಿಸಲೆತ್ನಿಸಿದಂತಿದೆ. ಅಲ್ಲದೆ ಈ ವರದಿಯು ಬ್ಯಾಂಕ್‌ ಅಧಿಕಾರಿಗಳು ನೀಡಿರುವ ಸಮಜಾಯಿಷಿ ಮೇರೆಗೆ ಸಿದ್ಧಪಡಿಸಿದಂತಿದೆ. ಎರಡೂ ಇಲಾಖೆಗಳು ಸಲ್ಲಿಸಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮತ್ತೊಂದು ವಿಶೇಷವೆಂದರೆ ಪ್ರಕರಣವನ್ನು ಹೊರಗೆಡವಿದ್ದ ಶೃಂಗೇರಿ ಉಪ ನೋಂದಣಾಧಿಕಾರಿ ಚೆಲುವರಾಜು ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ನೋಂದಣಿ ಮುದ್ರಾಂಕ ಮತ್ತು ಖಜಾನೆ ಇಲಾಖೆಯ ಉನ್ನತ ಅಧಿಕಾರಿಗಳು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಚೆಲುವರಾಜು ಅವರು ಸಲ್ಲಿಸಿದ್ದ ಪುರಾವೆ, ದಾಖಲೆಗಳನ್ನೂ ನೋಂದಣಿ ಮುದ್ರಾಂಕ ಮಹಾಪರಿವೀಕ್ಷಕರು ಮತ್ತು ಜಿಲ್ಲಾ ನೋಂದಣಾಧಿಕಾರಿಗಳು ಮರೆಮಾಚಿ ವರದಿ ಸಲ್ಲಿಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ನೋಂದಣಿ ಮುದ್ರಾಂಕ ಮಹಾಪರಿವೀಕ್ಷಕರ ಬಳಿ ಸಾಕಷ್ಟು ಸಾಕ್ಷ್ಯ, ಪುರಾವೆಗಳಿದ್ದರೂ ವರದಿಯಲ್ಲಿ ಉಲ್ಲೇಖಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಖಜಾನೆ ಇಲಾಖೆಯ ವರದಿಯಲ್ಲೇನಿದೆ?

ಉಪ ನೋಂದಣಾಧಿಕಾರಿ ಚೆಲುವರಾಜು ಅವರು 2021ರ ಜನವರಿ 13ರಂದು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಖಜಾನೆ ಇಲಾಖೆಯು 4 ಪುಟಗಳ ವರದಿಯನ್ನು ಸಲ್ಲಿಸಿದೆ. ಖಜಾನೆ-2ರಲ್ಲಿ ಹಣ ಸಂದಾಯ ಮಾಡುವ ಪ್ರಕ್ರಿಯೆ, ಇಲಾಖಾಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಜಮೆಗಳ ಲೆಕ್ಕ ಸಮನ್ವಯೀಕರಣ, ಕೆಟಿಸಿ-25 ಜಮೆಗಳ ತ:ಖ್ತೆ, ಜಮೆ ವಹಿವಾಟುಗಳು ಕುರಿತು ವಿವರಣೆ ನೀಡುವ ಮೂಲಕ ಪ್ರಕರಣದಲ್ಲಿ ಯಾವುದೇ ಲೋಪಗಳು ನಡೆದಿಲ್ಲ ಎಂದು ತಿಪ್ಪೆ ಸಾರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಬಿ ಜಿ ಪ್ರಸನ್ನ ಎಂಬುವರ ಸ್ಥಿರ ಸ್ವತ್ತಿನ ನೋಂದಣಿಗೆ ಸಂಬಂಧಿಸಿದಂತೆ 1,32,000 ರು.ಭಾಗಶಃ ನಗದು ಮತ್ತು 4,00,000 ರು.ಗಳನ್ನು ಭಾಗಶಃ ಸೆಲ್ಫ್‌ ಚೆಕ್‌ ಮೂಲಕ ಒಟ್ಟು 5,32,000 ರು.ಗಳನ್ನು ಕೆನರಾ ಬ್ಯಾಂಕ್‌ನಲ್ಲಿ ಸಂದಾಯ ಮಾಡಿದ್ಧಾರೆ ಎಂದು ಹೇಳಿರುವ ಖಜಾನೆ ಇಲಾಖೆಯು, ಅದನ್ನು ಜಿ.ಎಲ್‌. ಖಾತೆಯಲ್ಲಿ ಜಮೆ ಮಾಡಿಕೊಳ್ಳಲಾಗಿದೆ ಎಂದು ನೀಡಿರುವ ವಿವರಣೆಯು ಅಪೂರ್ಣವಾಗಿದೆ ಎಂದು ತಿಳಿದು ಬಂದಿದೆ.

ಜಿ ಎಲ್‌ ಖಾತೆಯಲ್ಲಿ ಹಣವನ್ನು ಪಾರ್ಕ್‌ ಮಾಡಲು ಅವಕಾಶ ಇರುವುದಿಲ್ಲ. ಅದನ್ನು ಅವರು ನೇರವಾಗಿ ಸರ್ಕಾರಕ್ಕೆ ಜಮೆ ಮಾಡಬೇಕು. ಸರ್ಕಾರಕ್ಕೆ ಜಮೆ ಮಾಡಿರುವುದಾಗಿ ಕೆನರಾ ಬ್ಯಾಂಕ್‌ನವರು ಲಿಖಿತವಾಗಿ ದೃಢೀಕರಣ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ 2 ಲಕ್ಷ ರು.ಮೇಲ್ಪಟ್ಟು ನಗದು ಹಣವನ್ನು ಸ್ವೀಕರಿಸಲು ಆರ್‌ಬಿಐನ ನಿಯಮಗಳ ಪ್ರಕಾರ ಅವಕಾಶವಿಲ್ಲ. ಆದರೂ 5,32,000 ನಗದನ್ನು ಸ್ವೀಕರಿಸಿದ್ದರೂ ಆ ಬಗ್ಗೆ ವರದಿಯಲ್ಲಿ ವಿವರಣೆಗಳಿಲ್ಲ.

ಬ್ಯಾಂಕ್‌ನವರು ಸರ್ಕಾರದ ಪರವಾಗಿ ಹಣವನ್ನು ಖಜಾನೆ 2ರಲ್ಲಿ ಸ್ವೀಕರಿಸಿದ ನಂತರ ನೇರವಾಗಿ ಅದನ್ನು ಖಜಾನೆಗೆ ಜಮಾ ಮಾಡಬೇಕು ಎಂಬ ಬಗ್ಗೆ ಸ್ಪಷ್ಟೀಕರಣ ನೀಡಿಲ್ಲದಿರುವುದು ವರದಿಯಿಂದ ಗೊತ್ತಾಗಿದೆ.

ಚೆಲುವರಾಜು ಸಿಲುಕಿಸುವ ಯತ್ನ?

ಸಾಕಷ್ಟು ಪುರಾವೆ, ಸಾಕ್ಷ್ಯಗಳನ್ನು ಇಲಾಖೆಗೆ ಒದಗಿಸುವ ಮೂಲಕ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯುವ ಪ್ರಕರಣವನ್ನು ಹೊರಗೆಡವಿದ್ದ ಶೃಂಗೇರಿಯ ಉಪ ನೋಂದಣಾಧಿಕಾರಿ ಚೆಲುವರಾಜು ಅವರನ್ನು ಇಲಾಖೆಯ ಅಧಿಕಾರಿಗಳು ಸಿಲುಕಿಸಲು ಯತ್ನಿಸಿರುವುದು ವರದಿಯಿಂದ ತಿಳಿದು ಬಂದಿದೆ.

‘ಉಪ ನೋಂದಣಾಧಿಕಾರಿಗಳು ಖಜಾನೆ ಲೆಕ್ಕದಲ್ಲಿ ಜಮೆಯಾಗಿರುವುದನ್ನು ಕೆಟಿಸಿ-25ರ ಮೂಲಕ ಖಚಿತಪಡಿಸಿಕೊಳ್ಳದೇ ಸೇವೆಯನ್ನು ನೀಡಿರುವುದು ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇಧ 329(ವಿ)ರಡಿಯ ಟಿಪ್ಪಣಿಯ 3ರ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ ಚಲನ್‌ ಪಾವತಿ ಹಂತವನ್ನು ಪರಿಶೀಲಿಸುವ ಮಾಹಿತಿಯ ಕೊರತೆ ಕಂಡು ಬರುತ್ತದೆ. ಚಲನ್‌ನಲ್ಲಿ ಸಂದಾಯದ ಹಂತವು ಎಂದು ವರದಿಯಾಗಿರುವುದು ಗ್ರಹಿಸುವಲ್ಲಿ ವಿಫಲರಾಗಿರುತ್ತಾರೆ, ‘ ಎಂದು ಚೆಲುವರಾಜು ಅವರ ವಿರುದ್ಧವೇ ಸಂಚು ಹೆಣೆದಿರುವುದು ವರದಿಯಿಂದ ಗೊತ್ತಾಗಿದೆ.

