ಬೆಂಗಳೂರು; ವಿದ್ಯುತ್ ನಿರ್ವಹಣಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ದೋಷಪೂರಿತ ಅಂದಾಜು ಪಟ್ಟಿ ತಯಾರಿಕೆ, ನೈಜ ದರಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿರುವ ಲೋಪಗಳೂ ಸೇರಿದಂತೆ ಹಲವು ನಿಯಮಬಾಹಿರ ಚಟುವಟಿಕೆಗಳನ್ನು ನಡೆಸಿ ಉದ್ದೇಶಪೂರ್ವಕವಾಗಿ ನಿರ್ದಿಷ್ಟ ಕಂಪನಿಗೆ 1,848.5 ಕೋಟಿ ರು. ಮೊತ್ತದ ಕಾಮಗಾರಿ ಗುತ್ತಿಗೆ ನೀಡಿರುವ ಪ್ರಕರಣ ಇದೀಗ ಬಹಿರಂಗವಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಹಾಲಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಮಹೇಂದ್ರ ಜೈನ್ ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳು ವಿದ್ಯುತ್ ನಿರ್ವಹಣಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಗುರುತರ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಪ್ರಕರಣ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಅವರ ಗಮನಕ್ಕೆ ಬಂದಿದ್ದರೂ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ನಿರ್ಭಯಾ ಅನುದಾನದಡಿಯಲ್ಲಿ ಸುರಕ್ಷಾ ನಗರ ಯೋಜನೆಗಾಗಿ ಕರೆದಿದ್ದ 612 ಕೋಟಿ ರು. ಟೆಂಡರ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ಬೀದಿಗೆ ಬಂದಿದ್ದರ ಬೆನ್ನಲ್ಲೇ ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಭಾರೀ ಅಕ್ರಮ ಪ್ರಕರಣ ಮುನ್ನೆಲೆಗೆ ಬಂದಿದೆ. ಇಂಧನ ಇಲಾಖೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಎಂಬುವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಅವರಿಗೆ ದಾಖಲೆಗಳ ಸಮೇತ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಸಾಮಾನ್ಯ ಗುತ್ತಿಗೆದಾರರು ನಡೆಸುತ್ತಿದ್ದ ವಿದ್ಯುತ್ ಪೂರೈಕೆ ನಿರ್ವಹಣಾ ಕಾಮಗಾರಿಗಳನ್ನು ಒಂದು ಪ್ಯಾಕೇಜ್ ಮಾಡಿ ಒಬ್ಬನೇ ವ್ಯಕ್ತಿಗೆ ಸೇರಿದ ಖಾಸಗಿ ಸಂಸ್ಥೆಯೊಂದಕ್ಕೆ ಬೆಸ್ಕಾಂ ಅಧಿಕಾರಿಗಳು ಗುತ್ತಿಗೆ ನೀಡಿರುವುದರ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಎಚ್ ಟಿ/ಎಲ್ ಟಿ ಮೇಲ್ಮಾರ್ಗಗಳನ್ನು ಭೂಗತ ಕೇಬಲ್/ಏರಿಯಲ್ ಬಂದ್ ಕೇಬಲ್ ಮಾರ್ಗಗಳನ್ನಾಗಿ ಪರಿವರ್ತಿಸುವುದು, ಭೂಗತ ಕೇಬಲ್ ಜತೆಗೆ ಆಫ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಅಳವಡಿಸಲು ಹಂತ 1 ರ ಅಡಿಯಲ್ಲಿ ಒಟ್ಟು 5 ಪ್ಯಾಕೇಜ್‌ಗಳಿಗೆ , ಹಂತ 2 ರ ಅಡಿಯಲ್ಲಿ ಒಟ್ಟು 6 ಪ್ಯಾಕೇಜ್‌ಗಳಿಗೆ 2019ರ ಜುಲೈ 15ರಂದು ಮತ್ತು ಹಂತ 3 ರಡಿಯಲ್ಲಿ ಒಟ್ಟು 7 ಪ್ಯಾಕೇಜ್‌ಗಳಿಗೆ 2020ರ ಏಪ್ರಿಲ್ 30ರಂದು ಬೆಂಗಳೂರಿನ ಏಷಿಯನ್ ಫ್ಲಾಬ್ ಟೆಕ್ ಲಿಮಿಟೆಡ್ ಸೇರಿದಂತೆ ಮೂರು ಕಂಪನಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಇದು 2018-2020ರ ಅವಧಿಯ ಕಾಮಗಾರಿಗಳು ಎಂದು ಗೊತ್ತಾಗಿದೆ. ಇನ್ನುಳಿದಂತೆ ಹೈದರಾಬಾದ್‌ನ ಎನ್ ಸಿ ಸಿ ಲಿಮಿಟೆಡ್, ಚೆನ್ನೈನ ಎಲ್ ಅಂಡ್ ಟಿ ಲಿಮಿಟೆಡ್ ಗುತ್ತಿಗೆ ಪಡೆಯುವುದರಲ್ಲಿ ಯಶಸ್ವಿಯಾಗಿದೆ.
ಮೂರೂ ಕಂಪನಿಗಳ ಪೈಕಿ ಏಷಿಯನ್ ಫ್ಲಾಬ್ ಟೆಕ್‌ಗೆ 2019ರ ಜುಲೈ 15ರ ಒಂದೇ ದಿನದಂದು ಒಟ್ಟು 1,848.5 ಕೋಟಿ ರು. ಮೊತ್ತದ ಗುತ್ತಿಗೆ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಎಚ್ ಎಸ್ ಆರ್ ವಿಭಾಗ (ಎಸ್-20 ಉಪ ವಿಭಾಗ)ದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಗುತ್ತಿಗೆ ಕಾಮಗಾರಿ ನಿರ್ವಹಿಸಲು 100.98 ಕೋಟಿ ರು., ಪೀಣ್ಯ ವಿಭಾಗ ((ಎಸ್ 5 ಮತ್ತು ಎಸ್ 7 ವಿಭಾಗಕ್ಕೆ 322.63 ಕೋಟಿ ರು., ರಾಜಾಜಿನಗರ ವಿಭಾಗದ (ಎನ್-1, ಎನ್ 2 ಎನ್ 3 ಎನ್ 6 ಎನ್ 8 ಮತ್ತು ಎನ್ 10 ಉಪ ವಿಭಾಗದಲ್ಲಿ ) 315.75 ಕೋಟಿ , ಜಯನಗರ ವಿಭಾಗ (ಎಸ್ 1, ಎಸ್ 2, ಎಸ್ 6, ಎಸ್ 14 ಮತ್ತು ಎಸ್ 15 ಉಪ ವಿಭಾಗ) 308.33 ಕೋಟಿ, ಶಿವಾಜಿನಗರ (ಇ-1, ಇ-5ರ ಉಪ ವಿಭಾಗಕ್ಕೆ)ಕ್ಕೆ 188.75 ಕೋಟಿ, ಹೆಬ್ಬಾಳ ವಿಭಾಗದ (ಸಿ-8 ಉಪ ವಿಭಾಗ) 198.09 ಕೋಟಿ, ಹೆಬ್ಬಾಳ ವಿಭಾಗಕ್ಕೆ (ಸಿ-4, ಸಿ-5 ಉಪ ವಿಭಾಗ) 2020ರ ಏಪ್ರಿಲ್ 30ರಂದು 219.57 ಕೋಟಿ, ಜಾಲಹಳ್ಳಿ ವಿಭಾಗ(ಸಿ-9 ಉಪ ವಿಭಾಗ) ಕ್ಕೆ 2020ರ ಏಪ್ರಿಲ್ 30ರಂದು 193.60 ಕೋಟಿ ರು.ಮೊತ್ತದ ಕಾರ್ಯಾದೇಶ ನೀಡಿರುವುದು ಗೊತ್ತಾಗಿದೆ.
ನಿರ್ಮಾಣ ಹಂತದಲ್ಲಿ ನಿಯಮ ಪಾಲಿಸದೇ ಹೆಚ್ಚುವರಿ ಕಾಮಗಾರಿ ನಿರ್ವಹಿಸಲು ಅವಕಾಶ, ನೈಜ ದರಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿರುವುದು ಆಡಳಿತಾತ್ಮಕ ಅನುಮೋದನೆ ಪಡೆದ ಬಳಿಕ ಯಾವುದೇ ಆಧಾರವಿಲ್ಲದೆ ಈ ಕಾಮಗಾರಿಗಳ ಟೆಂಡರ್ ಮೊತ್ತವನ್ನು ಹೆಚ್ಚಿಸಿ ಪರಿಷ್ಕರಿಸುವ ಮೂಲಕ ಅಕ್ರಮ ಎಸಗಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಬೃಹತ್ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳ ನಕಲಿ ದರಪಟ್ಟಿಗಳನ್ನು ನೈಜ ದರಕ್ಕಿಂತ ಹೆಚ್ಚುವರಿಯಾಗಿ ಗುತ್ತಿಗೆದಾರರೇ ನಮೂದಿಸಿದ್ದಾರೆ. ಈ ನಕಲಿ ದರಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಗುತ್ತಿಗೆದಾರರೇ ಅಂದಾಜು ಪಟ್ಟಿ ತಯಾರಿಸಿದ್ದಾರೆ. ನಿರ್ದಿಷ್ಟ ಕಂಪನಿಗೆ 1,848.5 ಕೋಟಿ ಕಾಮಗಾರಿಯನ್ನು ನಿಯಮಬಾಹಿರವಾಗಿ ಟೆಂಡರ್ ನೀಡಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ ಎಂದು ಪ್ರಶ್ನಿಸಿರುವ ದೂರುದಾರ ದಿನೇಶ್ ಎಂಬುವರು ಪ್ರಕರಣ ಕುರಿತು ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಟೆಂಡರ್ ನಿಯಮದ ಪ್ರಕಾರ ಒಬ್ಬ ಗುತ್ತಿಗೆದಾರ ಟೆಂಡರ್‌ನಲ್ಲಿ ಭಾಗವಹಿಸಿ ಟೆಂಡರ್ ಮೊತ್ತಕ್ಕಿಂತ ಹೆಚ್ಚಿನ ದರ ನಮೂದಿಸಿದ್ದರೆ ಮರು ಟೆಂಡರ್ ಕರೆಯಬೇಕು. ಆದರಿಲ್ಲಿ ನಿಯಮ ಪಾಲಿಸದೇ ಇರುವುದು ಕಂಡು ಬಂದಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ ಏಷಿಯನ್ ಪ್ಲಾಬ್ ಟೆಕ್ ಲಿಮಿಟೆಡ್ ಈ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡುವ ಉದ್ದೇಶ ಇದರ ಹಿಂದಿದೆ. ಇದರಲ್ಲಿ ಯಾರ್ಯಾರಿಗೆ ಕಿಕ್ ಬ್ಯಾಕ್ ನೀಡಲಾಗಿದೆ ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕು ಎಂದೂ ದೂರುದಾರ ದಿನೇಶ್ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದಾರೆ.