ವೃತ್ತಿ ನೋಂದಣಿಗೂ ಲಂಚ; ಆಯುರ್ವೇದ ಯುನಾನಿ ಮಂಡಳಿಯಲ್ಲಿ ಭ್ರಷ್ಟಾಚಾರ ರಾಜಾರೋಷ

ಬೆಂಗಳೂರು; ವೃತ್ತಿ ನೋಂದಣಿಗಾಗಿ ಬರುವ ವಿದ್ಯಾರ್ಥಿ ಮತ್ತು ಯುವ ವೈದ್ಯರುಗಳಿಂದ ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಪ್ರಕರಣ ಪತ್ತೆಯಾಗಿದೆ. ಕಳೆದ ಹಲವು ವರ್ಷಗಳಿಂದಲೂ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಮಂಡಳಿಯ ಅಧಿಕಾರಿ, ಸಿಬ್ಬಂದಿ ಹಣ ನೀಡದ ವಿದ್ಯಾರ್ಥಿಗಳಿಗೆ ವೃತ್ತಿ ನೋಂದಣಿ ಮಾಡದೇ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಆಯುರ್ವೇದ, ಯುನಾನಿ ವೈದ್ಯ ಮಂಡಳಿಗೆ ಅಪಖ್ಯಾತಿ ತಂದಿರುವುದು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯಕೀಯ ಮಂಡೆಳಿ (ಕೆಎಯುಪಿ)ಯ ಸದಸ್ಯರೂ ಆಗಿರುವ ಡಾ ಅನೂಜ ಕಿತ್ತೂರ್‌ಕರ್‌ ಸೇರಿದಂತೆ ಹಲವು ವಿದ್ಯಾರ್ಥಿಗಳು ಈ ಪ್ರಕರಣವನ್ನು ಹೊರಗೆಡವಿದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡಳಿಯ ನೋಂದಣಾಧಿಕಾರಿ ಡಾ ವೆಂಕಟರಾಮಯ್ಯ ಎಂಬುವರನ್ನು 2020ರ ಸೆ. 5ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿ ಕೈತೊಳೆದುಕೊಂಡಿದೆ. ಆದರೆ ಮಂಡಳಿಯಲ್ಲಿ ಅಧಿಕಾರಿ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇರಿಸುತ್ತಿದ್ದದ್ದನ್ನು ತನಿಖೆಗೆ ವಹಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಈ ಆದೇಶ ಹೊರಬಿದ್ದ ಒಂದು ತಿಂಗಳ ಅಂತರದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ ಈ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2020ರ ಅಕ್ಟೋಬರ್‌ 16ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಾಗೆಯೇ 2011ರಿಂದ 2016ರವರೆಗೆ ದಾಖಲೆಗಳ ಡಿಜಟಲೀಕರಣ ಪ್ರಕ್ರಿಯೆಯನ್ನೇ ಸಂಪೂರ್ಣ ಹಾಳು ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಿರುವ ಸಭಾಧ್ಯಕ್ಷ ಕಾಗೇರಿ ಅವರು ತಕ್ಷಣವೇ 10 ಮಂದಿ ಸದಸ್ಯರ ಸಮಿತಿಯನ್ನು ರಚಿಸುವ ಮೂಲಕ ಮಂಡಳಿಯಲ್ಲಿ ಕೆಟ್ಟು ಹೋಗಿರುವ ಆಡಳಿತವನ್ನು ಸರಿಪಡಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಆಡಳಿತಾಧಿಕಾರಿಯನ್ನಾಗಿ ಕೆಎಎಸ್‌ ಅಧಿಕಾರಿಯನ್ನೇ ಮುಂದುವರೆಸಬೇಕುಮತ್ತು ಇಲ್ಲಿನ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಹಣಕಾಸು ಆಡಳಿತದಲ್ಲಿನ ನಿಯಮಬಾಹಿರ ಚಟುವಟಿಕೆಗಳನ್ನು ತನಿಖೆಗೊಳಪಡಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಹಣಕ್ಕಾಗಿ ಬೇಡಿಕೆ

ಪದವಿ ಪಡೆದಿರುವ ವಿದ್ಯಾರ್ಥಿಗಳು ವೃತ್ತಿ ನೋಂದಣಿಗಾಗಿ ಮಂಡಳಿ ಅಧಿಕಾರಿ, ಸಿಬ್ಬಂದಿ ತಲಾ ವಿದ್ಯಾರ್ಥಿಯಿಂದ 1,000 ರು ಗಳಿಂದ 6,000 ರು.ವರೆಗೆ ಬೇಡಿಕೆ ಇರಿಸುತ್ತಿದ್ದಾರೆ. ವಿದ್ಯಾರ್ಥಿಯ ಸ್ಥಳ, ಕಾಲೇಜು, ಭಾಷೆ ಆಧರಿಸಿ ಹಣವನ್ನು ನಿರ್ಧರಿಸುತ್ತಿದ್ದರು ಎಂದು ಡಾ ಅನುಜ ಕಿತ್ತೂರಕರ್‌ ಕೇಂದ್ರ ಸರ್ಕಾರದ ಆಯುಷ್‌ ಇಲಾಖೆಯ ಕಾರ್ಯದರ್ಶಿಗೆ 2019ರ ಆಗಸ್ಟ್‌ 29ರಂದು ಈ ಮೇಲ್‌ ಕಳಿಸಿದ್ದರು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

‘ಹಣ ನೀಡದಿದ್ದರೇ ಯಾವ ಕೆಲಸವೂ ಇಲ್ಲಿ ಆಗುವುದಿಲ್ಲ. ಯುವ ವೈದ್ಯರ ವೃತ್ತಿ ನೋಂದಣಿ ಮಾತ್ರವಲ್ಲದೆ ವೃತ್ತಿ ನೋಂದಣಿ ನವೀಕರಣಕ್ಕೆ ತೆರಳುವ ವೈದ್ಯರಿಂದ ಹಣಕ್ಕಾಗಿ ಬೇಡಿಕೆ ಇರಿಸುತ್ತಿದ್ದಾರೆ. ಹಣ ನೀಡಲು ಒಪ್ಪಿದರೂ ಪಡೆದ ಹಣಕ್ಕಾಗಿ ಯಾವುದೇ ರಸೀತಿ ನೀಡುವುದಿಲ್ಲ. ಮಂಡಳಿಗೆ ಬರುವ ಎಲ್ಲಾ ಯುವ ವೈದ್ಯರಿಗೂ ಇಂತಹ ಅನುಭವವಾಗಿದೆ,’ ಎಂದು ಡಾ ಅನುಜ ಕಿತ್ತೂರಕರ್‌ ಅವರು ಈ ಮೇಲ್‌ನಲ್ಲಿ ವಿವರಿಸಿದ್ದಾರೆ.

ಅದೇ ರೀತಿ ಶ್ರೀಕಾಂತ್‌ ಸೌದ್ರಿ, ವಿದ್ಯಾಸಾಗ, ಆಸ್ವಾರಿ ದಳವಾಯಿ, ಕಿಶೋರ್‌ಕುಮಾರ್‌ ದೇವೇಂದ್ರಂ, ಸುಧಾಕರ್‌ ಎಂ, ವಿಪುಲ್‌ ಪಟೇಲ್‌, ಮಹಾಂತೇಶ್‌ ವಾಲಿಶೆಟ್ಟರ್‌, ಆಸೀಫ್‌ ಮಹಮ್ಮದ್‌, ಅನುಷಾ ರವಿಶಂಕರ್‌ ಸೇರಿದಂತೆ ಹಲವು ಯುವ ವೈದ್ಯರು ಮತ್ತು ವಿದ್ಯಾರ್ಥಿಗಳು ಮಂಡಳಿಯ ಅಧಿಕಾರಿ, ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇರಿಸುತ್ತಿದ್ದಾರೆ ಎಂದು ದೂರಿರುವುದನ್ನು ಇಲಾಖೆಯ ಉಪ ಕಾರ್ಯದರ್ಶಿ ಬಿ ಎಸ್‌ ನಾಗರಾಜ್‌ ಅವರು ಅಮಾನತು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

‘ಕೆಎಯುಪಿ ಮಂಡಳಿಯ ಮೇಲೆ ಗುರುತರವಾದ ಆಪಾದನೆಗಳು ಬಂದಿರುವುದರಿಂದ ಮಂಡಳಿಗೆ ಅಪಖ್ಯಾತಿ ಬರುವುದಲ್ಲದೆ ಅದರ ಪರಿಣಾಮ ರಾಜ್ಯದ ಮೇಲೆ ಮೇಲೆ ಬೀರುತ್ತದೆ. ತಾವು ಕೆಎಯುಪಿ ಮಂಡಳಿಯ ಆಡಳಿತ ಮುಖ್ಯಸ್ಥರಾಗಿದ್ದು, ಸಂಸ್ಥೆಯ ವೆಬ್‌ ತಾಣದಲ್ಲಿ ವಿದ್ಯಾರ್ಥಿಗಳು ಅತ್ಯಂತ ಕೆಟ್ಟದಾಗಿ ತಮ್ಮ ಅಭಿಪ್ರಾಯ ದಾಖಲಿಸಿದ್ದು ಹಾಗೂ ತಮ್ಮ ಬಗ್ಗೆಯೂ ಕೆಟ್ಟದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಬಗ್ಗೆ ಯಾವುದೇ ಕ್ರಮ ವಹಿಸದಿರುವುದು ತಮ್ಮಕರ್ತವ್ಯಲೋಪಕ್ಕೆ ಕೈಗನ್ನಡಿಯಾಗಿದೆ.

ಮಂಡಳಿಯಲ್ಲಿ ಇಷ್ಟು ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಸಂಸ್ಥೆಯ ವೆಬ್‌ ತಾಣದಲ್ಲಿ ವಿದ್ಯಾರ್ಥಿಗಳು ಅಭಿಪ್ರಾಯ ದಾಖಲಿಸಿದ್ದರೂ ಆಡಳಿತ ವಿಭಾಗದ ಮುಖ್ಯಸ್ಥರಾದ ತಾವು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸದೇ ಸಂಪೂರ್ಣವಾಗಿ ವಿಫಲರಾಗಿರುತ್ತೀರಿ,’ ಎಂದು ಆದೇಶದಲ್ಲಿ ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts