ಬೆಂಗಳೂರು; ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವಸಂತಪುರದಲ್ಲಿ ಇಂಡಿಯನ್ ಹೆರಿಟೇಜ್ ಫೌಂಡೇಷನ್ ನಿರ್ಮಿಸಿರುವ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಅಕ್ಷಯಪಾತ್ರಾ ಫೌಂಡೇಷನ್‌ನ ಟ್ರಸ್ಟಿಗಳಲ್ಲೊಬ್ಬರಾದ ಅಭಯಕುಮಾರ್ ಜೈನ್ ಅವರು ಫ್ಲಾಟ್‌ಗಳನ್ನು ಖರೀದಿಸಿರುವುದು ಚರ್ಚೆಗೆ ಗ್ರಾಸವೊದಗಿಸಿದೆ.
ಇಸ್ಕಾನ್, ಅಕ್ಷಯಪಾತ್ರಾ ಫೌಂಡೇಷನ್, ಇಂಡಿಯನ್ ಹೆರಿಟೇಜ್ ಫೌಂಡೇಷನ್‌ಗಳ ಉದ್ದೇಶ ಮತ್ತು ಕಾರ್ಯ ಚಟುವಟಿಕೆಗಳಿಗೂ ಒಂದಕ್ಕೊಂದು ಸಂಬಂಧವಿಲ್ಲ. ಆದರೆ ಈ ಮೂರು ಸಂಸ್ಥೆಗಳಿಗೂ ಮಧುಪಂಡಿತ್ ದಾಸ್ ಒಬ್ಬರೇ ಅಧ್ಯಕ್ಷರು. ಹೀಗಾಗಿ ಅಕ್ಷಯಪಾತ್ರಾ ಫೌಂಡೇಷನ್‌ನ ಟ್ರಸ್ಟಿ ಅಭಯ್ ಜೈನ್ ಅವರು ಇಂಡಿಯನ್ ಹೆರಿಟೇಜ್ ಫೌಂಡೇಷನ್ ನಿರ್ಮಿಸಿರುವ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ಗಳನ್ನು ಖರೀದಿಸಿರುವುದರ ಹಿಂದೆ ಹಿತಾಸಕ್ತಿ ಸಂಘರ್ಷ ಇರಬಹುದೇನೋ ಎಂಬ ಅನುಮಾನವೂ ಇದೆ.
ಅದೇ ರೀತಿ ಫೌಂಡೇಷನ್‌ನ ಇನ್ನಿತರೆ ಟ್ರಸ್ಟಿಗಳು ಇದೇ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ಗಳನ್ನು ಖರೀದಿಸಿದ್ದಾರೆಯೇ ಇಲ್ಲವೇ ಎಂಬುದನ್ನೂ ‘ದಿ ಫೈಲ್’ ಪರಿಶೀಲಿಸುತ್ತಿದೆ.
ಹಾಗೆಯೇ ಈ ಮೂರೂ ಫೌಂಡೇಷನ್‌ಗಳಲ್ಲಿರುವ ಟ್ರಸ್ಟಿಗಳು ಕಾನೂನಾತ್ಮಕವಾಗಿ ಸರಿ ಇರಬಹುದು. ಆದರೆ ಫ್ಲಾಟ್‌ಗಳನ್ನು ಖರೀದಿಸಿರುವುದು ನೈತಿಕವಾಗಿ ಸರಿಯೇ ಎಂಬ ಪ್ರಶ್ನೆಗಳೂ ಇವೆ. ಮೂರೂ ಫೌಂಡೇಷನ್‌ಗೂ ಒಬ್ಬರೇ ಅಧ್ಯಕ್ಷರಾಗಿರುವ ಕಾರಣ ಕೊಡುಕೊಳ್ಳುವಿಕೆಯಲ್ಲಿಯೂ ಹಿತಾಸಕ್ತಿ ಸಂಘರ್ಷ ಇದೆ ಎಂಬುದನ್ನು ಬಲಪಡಿಸುತ್ತಿದೆ.
