4(ಜಿ) ವಿನಾಯಿತಿ ಅಧಿಸೂಚನೆ ಉಲ್ಲಂಘಿಸಿ ಮಾಸ್ಕ್‌, ಪಿಪಿಇ ಕಿಟ್‌ ಖರೀದಿ; 9 ಕೋಟಿ ನಷ್ಟ?

ಬೆಂಗಳೂರು; ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಅವಶ್ಯಕ ಔ‍ಷಧ ಹಾಗೂ ಉಪಕರಣಗಳನ್ನು 35.18 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಆರ್ಥಿಕ ಇಲಾಖೆ 4 (ಜಿ) ಅಡಿ ವಿನಾಯಿತಿ ನೀಡಿ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಉಲ್ಲಂಘಿಸಿರುವ ಪ್ರಕರಣಗಳನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದಿರುವ ದಾಖಲೆಗಳ ಮೂಲಕ ಇದೀಗ ಹೊರಗೆಡವುತ್ತಿದೆ.

ದುಬಾರಿ ದರದಲ್ಲಿ ವೈದ್ಯಕೀಯ ಪರಿಕರಗಳನ್ನು ಖರೀದಿಸಲಾಗಿದೆ ಎಂಬ ಆರೋಪಗಳಿಗೆ ಆರ್ಥಿಕ ಇಲಾಖೆ 4(ಜಿ) ವಿನಾಯಿತಿ ನೀಡಿ ಹೊರಡಿಸಿದ್ದ ಅಧಿಸೂಚನೆಗಳು ಇನ್ನಷ್ಟು ಬಲ ತಂದುಕೊಟ್ಟಿವೆ. ಅಲ್ಲದೆ ಭ್ರಷ್ಟಾಚಾರ ಪ್ರಕರಣಗಳ ಮತ್ತೊಂದು ಆಯಾಮವನ್ನು ತೆರೆದಿಟ್ಟಿವೆ.

ಉಪಕರಣ ಮತ್ತು ಔಷಧ ಸಾಮಗ್ರಿಗಳನ್ನು ಕಡಿಮೆ ದರ ಮತ್ತು ಸಮಂಜಸ ದರದಲ್ಲಿ ಖರೀದಿಸುವ ಸಲುವಾಗಿ ಆರ್ಥಿಕ ಇಲಾಖೆ 4(ಜಿ) ವಿನಾಯಿತಿ ನೀಡಿ 2020ರ ಮಾರ್ಚ್‌ 9 ಮತ್ತು 12ರಂದು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿತ್ತು.

‘ಕಡಿಮೆ ದರ ನೀಡುವ ಸರಬರಾಜುದಾರರಿಂದ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ ಮೂಲಕ ಅವಶ್ಯಕ ಔಷಧ ಮತ್ತು ಉಪಕರಣಗಳನ್ನು 13,35,29,180 ಮತ್ತು 21,83,20,440 ರು. ಸೇರಿದಂತೆ 35.18 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ಅಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ (ಸಂಖ್ಯೆ;ಆಇ;183/ವೆಚ್ಚ/12/2020-ಸಂಖ್ಯೆ; ಆಇ 127 ವೆಚ್ಚ-12/2020) ವಿನಾಯಿತಿ ನೀಡಿತ್ತು,’

ಒಟ್ಟು 35.18 ಕೋಟಿ ಮೊತ್ತಕ್ಕೆ 4(ಜಿ) ವಿನಾಯಿತಿ ಪಡೆದಿದ್ದ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌, ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ಗಳ ಖರೀದಿಸಲು ಮಾರ್ಚ್‌ 9, 14, 20ರಂದು ಒಟ್ಟು 11.66 ಕೋಟಿ ರು.ಗೆ ಮೂರು ಕಂಪನಿಗಳಿಗೆ ಸರಬರಾಜು ಆದೇಶ ನೀಡಿತ್ತು.

ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌, ಕಡಿಮೆ ದರ ನೀಡುವ ಸರಬರಾಜುದಾರರಿಂದ ಔಷಧ, ಉಪಕರಣಗಳನ್ನು ಖರೀದಿಸದೇ ದುಬಾರಿ ದರ ನೀಡಿರುವ ಸರಬರಾಜುದಾರರಿಂದ ಖರೀದಿಸಿದೆ. ಹೀಗಾಗಿ ಸರ್ಕಾರಕ್ಕೆ ಅಂದಾಜು 9.04 ಕೋಟಿ ರು. ನಷ್ಟವಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ವಿಶೇಷವೆಂದರೆ 4(ಜಿ) ವಿನಾಯಿತಿ ಅಧಿಸೂಚನೆ ಹೊರಬಿದ್ದ ದಿನದಂದೇ ಸರಬರಾಜುದಾರರಿಗೆ ಖರೀದಿ ಆದೇಶವನ್ನೂ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಪ್ಲಾಸ್ಟಿ ಸರ್ಜಿ ಇಂಡಸ್ಟ್ರಿಸ್‌ನಿಂದ ಎನ್‌-95 ಮಾಸ್ಕ್‌ವೊಂದಕ್ಕೆ 147 (ಜಿಎಸ್‌ಟಿ ಸೇರಿದಂತೆ) ದರದಲ್ಲಿ 1,50,000 ಪ್ರಮಾಣದ ಎನ್‌-95 ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌ವೊಂದಕ್ಕೆ 330.40 (ಜಿಎಸ್‌ಟಿ ಸೇರಿ) 1,50,000 ಪ್ರಮಾಣದಲ್ಲಿ ಪಿಪಿಇ ಕಿಟ್‌ಗಳನ್ನು ಒಟ್ಟು 7.16 ಕೋಟಿ ರು. ಮೊತ್ತದಲ್ಲಿ ಖರೀದಿಸಲು ಮಾರ್ಚ್‌ 9ರಂದು ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಆರ್ಥಿಕ ಇಲಾಖೆ ಹೊರಡಿಸಿದ್ದ 4(ಜಿ) ವಿನಾಯಿತಿ ಆದೇಶವನ್ನು (ಸಂಖ್ಯೆ;ಆಇ;183/ವೆಚ್ಚ/12/2020) ಉಲ್ಲೇಖಿಸಿತ್ತು.

ಅದೇ ರೀತಿ 1.56 ಕೋಟಿ ಮೊತ್ತದಲ್ಲಿ 1,00,000.00 ಪ್ರಮಾಣದ ಎನ್‌-95 ಮಾಸ್ಕ್‌ಗಳ ಖರೀದಿಗೆ ಸಾಫ್ಟ್‌ವೇರ್‌ ಕಂಪನಿ ಎಟೆಕ್‌ ಟ್ರಾನ್‌ಗೆ 2020ರ ಮಾರ್ಚ್‌ 20ರಂದು ಆದೇಶ ನೀಡಿದೆ. ಇದರಲ್ಲಿ ಆರ್ಥಿಕ ಇಲಾಖೆ ವಿನಾಯಿತಿ ನೀಡಿ 2020ರ ಮಾರ್ಚ್‌ 12ರಂದು ಹೊರಡಿಸಿದ್ದ ಅಧಿಸೂಚನೆಯನ್ನು (ಸಂಖ್ಯೆ; ಆಇ 127 ವೆಚ್ಚ-12/2020) ಉಲ್ಲೇಖಿಸಲಾಗಿದೆ.

ಹಾಗೆಯೇ ಇದೇ ಅಧಿಸೂಚನೆಯನ್ನು ಉಲ್ಲೇಖಿಸಿ 2.94 ಕೋಟಿ ರು.ಮೊತ್ತದಲ್ಲಿ 2,00,000.00 ಪ್ರಮಾಣದ ಎನ್‌-95 ಮಾಸ್ಕ್‌ಗಳನ್ನು ಖರೀದಿಗೆ 2020ರ ಮಾರ್ಚ್‌ 14ರಂದು ಮೆಡಿ ಅರ್ಥ್ ಲೈಫ್‌ಕೇರ್‌ ಪ್ರೈವೈಟ್‌ ಲಿಮಿಟೆಡ್‌ಗೆ ಆದೇಶ ಹೊರಡಿಸಿದೆ.

ಅಲ್ಲದೆ 3 ಕಂಪನಿಗಳಿಗೂ ಒಂದೊಂದು ದರದಲ್ಲಿ ಸರಬರಾಜು ಆದೇಶ ನೀಡಿದೆ. ಎನ್‌-95 ಮಾಸ್ಕ್‌ ಗೆ 147 ದರದಲ್ಲಿ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ಗೆ ಆದೇಶ ನೀಡಿರುವ ಅಧಿಕಾರಿಗಳು, ಎಟೆಕ್‌ ಟ್ರಾನ್‌ಗೆ 156.80 ರು.ದರ ಮತ್ತು ಮೆಡಿಅರ್ಥ್ ಲೈಫ್‌ಕೇರ್‌ ಪ್ರೈ ಲಿ.,ಗೆ 147 ರು. ದರವನ್ನು ನಮೂದಿಸಿರುವುದು ಆದೇಶಗಳಿಂದ ಗೊತ್ತಾಗಿದೆ.

ಮಾರ್ಚ್‌ 9, 14, 20ರಂದು ಹೊರಡಿಸಿದ್ದ ಸರಬರಾಜು ಆದೇಶದಲ್ಲಿ ನಮೂದಿಸಿರುವ ದರಗಳು ನೈಜ ದರಕ್ಕಿಂತಲೂ ಹೆಚ್ಚಿಗೆ ಇತ್ತು ಎಂದು ತಿಳಿದು ಬಂದಿದೆ. ಮಾರ್ಚ್‌ ತಿಂಗಳಲ್ಲಿ ಎನ್‌-95 ಮಾಸ್ಕ್‌ಗೆ 70 ರು., ಪಿಪಿಇ ಕಿಟ್‌ಗೆ 200 ರು. ದರವಿತ್ತು. 4(ಜಿ) ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಕಡಿಮೆ ದರ ನೀಡುವ ಸರಬರಾಜುದಾರರಿಂದ ಖರೀದಿಸಿದ್ದರೆ ಅಂದಾಜು 9.04 ಕೋಟಿ ರು.ಗಳನ್ನು ಉಳಿಸಬಹುದಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

Your generous support will help us remain independent and work without fear.

Latest News

Related Posts