ಬೆಂಗಳೂರು; ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಸದನಕ್ಕೆ ತಪ್ಪು ಉತ್ತರ ನೀಡುವ ಮೂಲಕ ದಾರಿ ತಪ್ಪಿಸಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದಾರೆ.
2 ವರ್ಷದಿಂದಲೂ ಸಾಮಾಜಿಕ ಕಾರ್ಯಕರ್ತರು ಆರ್‌ಎಸ್‌ಎಸ್ ವಿರುದ್ಧ ಸರ್ಕಾರಕ್ಕೆ ಹಲವು ದೂರುಗಳು ಸಲ್ಲಿಸಿದ್ದರೂ ಯಾವುದೇ ದೂರುಗಳು ಸಲ್ಲಿಕೆಯಾಗಿಲ್ಲ ಎಂದು ತಪ್ಪು ಉತ್ತರ ನೀಡಿರುವುದು ಇದೀಗ ಬಹಿರಂಗವಾಗಿದೆ. ತಪ್ಪು ಉತ್ತರ ನೀಡುವ ಮೂಲಕ ಸದನವನ್ನು ತಪ್ಪು ದಾರಿಗೆಳೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಶೇಷವೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಮೈತ್ರಿ ಸರ್ಕಾರದ ಅವಧಿಯಲ್ಲೇ ಆರ್‌ಎಸ್‌ಎಸ್ ವ್ಯವಹಾರಗಳ ಕುರಿತು ದೂರು ಸಲ್ಲಿಕೆಯಾಗಿತ್ತು.
2 ವರ್ಷದ ಹಿಂದೆಯೇ ದೂರು ಸಲ್ಲಿಕೆ
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿನ ವ್ಯವಹಾರಗಳ ಕುರಿತು ಸಾಮಾಜಿಕ ಕಾರ್ಯಕರ್ತ ಹನುಮೇಗೌಡ ಅವರು 2018ರಲ್ಲೇ ದೂರು ಸಲ್ಲಿಸಿದ್ದಾರೆ. ಅಲ್ಲದೆ ಸಂಘಟನೆ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದರು. ಈ ದೂರು ಆಧರಿಸಿ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಎನ್ ಎಂ ಬೇಗಂ ಅವರು ‘ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿ ಅರ್ಜಿದಾರರ ಮನವಿ ಕುರಿತು ಪರಿಶೀಲಿಸಿ ನಿಯಮಾನುಸಾರವಾಗಿ ಕ್ರಮವಿಡಬೇಕು,’ ಎಂದು 2018ರ ಆಗಸ್ಟ್ 25ರಂದು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಪತ್ರ ಮುಖೇನ ಸೂಚಿಸಿದ್ದರು.
ಡಿಜಿಪಿಗೂ ಸಲ್ಲಿಕೆಯಾಗಿತ್ತು ದೂರು
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇನ್ನಿತರೆ ಸಂಘಟನೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹನುಮೇಗೌಡ ಅವರು ಪೊಲೀಸ್ ಮಹಾನಿರ್ದೇಶಕರಿಗೆ 2018ರ ಜುಲೈ 19ರಂದು ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ಡಿಜಿಪಿ ಕಚೇರಿಯ ಎಐಜಿಪಿ ರಾಧಿಕಾ ಜಿ ಅವರು ನಿಯಮಾನುಸಾರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ 2018ರ ಅಕ್ಟೋಬರ್ 1ರಂದು ಪತ್ರ ಬರೆದಿದ್ದರು. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಸಹಕಾರ ಸಂಘಗಳ ಉಪ ನಿಬಂಧಕರು ಮತ್ತು ಡಿಜಿಪಿ ಕಚೇರಿಯ ಎಐಜಿಪಿ ಅವರ ಪತ್ರಗಳನ್ನಾಧರಿಸಿ ಈವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಇನ್ನು, ನೋಂದಣಿ, ವಾರ್ಷಿಕ ಲೆಕ್ಕಪತ್ರಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದು ಸೇರಿದಂತೆ ಅಧಿವೇಶನದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರಿಗೆ ತಿಂಗಳಾದರೂ ಉತ್ತರ ನೀಡಿರಲಿಲ್ಲ. ಅಲ್ಲದೆ ವಿಧಾನಪರಿಷತ್‌ನ ಅಧಿಕೃತ ಜಾಲತಾಣದಲ್ಲಿ ಈವರೆವಿಗೂ ಉತ್ತರದ ಪ್ರತಿಯನ್ನು ಅಪ್‌ಲೋಡ್ ಮಾಡಿಲ್ಲ. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸುತ್ತಿದ್ದಂತೆ ಸಹಕಾರ ಇಲಾಖೆ ಸಚಿವ ಎಸ್ ಟಿ ಸೋಮಶೇಖರ್ ಅವರು, ಉತ್ತರವನ್ನು ಒದಗಿಸಿದ್ದಾರೆ. ಇದು ‘ದಿ ಫೈಲ್’ ವರದಿ ಪರಿಣಾಮ.