ಹವಾಲಾ ವ್ಯವಹಾರಕ್ಕೆ ಸರ್ಕಾರಿ ಹಣ; ಶೃಂಗೇರಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಗೋಲ್ಮಾಲ್‌

ಬೆಂಗಳೂರು; ಸರ್ಕಾರದ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿರುವ ಹಣವು ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗುತ್ತಿದೆ. ಅಲ್ಲದೆ ಸರ್ಕಾರದ ಹಣವನ್ನು ಹವಾಲಾ ವ್ಯವಹಾರಗಳಿಗೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಪ ನೋಂದಣಿ ಕಚೇರಿಯ ಕೆಲ ಅಧಿಕಾರಿ, ತಾಂತ್ರಿಕ ಸಹಾಯಕರು, ಖಜಾನೆ ಇಲಾಖೆಯ ಕೆಲ ಅಧಿಕಾರಿ, ಸಿಬ್ಬಂದಿ, ವಿವಿಧ ಬ್ಯಾಂಕ್‌ಗಳ ಅಧಿಕಾರಿ ಮತ್ತು ಹೊರಗುತ್ತಿಗೆ ನೌಕರರನ್ನು ಬಳಸಿಕೊಂಡು ಸರ್ಕಾರಿ ಹಣವನ್ನು ಅಕ್ರಮ ವ್ಯವಹಾರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗೆ ಸರ್ಕಾರದ ಹಣವನ್ನು ಸಂಘಟಿತ ಅಪರಾಧಿಗಳ ಮೂಲಕ ಖಾಸಗಿ ವ್ಯಕ್ತಿಗಳ ಪಾಲಾಗಿಸುತ್ತಿರುವ ಆಘಾತಕಾರಿ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಉಪ ನೋಂದಣಿ ಕಚೇರಿಗಳಲ್ಲಿ ಸ್ಥಿರಾಸ್ತಿ ಸ್ವತ್ತಿನ ನೋಂದಣಿ ಸಂಬಂಧ ಶುಲ್ಕ ಪಾವತಿ ಆದ ಕೆಲ ದಿನಗಳ ನಂತರ ಸರ್ಕಾರಿ ತಂತ್ರಾಂಶದಲ್ಲಿ ವಿಫಲಗೊಳಿಸಿ ಕಚೇರಿ ಲೆಕ್ಕ ಮರು ಹೊಂದಾಣಿಕೆ ಮಾಡಲಾಗುತ್ತಿದೆ. ಈ ಮೂಲಕ ಸರ್ಕಾರದ ಹಣವನ್ನು ಹವಾಲಾ ವ್ಯವಹಾರಗಳಿಗೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ವ್ಯವಹಾರದಲ್ಲಿ ಬ್ಯಾಂಕ್‌ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಗಳು ಹೆಚ್ಚಿವೆ. ಇದು ವ್ಯವಹಾರಕ್ಕೆ ಕಮಿಷನ್‌ ಕೂಡ ಆಗಿದೆಯಲ್ಲದೆ ಸರ್ಕಾರಿ ಹಣದಲ್ಲಿ ಅಕ್ರಮ ವ್ಯವಹಾರ ನಿರ್ವಹಣೆ ಮಾಡುವ ವ್ಯವಸ್ಥಿತ ಜಾಲವೊಂದು ಕಾರ್ಯಾಚರಣೆ ನಡೆಸುತ್ತಿದೆ ಎಂದು ಸ್ವತಃ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ಬಹಿರಂಗಪಡಿಸಿದ್ದಾರೆ.

ಶೃಂಗೇರಿ ಉಪನೋಂದಣಿ ಕಚೇರಿಯಲ್ಲಿ ನಡೆದಿರುವ ಈ ಪ್ರಕರಣದ ಬಗ್ಗೆ 2021ರ ಜನವರಿ 13ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯದ ಉಪ ನೋಂದಣಿ ಕಚೇರಿಗಳಲ್ಲಿ ಇಂತಹ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಕಂದಾಯ ಸಚಿವ ಆರ್‌ ಅಶೋಕ್‌ ಆದಿಯಾಗಿ ಇಲಾಖೆಯ ಯಾರೊಬ್ಬರೂ ಇದರ ಬಗ್ಗೆ ಗಮನಹರಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶೃಂಗೇರಿ ಪ್ರಕರಣ ವಿವರ

ಬಿ ಜಿ ಪ್ರಸನ್ನ ಎಂಬುವರು ಶೃಂಗೇರಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸ್ಥಿರ ಸ್ವತ್ತಿನ ನೋಂದಣಿ ಸಂಬಂಧ ಚಲನ್‌ (ಸಂಖ್ಯೆ ;ಸಿಆರ್‌ 1020003000382566) ಮೂಲಕ 5,32,000 ರು.ಗಳನ್ನು ಶೃಂಗೇರಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ನಗದು ಮೂಲಕ 2020ರ ಅಕ್ಟೋಬರ್‌ 23ರಂದು ಪಾವತಿಸಿದ್ದಾರೆ. 2020ರ ಅಕ್ಟೋಬರ್‌ 24ರಂದು ಸ್ಥಿರಾಸ್ತಿ ನೋಂದಣಿ (ದಸ್ತಾವೇಜಿನ ಸಂಖ್ಯೆ; 510/2020-21) ಆಗಿದೆ. ಖಜಾನೆ 2ರ ತಂತ್ರಾಂಶ ಮೂಲಕ ಸರ್ಕಾರಕ್ಕೆ ಹಣ ಪಾವತಿಯಾಗಿತ್ತು. ಹಣ ಪಾವತಿಯಾಗಿರುವ ಬಗ್ಗೆ ಯಶಸ್ವಿಯನ್ನು ದೃಢಪಡಿಸಿಕೊಳ್ಳಲಾಗಿತ್ತು ಎಂಬ ಸಂಗತಿ ಚೆಲುವರಾಜು ಅವರು ಪತ್ರದಿಂದ ತಿಳಿದು ಬಂದಿದೆ.

ಆದರೆ 15-20 ದಿನಗಳ ನಂತರ ಖಜಾನೆ 2ರ ಚಲನ್‌ ಮೂಲಕ ಸರ್ಕಾರಕ್ಕೆ ಪಾವತಿಗೊಂಡ ಬಳಿಕ ಸರ್ಕಾರಿ ಹಣ ತಂತ್ರಾಂಶದಲ್ಲಿ ಪಾವತಿ ವಿಫಲಗೊಂಡಿತ್ತು. ಕಚೇರಿ ಮರು ಹೊಂದಾಣಿಕೆ ವೇಳೆಯಲ್ಲಿ ಇದು ಸಬ್‌ ರಿಜಿಸ್ಟ್ರಾರ್‌ ಗಮನಕ್ಕೆ ಬಂದಿತ್ತು. ಕೆನರಾ ಬ್ಯಾಂಕ್‌ನಲ್ಲಿ ಚಲನ್‌ ಮೊತ್ತ ವಿಫಲವಾಗಿದ್ದರ ಬಗ್ಗೆ ಪರಿಶೀಲಿಸಿದ ವೇಳೆಯಲ್ಲಿ ಬ್ಯಾಂಕ್‌ನಲ್ಲೇ ಬೇರೊಂದು ಚಲನ್‌ ಸೃಜಿಸಿ ಮರು ಜಮಾ ಮಾಡಿಕೊಳ್ಳಾಗಿತ್ತು. ಒಮ್ಮೆ ಸರ್ಕಾರಕ್ಕೆ ಪಾವತಿಯಾದ ಹಣ ಸರ್ಕಾರಿ ಭಂಡಾರದಿಂದ ಹಿಂದಿರಿಗಿತ್ತು. ಅಕ್ರಮ ವ್ಯವಹಾರಗಳಿಗೆ ಸರ್ಕಾರದ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಅನುಮಾನಗಳನ್ನು ಈ ಪ್ರಕರಣವು ಬಲಪಡಿಸಿದೆ.

ಬಿ ಜಿ ಪ್ರಸನ್ನ ಎಂಬುವರು ಶೃಂಗೇರಿ ಪಟ್ಟಣದ ಕೆನರಾ ಬ್ಯಾಂಕ್‌ನ ಶಾಖೆಯಲ್ಲಿ (ಖಾತೆ ಸಂಖ್ಯೆ; 0866101006794) ಖಾತೆ ಹೊಂದಿದ್ದರೂ 5,32,000 ರು.ಗಳನ್ನು ಅದೇ ಬ್ಯಾಂಕ್‌ ಶಾಖೆಯಿಂದ ಡ್ರಾ ಮಾಡಿ ಮತ್ತೆ ಅದೇ ಬ್ಯಾಂಕ್‌ ಶಾಖೆಗೆ ಚಲನ್‌ ಮೂಲಕ ನಗದಾಗಿ ಜಮಾಗೊಳಿಸಿದ್ದರು. ಬಿ ಜಿ ಪ್ರಸನ್ನ ಅವರ ಖಾತೆಗೆ ಆಂಧ್ರಪ್ರದೇಶದ ಅನಂತಪುರ ಕೆನರಾ ಬ್ಯಾಂಕ್‌ನ ಶಾಖೆಯಿಂದ ಅಶೋಕ ಎಂಬುವರ ಖಾತೆಯಿಂದ 50,00,000 ರು., ವಿಲಾಸಿನಿ ಎಂಬುವರ ಖಾತೆಯಿಂದ 10,00,000 ಮತ್ತು ಶಿವಪ್ರಸಾದ್‌ ಎಂಬುವರ ಖಾತೆಯಿಂದ 5,00,000 ರು. ಜಮಾವಾಗಿತ್ತು ಎಂಬುದು ಪತ್ರದಿಂದ ಗೊತ್ತಾಗಿದೆ.

ಬಹುಶಃ ಇದು ವ್ಯವಹಾರಕ್ಕೆ ಕಮಿಷನ್‌ ಆಗಿದೆ. ಈ ಪ್ರಕ್ರಿಯೆಗಳಲ್ಲಿ ಅಕ್ರಮ ವ್ಯವಹಾರವನ್ನು ನಿರ್ವಹಿಸಲು ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದು ಸಂಘಟಿತ ಅಪರಾಧವೆಸಗುವ ತಂಡದಲ್ಲಿ ಗಣಕಯಂತ್ರ ನಿರ್ವಾಹಕರು ನೇರವಾಗಿ ಭಾಗಿಯಾಗಿರುತ್ತಾರೆ.

ಚೆಲುವರಾಜು, ಸಬ್‌ ರಿಜಿಸ್ಟ್ರಾರ್‌

ಬಿ ಜಿ ಪ್ರಸನ್ನ ಅವರು ನೋಂದಣಿ ಮಾಡಿಸಿದ್ದ ಸ್ಥಿರಾಸ್ತಿಗೆ ಮಾರುಕಟ್ಟೆ ಮಾರ್ಗಸೂಚಿ ಬೆಲೆ 18,00,000 ರು.ಗಳಿದೆ. ಆದರೆ ಪ್ರಸನ್ನ ಅವರು 25,00,000 ರು.ಗಳಿಗೆ ದಾಖಲಾತಿಯನ್ನು ನೋಂದಾಯಿಸಲು ಹಿಂದಿನ ದಿನ ತಿಳಿಸಿದ್ದರಲ್ಲದೆ ಏಕಾಏಕಿ ದಸ್ತಾವೇಜನ್ನು 80,00,000 ರು.ಗಳಿಗೆ ನೋಂದಾಯಿಸಲು ಮುಂದಾಗಿದ್ದರು. ಈ ಬಗ್ಗೆ ಪಾವತಿ ಬ್ಯಾಂಕ್‌ನಲ್ಲಿ ತಮ್ಮ ಖಾತೆಯನ್ನು ಬಳಸದೆಯೇ ತಮ್ಮದೇ ಅಕೌಂಟ್‌ನಿಂದ ನಗದು ಡ್ರಾ ಮಾಡಿ ಮತ್ತೆ ನಗದು ರೂಪದಲ್ಲೇ 5,32,000 ರು.ಗಳನ್ನು ಚಲನ್‌ ಮೂಲಕ ಪಾವತಿಸಿದ್ದರು. ಆ ನಂತರ ತೇಜಶ್ರೀ ಎಂಬಾಕೆಯ ಖಾತೆಗೆ 45,000 ರು. ಜಮೆಯಾಗಿತ್ತು ಎಂಬುದು ತಿಳಿದು ಬಂದಿದೆ.

ಇನ್ನು ಶೃಂಗೇರಿ ಉಪ ನೋಂದಣಿ ಕಚೇರಿಯ ‘ಗಣಕ ಯಂತ್ರ ನಿರ್ವಾಹಕ ಕಳೆದ 1 ವರ್ಷದಲ್ಲಿ 3-5 ಗಂಟಿನಲ್ಲಿ ಮಾತ್ರ ತಮ್ಮ ವೇತನ ಪಡೆದಿದ್ದರು ಸಹ ಸರಿಸುಮಾರು 34 ಪುಟಗಳ ಬ್ಯಾಂಕ್‌ ವ್ಯವಹಾರವನ್ನು ಇದೇ ಅವಧಿಯಲ್ಲಿ ನಡೆಸಿದ್ದರು. ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ,’ ಎಂದು ಚೆಲುವರಾಜು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೆ ‘ಶೃಂಗೇರಿ ಪಟ್ಟಣದ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಕಚೇರಿ ಗಣಕಯಂತ್ರ ನಿರ್ವಾಹಕ ಎಚ್‌ ಎನ್‌ ಕಿರಣ್‌ ಎಂಬಾತನ ಬ್ಯಾಂಕ್‌ ಖಾತೆಯನ್ನೂ (ಸಂಖ್ಯೆ; 31517519349-ಐಎಫ್‌ಎಸ್‌ಸಿ ಕೋಡ್‌- ಎಸ್‌ಬಿಐಎನ್‌ 0040290) ಮತ್ತು ಮತ್ತೊಬ್ಬ ಗಣಕ ಯಂತ್ರ ನಿರ್ವಾಹಕಿ ಪಿ ನೇತ್ರಾವತಿ ಹಾಗೂ ಆಕೆಯ ಪತಿ ರಜನಿಕಾಂತ್‌ ಎಂಬುವರ ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ಹೊಂದಿರುವ ಜಂಟಿ ಖಾತೆಯನ್ನೂ (ಸಂಖ್ಯೆ; 520291022828554 ಮತ್ತು 59029102283089) ತನಿಖೆಗೊಳಪಡಿಸಬೇಕು,’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts