ಅಕ್ಟೋಬರ್‌ನಲ್ಲಿ ಗ್ರಾ.ಪಂ.ಚುನಾವಣೆ!; ಬಂದೋಬಸ್ತ್ ಸಿದ್ಧತೆಗೆ ಡಿಜಿಐಜಿಗೆ ಆಯೋಗ ಪತ್ರ

ಬೆಂಗಳೂರು; ಅವಧಿ ಪೂರ್ಣಗೊಂಡಿರುವ ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲು ಯತ್ನಿಸಿ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ರಾಜ್ಯ ಚುನಾವಣಾ ಆಯೋಗ, ಇದೀಗ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಸಲು ಪೊಲೀಸ್‌ ಬಂದೋಬಸ್ತ್‌ ಸಂಬಂಧ ಪತ್ರ ವ್ಯವಹಾರ ನಡೆಸಿದೆ.

ಕೊರೊನಾ ವೈರಾಣು ಸಂಕಷ್ಟದ ಕಾಲದಲ್ಲಿ ಪಂಚಾಯತ್ ಚುನಾವಣೆಯನ್ನು ಮುಂದೂಡಲು ರಾಜ್ಯ ಬಿಜೆಪಿ ಸರ್ಕಾರ ಕೋರಿರುವ ಮಧ್ಯೆಯೇ ಚುನಾವಣೆ ನಡೆಸಲು ಆಯೋಗ ಕಾರ್ಯೋನ್ಮುಖವಾಗಿರುವುದು ಮಹತ್ವ ಪಡೆದುಕೊಂಡಿದೆ.

ಚುನಾವಣೆ ನಡೆಸಲು ಪೂರಕವಾಗಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಚುನಾವಣಾ ಆಯೋಗವು 2020ರ ಸೆಪ್ಟಂಬರ್‌ 23ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ರಾಜ್ಯದ 5,800 ಗ್ರಾಮ ಪಂಚಾಯ್ತಿಗಳಿಗೆ 2020ರ ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಿಲು ಉದ್ದೇಶಿಸಿದೆ. ಈ ಚುನಾವಣೆಗೆ ಪೊಲೀಸ್‌ ಇಲಾಖೆಯ ಸಹಕಾರ ಅಗತ್ಯವಾಗಿದೆ. ರಾಜ್ಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ಸೂಕ್ಷ್ಮ, ಅತಿ ಸೂಕ್ಷ್ಮ, ಮತಗಟ್ಟೆಗಳನ್ನು ಗುರುತಿಸಿ ಪೊಲೀಸ್‌ ಸಿಬ್ಬಂದಿಗಳ ನಿರ್ವಹಣೆ ಸೇರಿದಂತೆ ಇನ್ನಿತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ,’ ಎಂದು ಆಯೋಗದ ಅಧೀನ ಕಾರ್ಯದರ್ಶಿ ಅವರು ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಪೊಲೀಸ್‌ ಇಲಾಖೆಯ ವಾಹನ, ಸಿಬ್ಬಂದಿಗಳಿಗೆ ದಿನಭತ್ಯೆ, ಪ್ರಯಾಣ ಭತ್ಯೆಯೂ ಸೇರಿದಂತೆ ಹೆಚ್ಚುವರಿ ಅನುದಾನ ಬಿಡುಗಡೆ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೇರವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

ಕೋವಿಡ್‌ ಪರಿಸ್ಥಿತಿ ವಿಷಮಿಸುತ್ತಿರುವುದನ್ನು ಮುಂದಿರಿಸಿ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಪಟ್ಟಿಗೆ ಕಾರ್ಯಕ್ರಮ‌ ಸಿದ್ಧಪಡಿಸಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಸೂಚಿಸಿತ್ತು. ಅಲ್ಲದೆ ಜಿಲ್ಲಾಧಿಕಾರಿಗಳ ಅಭಿಪ್ರಾಯದಂತೆ ಅಕ್ಟೋಬರ್ ತಿಂಗಳಿನಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್‌ ಗಮನಕ್ಕೆ ಆಯೋಗ ತಂದಿತ್ತು.

ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಕುರಿತಂತೆ ಸಂವಿಧಾನ ಹಾಗೂ ಕಾಯ್ದೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ರಾಜ್ಯ ಚುನಾವಣಾ ಆಯೋಗ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತನ್ನ ಹೊಣೆಯರಿತು ಚುನಾವಣೆ ನಡೆಸುವ ಮೂಲಕ ಕರ್ತವ್ಯ ನಿರ್ವಹಿಸಬೇಕು’ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ್‌ ಅವರು ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

‘ಸಂವಿಧಾನದ ಅನುಚ್ಛೇದ 243ಇ (3)ರ ಅನ್ವಯ ಮತ್ತು ರಾಜ್ಯ ಕಾಯ್ದೆಯ 308 (ಎಎ) ಸ್ಪಷ್ಟವಾಗಿ ನಿರ್ದೇಶಿಸಿರುವಂತೆ ಗ್ರಾಮ ಪಂಚಾಯತಿಯ ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ. ಚುನಾವಣಾ ಆಯೋಗ ಸಂವಿಧಾನ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆ-1993ನ್ನು ಧಿಕ್ಕರಿಸಿ ಕೆಲಸ ಮಾಡಬಾರದು’ ಎಂದು ಪತ್ರದಲ್ಲಿ ವಿವರಿಸಿದ್ದರು.

ರಾಜ್ಯದಲ್ಲಿ ಈಗಾಗಲೇ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ. ಕಂಟೈನ್ಮೆಂಟ್ ಸ್ಥಳ ಹೊರತುಪಡಿಸಿ ಉಳಿದೆಡೆ ದಿನನಿತ್ಯದ ಚಟುವಟಿಕೆ, ಸಾರಾಯಿ ಅಂಗಡಿಯಿಂದ ಹಿಡಿದು ಎಲ್ಲವನ್ನು ಆರಂಭಿಸಿರುವಾಗ ಚುನಾವಣೆ ಮುಂದೂಡುವ ಯಾವುದೇ ಪ್ರಯತ್ನ ಮಾಡಬಾರದು. ಯಾವುದೇ ಪಂಚಾಯತಿ ಪ್ರದೇಶದಲ್ಲಿ ಸದ್ಯ ಕಂಟೈನ್ಮೆಂಟ್ ಪ್ರದೇಶ ಇಲ್ಲ. ಈ ಪ್ರದೇಶ ಇಲ್ಲದ ಪ್ರದೇಶಗಳಲ್ಲಿ ಚುನಾವಣೆ ನಡೆಸಲು ಯಾವುದೇ ತೊಂದರೆ ಇಲ್ಲ. ಸಂವಿಧಾನ ಮತ್ತು ಕಾಯ್ದೆಯನ್ನು ಪಾಲಿಸಲೇಬೇಕಾದ ಉತ್ತರದಾಯಿತ್ವ ಚುನಾವಣಾ ಆಯೋಗದ್ದು’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

SUPPORT THE FILE

Latest News

Related Posts