ಬೆಂಗಳೂರು; ಆತ್ಮನಿರ್ಭರ ಭಾರತ್ ಅಡಿಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಈವರೆವಿಗೂ ಎಷ್ಟು ಮೊತ್ತ ಬಿಡುಗಡೆ ಆಗಿದೆ ಎಂಬ ವಿವರಗಳನ್ನು ಆರ್ಥಿಕ ಇಲಾಖೆ ಇಟ್ಟುಕೊಳ್ಳದೇ ಇದ್ದರೂ ಬಿಡುಗಡೆ ಅಗಬಹುದಾದ ಹಣವನ್ನು ನಿರೀಕ್ಷಿಸಿ ಒಟ್ಟು 40,724.74 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಬಹುದಾದ ವಿವಿಧ ಯೋಜನೆಗಳನ್ನು ಇತರೆ ಇಲಾಖೆಗಳು ಸಿದ್ಧಪಡಿಸಿಕೊಂಡಿವೆ.
ಹಿಂದಿನ ಕಾಂಗ್ರೆಸ್ ಸರ್ಕಾರ 2018ರಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ ಕೈಗೆತ್ತಿಕೊಳ್ಳಲು ಮುಂದಾಗಿದ್ದ ಯೋಜನೆಗಳನ್ನೇ ಆತ್ಮನಿರ್ಭರ್ ಭಾರತ್ ಅಭಿಯಾನದಡಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿದೆ. ಈ ಕುರಿತು 2020ರ ಜೂನ್ 9ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಆತ್ಮನಿರ್ಭರ್ ಭಾರತ್ ಯೋಜನೆಯಡಿಯಲ್ಲಿ ಹಂಚಿಕೆ ಮಾಡಲು ಒಟ್ಟು ಮೊತ್ತದ ಪೈಕಿ ಬಳ್ಳಾರಿ ಜಿಲ್ಲೆಯಲ್ಲಿ ಉದ್ದೇಶಿತ ಇಂಡಸ್ಟ್ರೀಯಲ್ ಪಾರ್ಕ್ ಯೋಜನೆಗೆ ಸಿಂಹಪಾಲು ದೊರೆತಿದೆ. ಇದಕ್ಕಾಗಿ 30,345 ಕೋಟಿ ರು. ಮೊತ್ತದ ಯೋಜನೆ ರೂಪಿಸಿರುವ ಹೂಡಿಕೆ ವಲಯವು ಕಾರ್ಯ ಸಾಧ್ಯತೆ ವರದಿಯನ್ನು ತಯಾರಿಸಿಟ್ಟುಕೊಂಡಿದೆ.
ರಾಯಚೂರು, ಬೀದರ್ ಸೇರಿದಂತೆ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಯೋಜನೆ ಸಂಬಂಧ ಇಲಾಖೆಗಳು ಕಾರ್ಯ ಸಾಧ್ಯತೆ ವರದಿಯನ್ನು ತಯಾರಿಸಿಲ್ಲ. ಆತ್ಮನಿರ್ಭರ್ ಯೋಜನೆಯಡಿಯಲ್ಲಿ ಹಂಚಿಕೆಯಾಗುವ ಮೊತ್ತವನ್ನು ರಾಜ್ಯದ ಹಿಂದಿನ ಸರ್ಕಾರಗಳು ರೂಪಿಸಿದ್ದ ಹಲವು ಯೋಜನೆಗಳಿಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.
ಕೃಷಿ, ಸಾರಿಗೆ, ವಸತಿ, ರಿಯಲ್ ಎಸ್ಟೇಟ್, ಹೂಡಿಕೆ, ಉದ್ಯೋಗ ಸೃಷ್ಟಿ, ವಿದ್ಯುತ್ ಯೋಜನೆ ಸೇರಿದಂತೆ ಇನ್ನಿತರೆ ವಲಯಗಳಲ್ಲಿ ಯೋಜನೆಗಳ ನೀಲಿ ನಕ್ಷೆ ತಯಾರಿಸಿಟ್ಟುಕೊಂಡಿರುವ ಹಲವು ಇಲಾಖೆಗಳು ಇದಕ್ಕೆ ಸಂಬಂಧಿಸಿದಂತೆ ಕಾರ್ಯಸಾಧ್ಯತೆ ವರದಿಯನ್ನು ರೂಪಿಸಿವೆ.
