ಅತ್ಯಾಚಾರ ಆರೋಪ; ಮುರುಘಾ ಶರಣರ ಸೋದರನಿಗೆ ಜಾಮೀನು ನೀಡಲು ಕೋರ್ಟ್‌ ನಕಾರ

ಬೆಂಗಳೂರು: ‘ಮದುವೆಯಾಗುವುದಾಗಿ ನಂಬಿಸಿ ಉಪನ್ಯಾಸಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂಬ ಗುರುತರ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರ ಖಾಸಾ ಸಹೋದರ ಹಾಗೂ ಮಠದ ಸಿಇಒ (ಮುಖ್ಯ ಆಡಳಿತಾಧಿಕಾರಿ) ಎಂ.ಜಿ. ದೊರೆಸ್ವಾಮಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರು ನಗರದ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಿರಾಕರಿಸಿದೆ.

ಈ ಕುರಿತು ಆರೋಪಿಗಳಾದ ಎಂ.ಜೆ.ದೊರೆಸ್ವಾಮಿ ಸಲ್ಲಿಸಿದ್ದ ಮನವಿಯನ್ನು 55ನೇ ಹೆಚ್ವುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶೇ ಆರ್. ಶಾರದ (ಶುಕ್ರವಾರ ಜ.5) ವಜಾಗೊಳಿಸಿದ್ದಾರೆ.

 

ಈ ಪ್ರಕರಣದ ಇನ್ನುಳಿದ ಮೂವರು ಆರೋಪಿಗಳಾದ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿ ಎ ಜೆ ಪರಮಶಿವಯ್ಯ, ಮಠದ ಕಾನೂನು ಸಲಹೆಗಾರ ಎನ್.ಗಂಗಾಧರ ಹಾಗೂ ಸ್ಥಳೀಯ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನ ಅವರಿಗೆ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

32 ವರ್ಷದ ಸಂತ್ರಸ್ತೆ ಉಪನ್ಯಾಸಕಿಯು ಬೆಂಗಳೂರಿನ ಯಶವಂತಪುರ ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ 2021ರ ಜನವರಿ 15ರಂದು ಲಿಖಿತ ದೂರು ಸಲ್ಲಿಸಿದ್ದಾರೆ.

ಈ ದೂರನ್ನಾಧರಿಸಿ ಆರೋಪಿ ದೊರೆಸ್ವಾಮಿ ಸೇರಿದಂತೆ ಒಟ್ಟು 4 ಮಂದಿ ವಿರುದ್ಧ 2021ರ ಜನವರಿ 16ರಂದು ಎಫ್‌ಐಆರ್‌ ದಾಖಲಾಗಿದೆ. ಉಪನ್ಯಾಸಕಿ ಸಲ್ಲಿಸಿರುವ ದೂರು ಮತ್ತು ಎಫ್‌ಐಆರ್‌ನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಈ ಪ್ರಕರಣವು ಕಳೆದ 2 ವರ್ಷದ ಹಿಂದೆ ನಡೆದಿದೆ ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ. ಆದಾಗ್ಯೂ ಪ್ರಕರಣ ಡಾ. ಶಿವಮೂರ್ತಿ ಮುರುಘಾ ಶರಣರ ಗಮನದಲ್ಲಿದ್ದರೂ ಅವರು ಗಾಢ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಎಸ್ ಜೆ ಎಂ (ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠ) ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಮಠದ ಕಾನೂನು ಸಲಹೆಗಾರ ಎನ್. ಗಂಗಾಧರ್‌ ಹಾಗೂ ಸ್ಥಳೀಯ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನ ಅವರುಗಳ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

32 ವರ್ಷದ ಉಪನ್ಯಾಸಕಿಯೊಬ್ಬರ ಮೇಲೆ ನಡೆದಿದೆ ಎನ್ನಲಾಗಿರುವ ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ ಒಡ್ಡಿರುವ ಆರೋಪ ಈ ಮೂವರ ಮೇಲಿರುವುದು ಎಫ್‌ಐಆರ್‌ನಿಂದ ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ:

ಚಿತ್ರದುರ್ಗದ ಎಸ್‌ಜೆಎಂ ಮಹಾವಿದ್ಯಾಪೀಠದಲ್ಲಿ 2019ರ ಸೆಪ್ಟೆಂಬರ್‌ 17ರಂದು ನಡೆದಿದ್ದ ಸೈಬರ್‌ ಸೇಫ್‌ ಕ್ಯಾಂಪಸ್‌ ಕಾರ್ಯಾಗಾರ ಸಂದರ್ಭದಲ್ಲಿ ಎಂ.ಜಿ. ದೊರೆಸ್ವಾಮಿ ಅವರು ಕಾರ್ಯಕ್ರಮ ಆಯೋಜಕಿ ಉಪನ್ಯಾಸಕಿಯ ಮೊಬೈಲ್‌ ನಂಬರ್‌ ಪಡೆದಿದ್ದರು.

ಕಾರ್ಯಾಗಾರ ಪೂರ್ಣಗೊಂಡ ನಂತರ ದೊರೆಸ್ವಾಮಿ ಹಲವು ಬಾರಿ ಉಪನ್ಯಾಸಕಿಯೊಂದಿಗೆ ಸಲುಗೆಯೊಂದಿಗೆ ಮಾತನಾಡಲು ಆರಂಭಿಸಿದ್ದರು. ಆದರೆ, ಉಪನ್ಯಾಸಕಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

ಉಪನ್ಯಾಸಕಿಯ ವಿರೋಧದ ನಡುವೆಯೂ ದೊರೆಸ್ವಾಮಿ ಅವರು ಪದೇ ಪದೇ ಫೋನ್‌ ಮಾಡುತ್ತಿದ್ದರು ಎಂದು ದೂರಲಾಗಿದೆ.

“ಇದೆಲ್ಲಾ ಇಷ್ಟ ಇಲ್ಲ” ಎಂದು ಆಕೆ ಹೇಳಿದರೂ, ಕೇಳದೇ ಪದೇ ಪದೇ ಫೋನ್‌ ಮಾಡಿ “ನನಗೆ ನೀವೆಂದರೆ ತುಂಬಾ ಇಷ್ಟ” ಎಂಬಂತಹ ಪ್ರಣಯ ಸಂದೇಶಗಳನ್ನು ಕಳುಹಿಸುತ್ತಿದ್ದರು.
ಫೋನ್‌ನಲ್ಲಿ ಮಾತನಾಡುವಾಗ ಅತಿಯಾದ ಪ್ರೀತಿ ತೋರಿಸುತ್ತಿದ್ದರು. ನನಗೆ “ಅದು” ಇಷ್ಟ ಇಲ್ಲ ಎಂದು ಹೇಳಿದರೂ ನನ್ನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದರು” ಎಂದು ವಿವರಿಸಿರುವುದು ಉಪನ್ಯಾಸಕಿ ಸಲ್ಲಿಸಿರುವ ದೂರಿನಿಂದ ಗೊತ್ತಾಗಿದೆ.

ಪ್ರತಿಷ್ಠಿತ ಹೋಟೆಲ್‌ನಲ್ಲಿ ನಡೆದಿತ್ತೇ ಅತ್ಯಾಚಾರ?

ಸಂತ್ರಸ್ತೆ ಉಪನ್ಯಾಸಕಿಯು ಬೆಂಗಳೂರಿನಲ್ಲಿ ಇದ್ದುದನ್ನು ಮೊದಲೇ ಗೊತ್ತುಪಡಿಸಿಕೊಂಡಿದ್ದ ಆರೋಪಿ ದೊರೆಸ್ವಾಮಿ ಅವರು ಸಂಪರ್ಕ ಸಾಧಿಸಿದ್ದರು. ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಊಟ ಮಾಡಿದ ನಂತರ ಯಶವಂತಪುರದಲ್ಲಿನ ಮತ್ತೊಂದು ಪ್ರತಿಷ್ಠಿತ ಸ್ಟಾರ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು.

‘ಈ ದಿನ ಇಬ್ಬರು ಒಟ್ಟಿಗೇ ಇರೋಣವೆಂದು ತುಂಬಾ ಬಲವಂತ ಮಾಡಿದ. ನಾನು ಬೇಡವೆಂದರೂ ಹೋಟೆಲ್‌ನ ಕೊಠಡಿಯನ್ನು ಆನ್ಲೈನ್‌ನಲ್ಲಿ ಮುಂಗಡವಾಗಿ ಕಾಯ್ದಿರಿಸಿದ್ದ. ನಾವಿಬ್ಬರೂ 2019ರ ಅಕ್ಟೋಬರ್‌ 10ರಂದು ಒಂದೇ ಕೊಠಡಿಯಲ್ಲಿ ರಾತ್ರಿ ತಂಗಿದ್ದೆವು. ತನಗೆ ಡೈವೋರ್ಸ್‌ ಆಗಿದೆ ಎಂದು ದೊರೆಸ್ವಾಮಿ ನನ್ನನ್ನು ನಂಬಿಸಿದ. ಹಾಗೂ ಮದುವೆಯಾಗುವುದಾಗಿ ಹೇಳಿದ. ಇದೆಲ್ಲಾ ನನಗೆ ಇಷ್ಟ ಇಲ್ಲ ಎಂದು ಹೇಳಿದರೂ ಹಠ ಮಾಡಿದ. ರಾತ್ರಿಯೆಲ್ಲಾ ನನ್ನ ದೇಹದ ಅಂಗಾಂಗಳನ್ನೆಲ್ಲಾ ಮುಟ್ಟಿದ. ಬೇಡವೆಂದರೂ ಬಲವಂತವಾಗಿ ನನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ,’ ಎಂದು ಉಪನ್ಯಾಸಕಿ ದೂರಿನಲ್ಲಿ ವಿವರಿಸಿದ್ದಾರೆ.

ವಿಡಿಯೋ ತೋರಿಸಿ ಬೆದರಿಸಿದ್ದರೇ?

2019ರ ಅಕ್ಟೋಬರ್‌ 10ರ ನಂತರವೂ ಆರೋಪಿ ದೊರೆಸ್ವಾಮಿ ಅವರು ಉಪನ್ಯಾಸಕಿಯನ್ನು ಬೆದರಿಸಿ ಅದೇ ಪ್ರತಿಷ್ಠಿತ ಹೋಟೆಲ್‌ಗೆ ಕರೆಸಿಕೊಂಡಿದ್ದ. ‘ನನಗೆ ಫೋನ್‌ ಮಾಡಿ ಭೇಟಿ ಆಗೋಣವೆಂದು ಹೇಳಿದ. ನಾನು ಬರುವುದಿಲ್ಲ ಎಂದು ಹೇಳಿದಾಗ ನನ್ನ ಬಳಿ ವಿಡಿಯೋ ಇದೆ ಎಂದು ಬೆದರಿಸಿದ. 2019ರ ಅಕ್ಟೋಬರ್‌ 25 ಮತ್ತು 26ರಂದು ಹೋಟೆಲ್‌ಗೆ ಕರೆಸಿಕೊಂಡ. ಇಷ್ಟವಿಲ್ಲ ಎಂದರೂ 2 ದಿನಗಳ ಕಾಲ ಬಿಟ್ಟೂ ಬಿಡದೆ ನನ್ನ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ಮಾಡಿದ. ನಂತರ ನಾವಿಬ್ಬರೂ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ಇದೆ ಎಂದು ಬ್ಲಾಕ್‌ಮೇಲ್‌ ಮಾಡಿದ. ಹಲವು ಪ್ರತಿಷ್ಠಿತ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಹಲವು ಬಾರಿ ಅತ್ಯಾಚಾರ ಮಾಡಿದ”, ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮದುವೆಗೆ ನಿರಾಕರಿಸಿದ್ದೇಕೆ?

ಹಲವು ಬಾರಿ ಅತ್ಯಾಚಾರ ಎಸಗಿರುವ ಗಂಭೀರ ಆರೋಪಕ್ಕೆ ಗುರಿಯಾಗಿರುವ ದೊರೆಸ್ವಾಮಿ ಅವರನ್ನು ಸಂತ್ರಸ್ತೆ ಉಪನ್ಯಾಸಕಿ ಮದುವೆಗೆ ಒತ್ತಾಯಿಸಿದಾಗ ಹಲವು ಸಬೂಬುಗಳನ್ನು ಹೇಳುತ್ತಲೇ ಮುಂದೂಡಿದ್ದರು ಎಂಬ ಅಂಶ ದೂರಿನಿಂದ ಗೊತ್ತಾಗಿದೆ.

