ವಿಜಯೇಂದ್ರ ವಿರುದ್ಧ ದಾಖಲಾಗದ ಎಫ್‌ಐಆರ್‌; ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲಂಘನೆ?

ಬೆಂಗಳೂರು; ಬಹುಮಹಡಿ ಸಮುಚ್ಛಯ ನಿರ್ಮಾಣ ಕಂಪನಿಯಿಂದ 7.40 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ, ಶಶಿಧರ್‌ ಮರಡಿ ಸೇರಿದಂತೆ ಇತರ ಸಹಚರರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌ ದೂರು ಸಲ್ಲಿಸಿ 24 ಗಂಟೆಗಳಾದರೂ ಎಫ್‌ಐಆರ್‌ ದಾಖಲಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ.

ಸುಲಿಗೆ ಮತ್ತು ಕ್ರಿಮಿನಲ್‌ ಸಂಚು ಆರೋಪದಡಿಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌, ಇದೀಗ ಶೇಷಾದ್ರಿಪುರಂ ಠಾಣಾಧಿಕಾರಿಗೆ 2020ರ ಸೆಪ್ಟಂಬರ್‌ 25ರಂದು ಲಿಖಿತ ದೂರು ಸಲ್ಲಿಸಿತ್ತು. ಠಾಣೆಗೆ ದೂರು ಸಲ್ಲಿಕೆಯಾದ 24 ಗಂಟೆಯೊಳಗೆ ಆರೋಪಿತರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಲಲಿತಾಕುಮಾರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಆದರೆ ವಿಜಯೇಂದ್ರ ಪ್ರಕರಣದಲ್ಲಿ ಶೇಷಾದ್ರಿಪುರಂ ಪೊಲೀಸ್‌ ಠಾಣಾಧಿಕಾರಿಗಳು ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

‘ದಿ ಫೈಲ್‌’ ಜತೆ ಮಾತನಾಡಿದ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಅವರು ‘ದೂರು ಸಲ್ಲಿಸಿ 24 ಗಂಟೆಯೊಳಗೆ ಕಾನೂನು ಪ್ರಕಾರ ಆರೋಪಿತರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಆದರೆ ವಿಜಯೇಂದ್ರ ಮತ್ತು ಶಶಿಧರ್‌ ಮರಡಿ ಅವರ ಪ್ರಕರಣದಲ್ಲಿ 24 ಗಂಟೆಗಳಾದರೂ ಎಫ್‌ಐಆರ್‌ ದಾಖಲಾಗಿಲ್ಲ. ಪ್ರಭಾವಿಗಳಲ್ಲದ ಆರೋಪಿತರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಎಫ್‌ಐಆರ್‌ ದಾಖಲಿಸುವ ಪೊಲೀಸ್‌ ಅಧಿಕಾರಿಗಳು ಇಂತಹ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸದೇ ವಿಳಂಬ ಮಾಡುವುದು ಕರ್ತವ್ಯಲೋಪವಾಗುತ್ತದೆ. ಮತ್ತು ಲಲಿತಾಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಉಲ್ಲಂಘಿಸಿದ್ದಾರೆ,’ ಎಂದು ಆರೋಪಿಸಿದ್ದಾರೆ.

ಸುಪ್ರೀಂ ನೀಡಿರುವ ತೀರ್ಪೇನು?

ಸಂಜ್ಞೆಯ ಅಪರಾಧದವು ದೂರಿನಲ್ಲಿ ಕಂಡು ಬಂದಲ್ಲಿ ಕೂಡಲೇ ಎಫ್‌ಐಆರ್‌ ಮಾಡಲು ನಿರ್ದೇಶಿಸಲಾಗಿದೆ. ಆದರೆ ಈ ತರಹದ ಸಂಜ್ಞೆಯ ಅಪರಾಧವುಳ್ಳ ದೂರನ್ನು ಎಫ್‌ಐಆರ್‌ ಮಾಡದಿರುವುದು ಕಾನೂನು ನಿರ್ದೇಶನವಾದ ಸುಪ್ರೀಂ ಕೋರ್ಟ್‌ ತೀರ್ಪನ್ನು ನೇರವಾಗಿ ಉಲ್ಲಂಘಿಸುವುದು ಸಹ ಅಪರಾಧ ಎನ್ನುತ್ತಾರೆ ಆದರ್ಶ ಐಯ್ಯರ್‌.

ಪ್ರಕರಣದ ಹಿನ್ನಲೆ

ವಸತಿ ಸಮುಚ್ಛಯ ನಿರ್ಮಾಣದ ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಕಂಪನಿಯಿಂದ ನಗದು ಮತ್ತು ಆರ್‌ಟಿಜಿಎಸ್‌ ಮೂಲಕ ಸುಮಾರು 20 ಕೋಟಿ ರು.ಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ದೂರಿನಲ್ಲಿ ವಿವರಿಸಿದೆ. ಬಿ ವೈ ವಿಜಯೇಂದ್ರ ಮತ್ತು ಶಶಿಧರ್‌ ಮರಡಿ ಎಂಬುವರ ಮೇಲೆ ಐಪಿಸಿ 384, ಸೆಕ್ಷನ್‌ 34 ಮತ್ತು 120(ಬಿ) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಆಗ್ರಹಿಸಿದೆ. ಖಾಸಗಿ ಮಾಧ್ಯಮವೊಂದು ಇತ್ತೀಚೆಗೆ ಮಾಡಿದ್ದ ವರದಿ ಆಧರಿಸಿ ಈ ದೂರನ್ನು ಸಲ್ಲಿಸಿತ್ತು.

ಶಶಿಧರ್‌ ಮರಡಿ ಅವರು ಹೊಂದಿರುವ ಬ್ಯಾಂಕ್‌ ಖಾತೆಗೆ 7.4 ಕೋಟಿ ರು.ಗಳನ್ನು ನಿರ್ಮಾಣ ಕಂಪನಿ ಆರ್‌ಟಿಜಿಎಸ್‌ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್‌ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್‌ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್‌ 100 ರು. ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.

ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ನಿರ್ಮಾಣ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಸಹ ಆ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಪರಿಷತ್‌ ವಿವರಿಸಿತ್ತು.

ವಾಟ್ಸಾಪ್‌ ಚಾಟ್‌ಗಳಲ್ಲಿ ಶಶಿಧರ್‌ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‌ಟಿಜಿಎಸ್‌ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.

the fil favicon

SUPPORT THE FILE

Latest News

Related Posts