ಭೂ ಪರಿವರ್ತನೆ; ಪುತ್ರ ಗಣೇಶ್‌ ಪ್ರಸ್ತಾವನೆ ಅನುಮೋದನೆಗೆ ಶಾಮನೂರು ಅಧಿಕಾರ ಬಳಕೆ?

ಬೆಂಗಳೂರು; ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ಎಸ್‌ ಎಸ್‌ ಮಾಲ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಪುತ್ರ ಎಸ್‌ ಎಸ್‌ ಗಣೇಶ್‌ ಪರವಾಗಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರೂ ಆಗಿದ್ದ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

ತಮ್ಮ ಪುತ್ರನ ಹೆಸರಿನಲ್ಲಿ ಭೂ ಉಪಯೋಗ ಬದಲಾವಣೆ ಮಾಡುವ ಸಂಬಂಧ ಸ್ವಜನಪಕ್ಷಪಾತ ಎಸಗಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಶಾಮನೂರು ಶಿವಶಂಕರಪ್ಪ ಅವರು ಇದೇ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷಕ್ಕೂ ಕಾರಣರಾಗಿದ್ದರು. ದೂಡಾದ (ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ)ದ ಅಧ್ಯಕ್ಷ ಅಧ್ಯಕ್ಷರಾಗಿದ್ದ ಅಂದಿನ ಜಿಲ್ಲಾಧಿಕಾರಿಗೆ ಶಿವಶಂಕರಪ್ಪ ಅವರು ಟಿಪ್ಪಣಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಟಿಪ್ಪಣಿಯಲ್ಲೇನಿದೆ?

ಎಸ್‌ ಎಸ್‌ ಗಣೇಶ್‌ ಇವರು ತಮ್ಮ ಹಕ್ಕು ಸ್ವಾಧೀನದಲ್ಲಿರುವ ದಾವಣಗೆರೆ ತಾಲೂಕು ಶಾಬನೂರು ಗ್ರಾಮದ ಸರ್ವೆ ನಂಬರ್‌ 73/1 (21 ಗುಂಟೆ), ಸರ್ವೆ ನಂಬರ್‌ 76/1 (1 ಎಕರೆ 00 ಗುಂಟೆ), ಸರ್ವೆ ನಂಬರ್‌ 76/2 (30 ಗುಂಟೆ), ರಲ್ಲಿನ ಒಟ್ಟು 2 ಎಕರೆ 11 ಗುಂಟೆ ಜಾಗವನ್ನು ಕೈಗಾರಿಕೆ ಉದ್ದೇಶದಿಂದ ವಾಣಿಜ್ಯ ಉದ್ದೇಶದ ಭೂ ಉಪಯೋಗ ಬದಲಾವಣೆಗೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾಋಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆದ್ದರಿಂದ ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡಿ ನಂತರ ವಿಷಯವನ್ನು ಘಟನೋತ್ತರ ಮಂಜೂರಾತಿಗೆ ಮುಂದಿನ ಪ್ರಾಧಿಕಾರದ ಸಭೆಗೆ ಮಂಡಿಸಿ ಎಂದು 2014ರ ಸೆ.27ರಂದು ಸೂಚಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

ಭೂ ಉಪಯೋಗ ಬದಲಾವಣೆಗೆ ಸಂಬಂಧಿಸಿದಂತೆ ಅನುಮೋದನೆ ನೀಡುವ ಮುನ್ನ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ಆಗಬೇಕು ಮತ್ತು ಈ ಸಂಬಂಧ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಆ ನಂತರವಷ್ಟೇ ಭೂ ಉಪಯೋಗ ಬದಲಾವಣೆಗೆ ಪ್ರಾಧಿಕಾರ ಅನುಮೋದನೆ ನೀಡಬೇಕು.

ಆದರೆ ಲಭ್ಯವಿರುವ ಟಿಪ್ಪಣಿ ಪ್ರಕಾರ ಪ್ರಾಧಿಕಾರದ ಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆಯೇ ಏಕಾಏಕಿ ಎಸ್‌ ಎಸ್‌ ಗಣೇಶ್‌ ಅವರ ಪ್ರಸ್ತಾವನೆಗೆ ಅನುಮೋದನೆ ದೊರೆತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಚಿವರ ಪುತ್ರ ಎಂಬ ಕಾರಣಕ್ಕೆ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅಂದಿನ ಜಿಲ್ಲಾಧಿಕಾರಿಗಳೂ ಘಟನೋತ್ತರ ಮಂಜೂರಾತಿ ನೀಡಿದ್ದರು ಎಂದು ಗೊತ್ತಾಗಿದೆ.

ಎಸ್‌ ಎಸ್‌ ಗಣೇಶ್ ಅವರು 9 ನಿವೇಶನಗಳನ್ನು ಖರೀದಿಸಿ ಅವುಗಳನ್ನು ಕಾನೂನು ಪ್ರಕಾರ ಏಕ ನಿವೇಶನ ಮಾಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರಾದರೂ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಈ ಸಂಬಂಧ ಎಸ್‌ ಎಸ್‌ ಗಣೇಶ್‌ ಅವರೇ ಕಾಲಾವಕಾಶ ಕೇಳಿದ್ದರು. ಒತ್ತುವರಿ ಆಗಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಅಲ್ಲದೆ ಕಾಲಾವಕಾಶ ಪೂರ್ಣಗೊಂಡ ನಂತರ ಈವರೆವಿಗೂ ಒತ್ತುವರಿಯನ್ನು ತೆರವುಗೊಂಡಿಲ್ಲ.

ರಸ್ತೆಗಳು ಅನುಪಯುಕ್ತವಾಗಿವೆ ಮತ್ತು ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ ಎಸ್‌ ಗಣೇಶ್‌ ಮಾಲೀಕತ್ವದ ಎಸ್‌ ಎಸ್‌ ಮಾಲ್‌ಗಾಗಿ ವಸತಿ ವಿನ್ಯಾಸದಲ್ಲಿನ ನಿವೇಶನಗಳನ್ನು ಒಂದುಗೂಡಿಸಲು ದಾವಣಗೆರೆ ಮಹಾನಗರಪಾಲಿಕೆಯ ಹಿಂದಿನ ಆಯಕ್ತರು ಕೈಗಾರಿಕೆ ಉಪಯೋಗಕ್ಕೆ ಪರಿವರ್ತಿಸಲು ಅನುಮತಿ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts