ನೀಲಗಿರಿ ನಿಷೇಧ ಆದೇಶ ಹಿಂತೆಗೆತಕ್ಕೆ ನಿರ್ಣಯ; ನಿರ್ಬಂಧ ತೆಗೆದರೆ ಮಲೆನಾಡಿಗೆ ಆಘಾತ

ಬೆಂಗಳೂರು; ನೀಲಗಿರಿ ಬೆಳೆಯುವುದನ್ನು ನಿಷೇಧಿಸಿ ಹಿಂದಿನ ಕಾಂಗ್ರೆಸ್‌ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದುಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಅಂತರ್ಜಲ ಮಟ್ಟ ಹೆಚ್ಚಿರುವ ಮಲೆನಾಡಿನ ಪ್ರದೇಶಗಳಲ್ಲಿ ಈ ನಿರ್ಬಂಧನೆಯನ್ನು ತೆಗೆದು ಹಾಕುವ ಬಗ್ಗೆ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇಲಾಖೆ ಅಧಿಕಾರಿಗಳಿಗೆ 4 ತಿಂಗಳ ಹಿಂದೆಯೇ ಹೊರಡಿಸಿದ್ದ ಆದೇಶವನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮುಂದಾಗಿದ್ದಾರೆ.

ನೀಲಗಿರಿ ಬೆಳೆಯುವುದನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ರಿಟ್‌ ಅರ್ಜಿ ಸಂಬಂಧ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶ ಮುಂದುವರೆದಿದೆ. ಇದರ ಬೆನ್ನಲ್ಲೇ ಕಳೆದ 3 ವರ್ಷದ ಹಿಂದೆಯೇ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದುಕೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ಸಭೆ ಒಮ್ಮತದಿಂದ ವ್ಯಕ್ತಪಡಿಸಿರುವ ಅಭಿಪ್ರಾಯವು ಮುನ್ನೆಲೆಗೆ ಬಂದಿದೆ.

ಶಿವಮೊಗ್ಗ ಸೇರಿದಂತೆ ಮಲೆನಾಡಿನ ಇತರೆಡೆಯಲ್ಲಿ ನೀಲಗಿರಿ ಬೆಳೆಯುವುದನ್ನು ವಿರೋಧಿಸಿ ಚಳವಳಿ ತೀವ್ರಗೊಳ್ಳುತ್ತಿರುವ ನಡುವೆಯೂ ನೀಲಗಿರಿ ಬೆಳೆಯತ್ತ ಸರ್ಕಾರ ತಾಳಿರುವ ನಿಲುವು ಚಳವಳಿಗಾರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಿವೆ.

ನಿರ್ಬಂಧ ತೆಗೆದುಹಾಕಲು ಮುಖ್ಯಮಂತ್ರಿ ಆದೇಶ

ಎಂಪಿಎಂ ಘಟಕದ ಪುನರುಜ್ಜೀವನ ಮತ್ತು ಅನಾನುಕೂಲತೆ ಕುರಿತು 2020ರ ಜುಲೈ 14ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲೇ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದುಕೊಳ್ಳುವ ಸಂಬಂಧ ಚರ್ಚೆ ನಡೆದಿದೆ. ‘ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸುವ ಬಗ್ಗೆ ಇರುವ ಆದೇಶವನ್ನು ಹಿಂಪಡೆಯುವ ಬಗ್ಗೆ ಚರ್ಚಿಸಲಾಗಿದೆ. ಹೆಚ್ಚು ಮಳೆಯಾಗುವ ಮತ್ತು ಅಂತರ್ಜಲ ಮಟ್ಟ ಹೆಚ್ಚಿರುವ ಮಲೆನಾಡಿನ ಪ್ರದೇಶಗಳಿಗೆ ಈ ನಿರ್ಬಂಧನೆಯನ್ನು ತೆಗೆದುಹಾಕುವ ಬಗ್ಗೆ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗಳು ಆದೇಶ ನೀಡಿರುತ್ತಾರೆ,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ 2020ರ ಅಕ್ಟೋಬರ್‌ 9ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೈಗಾರಿಕೆ, ವಾಣಿಜ್ಯ ಇಲಾಖೆ, ಮೈಸೂರು ಕಾಗದ ಕಾರ್ಖಾನೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ಸಲ್ಲಿಸಿದ್ದ ಪ್ರಸ್ತಾವನೆಗಳನ್ನಾಧರಿಸಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲು 2020ರ ಸೆಪ್ಟಂಬರ್‌ 14ರಂದು ನಡೆದಿದ್ದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ ಎಂಬುದು ಪತ್ರದಿಂದ ತಿಳಿದು ಬಂದಿದೆ.

ನಿಷೇಧಿಸಲು ಬಲವಾದ ಕಾರಣಗಳಿಲ್ಲ

‘ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲು ಬಲವಾದ ಕಾರಣಗಳು ಇಲ್ಲದಿರುವ ಬಗ್ಗೆ ಹಾಗೂ ಕರ್ನಾಟಕವನ್ನು ಹೊರತುಪಡಿಸಿ ದೇಶದ ಇತರೆ ರಾಜ್ಯಗಳಲ್ಲಿ ಎಲ್ಲಿಯೂ ನೀಲಗಿರಿ ಬೆಳೆಸಲು ನಿಷೇಧವಿಲ್ಲ,’ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಇತರೆ ಅಧಿಕಾರಿಗಳು ಇದನ್ನೇ ಅನುಮೋದಿಸಿದ್ದಾರೆ.

ಅಂತರ್ಜಲಕ್ಕೂ ಹಾನಿಯಿಲ್ಲ

‘ನೀಲಗಿರಿ ಬೆಳೆಸುವುದರಿಂದ ಅಂತರ್ಜಲ ಮಟ್ಟಕ್ಕೆ ಯಾವುದೇ ಹಾನಿಯಾಗಿರುವ ಪ್ರಸಂಗಗಳು ಇಲ್ಲದಿರುವುದರಿಂದ ರಾಜ್ಯಾದ್ಯಂತ ನೀಲಗಿರಿ ಬೆಳೆಸಲು ಇರುವ ನಿಷೇಧ ತೆಗೆದುಹಾಕಲು ಒಮ್ಮತದಿಂದ ಅಭಿಪ್ರಾಯ ಕೈಗೊಳ್ಳಲಾಗಿದೆ,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಕೈಗಾರಿಕೆ ಇಲಾಖೆ ನಿಲುವೇನು?

ನೀಲಗಿರಿ ಮತ್ತು ಅಕೇಶಿಯಾ ಬೆಳೆಯುವುದಕ್ಕಾಗಿ ಮೈಸೂರು ಕಾಗದ ಕಾರ್ಖಾನೆಗೆ ಕ್ಷೀಣಿತ ಅರಣ್ಯ ಪ್ರದೇಶವನ್ನು ಗುತ್ತಿಗೆ ಆಧಾರದಲ್ಲಿ ಮಂಜೂರು ಮಾಡುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಸ್ತಾಪಿಸಿದೆ. ಅಲ್ಲದೆ ಇದೇ ಪ್ರಸ್ತಾವನೆಯಲ್ಲಿ ಪ್ರಸ್ತುತ ನೀಲಗಿರಿ ಬೆಳೆಯಲು ಇರುವ ನಿಷೇಧವನ್ನು ಹಿಂಪಡೆಯಬೇಕು ಎಂದು 2020ರ ಆಗಸ್ಟ್‌ 7ರಂದು ಪತ್ರ ಬರೆದಿತ್ತು.

ಅಲ್ಲದೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ಕೂಡ ನಿಗಮದ ಅರಣ್ಯ ಪ್ರದೇಶಗಳಲ್ಲಿ ನೀಲಗಿರಿ ಬೆಳೆಸಲು ಹೇರಿರುವ ನಿಷೇಧದಿಂದ ವಿನಾಯಿತಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ನೀಲಗಿರಿ ಬೆಳೆಸಲು ಪೂರಕ ಸಂಶೋಧನಾ ಅಭಿಪ್ರಾಯಗಳನ್ನೂ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಗೊತ್ತಾಗಿದೆ.

ಏಕ ಪ್ರಬೇಧದ ಮರಗಳು ಪರಿಸರಕ್ಕೆ ಮಾರಕವಾಗುವ ಹಿನ್ನೆಲೆಯಲ್ಲಿ ನೀಲಗಿರಿ ಹಾಗೂ ಅಕೇಶಿಯಾ ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡವಿತ್ತು. ಹೀಗಾಗಿ ಈ ಹಿಂದೆ ಅರಣ್ಯ ಸಚಿವರಾಗಿದ್ದ ವಿಜಯಶಂಕರ್‌ ಅವರು ಕೆಲ ಪ್ರದೇಶಗಳಲ್ಲಷ್ಟೇ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲು ಆದೇಶಿಸಿದ್ದರು. ಅದೇ ರೀತಿ ಕಾಂಗ್ರೆಸ್‌ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಬಿ ರಮಾನಾಥ್‌ ರೈ ಅವರು ರಾಜ್ಯಾದ್ಯಂತ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲು ಅಧಿಸೂಚನೆಯನ್ನು ಹೊರಡಿಸಿದ್ದರು.

ಪರಿಸರ ಮತ್ತು ಅಂತರ್ಜಲ ರಕ್ಷಣೆಯ ಉದ್ದೇಶದಿಂದ ನೀಲಗಿರಿಯನ್ನು ನಿಷೇಧಿಸಲಾಗಿತ್ತು. ಹತ್ತು ವರ್ಷಗಳಲ್ಲಿ ರಾಜ್ಯದ ಅಂತರ್ಜಲ ಮತ್ತು ಪರಿಸರ ಪರಿಸ್ಥಿತಿ ಇನ್ನಷ್ಟು ಅಧೋಗತಿಗೆ ತಲುಪಿದೆ. ಆ ಹಿನ್ನೆಲೆಯಲ್ಲಿ ಹಿಂದಿಗಿಂತ ಈಗ ಇಂತಹ ಪರಿಸರ ಹಾನಿಕರ ವಿದೇಶಿ ಸಸ್ಯಗಳ ನಿಷೇಧ ಅಗತ್ಯವಿದೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಕೇಶಿಯಾ ಮತ್ತು ನೀಲಿಗಿರಿಯಂತಹ ಮಾರಕ ಏಕ ಜಾತಿ ವನೀಕರಣದ ವಿರುದ್ಧ ಹೋರಾಟಗಳು ನಡೆಯುತ್ತಿರುವ ಹೊತ್ತಿನಲ್ಲಿ ಸರ್ಕಾರ ನಿಷೇಧವನ್ನು ವಾಪಸು ಪಡೆಯುವ ಪ್ರಯತ್ನ ನಡೆಸಿರುವುದು ಆಘಾತಕಾರಿ

ಶಶಿ ಸಂಪಳ್ಳಿ, ಪತ್ರಕರ್ತ-ಪರಿಸರವಾದಿ

ರಾಷ್ಟ್ರೀಯ ಹಸಿರು ಪೀಠ (ಎನ್ ಜಿಟಿ) ಸೇರಿದಂತೆ ವಿವಿಧ ಪರಿಸರ ಸಂಬಂಧಿತ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಅಧ್ಯಯನ ವರದಿಗಳು ನೀಡಿದ ನೀಲಗಿರಿಯ ಪರಿಸರ ಮಾರಕ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಆಧಾರಿಸಿ ಸರ್ಕಾರ ಈ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.

ಮುಖ್ಯವಾಗಿ ಅತಿ ಹೆಚ್ಚು ನೀರು ಹೀರುವ ಅದರ ಆಳ ಬೇರುಗಳ ಕಾರಣದಿಂದ ಆ ಬೆಳೆ ಇರುವ ಪ್ರದೇಶದಲ್ಲಿ ತೀವ್ರ ಅಂತರ್ಜಲ ಕುಸಿತವಾಗುತ್ತದೆ. ಜೊತೆಗೆ ಆ ಬೆಳೆ ಇರುವ ಪ್ರದೇಶದಲ್ಲಿ ಇತರೆ ಸಹಜ ಕಾಡಿನ ಗಿಡ-ಮರಗಳು ಬೆಳೆಯದಂತೆ ಅದು ಇಡೀ ಪ್ರದೇಶವನ್ನು ಆಕ್ರಮಣ ಮಾಡುತ್ತದೆ. ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ವಿಪರೀತ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿತ್ತು.

ಸಾಲು ಸಾಲು ಪರಿಸರ ಮಾರಕ ನಿರ್ಧಾರಗಳಿಗಾಗಿಯೇ ಹೆಸರಾಗಿರುವ ಈ ಆಡಳಿತ, ಕಾರ್ಪೊರೇಟ್ ಮತ್ತು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಇಂತಹ ನಿರ್ಧಾರಕ್ಕೆ ಬಂದಿರುವಂತಿದೆ. ಅದರಲ್ಲೂ ಅರಣ್ಯ ಖಾಸಗೀಕರಣದ ಮೂಲಕ ದೇಶದ ಅಪಾರ ಅರಣ್ಯ ಮತ್ತು ಪರಿಸರವನ್ನು ಖಾಸಗೀ ಜಹಗೀರು ಮಾಡುವ ಪ್ರಯತ್ನಗಳು ರಾಷ್ಟ್ರಮಟ್ಟದಲ್ಲೇ ನಡೆಯುತ್ತಿವೆ. ಅದರ ಭಾಗವಾಗಿ ಕರ್ನಾಟಕ ಸರ್ಕಾರ ಕೂಡ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ. ಆದರೆ, ಇದು ಆತ್ಮಹತ್ಯೆಯ ನಡೆ. ನಾಡಿನ ನೆಲ ಮತ್ತು ಜಲಕ್ಕೆ ಕಂಟಕಪ್ರಾಯ. ಭವಿಷ್ಯದ ಪೀಳಿಗೆಯ ಬದುಕಿಗೆ ಕೊಳ್ಳಿ ಇಡುವ ಕೃತ್ಯ ಎಂಬುದರಲ್ಲಿ ಅನುಮಾನವಿಲ್ಲ,’ ಎನ್ನುತ್ತಾರೆ ಪರಿಸರವಾದಿ ಶಶಿ ಸಂಪಳ್ಳಿ.

SUPPORT THE FILE

Latest News

Related Posts