ಭೂಸುಧಾರಣೆ ಕಾಯ್ದೆ ಜಾರಿಯಲ್ಲಿದ್ದಾಗಲೇ 6,028 ಎಕರೆ ಖರೀದಿ; ಭೂ ಕುಬೇರರ ಪಟ್ಟಿ ಬಹಿರಂಗ

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶೈಕ್ಷಣಿಕ ಸಲಹೆಗಾರ ಎಂ ಆರ್‌ ದೊರೆಸ್ವಾಮಿ, ಕಾಂಗ್ರೆಸ್‌ ಶಾಸಕರೊಬ್ಬರ ಕುಟುಂಬಕ್ಕೆ ಸೇರಿರುವ ನಲಪಾಡ್‌ ಎಸ್ಟೇಟ್‌, ಕಾಂಗ್ರೆಸ್‌ನ ಮಾಜಿ ಶಾಸಕ ಪ್ರಿಯಾ ಕೃಷ್ಣ, ರಮಣಶ್ರೀ ಎಂಟರ್‌ಪ್ರೈಸೆಸ್‌, ನಟ ಉಪೇಂದ್ರ, ಹುಂಚದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸೇರಿದಂತೆ ಹಲವು ಪ್ರಭಾವಿಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ 79 ಎ ಮತ್ತು 79 ಬಿ ಕಾಯ್ದೆ ಜಾರಿಯಾಗಿದ್ದ ಸಂದರ್ಭದಲ್ಲೇ 10 ಎಕರೆಗಿಂತಲೂ ಹೆಚ್ಚಿನ ಭೂಮಿ ಖರೀದಿಸಿದ್ದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಮೈಸೂರು, ದಕ್ಷಿಣ ಕನ್ನಡ, ಬಳ್ಳಾರಿ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 6,028.53 ಎಕರೆ ಜಮೀನು, ರಾಜಕೀಯ ಪ್ರಭಾವಿಗಳ ಮಾಲೀಕತ್ವದಲ್ಲಿದೆ. 11 ಜಿಲ್ಲೆಗಳಲ್ಲಿ 10 ಎಕರೆಗಿಂತಲೂ ಹೆಚ್ಚು ಜಮೀನು ಖರೀದಿಸಿದವರ ಹೆಸರುಗಳನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ, 80 ಹಾಗೂ 63 ಸೆಕ್ಷನ್‌ಗಳನ್ನು ರದ್ದುಗೊಳಿಸುವುದರಿಂದ ಕಳೆದ ಕೆಲವು ದಶಕಗಳಲ್ಲಿ ತಮ್ಮ ರಿಯಲ್ ಎಸ್ಟೇಟ್ ಉದ್ಯಮ ಮತ್ತು ಬೇನಾಮಿ ಆಸ್ತಿಯನ್ನು ಹೊಂದಿರುವ ರಾಜಕೀಯ ವರ್ಗ ತಕ್ಷಣಕ್ಕೆ ಲಾಭ ಪಡೆಯಲಿದೆ ಎಂದು ಕೇಳಿಬಂದಿದ್ದ ಗಂಭೀರ ಆರೋಪಗಳ ಬೆನ್ನಲ್ಲೇ 10 ಎಕರೆಗಿಂತಲೂ ಹೆಚ್ಚು ಜಮೀನು ಖರೀದಿಸಿರುವವರ ಹೆಸರುಗಳು ಮುನ್ನೆಲೆಗೆ ಬಂದಿವೆ.

ಕಾಂಗ್ರೆಸ್‌ ಶಾಸಕ ರಿಜ್ಞಾನ್‌ ಅರ್ಷದ್‌ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಇದಕ್ಕೆ 2020ರ ಸೆ.21ರಂದು ಉತ್ತರಿಸಿದ್ದ ಸಚಿವ ಅಶೋಕ್‌ ಅವರು 10 ಎಕರೆಗಿಂತಲೂ ಹೆಚ್ಚು ಜಮೀನು ಖರೀದಿಸಿದವರ ಹೆಸರುಗಳ ಪಟ್ಟಿಯನ್ನು ಅವರು ಬಹಿರಂಗಗೊಳಿಸಿದ್ದರು.

ಕೊಡಗು ಜಿಲ್ಲೆಯಲ್ಲಿ 915.55 ಎಕರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 967.14 ಎಕರೆ, ಕೋಲಾರ ಜಿಲ್ಲೆಯಲ್ಲಿ 41.96 ಎಕರೆ, ಶಿವಮೊಗ್ಗ ಜಿಲ್ಲೆಯಲ್ಲಿ 180.05 ಎಕರೆ, ದಕ್ಷಿಣ ಕನ್ನಡದಲ್ಲಿ 107.02 ಎಕರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,504.08 ಎಕರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 482.09 ಎಕರೆ, ತುಮಕೂರು ಜಿಲ್ಲೆಯಲ್ಲಿ 437.62 ಎಕರೆ, ರಾಮನಗರ ಜಿಲ್ಲೆಯಲ್ಲಿ 615.19 ಎಕರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 126.70 ಎಕರೆ, ಮೈಸೂರಿನಲ್ಲಿ 651.13 ಎಕರೆ ಜಮೀನು ಹಲವು ಪ್ರಭಾವಿಗಳ ಕೈಯಲ್ಲಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

ಕೊಡಗಿನ ಮಡಿಕೇರಿಯ ಮದೆಯಲ್ಲಿ ಒನೆಲ್ಲಾ ಇಸಾ ಪ್ರೈ ಲಿ., 105.04 ಎಕರೆ, ಸೋಮವಾರಪೇಟೆಯ ಶಾಂತಪುರದಲ್ಲಿ ನಲಪಾಡ್‌ ಎಸ್ಟೇಟ್‌ 38.96 ಎಕರೆ, ಕೊಡಗರಹಳ್ಳಿಯಲ್ಲಿ ಗಲ್ಫ್‌ ವ್ಯೂ ಹೋಮ್ಸ್‌ ಲಿ., 15.75 ಎಕರೆ ಹೊಂದಿದೆ.

ಮಡಿಕೇರಿ ಕಡಗದಾಳುವಿನಲ್ಲಿ ತ್ರಿಶೂಲ್‌ ಬಿಲ್ಡ್‌ಟೆಕ್‌ ಇನ್ಫ್ರಾಸ್ಟಕ್ಚರ್‌ ಪ್ರೈ ಲಿ., 39.07 ಎಕರೆ, ಮಡಿಕೇರಿಯ ಹೊದವಾಡದಲ್ಲಿ ಜತಿನ್‌ ಟಾಕೂರ್‌ ಬಾಯಿ ನಾಯಕ್‌, ಪ್ರಕಾಶ್‌ ಮತ್ತಿತರರು 59.26 ಎಕರೆ, ವಿರಾಜಪೇಟೆಯ ಭದ್ರಗೋಳದಲ್ಲಿ ದ್ವಾರಕಾನಾಥರೆಡ್ಡಿ ಎಂಬುವರು 38.11 ಎಕರೆ, ಮಡಿಕೇರಿಯ ಗಾಳಿಬೀಡುವಿನಲ್ಲಿ ಪ್ರಮೋದ್‌ ರಂಜನ್‌ ಅವರು 35.30 ಎಕರೆ, ವಿರಾಜಪೇಟೆಯ ಕೊಂಗಣದಲ್ಲಿ ಪ್ರದೀಪ್‌ ಕೊಯಿಲಿ 30.77 ಎಕರೆ, ಮಡಿಕೇರಿಯ ಬೆಂಗೂರುವಿನಲ್ಲಿ ಎನ್‌ ಬಿ ಗಣಪತಿ 33.18 ಎಕರೆ, ಹೆಮ್ಮೆತ್ತಾಳುವಿನ್ಲಲಿ ಪಿ ಡಿ ಗಣಪತಿ 46.16 ಎಕರೆ, ವಿರಾಜಪೇಟೆಯ ಕೆ ಬಾಡಗದಲ್ಲಿ ಕೆ ಬಿ ಗಣಪತಿ 26.00 ಎಕರೆಯನ್ನು ಹೊಂದಿರುವುದು ಪಟ್ಟಿಯಿಂದ ಗೊತ್ತಾಗಿದೆ.

ಬೆಂಗಳೂರು ದಕ್ಷಿಣದ ಸೂಲಿಬಾರೆ, ಅಜ್ಜನಹಳ್ಳಿ, ಹುಲವೇನಹಳ್ಳಿ, ಚುಂಚನಕುಪ್ಪೆಯಲ್ಲಿ ಪ್ರಿಯದರ್ಶಿನಿ, ಪ್ರಿಯಾ ಕೃಷ್ಣ, ಪ್ರದೀಪ್‌ ಕೃಷ್ಣ ಅವರ ಹೆಸರಿನಲ್ಲಿ ಒಟ್ಟು 17.39 ಎಕರೆ ಹಾಗೆಯೇ ಸೂಲಿವಾರ, ಪೆದ್ದನಪಾಳ್ಯ, ಅಜ್ಜನಹಳ್ಳಿ,ಯಲ್ಲಿ ಪ್ರಿಯಾಕೃಷ್ಣ, ಪ್ರಿಯದರ್ಶಿನಿ, ಪ್ರದೀಪ್‌ ಕೃಷ್ಣ(ಜಂಟಿ) ಹೆಸರಿನಲ್ಲಿ 28.24 ಎಕರೆ ಸೇರಿ ಒಟ್ಟು 45.63 ಎಕರೆ ಹೊಂದಿದ್ದಾರೆ. ಯಲಹಂಕದ ಅನಂತಪುರದಲ್ಲಿ ರಮಣಶ್ರೀ ಎಂಟರ್‌ಪ್ರೈಸೆಸ್‌ ಮತ್ತು ಕ್ಯಾಲಿಫೋರ್ನಿಯಾ ಗಾರ್ಡನ್‌ 30.30 ಎಕರೆ, ಬ್ಯಾಲಾಳುವಿನಲ್ಲಿ ನಟ ಉಪೇಂದ್ರ 17.10 ಎಕರೆ, ಬೆಂಗಳೂರು ಪೂರ್ವದ ಕನ್ನಮಂಗಲದಲ್ಲಿ ಎಸ್‌ ಎಸ್‌ ಭುನಿಯಂ, ಹಿಂದೂಸ್ಥಾನ್‌ ವಿದ್ಯುತ್‌ ಪ್ರೈ ಲಿ. 52.02 ಎಕರೆ ಹೊಂದಿದೆ.

ಕಣಿಮಿಣಿಕೆಯಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶೈಕ್ಷಣಿಕ ಸಲಹೆಗಾರ ಎಂ ಆರ್‌ ದೊರೆಸ್ವಾಮಿ ಅವರು 19.20 ಎಕರೆ ಖರೀದಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಬೆಂಗಳೂರು ಪೂರ್ವದ ಚಿಕ್ಕಗುಬ್ಬಿಯಲ್ಲಿ ಎಚ್‌ ಕವಿತ ಎಂಬುವರು 35.25 ಎಕರೆ, ಯಲಹಂಕದ ಚೊಕ್ಕನಹಳ್ಳಿಯಲ್ಲಿ ಅಮಿದೇವಿ 42.26 ಎಕರೆ, ಸೊಣ್ಣೇನಹಳ್ಳಿಯಲ್ಲಿ ಸುರೇಶ್‌ ಮುಕುಂದ 38.24 ಎಕರೆ, ಬಿ ಜಿ ಕಾವಲ್‌ನಲ್ಲಿ ಮುತ್ತು ಕುಟ್ಟಿ ವೈದ್ಯನ್‌ 30.30 ಎಕರೆ, ಬೆಂಗಲೂರು ದಕ್ಷಿಣದ ಯು ಎಂ ಕಾವಲ್‌ನಲ್ಲಿ ಕೆ ಎಸ್‌ ಹುಚ್ಚವೀರಪ್ಪ 42.08 ಎಕರೆ, ಡಿ ಧರ್ಮಪ್ಪ 43.00 ಎಕರೆ, ದೊಡ್ಡಕಲ್ಲಸಂದ್ರದ ಕೋಣನಕುಂಟೆಯ ಜನಾರ್ದನ್‌ ಬಿ 76.16 ಎಕರೆ, ಬಿ ಎಂ ಕಾವಲ್‌, ಅಗರ, ಕಗ್ಗಲಿಪುರದದಲ್ಲಿ ರಘು ಎಂಬುವರು 49.02 ಎಕರೆ ಹೊಂದಿರುವುದು ಸಚಿವ ಅಶೋಕ್‌ ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

ಬೆಂಗಳೂರು ಗ್ರಾಮಾಂತರದ ನೆಲಮಂಗಲದ ತಾಳೆಕೆರೆಯಲ್ಲಿ ಎಚ್‌ ಅರ್‌ ಅನುಸು 37.01 ಎಕರೆ, ದೇವನಹಳ್ಳಿ ಶೆಟ್ಟೇರಹಳ್ಳಿಯಲ್ಲಿ ಜಯಂತಿ ಲಾಲ್‌ ಷಾ 32.16 ಎಕರೆ, ದೇವನಹಳ್ಳಿ ಬೂದಿಹಾಳದಲ್ಲಿ ವರದ ಡೆವಲಪರ್ಸ್‌ 14.04 ಎಕರೆ, ಶೆಟ್ಟೇರಹಳ್ಳಿಯಲ್ಲಿ ಪುನೀತ್‌ ಎನ್‌ ಶಾ 51.14 ಎಕರೆ, ದೊಡ್ಡಬಳ್ಳಾಪುರದ ಕೋಳೂರಿನಲ್ಲಿ ಸುನೀತಾ ನಾರಾಯಣ್‌ 15 ಎಕರೆ, ರಘುನಾಥಪುರದಲ್ಲಿ ಸಂದೀಪ್‌ ಶೆಟ್ಟಿ 42.00 ಎಕರೆ, ಕರೀಂ ಸೊಣ್ಣೇನಹಳ್ಳಿಯಲ್ಲಿ ಸೂರ್ಯ ಫೌಂಡೇಷನ್‌ 53.28 ಎಕರೆ, ಬೊಮ್ಮನಹಳ್ಳಿಯಲ್ಲಿ ಗೋಪಿನಾಥ ಎಂಬುವರು 68.15 ಎಕರೆ ಖರೀದಿಸಿದ್ದಾರೆ ಎಂಬುದು ತಿಳಿದು ಬಂದಿದೆ.

 

ಚಿಕ್ಕಬಳ್ಳಾಪುರ ಶಿಡ್ಲಘಟ್ಟದ ನಾರಾಯಣ ದಾಸರಹಳ್ಳಿಯಲ್ಲಿ ಬಿ ಕೆ ಅಶೋಕ್‌ ಅವರು 70.00 ಎಕರೆ, ಚಿಂತಾಮಣಿ ಅಟ್ಟೂರಿನಲ್ಲಿ 30.00 ಎಕರೆ, ಬಲಜಿಗಪಡೆಯಲ್ಲಿ ಸುಶೀಲ ಶರ್ಮಾ ಅವರು 86.00 ಎಕರೆ ಹೊಂದಿದ್ದಾರೆ.

ತುಮಕೂರಿನ ಈಚಗಲ್‌ ಕಾವಲ್‌ನಲ್ಲಿ ಎಸ್‌ ಮೋಹನ್‌ಕುಮಾರ್‌ ಎಂಬುವರು 40.00 ಎಕರೆ, ಶಿರಾದ ಜೋಡಿದೇವರಹಳ್ಳಿಯಲ್ಲಿ ಎಂ ಎಂ ಪೂಣಚ್ಚ 39.24 ಎಕರೆ, ರಾಮನಗರ ಜಿಲ್ಲೆಯ ಕಂಚುಗಾರನಹಳ್ಳಿಯಲ್ಲಿ ರಾಜೇಶ್ವರಿ 28.02, ಎಕರೆ, ಪೋಡಿಯಾಲಕರೇನಹಳ್ಳಿಯಲ್ಲಿ ಎನ್‌ ಆರ್‌ ಕಾಶೀನಾಥ್‌ 25.00 ಎಕರೆ, ಕೋಡಿಯಾಲಕರೇನಹಳ್ಳಿಯಲ್ಲಿ ಕೆ ಟಿ ತಿಮ್ಮಯ್ಯ 25.00 ಎಕರೆ, ಹಾರೋಹಳ್ಳಿಯಲ್ಲಿ ಸೌಭಾಗ್ಯ ರೆಡ್ಡಿ 42.02 ಎಕರೆ, ಕನಕಪುರ ಜಕ್ಕಸಂದ್ರದಲ್ಲಿ ಶಾಂತಿಲಾಲ್‌ 30.05 ಎಕರೆ, ಕನಕಪೊಉರದ ಎಂ ಮಣಿಯಾಂಬಳ್‌ನಲ್ಲಿ ಎಸ್‌ ಕೆ ಸೀಸಾಸರ್‌ 42.05 ಎಕರೆ, ಮಾಗಡಿಯ ಕನ್ನಸಂದ್ರದಲ್ಲಿ ನಾಗರತ್ನಮ್ಮ 37.05 ಎಕರೆ ಖರೀದಿಸಿದ್ದಾರೆ.

ಚಿಕ್ಕಮಗಳೂರಿನ ಕಡೂರಿನ ಚಂದ್ರಶೇಖರಪುರದಲ್ಲಿ ಅಡ್ಡೂರು ಇಬ್ರಾಹಿಂ 34.00 ಎಕರೆ, ಎನ್‌ ಆರ್‌ ಪುರದ ಸಾಲೂರಿನಲ್ಲಿ ಎಂ ಆಲಿಯಾರ್‌ 38.29 ಎಕರೆ, ಬಳ್ಳಾರಿಯ ಬೆಳಗಲ್ಲು ನಲ್ಲಿ ಮೇಟಿ ಯಂಕನಗೌಡ 40.22 ಎಕರೆ, ಶಿವಮೊಗ್ಗ ಸೊರಬದ ಸಾರೆಕೊಪ್ಪದಲ್ಲಿ ಪ್ರಭಾವತಿ 35.14 ಎಕರೆ, ಹೊಸನಗರ ಹುಂಚದಲ್ಲಿ ದೇವೇಂದ್ರಕೀರ್ತಿ ಭಟ್ಟಾರಕ 10.19 ಎಕರೆ, ದಕ್ಷಿಣ ಕನ್ನಡ ಬಂಟ್ವಾಳದ ಗೋಳ್ತಮಜಲು ದೇವರಾಜು ಸುರೇಖ ಎಂಬುವರು 29.25 ಎಕರೆ, ಮೈಸೂರು ಪಿರಿಯಾಪಟ್ಟಣದ ಗುಡ್ಡೇನಹಳ್ಳಿಯಲ್ಲಿ ಎಂ ಕೆ ದಿನೇಶ್‌ ಎಂಬುವರು 50.00 ಎಕರೆ ಹೊಂದಿರುವುದು ಸಚಿವ ಅಶೋಕ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಬೆಂಗಳೂರು ವಿಮಾನನಿಲ್ದಾಣ ಅಥವಾ ಮೈಸೂರು ರಸ್ತೆ ಮತ್ತಿತರ ಆಯಕಟ್ಟಿನ ಪ್ರದೇಶಗಳಲ್ಲಿ ಹಲವು ರಾಜಕಾರಣಿಗಳು ನೂರಾರು ಎಕರೆ ಭೂಮಿ ಖರೀದಿಸಿದ್ದಾರೆ. ಆ ಪೈಕಿ ಬಹುತೇಕ ಬೇನಾಮಿ ಆಸ್ತಿ ಎಂಬುದು ರಹಸ್ಯವಾಗೇನೂ ಇಲ್ಲ. ಹಿಂದಿನ ಭೂ ಸುಧಾರಣಾ ಕಾಯ್ದೆಯ ಅನ್ವಯ ಅಕ್ರಮ ಎಂದಾಗಿದ್ದ ಇಂತಹ ಬೇನಾಮಿ ಆಸ್ತಿ, ಕಾನೂನುಬಾಹಿರ ಖರೀದಿಗೆ ಸಂಬಂಧಿಸಿದ ಸುಮಾರು 14 ಸಾವಿರ ಪ್ರಕರಣಗಳು ಬಾಕಿ ಇದ್ದವು. ಈಗ ಹೊಸ ತಿದ್ದುಪಡಿಯ ಮೂಲಕ ಈ ಎಲ್ಲಾ ಪ್ರಕರಣಗಳು ತಾನೇ ತಾನಾಗಿ ಸಕ್ರಮವಾಗಿಬಿಡುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ.

ಜಮೀನು ಖರೀದಿಯಲ್ಲಿ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಸುಮಾರು 83,171 ಪ್ರಕರಣಗಳನ್ನು ದಾಖಲಿಸಿತ್ತು. ಅದರಲ್ಲಿ ಇತ್ಯರ್ಥ ಆಗಿರುವುದನ್ನು ಬಿಟ್ಟು ಉಳಿದ 12,231 ಪ್ರಕರಣಗಳನ್ನು ವಜಾಗೊಳಿಸಲು ಮತ್ತು ಜಮೀನು ಖರೀದಿಗೆ ಇದ್ದ ಆದಾಯ ಮಿತಿಯನ್ನು ತೆಗೆಯಲು ನಿರ್ಧರಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts