ಕೋವಿಡ್‌-19; ಸರ್ಕಾರಿ ಆಸ್ಪತ್ರೆಗಳಿಗೆ ಲಿಕ್ವಿಡ್‌ ಆಕ್ಸಿಜನ್‌ ಸಿಲಿಂಡರ್‌ ಅಲಭ್ಯ; ಉಕ್ಕು ಉದ್ಯಮಗಳಿಗೆ ಲಭ್ಯ

ಬೆಂಗಳೂರು; ರಾಜ್ಯದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಸರ್ಕಾರಿ, ಖಾಸಗಿ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಲಿಕ್ವಿಡ್‌ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಯಗಳಾಗಿದೆ. ಆಕ್ಸಿಜನ್ ಪೂರೈಕೆ ಮಾಡುವ ಖಾಸಗಿ ಕಂಪನಿಗಳು ಈ ವಿಚಾರದಲ್ಲಿ ಅಸಹಕಾರ ತೋರುತ್ತಿರುವುದು ಇದೀಗ ಬಹಿರಂಗವಾಗಿದೆ.

ಬಹುತೇಕ ಪೂರೈಕೆದಾರರು ಉಕ್ಕು ಉದ್ಯಮ ಸೇರಿದಂತೆ ಇನ್ನಿತರೆ ಖಾಸಗಿ ಉದ್ಯಮಗಳಿಗೆ ಆಕ್ಸಿಜನ್‌ ಪೂರೈಕೆ ಮಾಡುತ್ತಿದ್ದಾರಲ್ಲದೆ ಜಿಲ್ಲಾಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಬಹಿರಂಗವಾಗಿದೆ. ರಾಜ್ಯದಲ್ಲಿ ಉಸಿರಾಟದ ತೊಂದರೆಯಿಂದಲೇ ಮೃತರ ಸಂಖ್ಯೆ ಶೇ. 8.5ಕ್ಕೆ ತಲುಪಿದ್ದರೂ ಆಕ್ಸಿಜನ್‌ ಪೂರೈಕೆಯಲ್ಲಿನ ವ್ಯತ್ಯಯವನ್ನು ಸರ್ಕಾರ ಈವರೆವಿಗೂ ಸರಿಪಡಿಸದೇ ಭಂಡ ನಿರ್ಲಕ್ಷ್ಯ ವಹಿಸಿದೆ.

ಆಕ್ಸಿಜನ್‌ ಪೂರೈಕೆಯಲ್ಲಿನ ವ್ಯತ್ಯಯವನ್ನು ಸರಿಪಡಿಸಬೇಕಿದ್ದ ಸಚಿವ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್‌ ಅವರು ಈ ಕುರಿತು ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ಹಿಂದೆ ಬೀಳುವ ಮೂಲಕ ಆಕ್ಸಿಜನ್‌ ಪೂರೈಸುವ ಖಾಸಗಿ ಕಂಪನಿ, ಸರಬರಾಜುದಾರರ ಲಾಭಕೋರತನಕ್ಕೆ ಪರೋಕ್ಷವಾಗಿ ದಾರಿಮಾಡಿಕೊಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಉಸಿರಾಟದ ತೊಂದರೆಯಿಂದ ಶ್ವಾಸಕೋಸದ ಪರಿಣಾಮಕಾರಿ ಕಾರ್ಯನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಆಕ್ಸಿಜನ್‌ ಪೂರೈಕೆಯಾಗದಿರುವುದು ಇನ್ನಷ್ಟು ಭೀತಿ ಹೆಚ್ಚಿಸಿದಂತಾಗಿದೆ.

