ಅಂಗವಿಕಲ ಸರ್ಕಾರಿ ಅಧಿಕಾರಿಗಳಿಗೆ ಮುಂಬಡ್ತಿ; ಸಂಘ ಪರಿವಾರ ಶಿಫಾರಸ್ಸಿಗೆ ಮನ್ನಣೆ?

ಬೆಂಗಳೂರು; ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ನಿರ್ದಿಷ್ಟ ಅಂಗವಿಕಲ ಸರ್ಕಾರಿ ಅಧಿಕಾರಿಯೊಬ್ಬರಿಗೆ ತರಾತುರಿಯಲ್ಲಿ ಉನ್ನತ ಹುದ್ದೆ ಕರುಣಿಸುವ ರಾಜ್ಯ ಬಿಜೆಪಿ ಸರ್ಕಾರ, ಇದೇ ವರ್ಗದ ಇತರೆ ಅಧಿಕಾರಿ, ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಕಡೆಗಣಿಸಿರುವುದು ಬಹಿರಂಗವಾಗಿದೆ.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಮತ್ತು ಸರ್ವೋಚ್ಛ ನ್ಯಾಯಾಲಯ ನೀಡಿರುವ ಹಲವು ಆದೇಶಗಳನ್ನೂ ರಾಜ್ಯ ಬಿಜೆಪಿ ಸರ್ಕಾರವೂ ಸೇರಿದಂತೆ ಈ ಹಿಂದಿನ ಸರ್ಕಾರಗಳೂ ಕಸದ ಬುಟ್ಟಿಗೆ ಎಸೆದಿವೆ. ಅಲ್ಲದೆ ರಾಜ್ಯ ಬಿಜೆಪಿ ಸರ್ಕಾರ, ರಾಜಕೀಯ ಪ್ರಭಾವ ಮತ್ತು ಸಂಘ ಪರಿವಾರ ಹಿನ್ನೆಲೆ ಹೊಂದಿರುವ ಅಧಿಕಾರಿ, ನೌಕರರಿಗಷ್ಟೆ ಉನ್ನತ ಹುದ್ದೆ ಕರುಣಿಸಿಲು ಅತ್ಯುತ್ಸಾಹದಿಂದ ಆದೇಶ ಹೊರಡಿಸುತ್ತಿದೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದೆ.

ಸರ್ಕಾರಿ ಅಂಗವಿಕಲ ನೌಕರರಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘ ನೀಡಿದ್ದ ಮನವಿ ಆಧರಿಸಿ ಈವರೆವಿಗೂ ಈಗಿನ ಬಿಜೆಪಿ ಸರ್ಕಾರವೂ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ನ್ನು 2017 ಏಪ್ರಿಲ್‌ 19ರಂದು ಜಾರಿಯಲ್ಲಿದ್ದರೂ ಇದರ ಪ್ರಕಾರ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುತ್ತಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಸೆಕ್ಷನ್‌ 34ರ ಅನ್ವಯ ಅಂಗವಿಕಲ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶವಿದ್ದರೂ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಪರಿಗಣಿಸುತ್ತಿಲ್ಲ ಎಂದು ಗೊತ್ತಾಗಿದೆ.

ಸಿದ್ದರಾಜು ಮತ್ತು ರಾಜ್ಯ ಸರ್ಕಾರದ ಪ್ರಕರಣದಲ್ಲೂ ಅಂಗವಿಕಲ ಸರ್ಕಾರಿ ನೌಕರರಿರಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಈವರೆವಿಗೂ ಅನುಷ್ಠಾನಗೊಂಡಿಲ್ಲ. ಇನ್ನೊಂದು ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತನ್ನ ತೀರ್ಪನ್ನು ಎತ್ತಿ ಹಿಡಿದಿತ್ತು.

ಇನ್ನು, ಅಂಗವಿಕಲ ಸರ್ಕಾರಿ ನೌಕರರಿಗೆ ಸರ್ವೋಚ್ಛ ನ್ಯಾಯಾಲಯದ ಆದೇಶ ಹಾಗೂ ಅಂಗವಿಕಲ ವ್ಯಕ್ತಿಗಳ 2016ರ ಅಧಿನಿಯಮದ ಪ್ರಕಾರ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ನಿರ್ಧಾರ ಕೈಗೊಳ್ಳಬಹುದು ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡಿತ್ತು. ಆದರೂ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಈವರೆವಿಗೂ ಪರಿಗಣಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿದಿದ್ದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಅಂಗವೈಕಲ್ಯ ಹೊಂದಿರುವ ನಿರ್ದಿಷ್ಟ ಅಧಿಕಾರಿಯೊಬ್ಬರಿಗೇ ಸೀಮಿತಗೊಳಿಸಿ ಅತ್ಯಲ್ಪ ದಿನಗಳಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹುದ್ದೆಗೆ ಉನ್ನತ ಹುದ್ದೆ ಕರುಣಿಸಿತ್ತು. ಈ ಅಧಿಕಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಉಪ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರಲ್ಲದೆ ಸಂಘ ಪರಿವಾರದ ಶ್ರೀರಕ್ಷೆಯೂ ಇದೆ ಎಂಬ ಆಪಾದನೆಯೂ ಕೇಳಿ ಬಂದಿದೆ.

ಮುಖ್ಯಮಂತ್ರಿಯ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರಿಗೆ ಉನ್ನತ ಹುದ್ದೆ ನೀಡಲು ಸಂಘ ಪರಿವಾರದ ಪ್ರಮುಖರೊಬ್ಬರು ಒತ್ತಡ ಹೇರಿದ್ದರು. ಇದಕ್ಕೆ ಮಣಿದಿದ್ದ ಯಡಿಯೂರಪ್ಪ ಅವರು ಉನ್ನತ ಹುದ್ದೆ ನೀಡಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು ಎಂದು ಹೇಳಲಾಗಿದೆ.

ಪ್ರಕರಣವೊಂದರಲ್ಲಿ ಕರ್ನಾಟಕ ಆಡಳಿತ ಮಂಡಳಿ ನೀಡಿದ್ದ ಆದೇಶವನ್ನು ಈ ಅಧಿಕಾರಿಗಷ್ಟೇ ಸೀಮಿತಗೊಳಿಸಿ ಉನ್ನತ ಹುದ್ದೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಮುಖ್ಯಮಂತ್ರಿ ಒತ್ತಡಕ್ಕೆ ಮಣಿದು ಹಸಿರು ನಿಶಾನೆ ತೋರಿದ್ದರಲ್ಲದೆ ತ್ವರಿತಗತಿಯಲ್ಲಿ ಉನ್ನತ ಹುದ್ದೆ ನೀಡಲು ಡಿಪಿಎಆರ್‌ಗೆ ಸೂಚಿಸಿದ್ದರು ಎಂದು ಹೇಳಲಾಗಿದೆ.

ರಾಜ್ಯದಲ್ಲಿ 7.2 ಲಕ್ಷ ಮಂಜೂರಾದ ಸರ್ಕಾರಿ ಹುದ್ದೆಗಳಲ್ಲಿ ಮೂರನೇ ಒಂದರಷ್ಟು ಖಾಲಿ ಇವೆ ಎಂದು ತಿಳಿದು ಬಂದಿದೆ. ಸದ್ಯ ಕಲ್ಪಿಸಿರುವ ಮೀಸಲಾತಿ ಪ್ರಕಾರ 25 ಸಾವಿರದಿಂದ 30 ಸಾವಿರ ಅಂಗವಿಕಲ ನೌಕರರು ಸರ್ಕಾರಿ ಉದ್ಯೋಗದಲ್ಲಿ ಇರಬೇಕಿತ್ತು. ಆದರೆ, 11 ಸಾವಿರ ನೌಕರರು ಮಾತ್ರ ಇದ್ದಾರೆ. ಹೀಗಾಗಿ ಅಂಗವಿಕಲ ನಿರುದ್ಯೋಗಿಗಳನ್ನು ಬ್ಯಾಕ್‌ಲಾಗ್‌ ಮೂಲಕ ನೇರ ನೇಮಕಾತಿಗೆ ಶಿಫಾರಸು ಮಾಡಬೇಕು ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದರು.

SUPPORT THE FILE

Latest News

Related Posts