ಬೆಂಗಳೂರು; ಉತ್ತರ ಕರ್ನಾಟಕದ ಪ್ರಭಾವಿ ಬಿಲ್ಡರ್ ಒಬ್ಬರ ಬಳಿ ಕೂಡಿಡಲು ಅಂದಾಜು 50 ಲಕ್ಷ ರು.ಗಳನ್ನು ಕೊಂಡ್ಯೊಯುತ್ತಿದ್ದ ವೇಳೆಯಲ್ಲಿ ಸಿಕ್ಕಿ ಬಿದ್ದಿದ್ದರು ಎನ್ನಲಾಗಿರುವ ಲೋಕೋಪಯೋಗಿ ಇಲಾಖೆಯ ಜಂಟಿ ನಿಯಂತ್ರಕ ಮತ್ತು ಆರ್ಥಿಕ ಇಲಾಖೆಯ ನೌಕರನೊಬ್ಬನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು 4 ತಿಂಗಳ ಹಿಂದೆಯೇ ಎಫ್‌ಐಆರ್ ದಾಖಲಿಸಿಕೊಂಡಿದ್ದರೂ ಈವರೆವಿಗೂ ದೋಷಾರೋಪಣೆ ಪಟ್ಟಿ ಸಲ್ಲಿಸದಿರುವುದು ಇದೀಗ ಬಹಿರಂಗವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಮತ್ತು ಪ್ರಭಾವಿ ಕೋಮಿಗೆ ಸೇರಿದ ಮಠಾಧೀಶರೊಬ್ಬರ ಪ್ರಭಾವವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಕಮಿಷನ್ ಪಡೆದು ಗುತ್ತಿಗೆದಾರರಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಇತ್ತೀಚೆಗಷ್ಟೇ ಆರೋಪಿಸಿದ್ದ ಬೆನ್ನಲ್ಲೇ ಎಸಿಬಿ ಮುಚ್ಚಿಟ್ಟಿರುವ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ.
ಪ್ರಕರಣ ಹೊರಬಿದ್ದು 4 ತಿಂಗಳಾಗಿದ್ದರೂ ಆರೋಪಿತ ಅಧಿಕಾರಿಯನ್ನು ಈವರೆವಿಗೂ ಅಮಾನತುಪಡಿಸಿಲ್ಲ ಎಂದು ಗೊತ್ತಾಗಿದೆ. ಹಾಗೆಯೇ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಮತ್ತು ಆರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಪ್ರಕರಣದ ಬಗ್ಗೆ ಗೊತ್ತಿದ್ದರೂ ಮೌನ ವಹಿಸಿರುವುದು ಸಂದೇಹಾಸ್ಪದವಾಗಿದೆ.
ವಿಕಾಸಸೌಧದಲ್ಲಿರುವ ಲೋಕೋಪಯೋಗಿ ಇಲಾಖೆಯಲ್ಲಿ ಜಂಟಿ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿರುವ ಸೋಮನಾಥ್ ಮತ್ತು ವಿಧಾನಸೌಧದಲ್ಲಿರುವ ಆರ್ಥಿಕ ಇಲಾಖೆಯ ಡಿ ಗ್ರೂಪ್ ನೌಕರ ಎಂ ಸೆಲ್ವಂ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು 2020ರ ಮಾರ್ಚ್ 17ರಂದು ಎಫ್‌ಐಆರ್ ದಾಖಲಿಸಿತ್ತು. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.ಪ್ರಕರಣದ ವಿವರ
ಬೆಂಗಳೂರಿನ ಬಾಣಸವಾಡಿ ರೈಲ್ವೇ ನಿಲ್ದಾಣದಲ್ಲಿ 2020ರ ಮಾರ್ಚ್ 17ರಂದು ಮದ್ಯಪಾನ ಮಾಡಿದ ಸ್ಥಿತಿಯಲ್ಲಿದ್ದ ಆರೋಪಿತ ನೌಕರ ಸೆಲ್ವಂನನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೇ ಸಂದರ್ಭದಲ್ಲಿ ಆತನ ವಶದಲ್ಲಿದ್ದ ಹಣವನ್ನು ಅಮಾನತುಪಡಿಸಿಕೊಂಡಿದ್ದರು. ಅಲ್ಲದೆ ಆರೋಪಿತ ಸಾಮಾನ್ಯ ಸ್ಥಿತಿಗೆ ಬಂದ ನಂತರ ಹೆಚ್ಚಿನ ವಿಚಾರಣೆ ಮಾಡಿದ್ದ ಪೊಲೀಸ್ ಅಧಿಕಾರಿಗಳು ಆತನಿಂದ ಮಾಹಿತಿ ಪಡೆದ ನಂತರ ಪ್ರಕರಣವನ್ನು ಎಸಿಬಿಗೆ ಹಸ್ತಾಂತರಿಸಲಾಗಿತ್ತು. ಹೆಚ್ಚಿನ ವಿಚಾರಣೆ ಬಳಿಕ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯ ಜಂಟಿ ನಿಯಂತ್ರಕ ಸೋಮನಾಥ್ ಅವರನ್ನೂ ಆರೋಪಿ ಎಂದು ಎಫ್‌ಐಆರ್ ದಾಖಲಿಸಿತ್ತು ಎಂದು ತಿಳಿದು ಬಂದಿದೆ.ಪಿಡಬ್ಲ್ಯೂಡಿ ಇಲಾಖೆ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ(ಎಲ್‌ಒಸಿ) ಮಾಡುವ ಉಸ್ತುವಾರಿಯನ್ನು ಸೋಮನಾಥ್ ಅವರು ಹೊತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಇದಕ್ಕೆ ಸಂಬಂಧಿಸಿದಂತೆ ಪಿಡಬ್ಲ್ಯುಡಿ ಇಲಾಖೆಯಿಂದ ಅನುಮೋದಿತವಾದ ಬಿಲ್‌ಗಳನ್ನು ಆರ್ಥಿಕ ಇಲಾಖೆ ಪರಿಶೀಲಿಸಿದ ನಂತರ ಹಣ ಬಿಡುಗಡೆಗೆ ಅನುಮತಿ ನೀಡುತ್ತದೆ. ಆರ್ಥಿಕ ಇಲಾಖೆಯ ಇದೇ ವಿಭಾಗದಲ್ಲಿ ಸೆಲ್ವಂ ಎಂಬಾತ ಡಿ ಗ್ರೂಪ್ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 4 ತಿಂಗಳ ಹಿಂದೆಯೇ ಎಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದರೂ ಈವರೆವಿಗೂ ದೋಷಾರೋಪಣೆ ಪಟ್ಟಿ ಸಲ್ಲಿಸದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಆರೋಪಿತ ಅಧಿಕಾರಿ, ನೌಕರರನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದ್ದೇ ಆಗಿದ್ದಲ್ಲಿ ಪ್ರಕರಣದ ಹಿಂದೆ ಯಾರಿದ್ದಾರೆ, ಆ ಹಣ ಯಾರಿಗೆ ಸೇರಿದ್ದು, ಅದು ಯಾರಿಗೆ ಸೇರಬೇಕಿತ್ತು ಎಂಬ ಹಲವು ಮಾಹಿತಿಗಳು ಹೊರಬರಲಿದ್ದವು.
ಇದೇ ಪ್ರಕರಣದಲ್ಲಿ ಆರೋಪಿತ ಅಧಿಕಾರಿಯೊಬ್ಬರ ಜೊತೆ ಸಂಪರ್ಕ ಇರಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮೂಲಕ ಎಸಿಬಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಈ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಎಸಿಬಿ ಅಧಿಕಾರಿಗಳು ಮುಂದಾಗಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ಸಂಬಂಧ ಎರಡೂ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಅರೋಪಗಳಿಗೆ ಈ ಪ್ರಕರಣ ಹೆಚ್ಚಿನ ಪುಷ್ಠಿ ನೀಡಿದೆ.
‘ಕೆಲವು ಪಟ್ಟಭದ್ರ ರಾಜಕಾರಣಿಗಳ ಮತ್ತು ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಕರ್ತವ್ಯ ನಿರ್ವಹಿಸದಿರುವುದೇ ಅತಿ ದೊಡ್ಡ ಅಪರಾಧಿ ಕೃತ್ಯ. ಆರೋಪಿತ ಅಧಿಕಾರಿ, ನೌಕರ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಗೋವಿಂದ ಕಾರಜೋಳ ಇಲಾಖೆಗೆ ಸೇರಿದವರು. ಗುತ್ತಿಗೆದಾರರಿಗೆ ಹಣ ಬಿಡುಗಡೆಗೆ ಕಮಿಷನ್ ನೀಡಲಾಗುತ್ತಿದೆ ಎಂಬ ಆರೋಪವನ್ನು ಈ ಪ್ರಕರಣ ಸಾಕ್ಷಿ. ಹೀಗಾಗಿ ಇದು ಕೂಡ ಕಮಿಷನ್ ಸರ್ಕಾರ ಎಂಬುದು ಸಾಬೀತಾಗಿದೆ. ಇವರ ಮೇಲೆ ಸೂಕ್ತ ತನಿಖೆ ನಡೆಸಿ ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ ಎಂಬುದನ್ನು ಹೊರಗೆಡವಿ ಅವರು ಎಷ್ಟೇ ಪ್ರಭಾವಿಶಾಲಿಗಳಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಇಷ್ಟೂ ದಿನಗಳವರೆಗೆ ತನಿಖೆಯನ್ನು ವಿಳಂಬ ಮಾಡಿ ಕರ್ತವ್ಯ ಲೋಪ ಎಸಗಿರುವ ಎಸಿಬಿ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತರು ವಿಚಾರಣೆ ನಡೆಸಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.