‘ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಉಸಿರಾಟದ ತೊಂದರೆಯಿಂದ ಶ್ವಾಸಕೋಶದ ಪರಿಣಾಮಕಾರಿ ಕಾರ್ಯನಿರ್ವಹಣೆಯ ವೈಫಲ್ಯದಿಂದ ಸಾವುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದೆ. ಒಟ್ಟು ಆಕ್ಸಿಜನ್ ಕೊರತೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಹೆಚ್.ಎಫ್.ಎನ್.ಸಿ ಅಳವಡಿಕೆಗೆ ಹಿಂದೇಟು. ಅಗತ್ಯ ತುರ್ತಿನ ಇಂಜಕ್ಷನ್‍ಗಳ ಪೂರೈಕೆಯಲ್ಲಿ ಅವಾಂತರ. ಈ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಸಾವುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದ್ದು ಸ್ಪಷ್ಟವಾಗಿದೆ,’ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು ನಗರ ಒಂದರಲ್ಲಿಯೇ ಸಾವಿನ ಸಂಖ್ಯೆ ಕಳೆದ ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಶೇ. 32ರಷ್ಟು ಹೆಚ್ಚಳ ಕಂಡಿರುವುದು ಗಂಭೀರವಾದ ಆಘಾತಕಾರಿ ಅಂಶವಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಎಚ್‌ ಕೆ ಪಾಟೀಲ್‌ ಅವರು ರಾಜ್ಯದಲ್ಲಿ ಉಸಿರಾಟದ ತೊಂದರೆಯಿಂದಲೇ ಮೃತರ ಸಂಖ್ಯೆ ಶೇ. 8.5ಕ್ಕೆ ಮುಟ್ಟಿದೆ ಎಂಬ ಅಂಕಿ-ಅಂಶ ಹರಿದಾಡುತ್ತಿದೆ ಎಂಬ ಮಾಹಿತಿಯನ್ನೂ ಹೊರಗೆಡವಿದ್ದಾರೆ.

ಈ ಮಾಹಿತಿ ಹೊರಬೀಳುತ್ತಿದ್ದಂತೆ ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ಅವರು ಲಿಕ್ವಿಡ್‌ ಆಕ್ಸಿಜನ್‌ ಸಿಲಿಂಡರ್‌ಗಳ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವಿದೆ ಎಂದು ಅಧಿಕೃತವಾಗಿ ಹೇಳಿದ್ಧಾರೆ. ‘ ಜಿಲ್ಲೆಯ ಸರ್ಕಾರಿ, ಖಾಸಗಿ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಸಿಲಿಂಡರ್‌ಗಳ ಬೇಡಿಕೆ ಹೆಚ್ಚಾಗಿದ್ದು ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಸಬೇಕು ಎಂದು ಪೂರೈಕೆದಾರರರಿಗೆ ಸೂಚಿಸಬೇಕು,’ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಕೊಪ್ಪಳದಲ್ಲಿ ಆಕ್ಸಿಜನ್‌ ತೀವ್ರ ಕೊರತೆ

ಕೊಪ್ಪಳದಲ್ಲಿ ಕೋವಿಡ್-19 ಹಿನ್ನಲೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಪೂರೈಕೆ ಮಾಡಲು ಖಾಸಗಿ ಕಂಪನಿಗಳು ಸಹಕರಿಸುತ್ತಿಲ್ಲ. ಜಿಲ್ಲೆಯ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವ ಪೂರೈಕದಾರರು ಬೇರೆ ಜಿಲ್ಲೆಗಳಿಗೆ, ಇನ್ನೊಂದಡೆ ಆಕ್ಸಿಜನ್ ಲಭ್ಯವಾಗುವಂತಿದ್ದರೆ ಅಂತಹ ಜಿಲ್ಲೆಗೆ ಸರಬರಾಜು ಮಾಡುವುದನ್ನು ಸ್ವಲ್ಪ ಕಡಿತಗೊಳಿಸುತ್ತಿಲ್ಲ. ಜೊತೆಗೆ ಉಕ್ಕು ಉದ್ಯಮಗಳಿಗೆ ಆಕ್ಸಿಜನ್‌ ಪೂರೈಸುತ್ತಿವೆ ಎಂದು ತಿಳಿದು ಬಂದಿದೆ.

‘ನಿತ್ಯ ಜಿಲ್ಲಾ ಆಸ್ಪತ್ರೆ ಮತ್ತು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸಾಕಷ್ಟು ಪ್ರಮಾಣದಲ್ಲಿ ಸಿಲಿಂಡರ್‌ಗಳ ಪೂರೈಕೆ ಅವಶ್ಯಕತೆ ಇದೆ. ಆಯಾ ಆಸ್ಪತ್ರೆಗೆ ಸಂಬಂಧಪಟ್ಟ ಆಕ್ಸಿಜನ್ ನಿರ್ವಹಣೆದಾರರು ಆಕ್ಸಿಜನ್ ಸಿಲಿಂಡರ್‌ಗಳನ್ನು ಬೇಡಿಕೆ ಅನುಗುಣವಾಗಿ ಸರಬಾರಾಜು ಮಾಡಿಸಿಕೊಂಡು ಬಳಸಿಕೊಳ್ಳಬೇಕು,’ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಮಿತಿ ಮೀರಿ ಹೆಚ್ಚಳ

ಬೆಂಗಳೂರು ನಗರದಲ್ಲಿ ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೆ ಸಾವುಗಳ ಸಂಖ್ಯೆ ಮಿತಿಮೀರಿದ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಸೋಂಕಿತರ ಸಂಖ್ಯೆಗಳು ಜೂನ್‌ ಈಚೆಗೆ 7000-8000 ತಲುಪಿರುವ ವರದಿಯಾಗುತ್ತಿದೆ. ಬೆಂಗಳೂರು ನಗರವೊಂದರಲ್ಲಿಯೇ 2020ರ ಜನವರಿಯಿಂದ ಜುಲೈ ತಿಂಗಳವರೆಗೆ 49,135 ಸಾವಿನ ಪ್ರಕರಣಗಳು ವರದಿಯಾಗಿವೆ ಎಂಬುದು ಎಚ್‌ ಕೆ ಪಾಟೀಲ್‌ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ಚಿತಾಗಾರ, ಸ್ಮಶಾನ ಮತ್ತು ರುದ್ರಭೂಮಿಗಳಲ್ಲಿ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಗಳ ಈ ಅಂಕಿ-ಸಂಖ್ಯೆ ಗಾಬರಿ ಹುಟ್ಟಿಸುತ್ತಿದೆ ಎಂದು ಎಚ್‌ ಕೆ ಪಾಟೀಲ್‌ ಅವರು ಕಳವಳ ವ್ಯಕ್ತಪಡಿಸಿದ್ದಾರಲ್ಲದೆ ಕಳೆದ ವರ್ಷ ಇದೇ ಅವಧಿಗೆ ಅಂದರೆ ಜನವರಿಯಿಂದ ಜುಲೈವರೆಗೆ ಸಾವುಗಳ ಸಂಖ್ಯೆ 37,001 ಇದ್ದದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 12,136 ಜನರು ಹೆಚ್ಚುವರಿಯಾಗಿ ಸಾವಿಗೀಡಾಗಿರುವುದು ಬೆಚ್ಚಿಬೀಳಿಸಿದೆ. ಇದು ಶೇ. 32ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದೂ ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯಕ್ಕೆ ಕೊರೊನಾ ವೈರಸ್‌ ಕಾಲಿಟ್ಟು 6 ತಿಂಗಳ ಮೇಲಾಯಿತು. ಆದರೆ ಅದನ್ನು ನಿಭಾಯಿಸುವಲ್ಲಿ ಮತ್ತು ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡುವಲ್ಲಿ ರಾಜ್ಯ ಸರ್ಕಾರ ದಾರುಣವಾಗಿ ವಿಫಲವಾಗಿದೆ. ಎಷ್ಟೋ ಸಾವಿನ ಪ್ರಕರಣಗಳು ಕೋವಿಡ್‌-19 ನಿಂದ ಸಾವಿಗೀಡಾಗಿರುವ ಪ್ರಕರಣಗಳನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪಗಳೂ ಇವೆ. ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ ಎನ್ನುವ ಕಾರಣಕ್ಕಾಗಿಯೇ ಇಂತಹ ಮುಚ್ಚು ಮರೆ ಮಾಡುತ್ತಿದ್ದಾರೆ. ಅದರಲ್ಲಿ ಆಕ್ಸಿಜನ್‌ ಸರಬರಾಜಿನಂತಹ ಸುಲಭವಾಗಿ ಸರಬರಾಜು ಮಾಡಲು ಸಾಧ್ಯವಿರುವಂತಹ ವಸ್ತುಗಳನ್ನು ಎಲ್ಲಾ ಕಡೆ ಒದಗಿಸಲಾಗದಿರುವುದು ಪರಿಸ್ಥಿತಿ ದಾರುಣತೆಯನ್ನು ತೋರಿಸುತ್ತಿದೆ,’

ರವಿಕೃಷ್ಣಾರೆಡ್ಡಿ , ರಾಜ್ಯಾಧ್ಯಕ್ಷರು ಕರ್ನಾಟಕ ರಾಷ್ಟ್ರಸಮಿತಿ

ಬೆಂಗಳೂರಿನಲ್ಲಿ ಕೊರೋನಾ ವೈರಸ್‍ನಿಂದ ಸಾವಿಗೀಡಾದವರ ಸಂಖ್ಯೆ ಮಾರ್ಚ್‍ನಿಂದ ಆಗಸ್ಟ್‌ 1,886 ಎಂದು ಸರ್ಕಾರ ಪ್ರಕಟಿಸಿದೆ. ಒಂದು ವೇಳೆ ಈ ಅಂಕಿ-ಸಂಖ್ಯೆಯೇ ಅಂತಿಮವಾಗಿದ್ದರೆ ಕೊರೋನೇತರ ಸಾವುಗಳ ಸಂಖ್ಯೆ 10,250 ಹೆಚ್ಚುವರಿ ಎಂದಾಯಿತು. 49,000 ಸಾವುಗಳಲ್ಲಿ ಕೇವಲ 1,886 ಕೋರೋನಾ ಸಾವುಗಳಾಗಿದ್ದರೆ 47,114 ಜನ ಕೊರೋನೇತರ ಕಾರಣಗಳಿಂದ ಮೃತಪಟ್ಟಿದ್ದಾರೆ. ಈ ಸಾವುಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುವುದಕ್ಕೆ ಕಾರಣಗಳು ಏನು. ಈ ಸಾವಿನ ಅಂಕಿ-ಸಂಖ್ಯೆ ಮುಚ್ಚಿಡಲು ಕಾರಣಗಳೇನು, ಕೊರೋನಾ ಸಾವಿನ ಸಂಖ್ಯೆ ಕಡಿಮೆ ಪ್ರಮಾಣ ತೋರಿಸಲು ಈ ಅಚಾತುರ್ಯ/ದುರುದ್ದೇಶದ ಪ್ರಯತ್ನವಾಗಿದೆಯೇ ಎಂದೂ ಎಚ್‌ ಕೆ ಪಾಟೀಲ್‌ ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಜನವರಿ ತಿಂಗಳಿಂದ ಇಲ್ಲಿಯವರೆಗೂ ಸಾವಿನ ಸಂಖ್ಯೆಗಳ ಲೆಕ್ಕಪರಿಶೋಧನೆ ಮತ್ತು ಸಾವಿನ ಕಾರಣಗಳ ವೈದ್ಯಕೀಯ ಪರಿಶೋಧನೆ ಮಾಡಿಯೇ ಇಲ್ಲ. ಇದರಿಂದಾಗಿ ವಾಸ್ತವಿಕವಾಗಿ ಸಾವು ಯಾವುದಕ್ಕೆ ಸಂಭವಿಸಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಗಣಿಸಲು ಆಗಿಯೇ ಇಲ್ಲ. ಇದರ ಜೊತೆಗೆ ಸಾವಿನ ಕಾರಣಗಳ ವೈದ್ಯಕೀಯ ಪ್ರಮಾಣೀಕರಣ (Medical Certification of Cause of Death- MCCD) ಮಾಡಬೇಕಾಗಿತ್ತು. ಒಂದು ವೇಳೆ ಬೆಂಗಳೂರಿನಲ್ಲಿ ಕೊರೋನಾ ಸಾವಿನ ಸಂಖ್ಯೆ ಕೇವಲ 1,886 ಎಂದು ಮಾತ್ರವಿದ್ದರೆ, 10,250 ಸಾಮಾನ್ಯ ಸಾವಿನ ಹೆಚ್ಚಳ(ಇತರೇ ಕಾರಣದಿಂದ) ಸಂಖ್ಯೆ ಅತ್ಯಂತ ಗಂಭೀರವಾದದ್ದೆ. ಈ ಕುರಿತು ಸರ್ಕಾರ ವಿವರಣೆ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

‘ಈ ಆಘಾತಕಾರಿ ಮಾಹಿತಿ ಬಚ್ಚಿಡುವಿಕೆ ಇಂಥ ಮಹಾಮಾರಿಯಿಂದಿರುವ ಸಂಕಷ್ಟ ಕಾಲದಲ್ಲಿ ಬಾರೀ ಅನಾಹುತಕ್ಕೆ ಕಾರಣವಾಗಬಹುದು. ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸರ್ಕಾರ ಕೊಟ್ಟಿರುವ ಅಂಕಿ ಸಂಖ್ಯೆಗಳ ಪ್ರಕಾರವೆ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ರಾಷ್ಟ್ರದ ಸರಾಸರಿಯ ದುಪ್ಪಟ್ಟಾಗಿದೆ. ದೇಶದಲ್ಲಿ ಮೃತರ ಸಂಖ್ಯೆ ದಶಲಕ್ಷಕ್ಕೆ 42 ಇದ್ದರೆ, (Reported deaths per Million) ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ತಲುಪಿದೆ. ಸರಕಾರ ಸರಿಯಾದ ಅಂಕಿ-ಅಂಶ ಪ್ರಾಮಾಣಿಕವಾಗಿ ಜನತೆ ಜೊತೆಗೆ ಹಂಚಿಕೆ ಮಾಡಿಕೊಳ್ಳಲಿಲ್ಲ. ಸಾವಿನ ಸಂಖ್ಯೆ ಈ ಪ್ರಮಾಣದ ಹೆಚ್ಚಳ ಕುರಿತ ತ್ವರಿತ ಅಧ್ಯಯನದ ವರದಿ ಪಡೆಯಲು (Quick study report) ಕ್ರಮವಿಡಬೇಕು,’ ಎಂದು ಎಚ್‌ ಕೆ ಪಾಟೀಲ್‌ ಅವರು ಹೇಳಿದ್ದಾರೆ.

ಸಾವಿನ ಭಾರೀ ಹೆಚ್ಚಳ ಆಘಾತಕಾರಿ ಅಂಶ ಹಾಗೂ ಗಾಬರಿಗೊಳಿಸುವ ಸ್ಥಿತಿ ಬಗ್ಗೆ ಚರ್ಚಿಸುತ್ತಿಲ್ಲ. ವಾಸ್ತವಾಂಶವನ್ನು ಅರ್ಥೈಸಿ ಸರ್ಕಾರ ಗಂಭೀರ ಹೆಜ್ಜೆಗಳನ್ನು ಇರಿಸುತ್ತಿಲ್ಲ. ಅಂಕಿ-ಅಂಶ ಬಚ್ಚಿಡುವುದಾಗಲಿ, ಜನರಿಗೆ ತಪ್ಪು ಮಾಹಿತಿ ವಿತರಿಸುವುದಾಗಲಿ ಯಾವುದೇ ಪ್ರಯೋಜನವಿಲ್ಲ. ಸತ್ಯ ಎಲ್ಲರಿಗೂ ತಿಳಿದಿರಲಿ. ಸರ್ಕಾರ ಗಂಭೀರ ಹೆಜ್ಜೆಗಳನ್ನು ಇಡಲೇಬೇಕಾದ ಸ್ಥಿತಿಗೆ ತಲುಪಿದ್ದೇವೆ. ಇಂಥ ಭಾರೀ ಸಾವಿನ ಹೆಚ್ಚಳದಿಂದ ಉದ್ಬವಿಸಿರುವ ಗಂಭೀರ ಸನ್ನಿವೇಶ ಎದುರಾಗಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಈವರೆವಿಗೂ ಎಚ್ಚೆತ್ತುಕೊಳ್ಳದಿರುವುದು ಇನ್ನಷ್ಟು ಅಪಾಯಗಳನ್ನು ಆಹ್ವಾನಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

the fil favicon

SUPPORT THE FILE

Latest News

Related Posts