ವಿಜಯೇಂದ್ರ ಪ್ರಕರಣದಲ್ಲಿ ರಾಕೇಶ್‌ ಶೆಟ್ಟಿ ವಿರುದ್ಧ ಎಫ್‌ಐಆರ್‌; ಅಮಿತ್‌ ಶಾ ಹೆಸರು ಪ್ರಸ್ತಾಪ

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ವಿರುದ್ಧ ಕೇಳಿ ಬಂದಿರುವ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ನಿರ್ಮಾಣ ಕಂಪನಿ ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ನ ನಿರ್ದೇಶಕ ಚಂದ್ರಕಾಂತ ರಾಮಲಿಂಗಂ ಎಂಬುವರು ಪವರ್‌ ಟಿ ವಿ ಸುದ್ದಿ ವಾಹಿನಿಯ ಮುಖ್ಯಸ್ಥ ರಾಕೇಶ್‌ ಶೆಟ್ಟಿ ವಿರುದ್ಧ ಹಣ ಸುಲಿಗೆ, ನಕಲಿ ದಾಖಲೆ ಸೃಷ್ಟಿ, ಫೋರ್ಜರಿ, ಒಳ ಸಂಚು, ಬೆದರಿಕೆ ಆರೋಪ ಹೊರಿಸಿ ಸಲ್ಲಿಸಿದ್ದ ದೂರು ಆಧರಿಸಿ ಎಫ್‌ಐಆರ್‌ ದಾಖಲಾಗಿದೆ.

ಅಲ್ಲದೆ ಇದೇ ದೂರಿನಲ್ಲಿ ಉಲ್ಲೇಖಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೆಸರೂ ಎಫ್‌ಐಆರ್‌ನಲ್ಲಿ ಪ್ರಸ್ತಾಪಿತವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕಂಪನಿ ನಿರ್ದೇಶಕ ಚಂದ್ರಕಾಂತ್‌ ಎಂಬುವರು ಸೆ. 24ರಂದು ದೂರು ಸಲ್ಲಿಸಿದ ದಿನದಂದೇ ಎಫ್‌ಐಆರ್‌ ಕೂಡ ದಾಖಲಾಗಿರುವುದು ವಿಶೇಷ.

ಬಿಡಿಎ ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಅವರ ವಿರುದ್ಧ ಕೇಳಿ ಬಂದಿರುವ ಗುರುತರವಾದ ಆರೋಪ ಕುರಿತು ವಾಕ್ಸಮರ ನಡೆಯುತ್ತಿರುವ ಮಧ್ಯೆಯೇ ರಾಕೇಶ್‌ ಶೆಟ್ಟಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದು ಪ್ರಕರಣವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿದಂತಾಗಿದೆ. ಈ ದೂರಿನ ಪ್ರತಿ ಮತ್ತು ಎಫ್‌ಐಆರ್‌ ನ ಪ್ರತಿ ‘ದಿ ಫೈಲ್‌ಗೆ ಲಭ್ಯವಾಗಿದೆ.

ವಿಜಯೇಂದ್ರ ವಿರುದ್ಧ ಡಿಜಿಐಜಿಗೆ ಜನಾಧಿಕಾರ ಸಂಘರ್ಷ ಪರಿಷತ್‌ ದೂರು ಸಲ್ಲಿಸಿದ ಬೆನ್ನಲ್ಲೇ ಮುನ್ನೆಲೆಗೆ ಬಂದಿರುವ ಚಂದ್ರಕಾಂತ್‌ ಅವರು ಸಲ್ಲಿಸಿರುವ ದೂರು, ಈ ಪ್ರಕರಣವನ್ನು ಇನ್ನಷ್ಟು ವಿಸ್ತರಿಸಿದೆ.

ಅಮಿತ್‌ ಶಾ ಹೆಸರು ಪ್ರಸ್ತಾಪ

ಯಲಹಂಕ ಮತ್ತು ಆಂಧ್ರ ಗಡಿ ಭಾಗದಲ್ಲಿ ಕಂಪನಿ ಅಭಿವೃದ್ಧಿಪಡಿಸಿದ್ದ ಟೋಲ್‌ ರಸ್ತೆಯ ಪಕ್ಕ ಜಾಹೀರಾತು ಫಲಕ ಅಳವಡಿಸುವ ಸಂಬಂಧ 2020ರ ಜೂನ್‌ನಲ್ಲಿ ರಾಕೇಶ್‌ ಶೆಟ್ಟಿ ಅವರು ಕರೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿರುವ ಚಂದ್ರಕಾಂತ್‌, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ನಿಮಗೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಯಾವುದಾದರೂ ಕೆಲಸ ಮಾಡಿಕೊಡಲು ನಿಮಗೆ ಸಹಾಯ ಮಾಡುತ್ತೇನೆ. ನನ್ನ ಸಂಪರ್ಕದಲ್ಲಿರಿ ಎಂದು ಭೇಟಿ ವೇಳೆಯಲ್ಲಿ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

100 ಕೋಟಿ ಟೆಂಡರ್‌ ಕುರಿತು ಚರ್ಚಿಸಿದ್ದರೇ?

ಚಂದ್ರಕಾಂತ್‌ ಅವರು 2020ರ ಜೂನ್‌ 4ನೇ ವಾರದಲ್ಲಿ ಮತ್ತಿಕೆರೆಯಲ್ಲಿರುವ ಪವರ್‌ ಟಿ ವಿ ಕಚೇರಿಯಲ್ಲಿ ರಾಕೇಶ್‌ ಶೆಟ್ಟಿ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ನವ ಮಂಗಳೂರು ಬಂದರು ಟ್ರಸ್ಟ್‌ 2019ರ ಸೆ.24ರಂದು ಕರೆದಿದ್ದ 100 ಕೋಟಿ ರು.ಮೊತ್ತದ ಟೆಂಡರ್‌ ಕಾಮಗಾರಿ ಕುರಿತಂತೆ ಚರ್ಚಿಸಿದ್ದರು ಎಂಬ ಮಾಹಿತಿ ದೂರಿನಿಂದ ಗೊತ್ತಾಗಿದೆ.

ಈ ವೇಳೆಯಲ್ಲಿ ರಾಕೇಶ್‌ ಶೆಟ್ಟಿ ಅವರು ತಕ್ಷಣವೇ ಮುಖ್ಯ ಇಂಜಿನಿಯರ್‌ ಪರಿತೋಶ್‌ ಬಾಲಾ ಎಂಬುವರಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ‘ತಾವು ಅಮಿತ್‌ ಶಾ ಹೋಂ ಮಿನಿಸ್ಟರ್‌ ಆಫೀಸ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ., ಗೆ ಕಾಂಟ್ರಾಕ್ಟ್‌ ಕೊಡಿ ಎಂದು ಹೇಳಿದ್ದರು,’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಆದರೆ ಟೆಂಡರ್‌ ಪ್ರಕ್ರಿಯೆಯಲ್ಲಿ ಸಕ್ಷಮ ಪ್ರಾಧಿಕಾರದ ಮೇಲೆ ಪ್ರಭಾವ ಬೀರಿದ್ದರಿಂದಾಗಿ ಟೆಂಡರ್‌ನಿಂದ ಅನರ್ಹಗೊಳಿಸಲಾಗಿತ್ತು. ಹಾಗೆಯೇ ರಾಕೇಶ್‌ ಶೆಟ್ಟಿ ಅವರ ಫೋನ್‌ ನಂಬರ್‌ನ್ನು ಎನ್‌ಎಂಪಿಟಿಯ ಮುಖ್ಯ ಇಂಜಿನಿಯರ್‌ ಅವರು ವಿಚಕ್ಷಣಾ ವಿಭಾಗಕ್ಕೆ ನೀಡಿ ಈ ಕುರಿತು ವಿಚಾರಣೆ ನಡೆಸಬೇಕು ಎಂದು ಸೂಚಿಸಿದ್ದರು. ಈ ಸಂಬಂಧ ಕಡತವನ್ನು ಪರಿಶೀಲಿಸಬಹುದು ಎಂದು ಚಂದ್ರಕಾಂತ್‌ ದೂರಿನಲ್ಲಿ ಹೇಳಿದ್ದಾರೆ. ತಮ್ಮ ಕಂಪನಿಯು ಮಾಡುತ್ತಿದ್ದ ಪ್ರತಿಯೊಂದು ಕೆಲಸಗಳನ್ನು ಬಲವಂತವಾಗಿ ತಿಳಿದುಕೊಳ್ಳುತ್ತಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

140 ಕೋಟಿಯಲ್ಲಿ ಕಮಿಷನ್‌ ಕೇಳಿದ್ದರೇ?

ತಮ್ಮ ಕಂಪನಿಗೆ ಬಿಡಿಎನಿಂದ 140 ಕೋಟಿ ಮೊತ್ತ ಬಾಕಿ ಬರಬೇಕಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದ ರಾಕೇಶ್‌ ಶೆಟ್ಟಿ ಅವರು ಅದನ್ನು ಕ್ಲಿಯರ್‌ ಮಾಡಿಸುತ್ತೇನೆ ನನಗೆ 5 ಪರ್ಸೆಂಟ್‌ ಕಮಿಷನ್‌ ಕೊಡಿ ಎಂದು ಕೇಳಿದ್ದರು ಆದರೆ ತಾವು ಒಪ್ಪಿಕೊಂಡಿರಲಿಲ್ಲ ಎಂದು ದೂರಿನಲ್ಲಿ ಚಂದ್ರಕಾಂತ್‌ ಪ್ರಸ್ತಾಪಿಸಿದ್ದಾರೆ. ಇಷ್ಟೊಂದು ಕಮಿಷನ್‌ನ್ನು ನೀಡಲು ಸಾಧ್ಯವಿಲ್ಲ ಎಂದು ರಾಕೇಶ್‌ ಶೆಟ್ಟಿ ಅವರಿಗೆ ತಿಳಿಸಿದ್ದರು ಎಂಬ ಅಂಶ ದೂರಿನಿಂದ ತಿಳಿದು ಬಂದಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಾಕಿ ಉಳಿಸಿಕೊಂಡಿದ್ದ 140 ಕೋಟಿ ಪೈಕಿ 7.79 ಕೋಟಿ ರು.ಮೊತ್ತದ ಬಿಲ್‌ಗಳನ್ನು 2020ರ ಆಗಸ್ಟ್‌ 26ರಂದು ಬಿಡುಗಡೆ ಮಾಡಿತ್ತು. ಈ ವೇಳೆಯಲ್ಲಿ ತಮ್ಮನ್ನು ಸಂಪರ್ಕಿಸಿದ್ದ ರಾಕೇಶ್‌ ಶೆಟ್ಟಿ ಅವರು, ಈ ಹಣವನ್ನು ನಾನೇ ಬಿಡುಗಡೆ ಮಾಡಿಸಿರುತ್ತೇನೆಂದು ತಮಗೆ ಕಮಿಷನ್‌ ಹಣವನ್ನು ಕೊಡಬೇಕು ಎಂದು ಬಲವಂತವಾಗಿ ಹಿಂಸೆ ನೀಡಿದ್ದರು. ಅಲ್ಲದೆ ತಮ್ಮ ಹಾಗೂ ತಮ್ಮ ಕಂಪನಿಯ ಹೆಸರನ್ನು ಹಾಳು ಮಾಡಲು ಬೆದರಿಕೆ ಹಾಕಿದ್ದರು. ಹೀಗಾಗಿ 2020ರ ಆಗಸ್ಟ್‌ 22ರಂದು 25,00,000 ರು. ನಗದನ್ನು ರಾಕೇಶ್‌ ಶೆಟ್ಟಿ ಅವರಿಗೆ ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ಪ್ರಸ್ತಾಪಿತವಾಗಿದೆ.

ಇದಾದ ನಂತರ 2020ರ ಸೆ.26ರಂದು ತಮ್ಮ ಕಂಪನಿ ಹೆಸರನ್ನು ಪವರ್‌ ಟಿ ವಿ ಯಲ್ಲಿ ಬಿತ್ತರಿಸಿ ಕಂಪನಿಯು ಕೆಲವು ರಾಜಕೀಯ ವ್ಯಕ್ತಿಗಳ ಸಂಪರ್ಕದಲ್ಲಿದೆ ಎಂದು ಹೇಳಿತ್ತು. ಅಲ್ಲದೆ ತಮಗೆ ಕರೆ ಮಾಡಿ ತಮ್ಮ ಕಂಪನಿಯಿಂದ ರಾಜಕೀಯ ವ್ಯಕ್ತಿಗಳಿಗೆ ಹಣವನ್ನು ಕೊಡಲಾಗಿದೆ ಎಂದು ಹೇಳಬೇಕು ಎಂದು ಬಲವಂತವಾಗಿ ತಮ್ಮಿಂದ ಹೇಳಿಸಿ ಅದನ್ನು ರೆಕಾರ್ಡ್‌ ಮಾಡಿಕೊಂಡು ಪ್ರಸಾರ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

the fil favicon

SUPPORT THE FILE

Latest News

Related Posts