ಇನ್ನು ನೋಂದಣಿ ಮತ್ತು ಮುದ್ರಾಂಕ ಪರಿವೀಕ್ಷಕರ ಸೂಚನೆಯಂತೆ ಜಿಲ್ಲಾ ನೋಂದಣಾಧಿಕಾರಿ ನೀಡಿರುವ ವರದಿಯು ಖಜಾನೆ ಇಲಾಖೆ ನೀಡಿರುವ ವರದಿಗೆ ಪೂರಕವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಶೃಂಗೇರಿ ಉಪ ನೋಂದಣಾಧಿಕಾರಿ ಕಚೇರಿಯ ಗಣಕ ಯಂತ್ರ ನಿರ್ವಾಹಕಿ ಪಿ ನೇತ್ರಾವತಿ ಅವರ ಅವರು ಯಶಸ್ವಿ ವರದಿಯನ್ನು ಸ್ಕ್ಯಾನಿಂಗ್‌ ಮಾಡದೇ ನಾಶಪಡಿಸಿರುವ ಕುರಿತು ಚೆಲುವರಾಜು ಅವರು ಶಂಕೆ ವ್ಯಕ್ತಪಡಿಸಿದ್ದರು.

ಆದರೆ ಸ್ಕ್ಯಾನಿಂಗ್‌ ಮಾಡುವಂತೆ ಉಪ ನೋಂದಣಾಧಿಕಾರಿ ಚೆಲುವರಾಜು ಅವರು ನೇತ್ರಾವತಿ ಎಂಬುವರಿಗೆ ಸೂಚಿಸಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. 80,00,000 ರು.ಗಳ ಕ್ರಯಪತ್ರದ ಯಶಸ್ವಿ ವರದಿಯನ್ನು ಪರಿಶೀಲಿಸದೇ ದಸ್ತಾವೇಜನ್ನು ನೋಂದಾಯಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ನೀಡಿರುವ ವರದಿಯು ಸತ್ಯಾಸತ್ಯತೆಗಳಿಂದ ಕೂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಪಿ ನೇತ್ರಾವತಿ ಎಂಬುವರ ಕುರಿತು ಜಿಲ್ಲಾ ನೋಂದಣಾಧಿಕಾರಿ ವರದಿಯಲ್ಲಿ ಪ್ರಸ್ತಾಪವಾಗಿದೆಯಾದರೂ ಚೆಲುವರಾಜು ಅವರು ಎತ್ತಿದ್ದ ಶಂಕೆಗಳ ಸಂಬಂಧ ನೇತ್ರಾವತಿ ಅವರಿಂದ ನಿಯಮಗಳ ಪ್ರಕಾರ ಲಿಖಿತ ಹೇಳಿಕೆಯನ್ನು ದಾಖಲಿಸಿಲ್ಲ. ಹೇಳಿಕೆಯನ್ನು ಲಿಖಿತವಾಗಿ ದಾಖಲಿಸಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಾಗಿಲ್ಲ. ಮೌಖಿಕ ಹೇಳಿಕೆಯೊಂದರಿಂದಲೇ ವರದಿ ಸಿದ್ಧಪಡಿಸಲಾಗಿದೆ ಎಂಬ ಅನುಮಾನವನ್ನು ಇದು ಬಲಪಡಿಸಿದಂತಾಗಿದೆ.

ಅದೇ ರೀತಿ ಕಚೇರಿಯ ಡಾಟಾ ಎಂಟ್ರಿ ಆಪರೇಟರ್‌ ಕಿರಣ್‌ ಎಂಬುವರ ಮೇಲೆ ಚೆಲುವರಾಜು ಅವರು ಮಾಡಿದ್ದ ಆರೋಪವನ್ನೂ ವರದಿಯಲ್ಲಿ ಅಲ್ಲಗಳೆಯಲಾಗಿದೆ. ಕಿರಣ್‌ ಎಂಬುವರು ಪಡೆಯುತ್ತಿರುವ ವೇತನ ಕುರಿತು ಚೆಲುವರಾಜು ಅವರು ನೇರವಾಗಿ ಐಜಿಆರ್‌ಗೆ ದಾಖಲೆಗಳನ್ನು ನೀಡಿದ್ದರು. ಆದರೆ ವರದಿಯಲ್ಲಿ ಅದನ್ನು ಮರೆಮಾಚಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ. ಹಾಗೆಯೇ ಸೈಬರ್‌ ಹ್ಯಾಕಿಂಗ್‌ ಮಾಡಿದ್ದರ ಬಗ್ಗೆಯೂ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿದ್ದರೂ ವರದಿಯಲ್ಲಿ ವಿವರಣೆಗಳಿಲ್ಲ.

‘ಕಿರಣ್‌ ಅವರ ಗಣಕ ಯಂತ್ರದಲ್ಲಿ ಖಜಾನೆ ವೆಬ್‌ಸೈಟ್‌ನ್ನು ಬಳಸಲಾಗಿದ್ದು, ಈ ಗಣಕ ಯಂತ್ರವು ಸರ್ವರ್‌ ಆಗಿರುವುದಿಲ್ಲ. ಮತ್ತು ಎಸ್‌ಕ್ಯೂಎಲ್‌ 2008 ಎಂಬುದು ಸಾಮಾನ್ಯ ಫೋಲ್ಡರ್‌ ಆಗಿದೆ. ಆದರೆ ಯಾವುದೇ ಡೇಟಾಬೇಸ್‌ ಆಗಿರುವುದಿಲ್ಲ. ಸಿಎಂಡಿ ಎಂಬುದನ್ನು ಐಪಿ ಪಿಂಗ್‌ ಮಾಡಲು ಗಣಕಯಂತ್ರ ನಿರ್ವಾಹಕರು ಬಳಸಿರುತ್ತಾರೆ. ಕಚೇರಿಯ 2 ಗಣಕಯಂತ್ರದಲ್ಲಿ ರನ್‌ ಕಮಾಂಡ್‌ನಲ್ಲಿ ಉಪಯೋಗಿಸಿದ ಎಲ್ಲಾ ಡೇಟಾಗಳು ಉಪ ನೋಂದಣಿ ಕಚೇರಿಯ ಗಣಕ ಯಂತ್ರಕ್ಕೆ ಸಂಬಂಧಿಸಿದ್ದು, ಆದರೆ ಇವುಗಳಲ್ಲಿ ಯಾವುದೇ ಅಕ್ರಮ ಕಂಡು ಬಂದಿರುವುದಿಲ್ಲ,’ ಎಂದು ವರದಿಯಲ್ಲಿ ಷರಾ ಬರೆಯಲಾಗಿದೆ.

ರಾಜ್ಯದಲ್ಲಿ ಖಜಾನೆ-2 ಅನುಷ್ಠಾಗೊಂಡ ನಂತರ ಸರ್ಕಾರದ ಲೆಕ್ಕಕ್ಕೆ ಹಣ ಪಾವತಿಯಾಗುವ ಪ್ರಸಂಗಗಳು ಪಾರದರ್ಶಕವಾಗಿದ್ದು, ಹಿಂದಿನ ಪದ್ಧತಿಗಿಂತ ಸುಧಾರಣೆಗೊಳಿಸಲಾಗಿದೆ. ಸರ್ಕಾರದ ಹಣವನ್ನು ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಗೊಳಿಸಲು ಆನ್‌ಲೈನ್‌ನಲ್ಲಿ ಖಜಾನೆ-2ರ ಹೆಸರಿನಲ್ಲಿ ನಕಲು ಐಡಿ ಸೃಜಿಸಿರುವ ಸಾಧ್ಯತೆಗಳಿವೆ. ಈ ಕೃತ್ಯದಲ್ಲಿ ನೋಂದಣಿ, ಖಜಾನೆ ಮತ್ತು ಬ್ಯಾಂಕ್‌ನ ಅಧಿಕಾರಿ, ಸಿಬ್ಬಂದಿಗಳು ಶಾಮೀಲಾಗಿ ಆರ್ಥಿಕ ಅಪರಾಧವನ್ನು ಎಸಗಿದ್ದಾರೆ. ರಾಜ್ಯದ ನೋಂದಣಿ ಮುದ್ರಾಂಕ ಇಲಾಖೆಯಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಈ ಕುರಿತು ತನಿಖೆ ಕೈಗೊಳ್ಳಬೇಕು,’ ಎಂದು ಚೆಲುವರಾಜು ಅವರು ಮುಖ್ಯ ಕಾರ್ಯದರ್ಶಿಗೆ 2021ರ ಜನವರಿ 13ರಂದು ಬರೆದಿದ್ದ ಪತ್ರವನ್ನು ಸ್ಮರಿಸಬಹುದು.

ಕಂದಾಯ ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಗಂಗಾಧರ್‌ ಎಂಬುವರು ಹಣಕ್ಕಾಗಿ ಬೇಡಿಕೆ ಇರಿಸಿದ್ದರು ಇದೇ ಚೆಲುವರಾಜು ಅವರು ಆರೋಪಿಸಿದ್ದರು. ಅಲ್ಲದೆ ಗಂಗಾಧರ್‌ ಅವರ ವಿರುದ್ಧ ಶೃಂಗೇರಿ ಪೊಲೀಸ್‌ ಠಾಣೆ ಮತ್ತು ಎಸಿಬಿಯಲ್ಲೂ ಪ್ರತ್ಯೇಕ ದೂರು ಸಲ್ಲಿಸಿದ್ದರು. ಇದನ್ನಾಧರಿಸಿ ಶೃಂಗೇರಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

SUPPORT THE FILE

Latest News

Related Posts