ಖಜಾನೆ-2ರ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿ; ಶೃಂಗೇರಿ ಪ್ರಕರಣಕ್ಕೆ ಬಾಗಲಕೋಟೆ ನಂಟು?

ಬೆಂಗಳೂರು; ಉಪ ನೋಂದಣಿ ಕಚೇರಿ, ಖಜಾನೆ ಇಲಾಖೆ, ವಿವಿಧ ಬ್ಯಾಂಕ್‌ಗಳ ಅಧಿಕಾರಿ, ತಾಂತ್ರಿಕ ಸಹಾಯಕರು ಸಮಾಜ ಘಾತುಕ ಶಕ್ತಿಗಳೊಂದಿಗೆ ಕೈ ಜೋಡಿಸಿ ಸರ್ಕಾರದ ಹಣವನ್ನು ಅಕ್ರಮ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿರುವ ಪ್ರಕರಣಕ್ಕೆ ಬಾಗಲಕೋಟೆಯ ಜಿಲ್ಲೆಯ ನಂಟು ಹೊಂದಿರುವುದು ಗೊತ್ತಾಗಿದೆ. ಅಲ್ಲದೆ ಶೃಂಗೇರಿ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಖರಾಬು ಪ್ರದೇಶವನ್ನು ಅಕ್ರಮವಾಗಿ ನೋಂದಾಯಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಶೃಂಗೇರಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಚಲನ್‌ ಪಾವತಿಸಿದ್ದ ಬಿ ಜಿ ಪ್ರಸನ್ನ ಎಂಬ ವ್ಯಕ್ತಿಗೆ ಖಜಾನೆ 2 ಪಾವತಿ ಹೆಸರಿನ ಹಣ ವರ್ಗಾವಣೆಯು ಬಾಗಲಕೋಟೆಯ ಕೆನರಾ ಬ್ಯಾಂಕ್‌ನ ಖಾತೆಯಿಂದ ವ್ಯವಹಾರ (ವ್ಯವಹಾರ ಸಂಖ್ಯೆ; 13312011234538)ದ ಮೂಲಕ ಆಗಿದೆ.
ಈ ರೀತಿ ಹಣ ವರ್ಗಾಯಿಸಲು ಆನ್‌ಲೈನ್‌ನಲ್ಲಿ ಖಜಾನೆ-2ರ ಹೆಸರಿನಲ್ಲಿ ನಕಲಿ ಐಡಿ ಸೃಜಿಸಿರುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಶೃಂಗೇರಿ ಉಪ ಖಜಾನೆಯ ಪ್ರಥಮದರ್ಜೆ ಸಹಾಯಕ ಯಮುನಪ್ಪ ಬಾಗಲಕೋಟೆ ಜಿಲ್ಲೆಯವನಾಗಿರುವ ಕಾರಣ ಅಂತರ್‌ಜಿಲ್ಲೆ ವ್ಯವಹಾರವೂ ನಡೆದಿದೆ ಎಂಬುದನ್ನು ಮತ್ತಷ್ಟು ಪುಷ್ಠೀಕರಿಸುತ್ತಿದೆ.

ಶೃಂಗೇರಿ ಉಪ ನೋಂದಣಿ ಕಚೇರಿಯ ಗಣಕ ಯಂತ್ರ ನಿರ್ವಾಹಕರಾದ ಎಚ್‌ ಎನ್‌ ಕಿರಣ ಮತ್ತು ಪಿ ನೇತ್ರಾವತಿ ಎಂಬುವರು ಕಾವೇರಿ ಆರ್‌ಡಿಪಿಆರ್‌ ತಂತ್ರಾಂಶ ಸಮನ್ವಯತೆಯನ್ನು ವಿರೂಪಗೊಳಿಸಿ ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಖರಾಬು ಪ್ರದೇಶವನ್ನು ಅಕ್ರಮವಾಗಿ ತನ್ನ ಸ್ನೇಹಿನ ಹೆಸರಿಗೆ ನೋಂದಾಯಿಸಿರುವ ಬಗ್ಗೆ ಹಲವು ದಾಖಲೆಗಳನ್ನೂ ಶೃಂಗೇರಿ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ನೋಂದಣಿ ಮತ್ತು ಮುದ್ರಾಂಕಗಳ ಆಯುಕ್ತರಿಗೆ ವರದಿಯನ್ನೂ ಸಲ್ಲಿಸಿದ್ದಾರೆ. ಆದರೆ ವರದಿ ಆಧರಿಸಿ ಸಚಿವ ಆರ್‌ ಅಶೋಕ್‌ ಮತ್ತು ಮುಖ್ಯ ಕಾರ್ಯದರ್ಶಿ ಆದಿಯಾಗಿ ಯಾರೊಬ್ಬರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಕಾವೇರಿ ಆರ್‌ಡಿಪಿಆರ್‌ ತಂತ್ರಾಂಶ ಸಮನ್ವಯತೆಯನ್ನು ವಿರೂಪಗೊಳಿಸಿ ಒಟ್ಟು 173 ದಸ್ತಾವೇಜುಗಳನ್ನು ನೋಂದಾಯಿಸಲಾಗಿದೆ. ಸರ್ಕಾರದ ಅಧಿಸೂಚನೆ ಪ್ರಕಾರ ನಮೂನೆ 9 ಮತ್ತು 11 ಎ ಅಥವಾ ನಮೂನೆ 11 ಬಿ ಇಲ್ಲದೆಯೇ ನೋಂದಾಯಿಸುವ ಮೂಲಕ ಅಕ್ರಮ ನಡೆಸಿರುವುದು ಚೆಲುವರಾಜು ಅವರು ಬರೆದಿರುವ ಪತ್ರ ಹೊರಗೆಡವಿದೆ.

ಕಳೆದ 10 ವರ್ಷಗಳಿಂದ ಹೊರಗುತ್ತಿಗೆ ನೌಕರರರಾಗಿರುವ ಇವರು ಆರ್ಥಿಕವಾಗಿ ಸಾಧಾರಣ ಕುಟುಂಬದವರಾಗಿದ್ದಾರೆ. ಆರಂಭದಲ್ಲಿ 3,500 ರು. ವೇತನದಿಂದ 10,000 ರು. ವೇತನ ಪಡೆಯುತ್ತಿರುವ ಗಣಕ ಯಂತ್ರ ನಿರ್ವಾಹಕರು ಎಸ್‌ಬಿಐ, ಕರ್ನಾಟಕ ಬ್ಯಾಂಕ್‌, ಕಾರ್ಪೋರೇಷನ್‌ ಬ್ಯಾಂಕ್‌, ಡಿಸಿಸಿ ಬ್ಯಾಂಕ್‌, ಶೃಂಗೇರಿಯ ಇತರೆ ಬ್ಯಾಂಕ್‌ಗಳಲ್ಲಿ ಖಾತೆಗಳು ಮತ್ತು ನಿಶ್ಚಿತ ಠೇವಣಿಗಳನ್ನು ಹೊಂದಿದ್ದಾರೆ. ಇದು ಇವರು ಪಡೆಯುತ್ತಿರುವ ಆದಾಯಕ್ಕೆ ಮೀರಿದ ಆಸ್ತಿಗಳನ್ನು ಹೊಂದಿರುವುದು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಸೇರಿ ಅಪರಾಧ ಎಸಗಿದ್ದಾರೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ಇದು ಗಣಕಯಂತ್ರದ ಪರಿಣಿತಿ ಹೊಂದಿದ ನಿರ್ವಾಹಕರ ಕೈಚಳಕದಿಂದ ಎಸಗಿರುವ ಅಕ್ರಮಗಳಾಗಿವೆ. ಇಬ್ಬರು ಗಣಕಯಂತ್ರ ನಿರ್ವಾಹಕರ ಅಪರಾಧದ ಹಿನ್ನೆಲೆಯನ್ನು ಇದು ಪ್ರತಿಬಿಂಬಿಸುತ್ತದೆ

ಚೆಲುವರಾಜು, ಸಬ್‌ ರಿಜಿಸ್ಟ್ರಾರ್‌

ಉಪ ನೋಂದಣಿ ಕಚೇರಿ ಮತ್ತು ಖಜಾನೆ ಇಲಾಖೆಯಲ್ಲಿ ಇಂತಹದೊಂದು ಗಂಭೀರ ಆರ್ಥಿಕ ಅಪರಾಧ ಕೃತ್ಯಗಳು ನಡೆದಿದ್ದರೂ ಎರಡೂ ಇಲಾಖೆಗಳು ಲಘುವಾಗಿ ಪರಿಗಣಿಸಿವೆ. ಚಲನ್‌ಗಳು ನಗದು ಮೂಲಕ ಪಾವತಿಯಾಗಿದ್ದರೂ ಡಿ ಡಿ ಮೂಲಕ ಸಲ್ಲಿಸುವ ಸಂದರ್ಭದಲ್ಲಿ ಪಾವತಿ ವಿಳಂಬವಾಗುವ ಅಂಶವನ್ನು ಮಾತ್ರ ಉಲ್ಲೇಖಿಸಲಾಗುತ್ತಿದೆ.

ರಾಜ್ಯದಲ್ಲಿ ಖಜಾನೆ 2 ಅನುಷ್ಠಾನಗೊಂಡ ನಂತರ ಸರ್ಕಾರ ಬ್ಯಾಂಕ್‌ ಮೂಲಕ ತನ್ನ ವ್ಯವಹಾರಗಳನ್ನು ಸ್ಥಗಿತಗೊಳಿಸಿ ನೇರವಾಗಿ ಖಜಾನೆ ಮೂಲಕವೇ ಸರ್ಕಾರಿ ಹಣಕಾಸಿನ ವ್ಯವಹರಿಸಬೇಕು ಎಂದು 2016ರಲ್ಲೇ ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಅಧಿಸೂಚನೆ ನಿಯಮಿತವಾಗಿ ಮತ್ತು ಕಡ್ಡಾಯವಾಗಿ ಪಾಲನೆ ಆಗಿಲ್ಲ ಎಂಬುದಕ್ಕೆ ಈ ಪ್ರಕರಣವೇ ಕೈಗನ್ನಡಿಯಾಗಿದೆ.

ರಾಜ್ಯದ ಸರ್ಕಾರಿ ಇಲಾಖೆಗಳ ಯಾವುದೇ ಬಟಾವಡೆ ಅಧಿಕಾರಿ ಬ್ಯಾಂಕ್‌ನಲ್ಲಿ ಸರ್ಕಾರಿ ಹುದ್ದೆ ಅಥವಾ ಕಚೇರಿ ಹೆಸರಿನಲ್ಲಿ ಯಾವುದೇ ರೀತಿಯಲ್ಲೂ ಖಾತೆಗಳನ್ನು ತೆರೆಯುವ ಅವಕಾಶವನ್ನೂ ನಿರ್ಬಂಧಿಸಲಾಗಿದೆ. ಆದರೂ ಸಹ ಉಪ ನೋಂದಣಾಧಿಕಾರಿಗಳ ಹೆಸರಿನಲ್ಲಿ ಖಾತೆ ನಿರ್ವಹಣೆಗೊಂಡ ಬಗ್ಗೆ ಖಜಾನೆ ಇಲಾಖೆ ಚಕಾರ ಎತ್ತದಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts