ವಿಶ್ವನಾಥ್‌ ಹಿರೇಮಠ್‌ಗೆ ಕೆಎಎಸ್‌ ಹುದ್ದೆ; ಸರ್ಕಾರದ ವಿರುದ್ಧ ತಿರುಗಿ ಬಿದ್ದರೇ 49 ಅಧಿಕಾರಿಗಳು?

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ವಿಶ್ವನಾಥ್‌ ಪಿ ಹಿರೇಮಠ್‌ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್‌ -ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿದ್ದ ಪ್ರಕರಣವೀಗ ಹೈಕೋರ್ಟ್‌ ಮೆಟ್ಟಿಲೇರಿದೆ.

ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ 49 ಕೆಎಎಸ್‌ ಅಧಿಕಾರಿಗಳು ಹೈಕೋರ್ಟ್‌ ಮೆಟ್ಟಿಲೇರಿರುವುದು ಇದೀಗ ರಾಜ್ಯ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಂತಾಗಿದೆ.

ಸದ್ಯ ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ವಿಶ್ವನಾಥ್‌ ಹಿರೇಮಠ್‌ ಅವರಿಗೆ ಕೆಎಎಸ್‌ ಹುದ್ದೆ ನೀಡಿದ್ದಕ್ಕೆ ಕೆಎಎಸ್‌ ಅಧಿಕಾರಿಗಳ ವಲಯದಲ್ಲೇ ವ್ಯಕ್ತವಾಗಿರುವ ವಿರೋಧ ಮತ್ತು ಈ ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿರುವುದು ರಾಜ್ಯ ಸರ್ಕಾರವನ್ನು ಮಾತ್ರವಲ್ಲ ಕೆಎಎಸ್‌ ಹುದ್ದೆ ನೀಡಲು ಅನುಮೋದಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಮುಜುಗರಕ್ಕೀಡು ಮಾಡಿದಂತಾಗಿದೆ.

ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಅಧಿಕಾರಿಗಳ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರ ಆಪ್ತ ಕಾರ್ಯದರ್ಶಿ ಸತೀಶ್‌ಕುಮಾರ್‌, ಕಂದಾಯ ಸಚಿವ ಆರ್‌ ಅಶೋಕ್‌ ಅವರ ಆಪ್ತ ಕಾರ್ಯದರ್ಶಿ ಡಾ ಆರ್‌ ಪ್ರಶಾಂತ್‌, ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರ ಆಪ್ತ ಕಾರ್ಯದರ್ಶಿ ಪಿ ಎಸ್‌ ಕಾಂತರಾಜು, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ನಾಗರಾಜ್‌ ಸಿಂಗ್ರೇರ್‌ ಇರುವುದು ವಿಶೇಷ.

ಲಾಕ್‌ಡೌನ್‌ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ (1)ಯಾಗಿದ್ದ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್‌-ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಯನ್ನು ಅನುಗ್ರಹಿಸಿದ್ದ ಪ್ರಕರಣವು ಹೈಕೋರ್ಟ್‌ನಲ್ಲಿ ನವೆಂಬರ್‌ 4ರಂದು ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ರಿಟ್‌ ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರನ್ನು ಮೊದಲ ಪ್ರತಿವಾದಿಯನ್ನಾಗಿಸಿದ್ದರೆ, ಡಿಪಿಎಆರ್‌ನ ಪ್ರಧಾನ ಕಾರ್ಯದರ್ಶಿ ಹೇಮಲತಾ, ಕೆಪಿಎಸ್ಸಿ ಕಾರ್ಯದರ್ಶಿ ಮತ್ತು ವಿಶ್ವನಾಥ್‌ ಹಿರೇಮಠ್‌ ಅವರನ್ನೂ ಪ್ರತಿವಾದಿಯನ್ನಾಗಿಸಲಾಗಿದೆ. ರಿಟ್‌ ಅರ್ಜಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಿಟ್‌ ಅರ್ಜಿ ಸಲ್ಲಿಸಿರುವ ಕೆಎಎಸ್‌ ಅಧಿಕಾರಿಗಳ ಪಟ್ಟಿ

ಗದಗ್‌ ಜಿಲ್ಲಾ ಯೋಜನಾ ನಿರ್ದೇಶಕ ರುದ್ರೇಶ್‌ ಎಸ್‌ ಎನ್‌, ರಾಮನಗರ ಉಪ ವಿಭಾಗಾಧಿಕಾರಿ ಬಿ ಪಿ ವಿಜಯ್‌, ಬಿಬಿಎಂಪಿ ಉಪ ವಿಭಾಗಾಧಿಕಾರಿ ಜಿ ಲಿಂಗಮೂರ್ತಿ, ಭೂಮಿ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಬಸವರಾಜು ಎ ಬಿ, ಬಿಬಿಎಂಪಿಯ ಜಂಟಿ ಆಯುಕ್ತ ಡಾ ಅಶೋಕ ಡಿ ಆರ್‌, ಬಿಡಿಎ ಕಾರ್ಯದರ್ಶಿ ಡಾ ವಾಸಂತಿ ಅಮರ್‌, ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತ ಡಾ ನವೀನ್‌ಕುಮಾರ್‌ ರಾಜು, ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಜಗದೀಶ್‌ ಎಂ ಕೆ, ಬೆಂಗಳೂರು ದಕ್ಷಿಣ ವಿಶೇಷ ಜಿಲ್ಲಾಧಿಕಾರಿ ಬಸವರಾಜು, ಪೌರಾಡಳಿತ ನಿರ್ದೆಶನಾಲಯದ ಜಂಟಿ ನಿರ್ದೇಶಕಿ ಅನಿತಾ ಸಿ., ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ ಡಾ ಎಂ ಮಹೇಶ್‌, ತುಮಕೂರು ಹೆಚ್ಚುವರಿ ಜಿಲ್ಲಾಧಿಕಾರಿ ಕೆ ಚನ್ನಬಸಪ್ಪ,

ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ ಎಲ್‌ ಆನಂದ್‌, ಕೋಲಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ ಶಿವಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕ ಡಾ ನಾಗೇಂದ್ರ ಎಫ್‌ ಹೊನ್ನಾಳಿ, ಬೆಂಗಳೂರು ನಗರ ಜಿಲ್ಲೆಯ ಉಪ ನಿರ್ದೇಶಕ (ಆಹಾರ) ಜಿ ವಿ ನಾಗರಾಜ, ಮೈಸೂರು ಮೆಡಿಕಲ್‌ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ರೂಪಾ ಬಿ ಆರ್, ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ(ಮೈಸೂರು) ಎ ದೇವರಾಜು, ಕೆಎಐಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ(ಮೈಸೂರು) ಕೆ ಎಂ ಸುರೇಶ್‌ಕುಮಾರ್‌, ಕಲ್ಬುರ್ಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಕೆಎಎಸ್‌ ಅಧಿಕಾರಿ ರಂಗಸ್ವಾಮಿ, ಶಾಲಂ ಹುಸೈನ್‌ (ಪ್ರೊಬೇ‍ಷನರಿ), ಪಾರ್ವತಿ (ಪ್ರೊಬೇಷನರಿ) ಕಲ್ಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ ರಾಚಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ ಜಗದೀಶ್‌ ಕೆ ನಾಯಕ್‌, ಯಾದಗಿರಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್‌ ಸಿ ರಜಪೂತ್‌,

ಕಲ್ಬುರ್ಗಿ ವಿಶೇಷ ಜಿಲ್ಲಾಧಿಕಾರಿ ಡಾ ಶಂಕರೆಪ್ಪ, ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಎಲಿಷಾ ಆಂಡ್ರೂಸ್‌, ಕಾರವಾರ ವೈದ್ಯಕೀಯ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಮಹೆಶ್‌ಬಾಬು ಎನ್‌, ಬಿಬಿಎಂಪಿ ಉಪ ವಿಭಾಗಾಧಿಕಾರಿ ಡಾ ಬಿ ಆರ್ ಹರೀಶ್‌, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ ಭಾಸ್ಕರ್‌ ಎನ್‌, ಬಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ಸೈಯದಾ ಆಫ್ರೀನ್‌ ಬಾನು, ರಾಷ್ಟ್ರೀಯ ಹೆದ್ದಾರಿ (ಹೆಬ್ಬಾಳ) ವಿಶೇಷ ಭೂ ಸ್ವಾಧೀನಾಧಿಕಾರಿ ಶ್ರೀನಿವಾಸಗೌಡ ವಿ, ಬಿಡಿಎನ ವಿಶೇಷ ಭೂ ಸ್ವಾಧೀನಾಧಿಕಾರಿ ಡಾ ಬಸಂತಿ ಬಿ ಎಸ್‌.

ತುಮಕೂರು ಉಪ ವಿಭಾಗದ ಉಪ ವಿಭಾಗಾಧಿಕಾರಿ ಅಜಯ್‌ ವಿ., ಕಂದಾಯ ಇಲಾಖೆಯಲ್ಲಿ ಸೃಜನೆಯಾಗಿರುವ ಐಎಂಎ ರಿಕವರಿ ಆಫೀಸರ್‌ ಎಸ್‌ ಎಂ ಶಿವಕುಮಾರ್‌, ಕೋಲಾರ ತಾಲೂಕಿನ ತಹಶೀಲ್ದಾರ್‌ ಆರ್‌ ಶೋಭಿತಾ, ಧಾರವಾಡ ಉಪ ವಿಭಾಗದ ಉಪ ವಿಭಾಗಾಧಿಕಾರಿ ಮೊಹಮದ್‌ ಜುಬೈರ್‌, ಕೆಎಚ್‌ಬಿಯ ಕಾರ್ಯದರ್ಶಿ ಡಾ ಸೌಜನ್ಯ ಎ., ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಅನಿತಾ ಲಕ್ಷ್ಮಿ, ಹೆಚ್ಚುವರಿ ಅಬಕಾರಿ ಆಯುಕ್ತರಾದ ಶೋಭಾ ಬಿ., ಪ್ರೊಬೇಷನರಿ ಉಪ ವಿಭಾಗಾಧಿಕಾರಿ(ಕಲ್ಬುರ್ಗಿ) ರಾಮಚಂದ್ರ ಗಾಗಡೆ, ಉಪ ವಿಭಾಗಾಧಿಕಾರಿ ಜಗದೀಶ್‌ ಆಡ್ಲಹಳ್ಳಿ.

ಪ್ರಕರಣದ ಹಿನ್ನೆಲೆ

1998, 99 ಮತ್ತು 2004ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ್ದ ಯಾವ ತೀರ್ಪನ್ನು ಪಾಲಿಸದೇ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರವು, ಲಾಕ್‌ಡೌನ್‌ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ (1)ಯಾಗಿರುವ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ 2020ರ ಜುಲೈ 13ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್‌-ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿತ್ತು.

ವಿಶ್ವನಾಥ ಪಿ ಹಿರೇಮಠ ಅವರು ಸೇರಿದಂತೆ ಒಟ್ಟು 5 ಅಭ್ಯರ್ಥಿಗಳನ್ನು 2009ರ ಮಾರ್ಚ್‌ 19ರಂದು ಶಾಖಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು. ನಂತರದಲ್ಲಿ ಇವರು ಕೆಎಟಿಯಲ್ಲಿ ಸಲ್ಲಿಸಿದ್ದ ಅರ್ಜಿ( ಸಂಖ್ಯೆ 2121/2010)ಗೆ ಸಂಬಂಧಿಸಿದಂತೆ 2017ರ ಡಿಸೆಂಬರ್‌ 15ರಂದು ತೀರ್ಪು ನೀಡಿತ್ತು. ವಿಶೇಷವೆಂದರೆ ಕೆಎಟಿಯಲ್ಲಿ ಈ ಅರ್ಜಿ 10 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಆಕ್ಷೇಪಣೆಯನ್ನೇ ಸಲ್ಲಿಸದೇ ಇರುವುದು ಹಲವು ಅನುಮಾನಗಳಿಗೂ ದಾರಿ ಮಾಡಿಕೊಟ್ಟಿತ್ತು.

ಅಲ್ಲದೆ ಪ್ರಕರಣವು ಕೆಎಟಿಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಎಟಿಯ ಆಡಳಿತಾತ್ಮಕ ಸದಸ್ಯರೊಬ್ಬರು ಆಕ್ಷೇಪಣೆ ಎತ್ತಿದ್ದರು. ಹಾಗೆಯೇ ಅವರು ರಜೆ ಮೇಲೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಅಂದಿನ ನ್ಯಾಯಾಂಗ ಸದಸ್ಯರೋರ್ವರು ಸರ್ಕಾರ ಆಕ್ಷೇಪಣೆ ಸಲ್ಲಿಸದೇ ಇದ್ದರೂ ಈ ಪ್ರಕರಣದಲ್ಲಿ ವಿಶ್ವನಾಥ ಪಿ ಹಿರೇಮಠ ಅವರಿಗೆ ಗ್ರೂಪ್‌ ಎ ಹುದ್ದೆಯನ್ನು ನೀಡಲು ತೀರ್ಪು ನೀಡಿದ್ದರು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಒಬ್ಬ ಪ್ರತಿವಾದಿಯಾಗಿದ್ದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೇಲ್ಮನವಿ ಸಲ್ಲಿಸಿರಲಿಲ್ಲ.

2017ರಲ್ಲಿ ಕೆಎಟಿ ನೀಡಿದ್ದ ತೀರ್ಪು 3 ವರ್ಷಗಳಾದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಅಲ್ಲದೆ ಸರ್ಕಾರವೂ ಮೇಲ್ಮನವಿಯನ್ನೂ ಸಲ್ಲಿಸಿರಲಿಲ್ಲ. ಈ ಮಧ್ಯೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಶ್ವನಾಥ ಹಿರೇಮಠ ಅವರು 2019ರಲ್ಲಿ ಸರ್ಕಾರದ ವಿರುದ್ಧ ಕರ್ನಾಟಕ ನ್ಯಾಯ ಮಂಡಳಿಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ(104/2019) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಾಕಿ ಇದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ ಇವರಿಗೆ ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿರುವುದು ಸಂಶಯಗಳಿಗೆ ಕಾರಣವಾಗಿತ್ತು.

ಅಲ್ಲದೆ ಇದೇ ಪ್ರಕರಣದಲ್ಲಿ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ರಾಜ್ಯ ಸರ್ಕಾರವೇ ಹೊರಡಿಸಿರುವ ರೋಸ್ಟರ್‌ ಬಿಂದುವಿನ ಆದೇಶ ಮತ್ತು ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ನೀಡಿರುವ ಆದೇಶಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದರು.
ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿರುವ ರಾಜ್ಯ ಸರ್ಕಾರ, ಕೆಪಿಎಸ್‌ಸಿಯ ನೇಮಕಾತಿ ಅಧಿಸೂಚನೆ 2004ರ ನವೆಂಬರ್‌ 4ರ ಪ್ರಕಾರ ಕೆಎಎಸ್‌(ಕಿರಿಯ ಶ್ರೇಣಿ) ಹುದ್ದೆಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಅನ್ವಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಅನ್ವಯಿಸಿ ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿತ್ತು.

1998, 99 ಹಾಗೂ 2004ನೇ ಸಾಲಿನಲ್ಲಿ ಒಟ್ಟು 60 ಕೆಎಎಸ್‌ ಸಹಾಯಕ ಆಯುಕ್ತರ ಹುದ್ದೆಗಳು ಲಭ್ಯವಿದ್ದವು. ಇದರಲ್ಲಿ ಸಂಖ್ಯಾತಿರಿಕ್ತ ಹುದ್ದೆಯನ್ನು ಸೃಜಿಸಲಾಗಿತ್ತು. ಆದರೆ ವಿಶ್ವನಾಥ ಪಿ ಹಿರೇಮಠ ಅವರು ಈ ಹುದ್ದೆಯನ್ನು ಪಡೆಯಲು ರೋಸ್ಟರ್‌ ಬಿಂದುವಾಗಲಿ, ಅರ್ಹತೆಯನ್ನಾಗಲಿ ಹೊಂದಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

SUPPORT THE FILE

Latest News

Related Posts