ಸಚಿವಾಲಯ ಅಧಿಕಾರಿ,ನೌಕರರು ಸ್ಯಾನಿಟೈಸರ್‌ ಬಳಸುತ್ತಿಲ್ಲ…ಥರ್ಮಲ್‌ ಸ್ಕ್ಯಾನಿಂಗ್‌ಗೂ ಒಳಪಡುತ್ತಿಲ್ಲ

ಬೆಂಗಳೂರು; ರಾಜ್ಯದಲ್ಲಿ ಕೊರೊನಾ ವೈರಸ್‌ ಹರಡುವಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುವ ಮೂಲಕ ಆತಂಕ ಸೃಷ್ಟಿಸುತ್ತಿದ್ದರೆ ಇತ್ತ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳದೆ ಮತ್ತು ಸ್ಯಾನಿಟೈಸರ್‌ ಬಳಸದೆಯೇ ಕಚೇರಿಗಳಿಗೆ ಹಾಜರಾಗಿ ಸೋಂಕನ್ನು ಹರಡುತ್ತಿದ್ದಾರೆ.!

ಕೋವಿಡ್‌-19ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸುವ ಸಂಬಂಧ ಆರೋಗ್ಯ ಇಲಾಖೆಯು ಹೊರಡಿಸಿದ್ದ ಮಾರ್ಗಸೂಚಿಗಳನ್ನು ಸರ್ಕಾರಿ ಅಧಿಕಾರಿ, ನೌಕರರುಗಳೇ ಉಲ್ಲಂಘಿಸುತ್ತಿದ್ದಾರೆ ಎಂಬುದಕ್ಕೆ ಇದೊಂದು ಕೈಗನ್ನಡಿಯಾಗಿದೆ.

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸೂಚಿಸಿದ್ದ ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರಿ ಅಧಿಕಾರಿ, ನೌಕರರು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಜನಸಾಮಾನ್ಯರು ಎಡತಾಕುವ ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ, ನೌಕರರು ವಹಿಸುತ್ತಿರುವ ನಿರ್ಲಕ್ಷ್ಯ, ಸೋಂಕು ಹರಡುವಿಕೆಗೆ ಕಾರಣವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ದಾಖಲೆಯೊಂದು ಲಭ್ಯವಾಗಿದೆ.

ಬೆಂಗಳೂರಿನ ವಿಕಾಸಸೌಧ ತಳಮಹಡಿ -3 ಹಾಗೂ 1ರಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಕಚೇರಿಗಳಿಗೆ ಬರುತ್ತಿರುವ ಹಲವು ಅಧಿಕಾರಿಗಳು ಮತ್ತು ನೌಕರರು ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಜರ್‌ಗಳನ್ನು ಬಳಸುತ್ತಿಲ್ಲ ಎಂಬ ಮಾಹಿತಿ ಸುತ್ತೋಲೆಯಿಂದ ತಿಳಿದು ಬಂದಿದೆ.

