ವಿಜಯೇಂದ್ರ ಪ್ರಕರಣ; ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ ನೀಡಿದ್ದ ಇನ್ಸ್‌ಪೆಕ್ಟರ್‌ಗೆ ಆಪತ್ತು?

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪಿತ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸದೆ ಕುಂಟು ನೆಪವೊಡ್ಡಿ ನ್ಯಾಯಾಲಯದ ದಿಕ್ಕುತಪ್ಪಿಸಲು ಶೇಷಾದ್ರಿಪುರಂನ ಈಗಿನ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಅವರು ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದೆ.

ಇನ್ಸ್‌ಪೆಕ್ಟರ್‌ ಅವರು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂಬುದಕ್ಕೆ ದೃಢೀಕೃತ ಪುರಾವೆಗಳನ್ನು ಒದಗಿಸಿರುವ ಪರಿಷತ್‌, ಎಫ್‌ಐಆರ್‌ ದಾಖಲಿಸದೇ ನುಣುಚಿಕೊಂಡಿರುವ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ. ಈ ಅರ್ಜಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಜಯೇಂದ್ರ ಮತ್ತಿತರರ ವಿರುದ್ಧ ಐಪಿಸಿ 384ರ ಅಡಿಯಲ್ಲಿ ಶೇಷಾದ್ರಿಪುರಂ ಠಾಣೆಗೆ ಜನಾಧಿಕಾರ ಸಂಘರ್ಷ ಪರಿಷತ್‌ ದೂರು ನೀಡಿತ್ತು. ಈ ದೂರನ್ನಾಧರಿಸಿ ಆರೋಪಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ಪರಿಷತ್‌ 32ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ವೇಳೆಯಲ್ಲಿ ಇನ್ಸ್‌ಪೆಕ್ಟರ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೊಂದು ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ ಎಂದು ನ್ಯಾಯಾಲಯದ ದಿಕ್ಕು ತಪ್ಪಿಸಿದ್ದರು ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ದಾಖಲೆ ಸಮೇತ ವಾದವನ್ನು ಮುಂದೊಡ್ಡಿದೆ.

 

ಇನ್ಸ್‌ಪೆಕ್ಟರ್‌ ನೀಡಿದ್ದ ಹೇಳಿಕೆ ಆಧರಿಸಿ ನ್ಯಾಯಾಲಯವು ಪರಿಷತ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಆದರೀಗ ಪರಿಷತ್‌, ಇನ್ಸ್‌ಪೆಕ್ಟರ್‌ ಅವರು ನ್ಯಾಯಾಲಯವನ್ನು ಹೇಗೆ ದಿಕ್ಕು ತಪ್ಪಿಸಿದ್ದಾರೆ ಎಂದು ಪುರಾವೆಗಳ ಸಮೇತ ಸಲ್ಲಿಸಿರುವ ಹೊಸದಾದ ಅರ್ಜಿ, ಪ್ರಕರಣವನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.

‘ಶೇಷಾದ್ರಿಪುರಂ ಠಾಣೆಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಸಲ್ಲಿಸಿದ್ದ ದೂರಿಗೂ ಚಂದ್ರಕಾಂತ್‌ ರಾಮಲಿಂಗಂ ಅವರು ಕೆ ಪಿ ಅಗ್ರಹಾರ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಇದರ ಆಧಾರದ ಮೇಲೆ ಇನ್ಸ್‌ಪೆಕ್ಟರ್‌ ಅವರು ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯೇ ಸುಳ್ಳು ಎಂದು ಸಿಆರ್‌ಪಿಸಿ ಕಲಂ 340 ಮತ್ತು 195 ಹಾಗೂ ಐಪಿಸಿ 193, 199, 201ರ ಅಡಿಯಲ್ಲಿ ಅದೇ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಿಸಲೇನಿಯಸ್‌ ಅರ್ಜಿ ದಾಖಲಿಸಿದ್ದೇವೆ,’ ಎಂದು ಪರಿಷತ್‌ನ ಸಹ- ಅಧ್ಯಕ್ಷ ಆದರ್ಶ ಐಯ್ಯರ್‌ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

ಪರಿಷತ್‌ನ ವಾದವೇನು?

ಪರಿಷತ್‌ ಸಲ್ಲಿಸಿರುವ ದೂರು ಮತ್ತು ಚಂದ್ರಕಾಂತ್‌ ರಾಮಲಿಂಗಂ ಸಲ್ಲಿಸಿರುವ ದೂರಿನ ವಿಷಯಗಳಲ್ಲಿ 5 ವ್ಯತ್ಯಾಸಗಳಿವೆ. ಸಲ್ಲಿಕೆಯಾಗಿರುವ ಎರಡೂ ದೂರಿನಲ್ಲಿ ಉಲ್ಲೇಖಿಸಿರುವ ಆರೋಪಿಗಳು ಬೇರೆ ಬೇರೆ. ಕೆ ಪಿ ಅಗ್ರಹಾರ ಠಾಣೆಯಲ್ಲಿ ಚಂದ್ರಕಾಂತ್‌ ರಾಮಲಿಂಗಂ ಅವರು ಸಲ್ಲಿಸಿರುವ ದೂರಿನಲ್ಲಿ ಆಪಾದಿತನಾಗಿರುವ ರಾಕೇಶ್‌ ಶೆಟ್ಟಿ ಅವರನ್ನು, ಪರಿಷತ್‌ ಶೇಷಾದ್ರಿಪುರಂ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಒಂದು ಪ್ರಮುಖ ಸಾಕ್ಷಿ ಎಂದು ಉಲ್ಲೇಖಿಸಿದೆ.

ಚಂದ್ರಕಾಂತ್‌ ರಾಮಲಿಂಗಂ ಅವರು ರಾಕೇಶ್‌ ಶೆಟ್ಟಿ ಅವರನ್ನು 2020ರ ಜೂನ್‌ ತಿಂಗಳ ನಾಲ್ಕನೆ ವಾರದಲ್ಲಿ ಮೊದಲ ಬಾರಿಗೆ ಸಂಪರ್ಕಿಸಿದ್ದರು. ನಂತರ ಸುಲಿಗೆ ನಡೆದಿದೆ ಎಂದು ಆರೋಪಿಸಲಾಗಿರುವ ಪ್ರಕರಣ 2020ರ ಆಗಸ್ಟ್‌ 22ರಂದು ನಡೆದಿತ್ತು. ಆದರೆ ಜನಾಧಿಕಾರ ಸಂಘರ್ಷ ಪರಿಷತ್‌ , ವಿಜಯೇಂದ್ರ ಮತ್ತು ಚಂದ್ರಕಾಂತ್‌ ರಾಮಲಿಂಗಂ ಮತ್ತಿತರರು 2019 ಅಕ್ಟೋಬರ್‌ 14ರಿಂದಲೇ ಸಂಪರ್ಕದಲ್ಲಿದ್ದರು. ಅಲ್ಲದೆ 2020ರ ಸೆಪ್ಟಂಬರ್ ತನಕವೂ ಸಂರ್ಪಕದಲ್ಲಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಿತ್ತು.

ಚಂದ್ರಕಾಂತ್‌ ರಾಮಲಿಂಗಂ ಅವರು ಸುಲಿಗೆ ಹಣವನ್ನು ನಗದು ರೂಪದಲ್ಲಿ ಆಪಾದಿತರಿಗೆ ನೀಡಿದ್ದರು ಎಂದು ಆರೋಪಿಸಿದ್ದರು. ಆದರೆ ಸುಲಿಗೆ ಹಣವನ್ನು ನಗದು ಮತ್ತು ಆರ್‌ಟಿಜಿಎಸ್‌ ಮೂಲಕವೂ ಪಾವತಿಯಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ನೀಡಿದ್ದ ದೂರಿನಲ್ಲಿ ವಿವರಿಸಿದೆ.

ಕೆ ಪಿ ಅಗ್ರಹಾರ ಠಾಣೆಯಲ್ಲಿ ಚಂದ್ರಕಾಂತ್‌ ರಾಮಲಿಂಗಂ ದಾಖಲಿಸಿರುವ ದೂರಿನಲ್ಲಿ ಯಾವ ಜಾಗದಲ್ಲಿ ಹಣವನ್ನು ವಸೂಲಿ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಆದರೆ ಪರಿಷತ್‌ ಸಲ್ಲಿಸಿರುವ ದೂರಿನಲ್ಲಿ ಹಣವು ಬೆಂಗಳೂರಿನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಹಾಗೂ ಹುಬ್ಬಳ್ಳಿಯಲ್ಲಿ ನೀಡಲಾಗಿದೆ ಎಂದು ಆಪಾದಿಸಿದೆ.

ಹಾಗೆಯೇ ಆಪಾದಿತ ರಾಕೇಶ್‌ ಶೆಟ್ಟಿ ಅವರಿಂದ ಗೌರವಕ್ಕೆ ಧಕ್ಕೆ, ಜೀವ ಬೆದರಿಕೆ ಇದೆ ಅಲ್ಲದೆ ಹಣ ಸುಲಿಗೆ ಮಾಡಿದ್ದಾರೆ ಎಂದು ಚಂದ್ರಕಾಂತ್‌ ರಾಮಲಿಂಗಂ ಅವರು ಕೆ ಪಿ ಅಗ್ರಹಾರ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಅದರೆ ಆಪಾದಿತ ವಿಜಯೇಂದ್ರ ಮತ್ತಿತರರು ಹಣ ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ಪರಿಷತ್‌ ಉಲ್ಲೇಖಿಸಿದೆ.

ಅಂಜು ಚೌಧರಿ ವಿರುದ್ಧ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಸಾರ ಮೇಲಿನ 5 ಅಂಶಗಳನ್ನು ಪರಿಷತ್‌, ಹೊಸ ಅರ್ಜಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ ಗೋವಾ ರಾಜ್ಯ ಸರ್ಕಾರ ವಿರುದ್ಧ ಜೋ ಮಾರಿಯಾ ಆಲ್ಬರ್ಟ್‌ ವೇಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಪ್ರಸ್ತಾಪಿಸಿದೆ. ಇದರ ಪ್ರಕಾರ ನ್ಯಾಯಾಂಗ ಪ್ರಕ್ರಿಯೆಗೆ ಧಕ್ಕೆಯಾಗಿದೆ ಎಂಬ ವಾದವನ್ನು ಪರಿಷತ್‌ ಮಂಡಿಸಿದೆ.

the fil favicon

SUPPORT THE FILE

Latest News

Related Posts