‘ನಾನು ದೊರೆಸ್ವಾಮಿ ಅವರಿಗೆ ಮದುವೆ ಮಾಡಿಕೊಳ್ಳುವಂತೆ ಹಲವು ಬಾರಿ ಹೇಳಿದಾಗ ಇವತ್ತು, ನಾಳೆ ಮಾಡಿಕೊಳ್ಳುವುದಾಗಿ ಸಬೂಬುಗಳನ್ನು ಹೇಳುತ್ತಲೇ ಬಂದರು. ನಂತರ ದೊರೆಸ್ವಾಮಿ ಅವರು ಯಾವುದೇ ವಿಚ್ಛೇದನ ಪಡೆದಿರುವುದಿಲ್ಲ ಎಂದು ತಿಳಿಯಿತು. ಆ ನಂತರವೂ ಅವರು ನನಗೆ ಪ್ರೀತಿ ತೋರಿಸದೆ ನಿರ್ಲಕ್ಷ್ಯ ಮಾಡಿದರು. ಮದುವೆ ಮಾಡಿಕೊಳ್ಳುವಂತೆ ಕೇಳಿದಾಗ ಏನನ್ನೂ ಮಾತನಾಡದೆ ಮೌನವಾಗಿರುತ್ತಿದ್ದ,’ ಎಂದು ಸಂತ್ರಸ್ತೆ ಉಪನ್ಯಾಸಕಿ ದೂರಿನಲ್ಲಿ ವಿವರಿಸಿದ್ದಾರೆ.

ಜೀವ ಬೆದರಿಕೆ ಒಡ್ಡಿದರು

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮತ್ತು ಕಾನೂನು ಸಲಹೆಗಾರ ಎನ್. ಗಂಗಾಧರ್‌ ಅವರು ಸಂತ್ರಸ್ತೆ ಉಪನ್ಯಾಸಕಿಗೆ ಜೀವ ಬೆದರಿಕೆ ಒಡ್ಡಿದರು ಎಂದು ಆರೋಪ ಎದುರಿಸುತ್ತಿದ್ದಾರೆ.

‘ಕಾರ್ಯದರ್ಶಿ ಪರಮಶಿವಯ್ಯ ಮತ್ತು ಗಂಗಾಧರ್‌ ಅವರು ದೊರೆಸ್ವಾಮಿ ಜತೆ ಮಾತುಕತೆ ನಡೆಸಿ ಮದುವೆ ಮಾಡಿಸುವುದಾಗಿ ಹೇಳಿ ನಂಬಿಸಿದ್ದರು. ನನ್ನ ಮತ್ತು ದೊರೆಸ್ವಾಮಿ ನಡುವಿನ ಸಂಭಾಷಣೆಯ ಆಡಿಯೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ. ನಂತರ ಸ್ಥಳೀಯ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ ಮಲ್ಲಿಕಾರ್ಜುನ ಅವರು ನನ್ನ ಬಳಿ ಬಂದು ಈ ವಿಚಾರವನ್ನು ಇಲ್ಲಿಗೇ ಬಿಡಿ. ಇಲ್ಲಾ ಅಂದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ,’ ಎಂದು ಬೆದರಿಕೆ ಒಡ್ಡಿದ್ದರು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶರಣರಿಗೂ ಗೊತ್ತಿತ್ತು ಈ ಪ್ರಕರಣ

ಇಡೀ ಪ್ರಕರಣ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರ ಗಮನದಲ್ಲಿದೆ. ‘ಇದನ್ನು ಶಿವಮೂರ್ತಿ ಮುರುಘಾ ಶರಣರ ಗಮನಕ್ಕೆ ತಂದಿರುತ್ತೇನೆ,’ ಎಂದು ಸಂತ್ರಸ್ತೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

the fil favicon

SUPPORT THE FILE

Latest News

Related Posts