‘ಅಧಿಕಾರಿ ಮತ್ತು ನೌಕರರು ಮುಖ್ಯ ದ್ವಾರದಲ್ಲಿ ವ್ಯವಸ್ಥೆ ಮಾಡಲಾಗಿರುವ ಥರ್ಮಲ್‌ ಸ್ಕ್ಯಾನರ್‌ ಹಾಗೂ ಸ್ಯಾನಿಟೈಸರ್‌ನ್ನು ಬಳಸದೇ ನೇರವಾಗಿ ಕಛೇರಿಗೆ ಹಾಜರಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇದರಿಂದಾಗಿ ವೈರಸ್‌ ಹರಡುವಿಕೆಯ ನಿಯಂತ್ರಣವನ್ನು ಸೂಕ್ತ ರೀತಿಯಲ್ಲಿ ಮಾಡಿದಂತಾಗುವುದಿಲ್ಲ. ಇದು ಇತರೆ ಸಹೋದ್ಯೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ,’ ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ(ಕಾರ್ಯಕಾರಿ) ಸರ್ಕಾರದ ಉಪ ಕಾರ್ಯದರ್ಶಿ ಎಚ್‌ ಎಚ್‌ ಚನ್ನಬಸಪ್ಪ ಅವರು 2020ರ ಜುಲೈ 16ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧ ತಳಮಹಡಿ-3 ಹಾಗೂ 1ರಲ್ಲಿ ವಾಹನ ನಿಲುಗಡೆ ಮಾಡಿ ಕಚೇರಿಗಳಿಗೆ ಪ್ರವೇಶಿಸುವ ಅಧಿಕಾರಿ, ನೌಕರರು ಮುಖ್ಯ ದ್ವಾರದಲ್ಲಾಗಲಿ, ಸಮೀಪದಲ್ಲಿ ಥರ್ಮಲ್‌ ಸ್ಕ್ಯಾನರ್‌ ಮಾಡುವ ಸ್ಥಳದಲ್ಲೇ ಆಗಲಿ, ಸ್ವ ಪ್ರೇರಣೆಯಿಂದ ಸ್ಕ್ಯಾನಿಂಗ್‌ಗೆ ಒಳಪಟ್ಟು ಕಚೇರಿ ಪ್ರವೇಶಿಸಬೇಕು ಎಂದು ಸೂಚಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿಯಲ್ಲಿ ಸಚಿವಾಲಯದ ಬಹುತೇಕ ಕಚೇರಿಗಳಿವೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಐಎಎಸ್‌, ಕೆಎಎಸ್‌ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಅಧಿಕಾರಿ, ನೌಕರರುಗಳಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಬಹುತೇಕ ಕಚೇರಿಗಳು ಸೀಲ್‌ಡೌನ್‌ ಕೂಡ ಆಗಿವೆ. ಆದರೂ ಅಧಿಕಾರಿ, ನೌಕರರು ಇದರಿಂದ ಪಾಠ ಕಲಿತಿಲ್ಲ.

ಅಲ್ಲದೆ ಸಚಿವಾಲಯದ ಕಚೇರಿಗಳಿಗೆ ಶಾಸಕರು ಮತ್ತು ಸಾರ್ವಜನಿಕರು ದಿನನಿತ್ಯ ಭೇಟಿ ನೀಡುತ್ತಲೇ ಇರುತ್ತಾರೆ. ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ತಾಲೂಕು ಪ್ರದೇಶಗಳ ಜನರು ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಮನವಿಗಳನ್ನು ಅಧಿಕಾರಿಗಳಿಗೆ ಸಲ್ಲಿಸುತ್ತಾರೆ. ಹಾಗೆಯೇ ಕಚೇರಿಯ ನೌಕರರೊಂದಿನಗಿನ ಸಂಪರ್ಕ ಇಟ್ಟುಕೊಂಡಿರುತ್ತಾರೆ.

ಆದರೂ ಅಧಿಕಾರಿಗಳು ಸ್ಯಾನಿಟೈಸರ್‌ ಬಳಸುತ್ತಿಲ್ಲ. ಥರ್ಮಲ್‌ ಸ್ಕ್ಯಾನಿಂಗ್‌ಗೂ ಒಳಪಡುತ್ತಿಲ್ಲ. ಅಧಿಕಾರಿ, ನೌಕರರು ಬೇಜವಾಬ್ದಾರಿ ತೋರುತ್ತಿರುವುದು ಸೋಂಕು ಹರಡುವಿಕೆಗೆ ಕಾರಣವಾಗಲಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಆಗಸ್ಟ್‌ 7ರಂದು 2,147 ಮಂದಿ ಸೋಂಕಿತರಾಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆಯಲ್ಲದೆ ಈವರೆವಿಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ 69,572 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹಾಗೆಯೇ ಬೆಂಗಳೂರು ನಗರವೊಂದರಲ್ಲೇ ಶೆ.85.7ರಷ್ಟು ಮಂದಿಗೆ ರೋಗ ಲಕ್ಷಣಗಳಿಲ್ಲದಿದ್ದರೂ ಕೋವಿಡ್‌-19ನಿಂದ ಬಾಧಿತರಾಗಿದ್ದಾರೆ.

ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಗುರುತಿಸುವಲ್ಲಿಯೂ ಸಾಕಷ್ಟು ಹಿನ್ನಡೆಯಾಗಿದೆ. ಇದರ ನಡುವೆಯೂ 1.63 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿರುವುದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದ್ದರೂ ಸರ್ಕಾರಿ ಅಧಿಕಾರಿ, ನೌಕರರು ಮಾತ್ರ ಮುಂಜಾಗ್ರತಾ ಕ್ರಮಗಳನ್ನು ವಹಿಸದೇ ಇರುವುದು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

the fil favicon

SUPPORT THE FILE

Latest News

Related Posts