ಇನ್ನು, ಒಂದು ಫೌಂಡೇಷನ್‌ಗೂ ಮತ್ತೊಂದು ಫೌಂಡೇಷನ್ ನಡುವೆ ಅಂತರ ಕಾಯ್ದುಕೊಳ್ಳಬೇಕು. ಆದರೆ ಅಕ್ಷಯ ಪಾತ್ರಾ ಫೌಂಡೇಷನ್‌ನ ಕೆಲ ಟ್ರಸ್ಟಿಗಳು, ಸೋದರ ಸಂಸ್ಥೆ ಎಂಬಂತಿರುವ ಇಂಡಿಯನ್ ಹೆರಿಟೇಜ್ ಫೌಂಡೇಷನ್ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ಗಳನ್ನು ಖರೀದಿಸಿರುವುದು ಹೇಗೆ ಬಿಂಬಿತವಾಗಲಿದೆ? ಈ ವಿಚಾರದಲ್ಲಿ ಟ್ರಸ್ಟಿಗಳು ಯಾವುದೇ ಅಂತರವನ್ನು ಕಾಯ್ದುಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಯಾವುದೇ ರಿಯಾಯಿತಿ ಸೌಲಭ್ಯ ಪಡೆದುಕೊಳ್ಳದೆಯೇ ಇತರ ಖಾಸಗಿ ವ್ಯಕ್ತಿಗಳು ನೀಡಿರುವ ದರವನ್ನೇ ಮುಂಗಡವಾಗಿ ಪಾವತಿಸಿ ಫ್ಲಾಟ್‌ಗಳನ್ನು ಖರೀದಿಸಲಾಗಿದೆ ಎಂದು ಟ್ರಸ್ಟಿಯೊಬ್ಬರು ಹೇಳುತ್ತಿದ್ದಾರಾದರೂ ಇದು ಹಿತಾಸಕ್ತಿ ಸಂಘರ್ಷ ಮಾತ್ರವಲ್ಲದೆ ನೈತಿಕವಾಗಿ ಎಷ್ಟರಮಟ್ಟಿಗೆ ಸರಿ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನೂ ಹುಟ್ಟು ಹಾಕಿವೆ.
ಜೈನ್ ಹೆಸರಿನಲ್ಲಿವೆ ಫ್ಲಾಟ್‌ಗಳು
ಜೈನ್ ಅವರ ಹೆಸರಿನಲ್ಲಿಯೇ ಫ್ಲಾಟ್‌ಗಳು ನೋಂದಣಿಯಾಗಿವೆ ಎಂಬುದನ್ನು ‘ದಿ ಫೈಲ್’ ಖಚಿತಪಡಿಸಿಕೊಂಡಿದೆಯಲ್ಲದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಿರುವ ದಾಖಲೆಗಳನ್ನು ಪಡೆದುಕೊಂಡಿದೆ.
ನಮಗೆ ತಿಳಿದು ಬಂದಿರುವ ಪ್ರಕಾರ ಅಭಯ್ ಜೈನ್ ಅವರು ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ 3 ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಫೌಂಡೇಷನ್‌ನ ಟ್ರಸ್ಟಿ ಆಗಿದ್ದ ಅಭಯ್‌ಕುಮಾರ್ ಜೈನ್ ಅವರು ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ 3 ಫ್ಲಾಟ್‌ಗಳನ್ನು 2005ರಲ್ಲೇ ಖರೀದಿಸಿದ್ದರು. ಈ ಪೈಕಿ ಒಂದು ಫ್ಲಾಟ್‌ನ್ನು ಈಗಾಗಲೇ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. . ಇನ್ನು 2 ಫ್ಲಾಟ್‌ಗಳು ಅವರ ಹೆಸರಿನಲ್ಲಿವೆ (ಖಾತೆ ಸಂಖ್ಯೆ/ ಸರ್ವೆ ನಂಬರ್ 39/1, 39/2- A-1323, A-1423-FLAT NM-A=1323-1324, 1305/39/1, 39/2, 47/1 147/2/A,-1323/A/1324/A-1423, A-1204(2019-20) ಎಂಬುದು ತೆರಿಗೆ ಪಾವತಿಸಿರುವ ದಾಖಲೆಯಿಂದ ಗೊತ್ತಾಗಿದೆ.
ವಿಶೇಷವೆಂದರೆ ಅಕ್ಷಯಪಾತ್ರಾ ಫೌಂಡೇಷನ್‌ನ ಆಡಳಿತದಲ್ಲಿನ ಲೋಪಗಳನ್ನು ಬಯಲು ಮಾಡಿದ ಟ್ರಸ್ಟಿಗಳಲ್ಲಿ ಅಭಯ್‌ಕುಮಾರ್ ಜೈನ್ ಕೂಡ ಒಬ್ಬರು. ಇಸ್ಕಾನ್ ಮತ್ತು ಅಕ್ಷಯಪಾತ್ರಾ ಫೌಂಡೇಷನ್‌ನ ಆಡಳಿತಾತ್ಮಕ ವಿಷಯಗಳು ಕಲಸುಮೇಲೋಗರವಾಗಿದೆ ಎಂಬ ಬಲವಾದ ಆರೋಪಿಸಿದ್ದ ಜೈನ್ ಅವರೇ ಇಂಡಿಯನ್ ಹೆರಿಟೇಜ್ ಫೌಂಡೇಷನ್ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲೇ ಫ್ಲಾಟ್‌ಗಳನ್ನು ಖರೀದಿಸಿರುವ ವಿಚಾರ ಹೆಚ್ಚು ಮಹತ್ವ ಪಡೆದುಕೊಂಡಿವೆ.
ವಸಂತಪುರದಲ್ಲಿರುವ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟು 600 ಫ್ಲಾಟ್‌ಗಳಿವೆ. ಈ ಪೈಕಿ ಕೆಲ ಅಪಾರ್ಟ್‌ಮೆಂಟ್‌ಗಳನ್ನು ಮಧುಪಂಡಿತ್ ದಾಸ್ ಅವರ ಸೋದರ ಶೇಷಸುತ ಹಾಗೂ ಇಸ್ಕಾನ್‌ನ ಮುಖ್ಯ ಹಣಕಾಸು ಅಧಿಕಾರಿ ಹರೀಶ್ ಅವರ ಹೆಸರಿನಲ್ಲಿ 4 ಅಪಾರ್ಟ್‌ಮೆಂಟ್‌ಗಳಿವೆ ಎಂದು ತಿಳಿದು ಬಂದಿದೆ.
“ಅಪಾರ್ಟ್‌ಮೆಂಟ್ ಬಗ್ಗೆ ಏನನ್ನೂ ಹೇಳುವುದಿಲ್ಲ. ಇದೊಂದು ಕಮಷಿರ್ಯಯಲ್ ವಹಿವಾಟು. ಫ್ಲಾಟ್ ಖರೀದಿಯಲ್ಲಿ ಯಾವುದೇ ರಿಯಾಯಿತಿ ಪಡೆದಿಲ್ಲ. ಟ್ರಸ್ಟಿಗಳಲ್ಲದೆ ಇನ್ನಿತರರಿಗೆ ನಿಗದಿಪಡಿಸಿದ್ದ ದರವನ್ನು ನಾನು ಮುಂಗಡವಾಗಿಯೇ ಪಾವತಿಸಿದ್ದೆನೆ. ಮೇಲಾಗಿ ಇದು ಅಕ್ಷಯ ಪಾತ್ರಾ ಫೌಂಡೇಷನ್‌ಗೆ ಯಾವುದೇ ಸಂಬಂಧವಿಲ್ಲ. ಇದು ಇಂಡಿಯನ್ ಹೆರಿಟೇಜ್ ಫೌಂಡೇಷನ್‌ಗೆ ಸಂಬಂಧಿಸಿದ ಯೋಜನೆ”
ಅಭಯಕುಮಾರ್ ಜೈನ್, ಅಕ್ಷಯಪಾತ್ರಾ ಫೌಂಡೇಷನ್ ಟ್ರಸ್ಟಿ
ಅಕ್ಷಯಪಾತ್ರಾ ಫೌಂಡೇಷನ್‌ನಲ್ಲಿ ಆಡಳಿತಾತ್ಮಕ ಲೋಪಗಳು, ತಾಳೆಯಾಗದ ಲೆಕ್ಕಪತ್ರಗಳು ಮತ್ತು ಆಡಳಿತ ಮಂಡಳಿಯ ಟ್ರಸ್ಟಿಗಳಿಗೆ ಮತ್ತು ಲೆಕ್ಕಪರಿಶೋಧನಾ ಸಮಿತಿಗೆ ಉತ್ತರದಾಯಿಯಲ್ಲದ ಮತ್ತು ಕೇವಲ ಧಾರ್ಮಿಕ ಮುಖ್ಯಸ್ಥರಿಗೆ ಮಾತ್ರ ಸಂಪೂರ್ಣ ಅಧಿಕಾರ ನೀಡುವ ವ್ಯವಸ್ಥೆ ಎಂಬ ಸಂಗತಿ ಕುರಿತು ನಡೆದಿದ್ದ ಪರಿಶೋಧನೆ ಕುರಿತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಲಭ್ಯವಿದ್ದ ಮಾಹಿತಿ ಮತ್ತು ಪತ್ರಗಳ ಆಧಾರವನ್ನಿಟ್ಟುಕೊಂಡು ಹೊರಗೆಡವಿದ್ದರು.
ನಿರ್ದಿಷ್ಟ ಘಟಕಗಳ ನಿರ್ವಹಣೆ, ದೇಣಿಗೆ ಸಂಗ್ರಹ, ವಾಹನ ವೆಚ್ಚ, ಅನುದಾನ ಸಂಗ್ರಹದ ಖರ್ಚು ವೆಚ್ಚ, ಬಾಡಿಗೆ ಹಂಚಿಕೆ, ಅನುದಾನ ಸಂಗ್ರಹ ಸೇರಿದಂತೆ ಹಲವು ವಿಷಯದಲ್ಲಿ ಫೌಂಡೇಷನ್ ಮತ್ತು ದೇವಾಲಯ ಟ್ರಸ್ಟುಗಳ ನಡುವೆ ಸ್ಪಷ್ಟತೆ ಇಲ್ಲದ ವ್ಯವಹಾರಗಳು, ಯಾವುದೇ ಲಿಖಿತ ಒಪ್ಪಂದ ಪತ್ರಗಳಾಗಲೀ, ಸ್ಪಷ್ಟತೆಯೇ ಇರಲಿಲ್ಲ ಎಂಬುದನ್ನು ಟ್ರಸ್ಟಿಗಳ ನಡುವೆ ನಡೆದ ಪತ್ರವ್ಯವಹಾರಗಳ ಕುರಿತು ಸುಗತ ಶ್ರೀನಿವಾಸರಾಜು ಅವರು ದಿ ವೈರ್ ಜಾಲತಾಣದಲ್ಲಿ ವಿಸ್ತೃತವಾಗಿ ಬರೆದಿದ್ದ ಲೇಖನವನ್ನು ಸ್ಮರಿಸಬಹುದು.
ಅಕ್ಷಯಪಾತ್ರಾ ಫೌಂಡೇಷನ್‌ನ ಆಡಳಿತಾತ್ಮಕ ವಿಷಯಗಳಲ್ಲಿ ತಲೆದೋರಿರುವ ಗೊಂದಲಗಳು ಮತ್ತು ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳ ಕುರಿತು ಸ್ವತಂತ್ರ ತನಿಖೆ ಮತ್ತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವುದೇ ಸೂಕ್ತ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಲೆಹರ್‌ಸಿಂಗ್ ಈಗಾಗಲೇ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ಅವರು ಸಹ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ಶಾಲಾಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಅಕ್ಷಯಪಾತ್ರಾ ಫೌಂಡೇಷನ್ ಅನುಷ್ಠಾನಗೊಳಿಸುತ್ತಿದೆ. ಇಸ್ಕಾನ್ ಮತ್ತು ಇಂಡಿಯನ್ ಹೆರಿಟೇಜ್ ಫೌಂಡೇಷನ್ ಧಾರ್ಮಿಕ ಚಟುವಟಿಕೆ, ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಧಾರ್ಮಿಕ ಚಟುವಟಿಕೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ರಿಯಲ್ ಎಸ್ಟೇಟ್ ಈ ಮೂರು ವ್ಯವಹಾರಗಳನ್ನು ಒಟ್ಟೊಟ್ಟಿಗೆ ನಡೆಸುತ್ತಿರುವುದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.
ಫೌಂಡೇಷನ್‌ನ ಸ್ವತಂತ್ರ ಟ್ರಸ್ಟಿಗಳ ರಾಜೀನಾಮೆ ವಿಷಯ, ಫೌಂಡೇಷನ್‌ನಲ್ಲಿ ನಡೆದಿದೆ ಎನ್ನಲಾಗಿರುವ ಆಡಳಿತದಲ್ಲಿ ಲೋಪಗಳು ಮತ್ತು ಅವ್ಯವಹಾರಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವ ಫ್ಲಾಟ್‌ಗಳನ್ನು ಖರೀದಿಸಿರುವ ವಿಚಾರ, ಅಕ್ಷಯಪಾತ್ರಾ ಫೌಂಡೇಷನ್, ಇಸ್ಕಾನ್ ಮತ್ತು ಇಂಡಿಯನ್ ಹೆರಿಟೇಜ್ ಫೌಂಡೇಷನ್‌ನ ಕುರಿತಾದ ಚರ್ಚೆಗಳನ್ನು ಮತ್ತೊಂದು ಮಗ್ಗುಲಿಗೆ ಬದಲಿಸಿದಂತಾಗಿದೆ.