ಮಾಸ್ಕ್‌ ಖರೀದಿ ಅಕ್ರಮ; ತಪ್ಪು ಮಾಹಿತಿ ನೀಡಿ ಲೋಕಾಯುಕ್ತವನ್ನೇ ದಿಕ್ಕು ತಪ್ಪಿಸಿದ ಪಾಂಡೆ?

ಬೆಂಗಳೂರು; ದುಬಾರಿ ದರದಲ್ಲಿ ಮಾಸ್ಕ್‌ ಖರೀದಿಸಿ ಸರ್ಕಾರಕ್ಕೆ ಸಂಭವಿಸಿರುವ ನಷ್ಟದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್‌ ಪಾಂಡೆ ಸೇರಿದಂತೆ ಆರೋಪಿತ ಅಧಿಕಾರಿಗಳು ಲೋಕಾಯುಕ್ತಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರುದಾರ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ ಪ್ರತ್ಯುತ್ತರ ಸಲ್ಲಿಸಿದ್ದಾರೆ.

ಪಾಂಡೆ, ಡಾ ಪ್ರಿಯಲತಾ ಮತ್ತು ಡಾ ಲತಾ ಪ್ರಮೀಣಾ ಅವರು ಎನ್‌-95 ಮಾಸ್ಕ್‌ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ ಮತ್ತು ಯಾವುದೇ ಅವ್ಯವಹಾರ ಎಸಗಿಲ್ಲ ಎಂದು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಕ್ಷೇಪಣೆಗೆ ಪ್ರತಿಯಾಗಿ ಮತ್ತಷ್ಟು ದಾಖಲೆಗಳನ್ನು ಒದಗಿಸಿರುವ ಭೀಮನಗೌಡ ಪರಗೊಂಡ ಅವರು ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರ ಸೂಚನೆ ಮೇರೆಗೆ ಅನಧಿಕೃತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ದಾಖಲೆಗಳ ಸಮೇತ ವಾದವನ್ನು ಮುಂದೊಡ್ಡಿದ್ದಾರೆ. ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಪ್ರತ್ಯುತ್ತರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೋವಿಡ್‌ ವೈರಾಣು ರೋಗ ನಿಯಂತ್ರಣ ಸಂಬಂಧ ಔಷಧ ಮತ್ತು ವೈದ್ಯಕೀಇಯ ಸಲಕರಣೆಗಳ ಖರೀದಿ, ಸಂಗ್ರಹಣೆ ಮತ್ತು ಮೇಲ್ವಿಚಾರಣೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2020ರ ಮಾರ್ಚ್‌ 5ರಂದು ನಡೆದಿದ್ದ ಸಭೆಯಲ್ಲೇ ಡಾ ಪ್ರಿಯಲತಾ ಮತ್ತು ಡಾ ಲತಾ ಪ್ರಮೀಳ ಅವರನ್ನು ನೇಮಿಸಲು ನಿರ್ಣಯಿಸಿತ್ತು. ಈ ಸಂಬಂಧ 2020ರ ಮಾರ್ಚ್‌ 24ರಂದು ಅವರನ್ನು ಹೆಚ್ಚುವರಿಯಾಗಿ ಕೆಡಿಎಲ್‌ಡಬ್ಲ್ಯೂಎಸ್‌ನಲ್ಲಿ ಕಾರ್ಯನಿರ್ವಹಿಸಲು ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ ಅವರು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಭೀಮನಗೌಡ ಅವರು ಪ್ರತ್ಯುತ್ತರದಲ್ಲಿ ವಿವರಿಸಿದ್ದಾರೆ.

ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜಕುಮಾರ್‌ ಪಾಂಡೆ ಅವರ ಅಧ್ಯಕ್ಷತೆಯಲ್ಲಿಯೇ 2020ರ ಮಾರ್ಚ್‌ 4ರಂದು ಸಭೆ ನಡೆದಿತ್ತು. ಇದೇ ಸಭೆಯಲ್ಲಿಯೇ ಔಷಧ ಮತ್ತು ಪರಿಕರಗಳ ಖರೀದಿ, ಸಂಗ್ರಹಣೆ ಕುರಿತು ಹಲವು ನಿರ್ಧಾರಗಳನ್ನು ಕೈಗೊಳ್ಳಳಾಗಿದೆ. ಆದರೂ ಖರೀದಿಯಲ್ಲಿ ಪಾತ್ರವಿಲ್ಲ ಎಂದು ತಪ್ಪು ಮಾಹಿತಿ ಒದಗಿಸಿದ್ದಾರೆ ಎಂದು ಲೋಕಾಯುಕ್ತಕ್ಕೆ ಈ ಸಂಬಂಧ ದಾಖಲೆಯನ್ನೂ ಒದಗಿಸಿದ್ದಾರೆ.