ಈಗಾಗಲೇ ಹಲವು ಇಲಾಖೆಗಳ ನಡುವೆ ಸಮಾಲೋಚನೆ ನಡೆಸಿರುವ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಇದಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಗೌಪ್ಯವಾಗಿರಿಸಿಕೊಂಡಿದೆ. ಯೋಜನೆ ಇಲಾಖೆ ಸಿದ್ಧಪಡಿಸಿಕೊಂಡಿರುವ ಯೋಜನೆ ಮತ್ತು ಮಾಹಿತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಹೂಡಿಕೆ ವಲಯ ಮತ್ತು ಉದ್ಯೋಗ ಸೃಷ್ಟಿ ವಲಯಕ್ಕೆ 33,323 ಕೋಟಿ ರು, ಫುಡ್ ಪಾರ್ಕ್ ಯೋಜನೆಗಳಿಗೆ 233 ಕೋಟಿ, ಮೀನುಗಾರಿಕೆ ಯೋಜನೆಗೆ 120 ಕೋಟಿ, ಆರೋಗ್ಯ ಸೇವೆ ಮೂಲ ಸೌಕರ್ಯಗಳಿಗೆ 6.32 ಕೋಟಿ, ವಸತಿ ಯೋಜನೆಗೆ 536 ಕೋಟಿ, ರಿಯಲ್ ಎಸ್ಟೇಟ್ ವಲಯಕ್ಕೆ 808.16 ಕೋಟಿ ರು., ವಿದ್ಯುತ್ ಯೋಜನೆಗಳಿಗೆ 1,300 ಕೋಟಿ ರು. ಮೊತ್ತದಲ್ಲಿ ಕಾರ್ಯ ಸಾಧ್ಯತೆ ವರದಿಯನ್ನು ಇಲಾಖೆಗಳು ಸಿದ್ಧಪಡಿಸಿಕೊಂಡಿರುವುದು ತಿಳಿದು ಬಂದಿದೆ.
ಕೊಪ್ಪಳದಲ್ಲಿ ರೈಸ್ ಟೆಕ್ನಾಲಾಜಿ ಪಾರ್ಕ್ ಸ್ಥಾಪಿಸಲು ಕಾರ್ಯ ಸಾಧ್ಯತೆ ವರದಿಯನ್ನು ಸಿದ್ಧಪಡಿಸುತ್ತಿರುವ ಕೃಷಿ ಮಾರಾಟ ಇಲಾಖೆ (ಎಪಿಎಂಸಿ)ಯು ಇದಕ್ಕಾಗಿ 122 ಕೋಟಿ ರು. ಯೋಜನಾ ವೆಚ್ಚವೆಂದು ಅಂದಾಜಿಸಿದೆ. ಅದೇ ರೀತಿ ಹಾವೇರಿಯಲ್ಲಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್‌ಗಾಗಿ 111 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಬಹುದಾದ ಯೋಜನೆಯ ಪೂರ್ವ ಕಾರ್ಯ ಸಾಧ್ಯತೆ ವರದಿಯನ್ನು ಸಿದ್ಧಪಡಿಸಿರುವುದು ದಾಖಲೆಯಿಂದ ಗೊತ್ತಾಗಿದೆ.
ತುಮಕೂರು, ಶಿವಮೊಗ್ಗ, ದಾವಣಗೆರೆ, ವಿಜಯಪುರ ಮತ್ತು ಬೆಳಗಾವಿಯಲ್ಲಿ ಫುಡ್ ಪಾರ್ಕ್ ಅಭಿವೃದ್ಧಿಗಾಗಿ ಯೋಜಿಸಿರುವ ಇಲಾಖೆ ಈ ಸಂಬಂಧ ಇನ್ನೂ ಯೋಜನಾ ವೆಚ್ಚವನ್ನು ಅಂದಾಜಿಸಿಲ್ಲ. ಹಾಗೆಯೇ ಕಾರ್ಯ ಸಾಧ್ಯತೆಯನ್ನೂ ತಯಾರಿಸಿಲ್ಲ ಎಂಬುದು ತಿಳಿದು ಬಂದಿದೆ.
ಬೆಂಗಳೂರು (ಹೆಸರಘಟ್ಟ), ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ಒಟ್ಟು 2,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀಥಲೀಕರಣ ಕೇಂದ್ರಗಳಿಗೆ ಮೂಲ ಸೌಕರ್ಯಗಳಿಗಾಗಿ 300 ಕೋಟಿ ರು., ರಾಜ್ಯದ ವಿವಿಧೆಡೆ ಇರುವ ಉಗ್ರಾಣಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ 2,500 ಕೋಟಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಮತ್ತು ಗದಗ್‌ನಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ರಫ್ತು ವಹಿವಾಟು ಕೇಂದ್ರಗಳ ನಿರ್ಮಾಣಕ್ಕೆ 680 ಕೋಟಿ ರು., ಬೆಂಗಳೂರಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೇಂದ್ರ ಬಳಿ ಇರುವ ಬಳೇಪುರದಲ್ಲಿ ಸಾರಿಗೆ ಕೇಂದ್ರಕ್ಕೆ 597 ಕೋಟಿ ರು., ಹುಬ್ಬಳ್ಳಿ ಧಾರವಾಡದಲ್ಲಿ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ 331 ಕೋಟಿ ರು. ಅಂದಾಜಿಸಿದೆ.
ಹಾರೋಹಳ್ಳಿ, ಹಾಸನ, ಮೈಸೂರು, ಮಂಗಳೂರು, ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ ಜಿಲ್ಲೆಯಲ್ಲಿಯೂ ಲಾಜಿಸ್ಟಿಕ್ ಸಂಪರ್ಕಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದೆಯಾದರೂ ಯೋಜನಾ ವೆಚ್ಚವನ್ನು ಅಂದಾಜಿಸಿಲ್ಲ. ಆದರೆ ಪೂರ್ವ ಕಾರ್ಯ ಸಾಧ್ಯತೆ ವರದಿಯನ್ನು ಪೂರ್ಣಗೊಳಿಸಿದೆ.
ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಹಾರ್ಟಿಕಲ್ಚರ್ ಫಾರ್ಮ್, ತುಮಕೂರಿನ ದೊಡ್ಡಸಾಗ್ಗೆರೆಯಲ್ಲಿ ಬಟಾನಿಕಲ್ ಗಾರ್ಡನ್, ಮೈಸೂರಿನ ಲಿಂಗಾಬುದಿ ಬಟಾನಿಕಲ್ ಗಾರ್ಡನ್, ಕೊಪ್ಪಳದ ಪಾಂಬವನ ಬಟಾನಿಕಲ್ ಗಾರ್ಡನ್ ಅಭಿವೃದ್ಧಿಗೊಳಸಲು ಯೋಜನೆ ರೂಪಿಸಿದೆಯಾದರೂ ಯೋಜನಾ ವೆಚ್ಚವನ್ನು ಅಂದಾಜಿಸಿಲ್ಲ. ಆದರೆ ತೋಟಗಾರಿಕೆ ಇಲಾಖೆ ಈ ಸಂಬಂಧ ಸಮಗ್ರ ಪರಿಕಲ್ಪನೆಯನ್ನು ರೂಪಿಸಿದೆ.
ಮಂಗಳೂರು ಮತ್ತು ಉಡುಪಿಯಲ್ಲಿ ಸೀ ಫುಡ್ ಪಾರ್ಕ್‌ಗಾಗಿ 120 ಕೋಟಿ ರು.ಮೊತ್ತದಲ್ಲಿ ಯೋಜನೆ ರೂಪಿಸಿರುವ ಮೀನುಗಾರಿಕೆ ಇಲಾಖೆ, ಕರಾವಳಿ ಎಲ್ಲಾ ಜಿಲ್ಲೆಗಳಲ್ಲೂ ಬೀಜೋತ್ಪಾದನಾ ಕೇಂದ್ರಗಳ ಫಾರ್ಮ್‌ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ಧೇಶಿಸಿದೆ. ಅದೇ ರೀತಿ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮೀನುಗಾರಿಕೆ ಜಲಾಶಯ, ಅಕ್ವೇರಿಯಂ ಮೀನುಗಾರಿಕೆ ಬಂದರು ಮತ್ತು ತಂಗುದಾಣ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶಿಸಿದ್ದರೂ ಈವರೆವಿಗೂ ಕಾರ್ಯ ಸಾಧ್ಯತೆ ವರದಿಗಳು ಲಭ್ಯವಿಲ್ಲದಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಕೋಲಾರ, ಶಿವಮೊಗ್ಗ ಮತ್ತು ಕಲ್ಬುರ್ಗಿಯಲ್ಲಿ ಜ್ಞಾನ ನಗರಿ ನಿರ್ಮಾಣ ಮತ್ತು ಇದಕ್ಕೆ ಮೂಲಸೌಕರ್ಯ ಕಲ್ಪಿಸಲು ಉದ್ಧೇಶಿಸಿರುವ ಶಿಕ್ಷಣ ಇಲಾಖೆ, ಪೂರ್ವ ಕಾರ್ಯಸಾಧ್ಯತೆ ವರದಿಯನ್ನು ತಯಾರಿಸಿದೆ. ಆದರೆ ಯೋಜನಾ ವೆಚ್ಚ ಎಷ್ಟೆಂದು ಅಂದಾಜಿಸಿಲ್ಲ.
ಬೆಳಗಾವಿ, ಬೀದರ್, ಹಾಸನ, ಮಂಡ್ಯ, ರಾಯಚೂರು ಮತ್ತು ಶಿವಮೊಗ್ಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಆರ್‌ಐ ಸ್ಕ್ಯಾನ್ ಕೇಂದ್ರಗಳ ಸ್ಥಾಪನೆಗೆ 6.32 ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಿರುವ ಆರೋಗ್ಯ ಇಲಾಖೆ, ಗುಲಬರ್ಗಾ, ಮೈಸೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಡಯಾಗ್ನೋಸ್ಟಿಕ್ ಕೇಂದ್ರಗಳನ್ನು ತೆರೆಯಲು ಯೋಜನೆ ತಯಾರಿಸಿದೆ. ಹಾಗೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿರುವುದು ತಿಳಿದು ಬಂದಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇಂದಿರಾ ನಗರದಲ್ಲಿ ಮಾರುಕಟ್ಟೆಯ ಪುನಶ್ಚೇತನಕ್ಕೆ 220 ಕೋಟಿ ಮತ್ತು ಆರ್ ಟಿ ನಗರದಲ್ಲಿರುವ ಮಾರುಕಟ್ಟೆ ಪುನರ್ ಅಭಿವೃದ್ಧಿಗಾಗಿ 60 ಕೋಟಿ, ವಿಜಯನಗರದಲ್ಲಿನ ಮಾರುಕಟ್ಟೆ ಅಭಿವೃದ್ಧಿಗಾಗಿ 80 ಕೋಟಿ, ಕೆ ಆರ್ ಮಾರುಕಟ್ಟೆ, ಯಡಿಯೂರು, ಲಕ್ಕಸಂದ್ರ, ಮಾವಳ್ಳಿ, ಕಾಕ್ಸ್ ಟೌನ್‌ನಲ್ಲಿ ನ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 60 ಕೋಟಿ ಮೊತ್ತದ ಯೋಜನೆಯನ್ನು ರೂಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪೂರ್ವ ಕಾರ್ಯಸಾಧ್ಯತೆ ವರದಿ ತಯಾರಿಸಿರುವುದು ಗೊತ್ತಾಗಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಬನ್ನಿಮಂಟಪ ಅಭಿವೃದ್ಧಿಗೊಳಿಸಲು ಪೂರ್ವ ಕಾರ್ಯಸಾಧ್ಯತೆ ವರದಿ ತಯಾರಿಸಿದ್ದರೆ, ಬೆಂಗಳೂರಿನ ಸಿಂಗಸಂದ್ರದಲ್ಲಿರುವ ಜಮೀನನ್ನು ಕ್ರಿಡಿಲ್‌ಗೆ ಹಸ್ತಾಂತರ ಯೋಜನೆಯನ್ನೂ ತಯಾರಿಸಿದೆ. ಆದರೆ ಈವರೆವಿಗೂ ಯೋಜನಾ ವೆಚ್ಚವನ್ನು ಅಂದಾಜಿಸಿಲ್ಲ. ಅದೇ ರೀತಿ ಮೈಸೂರು ನಗರಪಾಲಿಕೆಯು ಅರ್ಬನ್ ರಿಕ್ರಿಯೇಷನ್ ಸೆಂಟರ್ ಅಭಿವೃದ್ಧಿಗಾಗಿ 192.7 ಕೋಟಿ, ಮೈಸೂರು ನಗರದ ಗಡಿ ಚೌಕ್‌ನಲ್ಲಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 9.7 ಕೋಟಿ, ಮಯೂರ ವಾಣಿಜ್ಯ ಸಂಕೀರ್ಣ ಅಭಿವೃದ್ಧಿಗೆ 107.02 ಕೋಟಿ ಮೊತ್ತದ ಯೋಜನೆಯನ್ನು ರೂಪಿಸಿದೆ.
ಹೂಡಿಕೆ ವಲಯಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಚಾಲನೆಯಲ್ಲಿರುವ ಮಷೀನ್ ಟೂಲ್ ಇಂಡಸ್ಟ್ರಿ ಪಾರ್ಕ್ ಅಭಿವೃದ್ಧಿಗೆ 410 ಕೋಟಿ ರು.ಗಳನ್ನು ಆತ್ಮ ನಿರ್ಭರ್ ಭಾರತ್ ಯೋಜನೆಯಲ್ಲಿ ಒದಗಿಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ಬೆಂಗಳೂರಿನ ದೇವನಹಳ್ಳಿ ಬಳಿ ಏರೋಸ್ಪೇಸ್ ಪಾರ್ಕ್‌ಗೆ 90 ಕೋಟಿ, ಬ್ಯುಸಿನೆಸ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿರುವ ಸರ್ಕಾರ ಇದಕ್ಕೆ ಯೋಜನಾ ವೆಚ್ಚವನ್ನು ಅಂದಾಜಿಸಿಲ್ಲ.
ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಬಳ್ಳಾರಿ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣಕ್ಕೆ 30, 345 ಕೋಟಿ ಮೊತ್ತದಲ್ಲಿ ಯೋಜನೆ ರೂಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ಯಸಾಧ್ಯತೆ ವರದಿ ತಯಾರಿಸಿರುವುದು ಗೊತ್ತಾಗಿದೆ. ಅದೇ ರೀತಿ ಯಾದಗಿರಿಯ ವಿಶೇಷ ಆರ್ಥಿಕ ವಲಯದಲ್ಲಿ ಫಾರ್ಮಾಸ್ಯುಟಿಕಲ್ಸ್ ಪಾರ್ಕ್ ಅಭಿವೃದ್ಧಿಗಾಗಿ 2,468 ಕೋಟಿ ಮೊತ್ತದ ಯೋಜನೆಗೆ ಪೂರ್ವ ಕಾರ್ಯಸಾಧ್ಯತೆ ವರದಿಯನ್ನು ತಯಾರಿಸಿದೆ.
ರಾಜ್ಯ ಉಗ್ರಾಣ ನಿಗಮ ಮತ್ತು ಶಿಕ್ಷಣ ಇಲಾಖೆಗೆ ಸೇರಿರುವ ಕಟ್ಟಡಗಳ ಮೇಲೆ ಸೋಲಾರ್ ಮೇಲ್ಛಾವಣಿ ಅಳವಡಿಸುವ ಸಂಬಂಧ 2016ರಲ್ಲೇ ಸಚಿವ ಸಂಪುಟ ಅನುಮೋದಿಸಿದ್ದ ಈ ಯೋಜನೆಗೆ ಅತ್ಮ ನಿರ್ಭರ್ ಅಡಿಯಲ್ಲಿ ಒಟ್ಟು 1,300 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.