ಎಸ್‌ಸಿ, ಎಸ್‌ಟಿ ಉಪಯೋಜನೆಯಲ್ಲಿ ಕನಿಷ್ಠ ಪ್ರಗತಿ; ಶಿಕ್ಷಣ ಇಲಾಖೆಯಲ್ಲಿ ಕ್ರಿಯಾ ಯೋಜನೆಯೇ ಇಲ್ಲ

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿನ ಹೆಚ್ಚುವರಿ ಊಟದ ವೆಚ್ಚ ಭರಿಸುವುದು ಸೇರಿದಂತೆ ಇನ್ನಿತರೆ ಉದ್ಧೇಶಗಳಿಗಾಗಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ರೂಪಿತವಾಗಿರುವ ಹಲವು ಕಾರ್ಯಕ್ರಮಗಳು ಅತ್ಯಂತ ಕನಿಷ್ಠ ಪ್ರಗತಿ ಸಾಧಿಸಿದೆ. ಬಿಜೆಪಿ ಸರ್ಕಾರ ಈಗಾಗಲೇ ಒಂದು ವರ್ಷದ ಸಂಭ್ರಮವನ್ನು ಆಚರಿಸಿಕೊಂಡರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಮಾತ್ರ ಆಮೆಗತಿಯಲ್ಲಿದೆ.

ಈ ಯೋಜನೆಯಡಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿವಿಧ ವಿಭಾಗಗಳ ಮುಖ್ಯಸ್ಥರು ಕ್ರಿಯಾ ಯೋಜನೆ ರೂಪಿಸಿಲ್ಲ, ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸದಿರುವುದು ಇದೀಗ ಬಹಿರಂಗವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯ ವಿವಿಧ ಲೆಕ್ಕ ಶೀರ್ಷಿಕೆಯಲ್ಲಿ ನೂರಾರು ಕೋಟಿ ರು.ಹಂಚಿಕೆ ಮಾಡಿದ್ದರೂ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿರುವುದಕ್ಕೆ ಅಧಿಕಾರಿಗಳಲ್ಲಿರುವ ಅಸ್ಪ್ರಶ್ಯತೆ ಮನೋಭಾವನೆಯೇ ಇದಕ್ಕೆ ಮೂಲ ಕಾರಣ.

2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಇ ವಿ ರಮಣರೆಡ್ಡಿ ಅವರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ 2020ರ ಜುಲೈ 28ರಂದು ಬರೆದಿರುವ ಪತ್ರ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾರ್ಯಕ್ರಮಗಳ ಅನುಷ್ಠಾನದ ಮೇಲೆ ಬೆಳಕು ಚೆಲ್ಲಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ಮತ್ತು ಅನುದಾನ ಬಿಡುಗಡೆಗಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಕ್ರಿಯಾ ಯೋಜನೆಯನ್ನು ರೂಪಿಸಿಲ್ಲ. ಹಾಗೆಯೇ ಈ ಸಂಬಂಧ ಅನುದಾನ ಬಿಡುಗಡೆ ಕೋರಿ ಪ್ರಸ್ತಾವನೆಯನ್ನೇ ಸರ್ಕಾರಕ್ಕೆ ಸಲ್ಲಿಸದಿರುವುದು ಪತ್ರದಿಂದ ಗೊತ್ತಾಗಿದೆ.

‘ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಅನುಮೋದಿತ ಕ್ರಿಯಾ ಯೋಜನೆಗಳಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಈಗಾಗಲೇ ತಮಗೆ ತಿಳಿಸಲಾಗಿದೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಇಲಾಖಾ ಅಭಿವೃದ್ಧಿ ಹಾಗೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ, ಕನಿಷ್ಠ ಪ್ರಗತಿ ಸಾಧಿಸಿರುವುದನ್ನು ಗಮನಿಸಲಾಗಿದೆ,’ ಎಂದು ರಮಣರೆಡ್ಡಿ ಅವರು ಕಾಲೇಜು-ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆ ಲೆಕ್ಕ ಶೀರ್ಷಿಕೆಯಲ್ಲಿ ಮೊದಲ ತ್ರೈಮಾಸಿಕದಲ್ಲಿ ಒಟ್ಟು 601.00 ಲಕ್ಷ ರು.ಗಳನ್ನು ನಿಗದಿಪಡಿಸಿದೆ. ಈ ಪೈಕಿ 150.00 ಲಕ್ಷ ರು. ಆಗಸ್ಟ್‌ 3ರಂದೇ ಬಿಡುಗಡೆ ಮಾಡಿ ಆದೇಶಿಸಿದೆ.

ಈ ಹಣದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳಲ್ಲಿನ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಊಟದ ವೆಚ್ಚ ಭರಿಸುವುದು, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾಸಿಕ ಗರಿಷ್ಠ 10,000 ರು. ಶಿಷ್ಯ ವೇತನ ನೀಡುವುದು, ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷದಿಂದ ಮೇಲ್ಪಟ್ಟು 10.00 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಮರು ಪಾವತಿ ಮಾಡಲು ಸರ್ಕಾರ ಆದೇಶಿಸಿದೆ.

ಹಣ ಬಿಡುಗಡೆ ಅಧಿಕಾರವನ್ನು ಪ್ರತ್ಯಾಯೋಜಿಸಿರುವ ಯೋಜನೆಗಳಿಗೆ ಎದುರಾಗಿ ಮುಂದಿನ 6 ತಿಂಗಳಲ್ಲಿ ಅಂದರೆ ನವೆಂಬರ್‌ 2020ರವರೆಗೆ ಪರಿಷ್ಕೃತ ಅಂದಾಜಿನ ಅರ್ಧದಷ್ಟು ಮೊತ್ತವನ್ನು ಮಾತ್ರ ಬಳಸಿಕೊಳ್ಳಲು ಅನುಮತಿ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಕಾಲೇಜು ಶಿಕ್ಷಣದಲ್ಲಿ ಕಂಪ್ಯೂಟರ್‌ ಶಿಕ್ಷಣ, ಸರ್ಕಾರಿ ಕಾಲೇಜುಗಳು ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣ, ರೂಸಾ ಅನುದಾನದಡಿಲ್ಲಿ 2020-21ನೇ ಸಾಲಿನಲ್ಲಿ ಎಸ್‌ಸಿಪಿ/ಟಿಎಸ್‌ಪಿ ಕಾರ್ಯಕ್ರಮಗಳಿಗೆ ಒಟ್ಟು 2072.00 ಲಕ್ಷ ರು.ಗಳನ್ನು ಹಂಚಿಕೆಯಾಗಿದೆ.

ಕಾಲೇಜು, ತಾಂತ್ರಿಕ, ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯು 2020-21ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 4,996 ಕೋಟಿ ರು.ನಿಗದಿಪಡಿಸಿರುವುದು ಗೊತ್ತಾಗಿದೆ. ಉನ್ನತ ಶಿಕ್ಷಣ ಇಲಾಖೆಯ ವಿವಿಧ ವಿಭಾಗಗಳ ಲೆಕ್ಕ ಶೀರ್ಷಿಕೆಯಲ್ಲಿ ಸಾವಿರಾರು ಕೋಟಿ ರು.ಅನುದಾನವಿದ್ದರೂ ಈ ಸಂಬಂಧ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸದಿರುವುದು ಮತ್ತು ಅನುದಾನ ಬಿಡುಗಡೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಗಳನ್ನೇ ಸಲ್ಲಿಸದಿರುವುದು ಅಧಿಕಾರಿಗಳ ಇಚ್ಛಾಶಕ್ತಿಯೇ ಮೂಲ ಕಾರಣ ಎಂದು ಹೇಳಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಹಲವು ಸಭೆಗಳು ನಡೆದಿದ್ದರೂ ಉನ್ನತ ಶಿಕ್ಷಣ ಇಲಾಖೆಯು ಪ್ರಗತಿಯಲ್ಲಿ ಭಾರೀ ಹಿಂದುಳಿದಿದ್ದರೂ ಸಚಿವ ಅಶ್ವಥ್‌ನಾರಾಯಣ್‌ ಅವರು ಇತ್ತ ಗಮನಹರಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

SUPPORT THE FILE

Latest News

Related Posts