ಕೆಡಿಎಲ್‌ಡಬ್ಲ್ಯೂಎಸ್‌ನಲ್ಲಿ ಆಸಕ್ತರು ದರ ಪಟ್ಟಿಗಳನ್ನು ಇ-ಪೋರ್ಟಲ್‌ ಮೂಲಕ ಸಲ್ಲಿಸಲು ಅವಕಾಶ ನೀಡಿಲ್ಲ. ಮ್ಯಾನುಯಲ್‌ ಮೂಲಕ ದರಪಟ್ಟಿ ಸಲ್ಲಿಸಲು ಅವಕಾಶ ನೀಡಿರುವ ಉದ್ದೇಶವೇನು ಎಂದು ಪ್ರಶ್ನಿಸಿರುವ ದೂರುದಾರ, ಮ್ಯಾನ್ಯುಯಲ್‌ ಮೂಲಕ ಸಲ್ಲಿಸುವ ದರಪಟ್ಟಿಗಳನ್ನು ಅತಿ ಸೂಕ್ಷ್ಮವಾಗಿ ತೆರೆದು ಪರಿಶೀಲಿಸಿ ಪುನಃ ಯಥಾಸ್ಥಿತಿಯಲ್ಲಿಡುವ ಅಧಿಕಾರಿಗಳ ಚಾಣಾಕ್ಷತೆ ಎದ್ದು ಕಾಣುತ್ತದೆ. ಇಲ್ಲಿ ಅಕ್ರಮ ನಡೆದಿರುವ ಸಾಧ್ಯತೆಗಳೇ ಹೆಚ್ಚಿವೆ ಎಂದು ವಿವರಿಸಿರುವುದು ಗೊತ್ತಾಗಿದೆ.

ಪ್ರಕರಣ ಹಿನ್ನೆಲೆ

ಒಟ್ಟು 35.18 ಕೋಟಿ ಮೊತ್ತಕ್ಕೆ 4(ಜಿ) ವಿನಾಯಿತಿ ಪಡೆದಿದ್ದ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌, ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ಗಳ ಖರೀದಿಸಲು ಮಾರ್ಚ್‌ 9, 14, 20ರಂದು ಒಟ್ಟು 11.66 ಕೋಟಿ ರು.ಗೆ ಮೂರು ಕಂಪನಿಗಳಿಗೆ ಸರಬರಾಜು ಆದೇಶ ನೀಡಿತ್ತು.

ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌, ಕಡಿಮೆ ದರ ನೀಡುವ ಸರಬರಾಜುದಾರರಿಂದ ಔಷಧ, ಉಪಕರಣಗಳನ್ನು ಖರೀದಿಸದೇ ದುಬಾರಿ ದರ ನೀಡಿರುವ ಸರಬರಾಜುದಾರರಿಂದ ಖರೀದಿಸಿದೆ. ಹೀಗಾಗಿ ಸರ್ಕಾರಕ್ಕೆ ಅಂದಾಜು 9.04 ಕೋಟಿ ರು. ನಷ್ಟವಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣದ ಕುರಿತು ‘ದಿ ಫೈಲ್‌’ ಆಗಸ್ಟ್‌ 27ರಂದು ದಾಖಲೆ ಸಮೇತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್‌ನಿಂದ ಎನ್‌-95 ಮಾಸ್ಕ್‌ವೊಂದಕ್ಕೆ 147 (ಜಿಎಸ್‌ಟಿ ಸೇರಿದಂತೆ) ದರದಲ್ಲಿ 1,50,000 ಪ್ರಮಾಣದ ಎನ್‌-95 ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌ವೊಂದಕ್ಕೆ 330.40 (ಜಿಎಸ್‌ಟಿ ಸೇರಿ) 1,50,000 ಪ್ರಮಾಣದಲ್ಲಿ ಪಿಪಿಇ ಕಿಟ್‌ಗಳನ್ನು ಒಟ್ಟು 7.16 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಮಾರ್ಚ್‌ 9ರಂದು ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ಆರ್ಥಿಕ ಇಲಾಖೆ ಹೊರಡಿಸಿದ್ದ 4(ಜಿ) ವಿನಾಯಿತಿ ಆದೇಶವನ್ನು (ಸಂಖ್ಯೆ;ಆಇ;183/ವೆಚ್ಚ/12/2020) ಉಲ್ಲೇಖಿಸಿತ್ತು.

ಅದೇ ರೀತಿ 1.56 ಕೋಟಿ ಮೊತ್ತದಲ್ಲಿ 1,00,000.00 ಪ್ರಮಾಣದ ಎನ್‌-95 ಮಾಸ್ಕ್‌ಗಳ ಖರೀದಿಗೆ ಸಾಫ್ಟ್‌ವೇರ್‌ ಕಂಪನಿ ಎಟೆಕ್‌ ಟ್ರಾನ್‌ಗೆ 2020ರ ಮಾರ್ಚ್‌ 20ರಂದು ಆದೇಶ ನೀಡಿತ್ತು. ಇದರಲ್ಲಿ ಆರ್ಥಿಕ ಇಲಾಖೆ ವಿನಾಯಿತಿ ನೀಡಿ 2020ರ ಮಾರ್ಚ್‌ 12ರಂದು ಹೊರಡಿಸಿದ್ದ ಅಧಿಸೂಚನೆಯನ್ನೂ (ಸಂಖ್ಯೆ; ಆಇ 127 ವೆಚ್ಚ-12/2020) ಉಲ್ಲೇಖಿಸಲಾಗಿತ್ತು.

ಹಾಗೆಯೇ ಇದೇ ಅಧಿಸೂಚನೆಯನ್ನು ಉಲ್ಲೇಖಿಸಿ 2.94 ಕೋಟಿ ರು. ಮೊತ್ತದಲ್ಲಿ 2,00,000.00 ಪ್ರಮಾಣದ ಎನ್‌-95 ಮಾಸ್ಕ್‌ಗಳನ್ನು ಖರೀದಿಗೆ 2020ರ ಮಾರ್ಚ್‌ 14ರಂದು ಮೆಡಿ ಅರ್ಥ್ ಲೈಫ್‌ಕೇರ್‌ ಪ್ರೈವೈಟ್‌ ಲಿಮಿಟೆಡ್‌ಗೆ ಆದೇಶ ಹೊರಡಿಸಿತ್ತು.

ಅಲ್ಲದೆ 3 ಕಂಪನಿಗಳಿಗೂ ಒಂದೊಂದು ದರದಲ್ಲಿ ಸರಬರಾಜು ಆದೇಶ ನೀಡಿತ್ತು. ಎನ್‌-95 ಮಾಸ್ಕ್‌ ಗೆ 147 ದರದಲ್ಲಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ಗೆ ಆದೇಶ ನೀಡಿರುವ ಅಧಿಕಾರಿಗಳು, ಎಟೆಕ್‌ ಟ್ರಾನ್‌ಗೆ 156.80 ರು.ದರ ಮತ್ತು ಮೆಡಿಅರ್ಥ್ ಲೈಫ್‌ಕೇರ್‌ ಪ್ರೈ ಲಿ.,ಗೆ 147 ರು. ದರವನ್ನು ನಮೂದಿಸಿತ್ತು.

ಮಾರ್ಚ್‌ 9, 14, 20ರಂದು ಹೊರಡಿಸಿದ್ದ ಸರಬರಾಜು ಆದೇಶದಲ್ಲಿ ನಮೂದಿಸಿರುವ ದರಗಳು ನೈಜ ದರಕ್ಕಿಂತಲೂ ಹೆಚ್ಚಿಗೆ ಇತ್ತು. ಮಾರ್ಚ್‌ ತಿಂಗಳಲ್ಲಿ ಎನ್‌-95 ಮಾಸ್ಕ್‌ಗೆ 70 ರು., ಪಿಪಿಇ ಕಿಟ್‌ಗೆ 200 ರು. ದರವಿತ್ತು. 4(ಜಿ) ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕಡಿಮೆ ದರ ನೀಡುವ ಸರಬರಾಜುದಾರರಿಂದ ಖರೀದಿಸಿದ್ದರೆ ಅಂದಾಜು 9.04 ಕೋಟಿ ರು.ಗಳನ್ನು ಉಳಿಸಬಹುದಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಕಡಿಮೆ ದರ ನೀಡುವ ಸರಬರಾಜುದಾರರಿಂದ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ ಮೂಲಕ ಅವಶ್ಯಕ ಔಷಧ ಮತ್ತು ಉಪಕರಣಗಳನ್ನು 13,35,29,180 ಮತ್ತು 21,83,20,440 ರು. ಸೇರಿದಂತೆ 35.18 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ಅಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ (ಸಂಖ್ಯೆ;ಆಇ;183/ವೆಚ್ಚ/12/2020-ಸಂಖ್ಯೆ; ಆಇ 127 ವೆಚ್ಚ-12/2020) ವಿನಾಯಿತಿ ನೀಡಿದ್ದನ್ನು ಸ್ಮರಿಸಬಹುದು.

ಉಪಕರಣ ಮತ್ತು ಔಷಧ ಸಾಮಗ್ರಿಗಳನ್ನು ಕಡಿಮೆ ದರ ಮತ್ತು ಸಮಂಜಸ ದರದಲ್ಲಿ ಖರೀದಿಸುವ ಸಲುವಾಗಿ ಆರ್ಥಿಕ ಇಲಾಖೆ 4(ಜಿ) ವಿನಾಯಿತಿ ನೀಡಿ 2020ರ ಮಾರ್ಚ್‌ 9 ಮತ್ತು 12ರಂದು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿತ್ತು.

the fil favicon

SUPPORT THE FILE

Latest News

Related Posts