ವೇತನ ಬಡ್ತಿ ಸೌಲಭ್ಯ ಮಂಜೂರಾತಿಯಲ್ಲಿ ಅಕ್ರಮ ನಿರಂತರ; ಸಚಿವಾಲಯವೇ ಭ್ರಷ್ಟರ ಸ್ವರ್ಗಸೀಮೆ

ಬೆಂಗಳೂರು; ಸರ್ಕಾರಿ ನೌಕರರಿಗೆ ಲಭ್ಯವಿರುವ ಸ್ಥಗಿತ ವೇತನ ಬಡ್ತಿ ಸೌಲಭ್ಯ ಮಂಜೂರಾತಿ ಮತ್ತು ಪದನ್ನೋತಿ ನಿರಾಕರಿಸಿದ ಪ್ರಕರಣಗಳಲ್ಲಿಯೂ ಸ್ಥಗಿತ ವೇತನ ಬಡ್ತಿಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡುತ್ತಿರುವ ಪ್ರಕರಣಗಳು ಇದೀಗ ಬಹಿರಂಗವಾಗಿವೆ.

ವೇತನ ಬಡ್ತಿ ಮಂಜೂರು ಪ್ರಕರಣಗಳನ್ನು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರದೆಯೇ ನಡೆಯುತ್ತಿವೆ. ಅದೇ ರೀತಿ ಆರ್ಥಿಕ ಇಲಾಖೆ ಅನುಮೋದನೆ ಇಲ್ಲದೆಯೇ ಸ್ಥಗಿತ ವೇತನ ಬಡ್ತಿ ಮಂಜೂರು ಮಾಡಲಾಗುತ್ತಿದೆ. ಇಂತಹ ಪ್ರಕರಣಗಳು ಸಿಬ್ವಂದಿ ಆಡಳಿತ ಸುಧಾರಣೆ ಇಲಾಖೆ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಗಮನಕ್ಕೆ ಬಂದಿದ್ದರೂ ಈಗಲೂ ಎಗ್ಗಿಲ್ಲದೇ ನಿಯಮಬಾಹಿರವಾಗಿ ಸ್ಥಗಿತ ವೇತನ ಬಡ್ತಿಗಳನ್ನು ನಿರಂತರವಾಗಿ ನೀಡಲಾಗುತ್ತಿದೆ.

ಅಷ್ಟೇ ಅಲ್ಲದೆ ನೌಕರರು ನಿವೃತ್ತಿಯಾದ ನಂತರವೂ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡುತ್ತಿರುವ ಡಿಪಿಎಆರ್‌ನ ಉನ್ನತ ಅಧಿಕಾರಿಗಳು ದೊಡ್ಡಮಟ್ಟದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಆದರೂ ಸಂಬಂಧಿಸಿದ ಪ್ರಾಧಿಕಾರಗಳು ಈ ಕುರಿತು ಗಮನಹರಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಸರ್ಕಾರಿ ನೌಕರರ ಸ್ಥಗಿತ ವೇತನ ಬಡ್ತಿಯಲ್ಲಿ ನಿಯಮಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚಿರುವ ಆರ್ಥಿಕ ಇಲಾಖೆಯ (ವೆಚ್ಚ) ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್‌ ಅವರು ಈ ಕುರಿತು ಎಲ್ಲಾ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೂ ಸೇರಿದಂತೆ ಜಿಲ್ಲಾಧಿಕಾರಿಗಳು, ವಿಶ್ವವಿದ್ಯಾಲಯಗಳು, ಲೋಕಾಯುಕ್ತ ರಿಜಿಸ್ಟ್ರಾರ್‌ ಸೇರಿದಂತೆ ಹಲವು ಸಕ್ಷಮ ಪ್ರಾಧಿಕಾರಗಳಿಗೆ 2020ರ ಆಗಸ್ಟ್‌ 11ರಂದು ಸುತ್ತೋಲೆ ಕಳಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಸರ್ಕಾರಿ ನೌಕರರಿಗೆ ಲಭ್ಯವಿರುವ ಸ್ಥಗಿತ ವೇತನ ಬಡ್ತಿ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಮಂಜೂರು ಮಾಡದೇ, ಸರ್ಕಾರಿ ನೌಕರರು ನಿವೃತ್ತರಾದ ನಂತರ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿದೆ. ಹಾಗೆಯೇ ಪದನ್ನೋತಿ ನಿರಾಕರಿಸಿದ ನೌಕರರ ಪ್ರಕರಣಗಳಲ್ಲಿಯೂ ಸ್ಥಗಿತ ವೇತನ ಬಡ್ತಿಗಳನ್ನು ನಿಯಮಬಾಹಿರವಾಗಿ ಮಂಜೂರು ಮಾಡಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್‌ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ನೌಕರರು ನಿವೃತ್ತರಾದ ಬಹಳ ವರ್ಷಗಳಾದ ನಂತರವೂ ಸ್ಥಗಿತ ವೇತನ ಬಡ್ತಿ ಸೌಲಭ್ಯಗಳನ್ನು ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆಯೇ ಮಂಜೂರು ಮಾಡುತ್ತಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.
ರಾಜ್ಯ ಸರ್ಕಾರಿ ನೌಕರರು ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪಿದಲ್ಲಿ ಅಂತಹ ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕು ಎಂದು 1996ರ ಮಾರ್ಚ್‌ 18ರಂದು ಸರ್ಕಾರಿ ಅದೇಶದಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಇದರ ಪ್ರಕಾರ ಷರತ್ತು ಮತ್ತು ನಿಬಂಧನೆಗಳ ಪೂರೈಕೆಗೊಳಪಟ್ಟು ರಾಜ್ಯ ಸರ್ಕಾರಿ ನೌಕರರಿಗೆ ಗರಿಷ್ಠ 5 ಸ್ಥಗಿತ ವೇತನ ಬಡ್ತಿಗಳನ್ನು ಸಕ್ಷಮ ಪ್ರಾಧಿಕಾರಗಳು ಮಂಜೂರು ಮಾಡಬಹುದು.

2011ರ ಅಧಿಕಾರಿ ವೇತನ ಸಮಿತಿ ಶಿಫಾರಸ್ಸಿನಂತೆ ಗರಿಷ್ಠ 5 ಸ್ಥಗಿತ ವೇತನ ಬಡ್ತಿಗಳ ಸಂಖ್ಯೆಯನ್ನು 8ಕ್ಕೇರಿಸಿ 2012ರ ಜೂನ್‌ 14ರಂದು ಆದೇಶ ಹೊರಡಿಸಿತ್ತು. 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು 2017ರ ಜುಲೈ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶಗಳನ್ನು ಹೊರಡಿಸಲಾಗುತ್ತಿದೆ. ಈ ಆದೇಶಗಳನ್ನು ಜಾರಿಗೊಳಿಸುವ ಮುನ್ನ ಸಕ್ಷಮ ಪ್ರಾಧಿಕಾರಗಳ ಗಮನಕ್ಕೆ ತರದೆಯೇ ನಿಯಮಬಾಹಿರವಾಗಿ ಸ್ಥಗಿತ ವೇತನ ಬಡ್ತಿಗಳನ್ನು ನೀಡುತ್ತಿರುವ ಉನ್ನತ ಅಧಿಕಾರಿಗಳು ಅಕ್ರಮಕ್ಕೆ ದಾರಿಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹಾಗೆಯೇ ಕೆಲ ಸರ್ಕಾರಿ ನೌಕರರು ಶ್ರೇಣಿಕೃತ ವ್ಯವಸ್ಥೆಯಲ್ಲಿ ಅವರಿಗೆ ಲಭ್ಯವಿರುವ ಪದೋನ್ನತಿ ಅವಕಾಶಗಳನ್ನು ಸ್ವ ಇಚ್ಛೆಯಿಂದ ನಿರಾಕರಿಸಿದ ಬಗ್ಗೆ ಸೇವಾ ಪುಸ್ತಕದಲ್ಲಿ ನಮೂದು ಮಾಡಿಲ್ಲ ಎಂಬುದು ಸುತ್ತೋಲೆಯಿಂದ ಗೊತ್ತಾಗಿದೆ.

ಕಾಲಿಕ ವೇತನ ಶ್ರೇಣಿಗಳಲ್ಲಿ ಲಭ್ಯವಿರುವ ವಾರ್ಷಿಕ ವೇತನ ಬಡ್ತಿ ಸೌಲಭ್ಯಗಳನ್ನು ಮಂಜೂರು ಮಾಡುವುದಕ್ಕೂ ಮತ್ತು ಕಾಲಿಕ ವೇತನ ಶ್ರೇಣಿಗಳ ಗರಿಷ್ಠ ಹಂತವನ್ನು ತಲುಪಿದ ನೌಕರರಿಗೆ ಗರಿಷ್ಠ ಹಂತವನ್ನೂ ಮೀರಿ ಮಂಜೂರು ಮಾಡಲಾಗುತ್ತಿದೆ. ಈ ಸಂಬಂಧ ಸರ್ಕಾರಿ ನೌಕರನ ಅರ್ಹತೆ ಮತ್ತು ಸೂಕ್ತತೆಯನ್ನು ಖಚಿತಪಡಿಸಿಕೊಳ್ಳುತ್ತಿಲ್ಲ. ಈ ಕುರಿತು ಮಾರ್ಗಸೂಚಿಗಳಿದ್ದರೂ ಅವೆಲ್ಲವನ್ನೂ ಉಲ್ಲಂಘಿಸಿ ಕಾಲಿಕ ವೇತನ ಶ್ರೇಣಿಗಳಲ್ಲಿ ಲಭ್ಯವಿರುವ ವಾರ್ಷಿಕ ವೇತನ ಬಡ್ತಿ ಸೌಲಭ್ಯಗಳ ಮಂಜೂರಾತಿಯ ಉದ್ದೇಶ ಮತ್ತು ಆದೇಶಗಳಲ್ಲಿನ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ ನಿರ್ಣಯ ಕೈಗೊಳ್ಳುತ್ತಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts