ಹಣಕ್ಕೆ ಬೇಡಿಕೆ; ಸಬ್‌ ರಿಜಿಸ್ಟ್ರಾರ್‌ ಮೇಲೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಒತ್ತಡ?

ಬೆಂಗಳೂರು; ಸಬ್‌ ರಿಜಿಸ್ಟ್ರಾರ್‌ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಒಳಗಾಗಿರುವ ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಗಂಗಾಧರ್‌ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಸಲ್ಲಿಕೆಯಾಗಿರುವ ದೂರನ್ನು ಮುಂದುವರೆಸಬಾರದು ಎಂದು ಶೃಂಗೇರಿ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರ ಮೇಲೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್‌ ಜೀವರಾಜ್‌ ಅವರು ಒತ್ತಡ ಹೇರಿದ್ದಾರೆ.!

ಕಂದಾಯ ಸಚಿವ ಆರ್‌ ಅಶೋಕ್‌ ಅವರ ಸೂಚನೆಯಂತೆ ಅಖಾಡಕ್ಕೆ ಇಳಿದಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್‌ ಜೀವರಾಜ್‌ ಅವರು ತಮ್ಮ ದೂತನನ್ನು ಚೆಲುವರಾಜು ಅವರ ಬಳಿ ಕಳಿಸಿದ್ದರು ಎಂದು ಗೊತ್ತಾಗಿದೆ. ವಿಶೇಷವೆಂದರೆ ಡಿ ಎನ್‌ ಜೀವರಾಜ್‌ ಅವರ ದೂತ ಎಂದು ಹೇಳಲಾಗಿರುವ ಬಿ ಜಿ ಪ್ರಸನ್ನ ಎಂಬುವರ ವಿರುದ್ಧವೇ ಚೆಲುವರಾಜು ಅವರು ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.

ಶೃಂಗೇರಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸ್ಥಿರ ಸ್ವತ್ತಿನ ನೋಂದಣಿ ಪ್ರಕರಣದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ವ್ಯವಹಾರದಲ್ಲಿ ಬಿ ಜಿ ಪ್ರಸನ್ನ ಎಂಬುವರೇ ಆರೋಪಿ. ಇದೇ ವ್ಯಕ್ತಿಯನ್ನು ಚೆಲುವರಾಜು ಅವರ ಬಳಿ ಕಳಿಸಿ, ಸಚಿವ ಅಶೋಕ್‌ ಅವರ ಅಪ್ತ ಸಹಾಯಕ ಗಂಗಾಧರ್‌ ವಿರುದ್ಧದ ದೂರನ್ನು ಮುಂದುವರೆಸಬಾರದು ಎಂದು ಒತ್ತಡ ಹೇರಿದ್ದಾರೆ ಎಂದು ಸಬ್‌ ರಿಜಿಸ್ಟ್ರಾರ್‌ ಕಚೇರಿಯ ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಇನ್ನು, ಈ ಪ್ರಕರಣದಲ್ಲಿ ದೂರು ಸಲ್ಲಿಸಿ 72 ಗಂಟೆಗಳಾದರೂ ಶೃಂಗೇರಿ ಪಟ್ಟಣ ಪೊಲೀಸರು ಯಾವುದೇ ಕ್ರಮ ವಹಿಸಿಲ್ಲ. ದೂರನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಠಾಣಾಧಿಕಾರಿಗಳು ಕ್ರಮ ಕೈಗೊಳ್ಳಳು ಮೀನಮೇಷ ಎಣಿಸುತ್ತಿದ್ದಾರೆ. ದೂರಿನಲ್ಲಿ ಪ್ರಸ್ತಾಪಿಸಿರುವ ವಿಷಯವು ಭ್ರಷ್ಟಾಚಾರ ತಡೆ ಅಧಿನಿಯಮದ ವ್ಯಾಪ್ತಿಯಡಿಯಲ್ಲಿದ್ದರೂ ದೂರನ್ನು ಎಸಿಬಿ ಠಾಣೆಗೆ ವರ್ಗಾಯಿಸಿಲ್ಲ.

ಯಾವುದೇ ಒಂದು ಅಪರಾಧ ಬಗ್ಗೆ ದೂರು ಬಂದಲ್ಲಿ ತತ್‌ಕ್ಷಣ ಪ್ರಥಮ ವರ್ತಮಾನ ವರದಿಯನ್ನು ವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ ಗೆ ತಲುಪಿಸಬೇಕು. ಇಲ್ಲವೇ ದೂರು ತಮ್ಮ ವ್ಯಾಪ್ತಿಗೆ ಒಳಪಡದಿದ್ದರೂ ಅಪರಾಧದ ಗಂಭೀರತೆ ಅರಿತು ಎಫ್‌ಐಆರ್‌ ದಾಖಲಿಸಿಕೊಂಡ ನಂತರ ಅದರ ಮುಂದಿನ ತನಿಖೆಯನ್ನು ವ್ಯಾಪ್ತಿಯ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಶೃಂಗೇರಿ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರು ಈ ಯಾವ ಪ್ರಕ್ರಿಯೆಯನ್ನೂ ನಡೆಸಿಲ್ಲ ಎಂದು ಗೊತ್ತಾಗಿದೆ.

ಯಾವುದೇ ಅಪರಾಧದ ಬಗ್ಗೆ ದೂರು ಸಲ್ಲಿಕೆಯಾಗುತ್ತಿದ್ದಂತೆ ಆ ಮಾಹಿತಿಯನ್ನು ಸಂಬಂಧಿತ ಠಾಣೆಗೆ ನೀಡಬೇಕು. ಅದಕ್ಕೂ ಮೊದಲು ಎಫ್‌ಐಆರ್‌ ದಾಖಲಿಸಬೇಕು. ತನಿಖೆ ಮಾಡಲು ಅಧಿಕಾರವಿಲ್ಲವೆಂದಾದ ಮೇಲೆ ತನಿಖೆ ನಡೆಸುವ ಅಧಿಕಾರ ಇರುವ ಠಾಣೆಗೆ ವರ್ಗಾವಣೆ ಮಾಡಬೇಕು. ಈ ಪ್ರಕರಣವು ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರಲಿದೆ ಎಂದು ಶೃಂಗೇರಿ ಠಾಣೆ ಪೊಲೀಸರಿಗೆ ಅನ್ನಿಸಿದರೆ ಅವರೇ ದೂರಿನ ಮಾಹಿತಿಯನ್ನು ನೀಡುವ ಜತೆಯಲ್ಲಿ ದೂರನ್ನು ತತ್‌ಕ್ಷಣವೇ ಎಸಿಬಿಗೆ ವರ್ಗಾಯಿಸಬೇಕು

ಬಿ ಟಿ ವೆಂಕಟೇಶ್‌, ರಾಜ್ಯ ಸರ್ಕಾರದ ಮಾಜಿ ವಿಶೇಷ ಸರ್ಕಾರಿ ಅಭಿಯೋಜಕ

ಪ್ರಕರಣದ ಹಿನ್ನೆಲೆ

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಕ್ಷರ ಮಿತ್ರ ಕಾರ್ಯಕ್ರಮದಲ್ಲಿ ಸಚಿವ ಆರ್‌ ಅಶೋಕ್‌ ಅವರು ಭಾಗವಹಿಸಿದ್ದರು. 2021ರ ಜನವರಿ 21ರಂದು ಕಂದಾಯ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು ಅವರ ಖಾಸಗಿ ಮೊಬೈಲ್‌ ನಂಬರ್‌ 9741114815ಗೆ ಸಂದೇಶ ಕಳಿಸಲಾಗಿತ್ತು. ಆದರೆ ಸಂದೇಶ ಕಳಿಸಿದವ ಇವರಿಗೆ ಪರಿಚಯವಿರಲಿಲ್ಲ. ಇದಾಗಿ 3 ದಿನದ ನಂತರ 2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಗಂಗಾಧರ್‌ ಎಂಬ ವ್ಯಕ್ತಿಯು ತಮ್ಮನ್ನು ಮತ್ತು ಸಚಿವ ಅಶೋಕ್‌ ಅವರನ್ನು ಭೇಟಿ ಆಗಬೇಕು ಎಂದು ಸೂಚಿಸಿದ್ದರು ಎಂದು ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರನ್ನು ಭೇಟಿಯಾಗಲು ಶರಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ತೆರಳಿದ್ದ ವೇಳೆಯಲ್ಲಿ ಗಂಗಾಧರ ಎಂಬಾತ ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟರು ಎಂದು ದೂರಿದ್ದಾರೆ. ಈ ಬಗ್ಗೆ ನನಗೆ ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ನನಗೆ ಇಲ್ಲ ಎಂದು ಸ್ಥಳದಲ್ಲಿಯೇ ತಿಳಿಸಿ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ವಿವರಿಸಿದ್ದಾರೆ.

ಅದೇ ದಿನ ಗಂಗಾಧರ್‌ (ದೂರವಾಣಿ ಸಂಖ್ಯೆ ; 7760666222) 8-30ರ ಸಮಯದಲ್ಲಿ ತನ್ನ ಮೊಬೈಲ್‌ನಿಂದ ವಾಟ್ಸಾಪ್‌ ಧ್ವನಿ ಕರೆ ಮಾಡಿದ್ದ ಎಂದು ದೂರಿನಲ್ಲಿ ಹೇಳಿರುವ ಚೆಲುವರಾಜು ಅವರು ಗಂಗಾಧರ್‌ ಎಂಬುವರು ಸರ್ಕಾರಿ ಅಧಿಕಾರಿಯನ್ನು ಅಕ್ರಮ ಹಣಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಚೆಲುವರಾಜು ಅವರು ಆರೋಪಿಸಿದ್ದಾರೆ.

the fil favicon

SUPPORT THE FILE

Latest News

Related Posts