ಕೋವಿಡ್‌; ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ನಿರ್ದೇಶಿಸಿ ಇಲಾಖೆಗೆ 30 ಪ್ರಶ್ನಾವಳಿ ನೀಡಿದ ಪಿಎಸಿ

ಬೆಂಗಳೂರು; ಕೋವಿಡ್‌-19ರ ನಿರ್ವಹಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಕೀಯ ಪರಿಕರಗಳ ಒಟ್ಟಾರೆ ಖರೀದಿ ಪ್ರಕ್ರಿಯೆಗಳ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪ್ರಧಾನ ಮಹಾಲೇಖಪಾಲರಿಗೆ (ಸಿಎಜಿ) ಸೂಚಿಸಿದೆ.


ವಿಶೇಷ ಲೆಕ್ಕಪರಿಶೋಧನೆ ನಡೆಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಿಎಜಿ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಮತ್ತೊಂದು ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದೆ. ವೈದ್ಯಕೀಯ ಪರಿಕರಗಳ ಖರೀದಿ ಪ್ರಕ್ರಿಯ ಮತ್ತು ನಡೆದಿದೆ ಎನ್ನಲಾಗಿರುವ ಅಕ್ರಮ ಪ್ರಕರಣಗಳು ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಗಿರುವ ಬೆನ್ನಲ್ಲೇ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ಸೂಚಿಸಿರುವುದು ಮಹತ್ವ ಪಡೆದುಕೊಂಡಿದೆ.


ವೈದ್ಯಕೀಯ ಪರಿಕರಗಳ ಖರೀದಿಯಲ್ಲಾಗಿರುವ ಗಂಭೀರ ಸ್ವರೂಪದ ಅಕ್ರಮ ಪ್ರಕರಣಗಳ ಕುರಿತು ಕರ್ನಾಟಕ ರಾಷ್ಟ್ರಸಮಿತಿ ನೀಡಿದ್ದ ಖಾಸಗಿ ದೂರಿನ ಅನ್ವಯ ಪರಿಶೀಲನೆ ನಡೆಸುತ್ತಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ವಿಶೇಷ ಲೆಕ್ಕಪರಿಶೋಧನೆ ನಡೆಸಲು ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.


ಈ ಬೆಳವಣಿಗೆ ನಡುವೆಯೇ ವೈದ್ಯಕೀಯ ಪರಿಕರಗಳ ಖರೀದಿ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಒಟ್ಟು 30 ಪ್ರಶ್ನಾವಳಿಗಳನ್ನು ನೀಡಿದೆ. ಈ ಪ್ರಶ್ನಾವಳಿಗೆ ತ್ವರಿತಗತಿಯಲ್ಲಿ ಉತ್ತರಿಸಬೇಕು ಎಂದು ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.


ಪ್ರಶ್ನಾವಳಿಗಳ ಪಟ್ಟಿ ಈ ಕೆಳಗಿನಂತಿವೆ


1. ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಸರಬರಾಜು ಮಾಡಿದ್ದ ಪಿಪಿಇ ಕಿಟ್‌ಗಳ ಗುಣಮಟ್ಟವನ್ನು ಯಾವ ಹಂತದಲ್ಲಿ ಪರಿಶೀಲಿಸಲಾಯಿತು? ಖರೀದಿಯ ಒಟ್ಟು ದಾಸ್ತಾನನ್ನು ದಾಸ್ತಾನಿಗೆ ತೆಗೆದುಕೊಳ್ಳುವ ಮುನ್ನ ಗುಣಮಟ್ಟ, ಸರಬರಾಜು ಮಾಡಿದ ಒಟ್ಟು ಸಂಖ್ಯೆ, ಯಾವ ಹಂತದ ಅಧಿಕಾರಿಗಳು ಪರಿಶೀಲಿಸಿದರು? ಡೆಲಿವರಿ ಚಲನ್, ಮತ್ತು ದಾಸ್ತಾನಿಗೆ ತಾಳೆ ಹಾಕಿ ಪ್ರಮಾಣೀಕರಿಸಿದವರು ಯಾರು? ಈ ಪ್ರಮಾಣೀಕೃತ ಡೆಲಿವರಿ ಚಲನ್‍ಗಳನ್ನು ಒದಗಿಸುವುದು. ಗುಣ ಮಟ್ಟ ಪರಿಶೀಲಿಸದೆಯೇ ದಾಸ್ತಾನಿಗೆ ತೆಗೆದುಕೊಳ್ಳಲು ಯಾರಾದರೂ ಅಧಿಕಾರಿ ಸೂಚಿಸಿದ್ದರೆ ಹಾಗಿದ್ದಲ್ಲಿ ಅವರ ಸೂಚನೆ ಮೌಖಿಕವೋ ಅಥವಾ ಲಿಖಿತ ರೂಪದ ಸೂಚನೆಯಾಗಿತ್ತೇ?


2. ಗುಣಮಟ್ಟವಿಲ್ಲದ ಕಿಟ್‌ಗಳನ್ನು ಪೂರೈಸಲಾಗಿದೆಯೆಂದು ಅಂತಹ ಪೂರೈಕೆದಾರರಿಗೆ ಜಿಲ್ಲೆಗಳಿಂದ ಬಂದ ದೂರುಗಳ ಆಧಾರದ ಮೇಲೆ ಸುಧಾರಣೆಗಳನ್ನು ಸೂಚಿಸಲಾಗಿದೆಯೆಂದು, ಆದರೂ ಸಹ ಹೊಸ ಹೊಸ ಕಿಟ್‍ಗಳು ಸ್ವೀಕೃತವಾದಾಗಲೂ ಗುಣಮಟ್ಟದ ಪ್ರಶ್ನೆಗಳು ಪದೇ ಪದೇ ಉದ್ಭವಿಸುತ್ತಿವೆ ಎಂದು ಹೆಚ್ಚುವರಿ ನಿರ್ದೇಶಕರು ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್‌ಹೌಸಿಂಗ್‌ ಸೊಸೈಟಿರವರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ಒದಗಿಸುವುದು. ಪದೇ ಪದೇ ಗುಣಮಟ್ಟದ ಪ್ರಶ್ನೆಗಳು ಉದ್ಭವವಾಗಿದೆ ಎಂದ ಮೇಲೆ ದಾಸ್ತಾನಿಗೆ ತೆಗೆದುಕೊಂಡು ಜಿಲ್ಲೆಗಳಿಗೆ ಮತ್ತು ಆಸ್ಪತ್ರೆಗಳಿಗೆ ಪೂರೈಸುವ ಮುನ್ನ ಗುಣಮಟ್ಟ, ಸಂಖ್ಯೆ ಮತ್ತು ಇತರ ಅವಶ್ಯಕ ವಿವರಗಳನ್ನು ಪರಿಶೀಲಿಸದೇ ಇರಲು ಕಾರಣರಾದ ಅಧಿಕಾರಿಗಳ ಪಟ್ಟಿ ಒದಗಿಸುವುದು (ವೃಂದವಾರು). ಈ ಪ್ರಕರಣದಲ್ಲಿ ಕರ್ತವ್ಯಲೋಪವೇನಾದರೂ ಮೇಲುನೋಟಕ್ಕೆ ಕಂಡುಬಂದಿದೆಯೇ? ಹಾಗಿದ್ದಲ್ಲಿ ಅಂತಹ ಕರ್ತವ್ಯಲೋಪ ಎಸಗಿರುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಈವರೆವಿಗೂ ಕೈಗೊಂಡಿರುವ ಕ್ರಮದ ವಿವರ ಒದಗಿಸುವುದು.


3. ಪಿ.ಪಿ.ಇ. ಕಿಟ್‌ಗಳ ಗಾತ್ರ, ಅಳತೆ ಮತ್ತು ಗುಣಮಟ್ಟ ಹಾಗೂ ಸುರಕ್ಷತೆಯ ಮಾನದಂಡಗಳನ್ನು ಪರಿಶೀಲಿಸಲು ಯಾವುದಾದರೂ ಸಂಸ್ಥೆಯನ್ನು ನಿಗದಿಪಡಿಸಲಾಗಿದೆಯೇ? ಎಷ್ಟು ಕಿಟ್‌ಗಳನ್ನು ಪರೀಕ್ಷಿಸಲಾಗಿದೆ? ಪ್ರತಿ ಕಿಟ್ ಪರೀಕ್ಷೆಗೆ ಪಾವತಿಸಲಾಗಿರುವ ಶುಲ್ಕವೆಷ್ಟು?


4. ಬಳಕೆಗೆ ಯೋಗ್ಯವಲ್ಲದ ಮತ್ತು ವಿಶ್ವಾಸರ್ಹವಲ್ಲವೆಂದು ರಾಜಸ್ಥಾನ ಸರ್ಕಾರ ಕೈಬಿಟ್ಟಿದ್ದ ಪಿ.ಪಿ.ಇ. ಕಿಟ್‌ಗಳನ್ನು ಬಳಸಿಕೊಳ್ಳಲು ಯಾವ ಅಧಿಕಾರಿ ಸೂಚಿಸಿದ್ದರು? ಈ ಕಿಟ್‌ಗಳನ್ನು ಖರೀದಿಸುವ ಮುನ್ನ ಪ್ರಮಾಣೀಕೃತವಾಗಿವೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸಲಿಲ್ಲವೇಕೆ? ಒಂದು ವೇಳೆ ಪ್ರಮಾಣೀಕೃತವಾಗಿದೆಯೆಂಬುದು ಖಾತ್ರಿಯಾಗದಿದ್ದಲ್ಲಿ ಅಂತಹ ಕಿಟ್‍ಗಳನ್ನು ತಿರಸ್ಕರಿಸಲಿಲ್ಲವೇಕೆ. ಪರಿಶೀಲಿಸುವ ಮತ್ತು ತಿರಸ್ಕರಿಸುವ ಅಧಿಕಾರ ಹೊಂದಿದ್ದ ಹಾಗೂ ಹೊಣೆಗಾರಿಕೆ ಹೊಂದಿದ್ದ ಅಧಿಕಾರಿ, ಸಿಬ್ಬಂದಿ ವೃಂದವಾರು ವಿವರ ಒದಗಿಸುವುದು.


5. ಉತ್ಪಾದಕರಲ್ಲದವರಿಂದ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆಯೇ? ಸಾಫ್ಟ್‍ವೇರ್ ಉತ್ಪಾದನಾ / ವೆಬ್‍ಸೈಟ್ ಅಭಿವೃದ್ಧಿಪಡಿಸುವ ಕಂಪನಿಯಾಗಿರುವ ಕೆಲ ಕಂಪನಿಗಳು ಪಿ.ಪಿ.ಇ. ಕಿಟ್‌ಗಳನ್ನು ಪೂರೈಸಿವೆಯೇ? ಒಂದು ವೇಳೆ ಇಂತಹ ಕಂಪನಿಗಳು ಪೂರೈಸಿದ್ದರೆ ಆ ಕಂಪನಿಗಳು ಪೂರೈಸಿರುವ ಪಿ.ಪಿ.ಇ. ಕಿಟ್‍ಗಳು ಯಾವ ಮೂಲ ಉತ್ಪಾದಕ ಕಂಪನಿಗೆ ಸೇರಿದವುಗಳಾಗಿವೆ?


6. ತಲಾ ಪಿ.ಪಿ.ಇ. ಕಿಟ್‍ನ ಉತ್ಪಾದಕ ಕಂಪನಿಯ ಮೂಲದರ ಹಾಗೂ ಸರಬರಾಜು ಮಾಡಿರುವ ಡೀಲರ್ ಕಂಪನಿಗಳ ನಡುವಿನ ದರದಲ್ಲಿ ಏನಾದರೂ ವ್ಯತ್ಯಾಸವಿದೆಯೇ? ವ್ಯತ್ಯಾಸವಿದ್ದರೆ ಆ ವ್ಯತ್ಯಾಸದ ಪ್ರಮಾಣವೆಷ್ಟು? ಸಾಗಾಣಿಕೆ ಮತ್ತು ಸರಬರಾಜು ದರವನ್ನು ಪ್ರತ್ಯೇಕವಾಗಿ ಪಾವತಿಸಲಾಗಿದೆಯೇ? ಎಲ್ಲಾ ಸರ್ಕಾರಿ ಶುಲ್ಕ ಮತ್ತು ತೆರಿಗೆಗಳನ್ನು ಪಾವತಿಸಲಾಗಿದೆಯೇ?


7. ಹಾಗಿದ್ದರೆ ಈ ಕಂಪನಿಗಳು ಸರಬರಾಜು ಮಾಡಿರುವ ವೈದ್ಯಕೀಯ ಉಪಕರಣಗಳಿಗೆ ತೆರಿಗೆ ಪಾವತಿಸಲು ತಮ್ಮ ಅರ್ಹತಾ ಪಟ್ಟಿಯಲ್ಲಿ ಜಿ.ಎಸ್.ಟಿ. ಪ್ರಮಾಣ ಪತ್ರದಲ್ಲಿ ಈ ಸರಕನ್ನು ಘೋಷಿಸಿಕೊಂಡಿವೆಯೇ? ಹಾಗಿದ್ದಲ್ಲಿ ಆ ಕಂಪನಿಗಳು ಜಿ.ಎಸ್.ಟಿ. ಪಾವತಿಸಿರುವ ಬಗ್ಗೆ ಜಿ.ಎಸ್.ಟಿ.ಆರ್-3 ನಮೂನೆಯಲ್ಲಿ ರಿಟರ್ನ್ಸ್‌ ಫೈಲ್ ಮಾಡಿ ಸಲ್ಲಿಸಿವೆಯೇ? ಈ ಕಂಪನಿಗಳಿಗೆ ಸರಬರಾಜು ಆದೇಶದ ನಂತರ ಏನಾದರೂ ಮುಂಗಡ ಹಣ ನೀಡಲಾಗಿತ್ತೇ? ಹಾಗಿದ್ದಲ್ಲಿ ಎಷ್ಟು ಹಣ ನೀಡಲಾಗಿತ್ತು? ಈ ರೀತಿ ಮುಂಗಡ ಹಣ ನೀಡಲು ಬ್ಯಾಂಕ್ ಗ್ಯಾರಂಟಿ ಪಡೆಯಲಾಗಿತ್ತೇ?


8. ಪಿ.ಪಿ.ಇ. ಕಿಟ್ ಮತ್ತು ಇತರ ಸಲಕರಣೆಗಳನ್ನು ಆಮದು ಮಾಡಿಕೊಂಡ ಸರಬರಾಜುದಾರರು ಬಿಲ್ ಆಫ್ ಎಂಟ್ರಿ ಸಲ್ಲಿಸಿದ್ದಾರೆಯೇ? ಪ್ರತಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಬಿಲ್ ಆಫ್ ಎಂಟ್ರಿ, ದಾಸ್ತಾನು ಕೋಷ್ಟಕ, ದಾಸ್ತಾನಿನಿಂದ ಸರಬರಾಜು ಮಾಡಲಾದ ಕೋಷ್ಟಕ ಮತ್ತು ದೈನಂದಿನ ದಾಸ್ತಾನು ಕೋಷ್ಟಕಗಳನ್ನು ನಿರ್ವಹಿಸಲಾಗಿದೆಯೇ? ಈ ದಾಸ್ತಾನು ಕೋಷ್ಟಕಗಳಿಗೆ ಸಂಬಂಧಪಟ್ಟಂತೆ ಯಾವುದಾದರೂ ಹಂತದಲ್ಲಿ ತಪಾಸಣೆ ನಡೆದಿದೆಯೇ? ಈ ಬಗ್ಗೆ ಯಾವುದಾದರೂ ವರದಿ ಸಲ್ಲಿಕೆಯಾಗಿದೆಯೇ? ಹಾಗಿದ್ದಲ್ಲಿ ಆ ವರದಿಯ ಪ್ರತಿಯನ್ನು ಒದಗಿಸುವುದು.


9. ಸ್ಯಾನಿಟೈಸರ್ ಪೂರೈಕೆ ಸಂಬಂಧ ಯಾವುದಾದರೂ ಪ್ರಯೋಗಾಲಯದಿಂದ ಕಳಪೆ ಮಟ್ಟದ ಅಥವಾ ಗುಣಮಟ್ಟದಿಂದ ಕೂಡಿಲ್ಲದ ಸ್ಯಾನಿಟೈಸರ್ ಎಂಬ ಪ್ರಯೋಗಾಲಯ / ಔಷಧಿ ನಿಯಂತ್ರಣ ಪ್ರಾಧಿಕಾರಗಳಿಂದ ವರದಿ ಬಂದಿದೆಯೇ?


10. ಹಾಗೆಯೇ ವರದಿ ಬಂದಿದ್ದಲ್ಲಿ, ಎಸ್ ಎಂ ಫಾರ್ಮಾಸ್ಯುಟಿಕಲ್ಸ್ ಕಂಪನಿ ದರ ಖರೀದಿ/ ದರ ಒಪ್ಪಂದದಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದ್ದರೂ, ಗುಣಮಟ್ಟದ ಬಗ್ಗೆ ಗಂಭೀರ ಸ್ವರೂಪದ ಆರೋಪಗಳು ಮೇಲು ನೋಟಕ್ಕೆ ಸಾಬೀತಾದ ಮೇಲೂ ಆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲವೇಕೆ? ಕಪ್ಪು ಪಟ್ಟಿಗೆ ಸೇರಿಸುವ ಸಂಬಂಧ ಈವರೆವಿಗೂ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಈ ಕುರಿತು ನಡೆದಿರುವ ಸಭಾ ನಡವಳಿಗಳನ್ನು ಒದಗಿಸುವುದು.


11. ಎಸ್.ಎಂ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ ಸ್ಯಾನಿಟೈಸರ್ ಪೂರೈಕೆ ಮಾಡಿರುವ ಯಾವುದಾದರೂ ಕಂಪನಿಗೆ ಈಗಾಗಲೇ ಆ ಕಂಪನಿಯನ್ನು ಕಪ್ಪುಪಟ್ಟಿಗೆ ಏಕೆ ಸೇರಿಸಬಾರದೆಂದು ಕಾರಣ ಕೇಳಿ ನೋಟೀಸ್ ನೀಡಲಾಗಿತ್ತೇ? ಆದರೂ, ಆ ನೋಟೀಸನ್ನು ನಿರ್ಲಕ್ಷಿಸಿ ಇಂತಹ ಯಾವುದಾದರೂ ಕಂಪನಿಗೆ ಸ್ಯಾನಿಟೈಸರ್ ಪೂರೈಕೆ ಆದೇಶವನ್ನು ನೀಡಲಾಗಿದೆಯೇ? ಎಷ್ಟು ಪ್ರಮಾಣದ ಸ್ಯಾನಿಟೈಸರನ್ನು ಯಾವ ಯಾವ ದರದಲ್ಲಿ ಎಷ್ಟು ಸಾರಿ ಸರಬರಾಜು ಮಾಡಲಾಗಿದೆ?


12. ಈ ಸಂಬಂಧ ಎಷ್ಟು ಬಾರಿ ದರ ಹೆಚ್ಚಳ ಮಾಡಲಾಗಿದೆ? ಈ ರೀತಿ ಪ್ರತೀ ಬಾರಿ ದರ ಹೆಚ್ಚಳ ಮಾಡಿದಾಗ ಎಷ್ಟು ಪ್ರಮಾಣದ ಸ್ಯಾನಿಟೈಸರ್ ಮಾಡಲಾಗಿದೆ? ಪ್ರತೀ ಬಾರಿ ದರ ಹೆಚ್ಚಳ ಮಾಡಿ ಖರೀದಿಸಿರುವ ಕಾರ್ಯಾದೇಶಗಳ ಪ್ರತಿಗಳನ್ನು ಒದಗಿಸುವುದು? ಕೇಂದ್ರ ಸರ್ಕಾರ ಸ್ಯಾನಿಟೈಸರ್ ಪೂರೈಕೆಗೆ ದರ ನಿಗದಿಪಡಿಸಿತ್ತೇ? ಈ ದರಗಳು ಸಗಟು ಅಥವಾ ಚಿಲ್ಲರೆ ಖರೀದಿಯ ಪ್ರತ್ಯೇಕ ದರಗಳಾಗಿದ್ದವೇ? ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ಸಂಸ್ಥೆ ಸ್ಯಾನಿಟೈಸರ್ ಉತ್ಪಾದನೇ ಮಾಡಿದೆಯೇ?


13. ಇಂತಹ ತುರ್ತು ಸಂದರ್ಭದಲ್ಲಿ ಈ ಸಂಸ್ಥೆಯಿಂದ ಸರ್ಕಾರದ ಬಳಕೆಗೆ ಸ್ಯಾನಿಟೈಸರ್ ಖರಿದಿಸಲಾಗಿತ್ತೇ? ಹಾಗಿದ್ದಲ್ಲಿ, ಎಷ್ಟು ಪ್ರಮಾಣದ ಸ್ಯಾನಿಟೈಸರ್ ಖರೀದಿಸಲಾಗಿದೆ? ಸೋಪ್ಸ್ ಅಂಡ್ ಡಿಟೆರ್ಜಂಟ್ ಸಂಸ್ಥೆಯಿಂದ ಖರೀದಿಸಿ ಪೂರೈಸಿರುವ ಒಟ್ಟು ಸ್ಯಾನಿಟೈಸರ್ ಎಷ್ಟು? ಇನ್ನಿತರೆ ಕಂಪನಿಗಳಿಂದ ದುಬಾರಿ ದರದಲ್ಲಿ ಸ್ಯಾನಿಟೈಸರ್ ಖರೀದಿಯಿಂದ ಸರ್ಕಾರಕ್ಕೆ ಆಗಿರುವ ನಷ್ಟವೆಷ್ಟು? ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ಪಟ್ಟಿ ಒದಗಿಸುವುದು ಮತ್ತು ಕೈಗೊಂಡಿರುವ ಕ್ರಮಗಳ ವಿವರ ಒದಗಿಸುವುದು.


14. ಎಸ್.ಪಿ.ವೈ. ಸಂಸ್ಥೆಯು ಕರ್ನಾಟಕಕ್ಕೆ ಯಾವ ದರದಲ್ಲಿ ಸ್ಯಾನಿಟೈಸರ್ ಎಷ್ಟು ಪ್ರಮಾಣದಲ್ಲಿ (ಲೀಟರ್‌ವಾರು ಮತ್ತು ಮಿಲಿ ಲೀಟರ್‌ವಾರು ಹಾಗೂ ಕ್ಯಾನ್‍ವಾರು) ಪೂರೈಸಿದೆ. ಈ ಕಂಪನಿ ಸ್ಯಾನಿಟೈಸರ್ ಉತ್ಪಾದನೆಯ ಪರವಾನಿಗೆ ಪಡೆದುಕೊಂಡಿದ್ದು ಯಾವಾಗ? ಸ್ಯಾನಿಟೈಸರ್ ತಯಾರಿಕೆಯ ಅನುಭವವನ್ನು ಈ ಕಂಪನಿ ಹೊಂದಿತ್ತೇ?


15. ರಾಜ್ಯದಲ್ಲಿ ಸ್ಯಾನಿಟೈಸರ್ ಪೂರೈಕೆಯ ಗುತ್ತಿಗೆ ಪಡೆಯುವ ಮೊದಲು ಆ ಕಂಪನಿಯ ಪ್ರಮಾಣ ಪತ್ರಗಳನ್ನು, ವಿಶ್ವಾಸಾರ್ಹತೆಯನ್ನು ಪರಿಶೀಲಿಸಲಾಗಿದೆಯೇ? ಈ ಪೂರೈಕೆಯ ಮೊದಲು ಲ್ಯಾಬ್‍ಟೆಸ್ಟ್‍ಗೆ ಈ ಕಂಪನಿಯ ಸ್ಯಾನಿಟೈಸರನ್ನು ಕಳುಹಿಸಲಾಗಿತ್ತೇ? ಹಾಗಿದ್ದಲ್ಲಿ, ಲ್ಯಾಬ್ ವರದಿ ಒದಗಿಸಿ.


16. ಮೂಲ ದರ ಗುತ್ತಿಗೆ ಒಪ್ಪಂದದ ಪ್ರಕಾರ ಸ್ಯಾನಿಟೈಸರ್ ಸರಬರಾಜು ಮಾಡದ ಗುತ್ತಿಗೆದಾರ ಕಂಪನಿಗೆ ಅತ್ಯಲ್ಪ ಅವಧಿಯಲ್ಲೇ 250.00 ರು. ದರಕ್ಕೆ ಖರೀದಿ ಆದೇಶ ನೀಡಲು ಯಾವ ಅಧಿಕಾರಿ ಸೂಚಿಸಿದ್ದರು? ಮೌಖಿಕ ಅಥವಾ ಲಿಖಿತ ಸೂಚನೆ ಕುರಿತು ವಿವರ ಒದಗಿಸುವುದು.


17. ಎಸ್ ಎಂ ಫಾರ್ಮಾಸ್ಯುಟಿಕಲ್ಸ್ ಕಂಪನಿ ದುಪ್ಪಟ್ಟು ದರದಲ್ಲಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್ ಗುಣಮಟ್ಟದಿಂದ ಕೂಡಿರಲಿಲ್ಲವೆಂದು ಔಷಧ ನಿಯಂತ್ರಣ ಪ್ರಾಧಿಕಾರ ವರದಿ ನೀಡಿದ ಆಧಾರದ ಮೇಲೆ ಕಂಪನಿ ವಿರುದ್ಧ ಈವರೆವಿಗೂ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ವಿವರ ಒದಗಿಸುವುದು.


18. ವೆಂಟಿಲೇಟರ್‌ಗಳನ್ನು ಎಷ್ಟು ಖರೀದಿ ಮಾಡಲಾಗಿದೆ? ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಸಿದ ವೆಂಟಿಲೇಟರ್‌ಗಳ ಸಂಖ್ಯೆ ಎಷ್ಟು? ದೆಹಲಿಯ ಆರ್ ಕೆ ಮೆಡಿಕಲ್ ಸೊಲ್ಯೂಷನ್ಸ್ ಸರಬರಾಜು ಮಾಡಿದ್ದ ವೆಂಟಿಲೇಟರ್‌ಗಳ ಐಎಸ್‍ಒ ಗುಣಮಟ್ಟ ಸೂಚಿಸುವ ಪ್ರಮಾಣಪತ್ರ ಮತ್ತು ಸೂಕ್ತ ಪುರಾವೆಗಳು ಇಲ್ಲದಿದ್ದರೂ, ಮತ್ತು 10 ವರ್ಷಕ್ಕಿಂತ ಹಳೆಯದಾಗಿದ್ದ ಈ ವೆಂಟಿಲೇಟರ್‌ಗಳನ್ನು ಜಂಟಿ ತಪಾಸಣೆ ಮಾಡಲಾಯಿತೆ? ಹಾಗಿದ್ದಲ್ಲಿ ಈ ಸಂದರ್ಭದಲ್ಲಿ ತಪಾಸಣಾ ವರದಿ ಪ್ರತಿಗಳನ್ನು ಒದಗಿಸುವುದು. ಪ್ರತಿಯೊಂದು ವೆಂಟಿಲೇಟರ್‌ನ್ನು ತಪಾಸಣಾ ವರದಿಯನ್ನು ಸಿದ್ಧಪಡಿಸಲಾಗಿದೆಯೇ? ತಪಾಸಣೆ ನಡೆಯದೆಯೇ ದಾಸ್ತಾನಿಗೆ ತೆಗೆದುಕೊಂಡ ಅಧಿಕಾರಿಗಳ ವಿವರ ಒದಗಿಸುವುದು.


19. ಹಲವು ವರ್ಷಗಳ ಕಾಲ (43,500 ಗಂಟೆಗಳ ಕಾಲ) ಬಳಸಿರುವ, ಮುರಿದು ಹೋಗಿರುವ ಮತ್ತು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಣೆಗಾರಿಕೆ ನಿಗದಿಪಡಿಸಿದ್ದ ಅಧಿಕಾರಿಗಳ ವಿವರ ಒದಗಿಸುವುದು. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಈವರೆವಿಗೂ ಕೈಗೊಂಡಿರುವ ಕ್ರಮಗಳ ವಿವರ ಒದಗಿಸುವುದು.


20. ಕೇರಳ, ಒಡಿಶಾ ಸೇರಿದಂತೆ ಇನ್ನಿತರೆ ರಾಜ್ಯಗಳ ಆರೋಗ್ಯ ಇಲಾಖೆಗಳು ಕಪ್ಪು ಪಟ್ಟಿಗೆ ಸೇರಿಸಿದ್ದ ಗುