ಬೊಕ್ಕಸಕ್ಕೆ ಜಮೆಯಾಗದ ಕೋಟ್ಯಂತರ ಮೊತ್ತದ ರಾಜಸ್ವ; ನೋಂದಣಿ ಶುಲ್ಕ ಸೋರಿಕೆ

ಬೆಂಗಳೂರು; ವಿವಿಧ ಮೂಲಗಳಿಂದ ಸಂಗ್ರಹಿಸುವ ಕೋಟ್ಯಂತರ ಮೊತ್ತದ ವರಮಾನ/ರಾಜಸ್ವವನ್ನು ಅಧಿಕಾರಿಗಳು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಪಾವತಿಸುತ್ತಿಲ್ಲ. ಸಂಗ್ರಹವಾಗುವ ವರಮಾನ/ರಾಜಸ್ವ ಲೆಕ್ಕ ಶೀರ್ಷಿಕೆಗೆ ಜಮೆ ಆಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ನೋಂದಣಿ, ಮುದ್ರಾಂಕಗಳ ಆಯುಕ್ತರು ನಿಯತಕಾಲಿಕವಾಗಿ ಸಮೀಕ್ಷೆಯನ್ನೂ ನಡೆಸುತ್ತಿಲ್ಲ.

ಇಂತಹದೊಂದು ಪ್ರಕರಣವನ್ನು ಸಿಎಜಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ಹೇಗೆ ಸೋರಿಕೆಯಾಗುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ.

ಕಾರವಾರ ಉಪ ನೋಂದಣಿ ಅಧಿಕಾರಿ ಕಚೇರಿ ವ್ಯಾಪ್ತಿಗೆ ಸಂಬಂಧಿಸಿದಂತೆ ಸಿಎಜಿ ಅಧಿಕಾರಿಗಳು 2018ರ ಏಪ್ರಿಲ್‌ನಲ್ಲಿ ಪರೀಕ್ಷಾ ಪರಿಶೀಲನೆ ನಡೆಸುವ ವೇಳೆಯಲ್ಲಿ ಒಟ್ಟಾರೆ 3.33 ಕೋಟಿ ಮೊತ್ತದ ನಗದನ್ನು ನೋಡಲ್‌ ಬ್ಯಾಂಕ್‌ಗೆ ಪಾವತಿಸಿರಲಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಹಿಂದಿನ ಕಾಂಗ್ರೆಸ್‌ ಅವಧಿಯಲ್ಲಿ ಪ್ರಕರಣ ನಡೆದಿದೆಯಾದರೂ ಈಗಿನ ಬಿಜೆಪಿ ಸರ್ಕಾರವೂ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಂಗ್ರಹವಾಗುತ್ತಿರುವ ರಾಜಸ್ವ ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮೆ ಆಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಸಮೀಕ್ಷೆ ನಡೆಸದೇ ದುರುಪಯೋಗಕ್ಕೆ ಪರೋಕ್ಷ ನೆರವು ನೀಡಿದಂತಾಗಿದೆ. ಸಚಿವ ಆರ್‌ ಅಶೋಕ್‌ ಅವರು ಸಹ ಈ ಕುರಿತು ಇಲಾಖೆಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಗೊತ್ತಾಗಿದೆ.

2017ರ ಜುಲೈನಿಂದ 2018ರ ಏಪ್ರಿಲ್‌ವರೆಗೆ ಕಾರವಾರ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ 5.90 ಕೋಟಿ ಮೊತ್ತದಷ್ಟು ಡಿಮ್ಯಾಂಡ್‌ ಡ್ರಾಫ್ಟ್‌ ಮತ್ತು 2.37 ಕೋಟಿ ಮೊತ್ತದಷ್ಟು ನಗದು ಸಂಗ್ರಹವಾಗಿತ್ತು. ಈ ಪೈಕಿ 3.89 ಕೋಟಿ ಮೊತ್ತದಷ್ಟು ಡಿಮ್ಯಾಂಡ್‌ ಡ್ರಾಫ್‌ ಹಾಗೂ 1.05 ಕೋಟಿ ಮೊತ್ತದಷ್ಟು ನಗದನ್ನು ಮಾತ್ರ ಸರ್ಕಾರಿ ಲೆಕ್ಕ ಶೀರ್ಷಿಕೆಗೆ ನಗದೀಕರಿಸಲು ನೋಡಲ್‌ ಬ್ಯಾಂಕ್‌ ಪಾವತಿ ಮಾಡಲಾಗಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

ಆದರೆ ಇದೇ ಅವಧಿಯಲ್ಲಿ 2.01 ಕೋಟಿ ಮೊತ್ತದಷ್ಟು ಡಿಮ್ಯಾಂಡ್‌ ಡ್ರಾಫ್ಟ್‌ ಹಾಗೂ 1.32 ಕೋಟಿ ಮೊತ್ತದಷ್ಟು ನಗದನ್ನು ನೋಡಲ್‌ ಬ್ಯಾಂಕ್‌ಗೆ ಪಾವತಿಸಿರಲಿಲ್ಲ. ಡಿಮ್ಯಾಂಡ್‌ ಡ್ರಾಫ್ಟ್‌ಗಳನ್ನು ಉಪ ನೋಂದಣಿ ಅಧಿಕಾರಿಯ ಸುಪರ್ದಿಯಲ್ಲೇ ಇತ್ತು. ಅಲ್ಲದೆ ನಗದು ಪಾವತಿ ರಿಜಿಸ್ಟರ್‌ನಲ್ಲಿ ನಮೂದಾಗಿತ್ತು. ಆದರೆ 3.33 ಕೋಟಿಯಷ್ಟು ಒಟ್ಟಾರೆ ಮೊತ್ತ ಸರ್ಕಾರಿ ಲೆಕ್ಕ ಶೀರ್ಷಿಕೆಗೆ ಪಾವತಿ ಆಗಿರಲಿಲ್ಲ. ಇದು ಕರ್ನಾಟಕ ಹಣಕಾಸು ಸಂಹಿತೆ ಉಲ್ಲಂಘನೆ ಮಾತ್ರ ಆಗಿರದೆಯೇ ಸಂಗ್ರಹಿಸಲಾಗಿದ್ದ ಹಣಕಾಸಿನ ಅವ್ಯವಹಾರದ ಸಂಭಾವ್ಯವನ್ನೂ ಸೃಷ್ಟಿ ಮಾಡಿದಂತಾಗಿತ್ತು ಎಂದು ಸಿಎಜಿ ವರದಿ ಅಭಿಪ್ರಾಯಪಟ್ಟಿದೆ.

‘ಡಿಮ್ಯಾಂಡ್‌ ಡ್ರಾಫ್ಟ್‌ಗಳು ಯಾವುದೇ ದುರುಪಯೋಗಕ್ಕೆ ಕಡಿಮೆ ಪ್ರಮಾಣದಲ್ಲಿ ಆಸ್ಪದ ಕೊಡುವುದಾದರೂ ನಗದಿನ ದುರುಪಯೋಗವನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ ಸರ್ಕಾರದ ಹಣಕಾಸಿನ ಅವ್ಯವಹಾರದಲ್ಲಿ ಒಳಗೊಂಡಿರುವ ವ್ಯಕ್ತಿಗಳ ಮೇಲೆ ಜವಾಬ್ದಾರಿ ನಿಗದಿ ಮಾಡುವ ಸಲುವಾಗಿ ಸೂಕ್ತ ತನಿಖೆ ನಡೆಸುವ ಅಗತ್ಯವಿರುತ್ತದೆ, ‘ ಎಂದು ಸಿಎಜಿ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಕರ್ನಾಟಕ ಹಣಕಾಸು ಸಂಹಿತೆ ಪ್ರಕಾರ ಇಲಾಖಾ ಅಧಿಕಾರಿಗಳು ಸರ್ಕಾರಿ ಲೆಕ್ಕ ಶೀರ್ಷಿಕೆಗೆ ಹಣಕಾಸು ನಗದೀಕರಣಗೊಂಡಿರುವುದು ಅಥವಾ ಸಂಗ್ರಹವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಪಾವತಿಗಳನ್ನು ಖಜಾನೆ ಷೆಡ್ಯೂಲಿನೊಂದಿಗೆ ಪ್ರತಿ ತಿಂಗಳು ಸಮನ್ವಯಗೊಳಿಸಬೇಕು. ಆದರೆ ಇಲಾಖೆಯ ಆಯುಕ್ತರಾದಿಯಾಗಿ ಯಾರೊಬ್ಬರೂ ಇದರ ಬಗ್ಗೆ ಗಮನಹರಿಸಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts