ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಕೆ ಎಸ್ ಈಶ್ವರಪ್ಪ, ಬೈರತಿ ಬಸವರಾಜು ಮತ್ತು ಎಸ್ ಸುರೇಶ್‌ಕುಮಾರ್ ಅವರು ಮುನ್ನೆಡೆಸುತ್ತಿರುವ ಇಲಾಖೆಗಳು, ಅಧಿಕಾರ, ಹಣಕಾಸು ದುರುಪಯೋಗ, ಕರ್ತವ್ಯಲೋಪ, ಆಡಳಿತದಲ್ಲಿನ ಲೋಪ ಸೇರಿದಂತೆ ಇನ್ನಿತರೆ ಲೋಪಗಳಲ್ಲಿ ಮುಂದಿವೆ.
ವಿಚಾರಣೆಗಳಿಗೆ ಗುರಿಯಾಗಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆ (ಬೈರತಿ ಬಸವರಾಜು) ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್(ಕೆ ಎಸ್ ಈಶ್ವರಪ್ಪ) ಮೂರನೇ ಸ್ಥಾನದಲ್ಲಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಬಿ ಎಸ್ ಯಡಿಯೂರಪ್ಪ) ಇದೆ.
ಹಾಗೆಯೇ ಅಧಿಕಾರ ಮತ್ತು ಹಣಕಾಸು ದುರುಪಯೋಗ, ಕರ್ತವ್ಯಲೋಪ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಸಚಿವಾಲಯದ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ನೌಕರರ ವಿರುದ್ಧದ ಇಲಾಖಾ ಪ್ರಕರಣಗಳ ಪೈಕಿ 41 ಪ್ರಕರಣಗಳು ಸಚಿವರ ಹಂತದಲ್ಲೇ ಬಾಕಿ ಇರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ದಾಖಲೆಗಳು ಲಭ್ಯವಾಗಿವೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿ ವಿವಿಧ ಸೇವೆಯಲ್ಲಿರುವ ಅಧಿಕಾರಿಗಳು ತಪ್ಪು ಮಾಡಿದಾಗ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸಂಬಂಧ ಕೆಪಿಎಸ್‌ಸಿಯ ಸಲಹೆ ಪಡೆಯುವ ನಿಯಮವನ್ನು ಕೈಬಿಟ್ಟಿರುವ ಸರ್ಕಾರವು ನೇರ ಕ್ರಮ ಕೈಗೊಳ್ಳಲು ತೀರ್ಮಾನ ಪ್ರಕಟಿಸಿರುವ ಬೆನ್ನಲ್ಲೇ ವಿವಿಧ ಹಂತಗಳ ಅಧಿಕಾರಿ,ನೌಕರರ ವಿರುದ್ಧದ ಇಲಾಖಾ ಪ್ರಕರಣಗಳ ವಿವರಗಳು ಮುನ್ನೆಲೆಗೆ ಬಂದಿವೆ.
ಕೃಷಿ, ವಸತಿ, ಸಹಕಾರ, ಆರ್ಥಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಿಬ್ಬಂದಿ ಆಡಳಿತ ಸುಧಾರಣೆ, ಸಾರಿಗೆ, ರೇಷ್ಮೆ, ಲೋಕೋಪಯೋಗಿ, ಅಲ್ಪಸಂಖ್ಯಾತರ ಅಭಿವೃದ್ಧಿ, ಪ್ರಾಥಮಿಕ,ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಸಣ್ಣ ನೀರಾವರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅರಣ್ಯ ಇಲಾಖೆ ಸೇರಿದಂತೆ ಒಟ್ಟು 35 ಇಲಾಖೆಗಳಲ್ಲಿ 1,174 ಇಲಾಖೆ ಪ್ರಕರಣಗಳು ಜಾರಿಯಲ್ಲಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
ಒಟ್ಟು ಪ್ರಕರಣಗಳ ಪೈಕಿ 1,000 ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿ,ನೌಕರರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಳಿಸಿರುವ ಆಯಾ ಇಲಾಖೆಗಳು, ಪ್ರಕರಣಗಳ ಸಂಬಂಧ 712 ವಿಚಾರಣಾಧಿಕಾರಿಗಳನ್ನು ನೇಮಿಸಿವೆ. ಈ ಪೈಕಿ 360 ವಿಚಾರಣಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಬಹುತೇಕ ವಿಚಾರಣಾಧಿಕಾರಿಗಳು ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಸಾಬೀತುಗೊಳಿಸಿಲ್ಲ ಎಂದು ತಿಳಿದು ಬಂದಿದೆ.
ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಆರೋಪ ಸಾಬೀತುಪಡಿಸಲಾಗಿದ್ದರೂ ಆಪಾದಿತ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಿಲ್ಲ. ಆಯಾ ಇಲಾಖೆ ಸಚಿವರ ಅನುಮೋದನೆ ದೊರೆಯದ ಕಾರಣ ಬಹುತೇಕ ಪ್ರಕರಣಗಳಲ್ಲಿ ಶಿಸ್ತು ಕ್ರಮ ಜರುಗಿಸಲಾಗಿಲ್ಲ ಎಂದು ಗೊತ್ತಾಗಿದೆ.
ಅದೇ ರೀತಿ 2ನೇ ಕಾರಣ ಕೇಳುವ ನೋಟೀಸ್‌ಗೆ ಆರೋಪಿತ ಅಧಿಕಾರಿ/ನೌಕರರಿಂದ ವಿವರಣೆ ಪಡೆದಿರುವ ಒಟ್ಟು 188 ಪ್ರಕರಣಗಳಲ್ಲಿ ಕೇವಲ 39 ಪ್ರಕರಣಗಳಲ್ಲಿ ಮಾತ್ರ ಅಂತಿಮ ಆದೇಶ ಹೊರಡಿಸಲಾಗಿದೆ. ಜೂನ್ 2020ರಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,209ಕ್ಕೆ ತಲುಪಿದ್ದು, ಒಟ್ಟಾರೆ 1,174 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
ಸಚಿವರ ಹಂತದಲ್ಲಿ ಬಾಕಿ ಇರುವ ಪ್ರಕರಣಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ 10, ಅಲ್ಪಸಂಖ್ಯಾತರ ಇಲಾಖೆಯಲ್ಲಿನ 14 ಇಲಾಖೆ ಪ್ರಕರಣಗಳು ಸಚಿವರ ಹಂತದಲ್ಲಿ ಬಾಕಿ ಇವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿರುವ 135 ಇಲಾಖೆ ಪ್ರಕರಣಗಳ ಪೈಕಿ 121 ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿ, ನೌಕರರಿಂದ ವಿವರಣೆ ಪಡೆಯಲಾಗಿದೆ. ಅಲ್ಲದೆ ಪ್ರಕರಣಗಳನ್ನು ವಿಚಾರಣೆ ನಡೆಸಿರುವ ವಿಚಾರಣಾಧಿಕಾರಿಗಳಿಂದ 50 ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ದಾಖಲೆಯಿಂದ ಗೊತ್ತಾಗಿದೆ.
ಇನ್ನು ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯಲ್ಲಿ ಒಟ್ಟು 116 ಇಲಾಖೆ ಪ್ರಕರಣಗಳ ಪೈಕಿ 91 ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿ, ನೌಕರರಿಂದ ವಿವರಣೆ ಪಡೆದಿದೆ. 70 ಪ್ರಕರಣಗಳಲ್ಲಿ ವಿಚಾರಣಾಧಿಕಾರಿಗಳನ್ನು ನೇಮಿಸಿದೆ. ಈ ಪೈಕಿ 29 ವಿಚಾರಣಾ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ.
ಅದೇ ರೀತಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ, ನೌಕರರ ವಿರುದ್ಧ ಒಟ್ಟು 154 ಪ್ರಕರಣಗಳ ಪೈಕಿ 49 ವಿಚಾರಣಾಧಿಕಾರಿಗಳನ್ನು ನೇಮಿಸಲಾಗಿದೆ. ವಿಚಾರಣೆ ಪೂರ್ಣಗೊಳಿಸಿರುವ ವಿಚಾರಣಾಧಿಕಾರಿಗಳು ಜುಲೈ 2020ರವರೆಗೆ 19 ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹಾಗೆಯೇ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 112 ಇಲಾಖೆ ಪ್ರಕರಣಗಳ ತನಿಖೆಗೆ ನೇಮಿಸಿರುವ 59 ವಿಚಾರಣಾಧಿಕಾರಿಗಳ ಪೈಕಿ 30 ವಿಚಾರಣಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.