ಬಿಹಾರಕ್ಕೆ ಬಂಡವಾಳ; ಹೂಡಿಕೆದಾರರ ಆಕರ್ಷಣೆಗಿಳಿದ ಕರ್ನಾಟಕ ಐಪಿಎಸ್‌ ಅಧಿಕಾರಿ

ಬೆಂಗಳೂರು; ರಾಜ್ಯದಲ್ಲಿ ಉದ್ಯಮಿಗಳಿಂದ ಬಂಡವಾಳ ಹೂಡಿಕೆ ಮಾಡಿಸಲು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರು ದೇಶ, ವಿದೇಶಗಳನ್ನು ಸುತ್ತಿ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದರೆ ಇತ್ತ ಕರ್ನಾಟಕ ಆಗ್ನಿಶಾಮಕ ಸೇವೆಗಳ ಡಿಜಿಪಿಯೂ ಆಗಿರುವ ಬಿಹಾರ ಮೂಲದ ಐಪಿಎಸ್‌ ಅಧಿಕಾರಿ ಅಮರ್‌ಕುಮಾರ್‌ ಪಾಂಡೆ ಅವರು ಬಿಹಾರ ರಾಜ್ಯದಲ್ಲಿ ಹೂಡಿಕೆ ಮಾಡಿಸಲು ಕರ್ನಾಟಕದ ಹೂಡಿಕೆದಾರರ ಆಕರ್ಷಣೆಗಿಳಿದಿದ್ಧಾರೆ.

ರಾಜ್ಯದಲ್ಲಿ ಹಲವು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಅಮರ್‌ ಕುಮಾರ್‌ ಪಾಂಡೆ ಅವರು ಬಿಹಾರದಲ್ಲಿ ಹೂಡಿಕೆ ಮಾಡಿಸಲು ಬಿಹಾರ ಫೌಂಡೇಷನ್‌ ಮೂಲಕ ಇದೇ ಜನವರಿ 17ರಂದು ಕಾರ್ಯಕ್ರಮವನ್ನು ಸಂಘಟಿಸಿರುವುದು ಇದೀಗ ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ವಿಶೇಷವೆಂದರೆ ಅಮರ್‌ಕುಮಾರ್‌ ಪಾಂಡೆ ಬಿಹಾರ ಫೌಂಡೇಷನ್‌ನ ಅಧ್ಯಕ್ಷರೂ ಹೌದು. ಕಳೆದ ಹಲವು ವರ್ಷಗಳಿಂದಲೂ ಫೌಂಡೇಷನ್‌ನ ಅಧ್ಯಕ್ಷರಾಗಿರುವ ಪಾಂಡೆ ಅವರು ಕರ್ನಾಟಕದ ಹೂಡಿಕೆದಾರರನ್ನು ಬಿಹಾರದಲ್ಲಿ ಹೂಡಿಕೆ ಮಾಡಿಸಲು ಈ ಫೌಂಡೇಷನ್‌ ಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅಮರ್ ಕುಮಾರ್ ಪಾಂಡೆಯವರಿಗೆ ಬಿಹಾರದ ಅಭಿವೃದ್ಧಿಯೇ ಮುಖ್ಯವಾಗಿದ್ದರೆ ಆ ರಾಜ್ಯಕ್ಕೆ ವರ್ಗಾವಣೆ ಮಾಡಿಸಿಕೊಂಡು, ಇಂಥ ಕೆಲಸಗಳನ್ನು ಮಾಡಲಿ. ಕನ್ನಡಿಗರ ಹಣ, ಶ್ರಮ, ಬಂಡವಾಳವನ್ನು ಬಿಹಾರಕ್ಕೆ ವರ್ಗಾಯಿಸುವ ಚಟುವಟಿಕೆಗಳನ್ನು ಮಾಡುವುದು ಕನ್ನಡ ದ್ರೋಹದ ಕೆಲಸ.

ದಿನೇಶ್ ಕುಮಾರ್ ಎಸ್.ಸಿ, ಕರವೇ ಸಾಮಾಜಿಕ‌ ಜಾಲತಾಣ ಪ್ರಧಾನ ಸಂಚಾಲಕ

ಹೂಡಿಕೆದಾರರನ್ನು ಆಕರ್ಷಿಸುವ ಭಾಗವಾಗಿಯೇ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ರಿಟ್ಜ್‌ ಕಾರ್ಲಟನ್‌ನಲ್ಲಿ ಕಾರ್ಯಕ್ರಮವನ್ನೂ ಆಯೋಜಿಸಿದ್ದಾರೆ. ಅಮರ್‌ಕುಮಾರ್‌ ಪಾಂಡೆ ಅವರ ಹೆಸರಿನಲ್ಲಿಯೇ ಹೂಡಿಕೆದಾರನ್ನು ಆಹ್ವಾನಿಸಲಾಗಿದೆ. ಆಹ್ವಾನ ಪತ್ರಿಕೆ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ಹೂಡಿಕೆದಾರರ ಆಕರ್ಷಿಸುವ ಕಾರ್ಯಕ್ರಮಕ್ಕೆ ಬಿಹಾರದ ಉಪ ಮುಖ್ಯಮಂತ್ರಿ ರೇಣುದೇವಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಶ್ರೇಣಿಯ ಐಎಎಸ್‌, ಐಎಫ್‌ಎಸ್‌, ಐಪಿಎಸ್‌, ಐಆರ್‌ಎಸ್‌ನಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಬಿಹಾರ ಮೂಲದವರಾಗಿದ್ದಾರೆ. ಅಮರ್‌ಕುಮಾರ್‌ ಪಾಂಡೆ ಅವರೊಬ್ಬರನ್ನು ಹೊರತುಪಡಿಸಿದರೆ ಬಿಹಾರ ಮೂಲದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಸೇರಿದಂತೆ ಬೇರಾವ ಅಧಿಕಾರಿಗಳೂ ಹೂಡಿಕೆದಾರರ ಆಕರ್ಷಣೆಗಿಳಿದಿಲ್ಲ ಎಂದು ಗೊತ್ತಾಗಿದೆ.

ಕರ್ನಾಟಕ ಶ್ರೇಣಿಯಲ್ಲಿದ್ದು ಇಲ್ಲಿ ವೇತನ ಪಡೆಯುತ್ತಿರುವ ಬಿಹಾರ ಮೂಲದ ಹಿರಿಯ ಐಪಿಎಸ್‌ ಅಧಿಕಾರಿ ಅಮರ್‌ಕುಮಾರ್‌ ಪಾಂಡೆ ಅವರು ಬಿಹಾರದಲ್ಲಿ ಹೂಡಿಕೆ ಮಾಡಿಸಲು ಆಕರ್ಷಣೆಗಿಳಿದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ಕೇಳಿ ಬಂದಿವೆ. ರಾಜ್ಯದ ಹಿತಾಸಕ್ತಿ ಕಾಪಾಡಬೇಕಿದ್ದ ಈ ಅಧಿಕಾರಿ, ಬಿಹಾರ ರಾಜ್ಯದ ಹಿತಾಸಕ್ತಿ ಕಾಯಲು ಹೊರಟಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

‘ಕರ್ನಾಟಕದ ಐಎಎಸ್ ಅಧಿಕಾರಿಗಳು ಕರ್ನಾಟಕದ ಹಿತ ಕಾಯುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ತಮ್ಮ ರಾಜ್ಯಗಳಿಗಾಗಿ ಕೆಲಸ ಮಾಡುವುದು ಸಂವಿಧಾನಬಾಹಿರ. ಇದನ್ನು ಕರ್ನಾಟಕದ ಜನತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಮರ್ ಕುಮಾರ್ ಪಾಂಡೆಯವರಿಗೆ ಬಿಹಾರದ ಅಭಿವೃದ್ಧಿಯೇ ಮುಖ್ಯವಾಗಿದ್ದರೆ ಆ ರಾಜ್ಯಕ್ಕೆ ವರ್ಗಾವಣೆ ಮಾಡಿಸಿಕೊಂಡು, ಇಂಥ ಕೆಲಸಗಳನ್ನು ಮಾಡಲಿ. ಕನ್ನಡಿಗರ ಹಣ, ಶ್ರಮ, ಬಂಡವಾಳವನ್ನು ಬಿಹಾರಕ್ಕೆ ವರ್ಗಾಯಿಸುವ ಚಟುವಟಿಕೆಗಳನ್ನು ಮಾಡುವುದು ಕನ್ನಡದ್ರೋಹದ ಕೆಲಸ. ಸರ್ಕಾರ ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಕನ್ನಡಿಗರೇ ನಿಲ್ಲಿಸುವ ಕೆಲಸ ಮಾಡಬೇಕಾಗುತ್ತದೆ. ಬಿಹಾರಿ ಮಾಫಿಯಾ, ಯುಪಿ ಮಾಫಿಯಾ, ಗುಜರಾತಿ ಮಾಫಿಯಾಗಳಿಗೆ ಕರ್ನಾಟಕದಲ್ಲಿ ಜಾಗವಿಲ್ಲ.’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲ ತಾಣದ ಪ್ರಧಾನ ಸಂಚಾಲಕ ದಿನೇಶ್‌ಕುಮಾರ್‌ ಎಸ್‌ ಸಿ.

SUPPORT THE FILE

Latest News

Related Posts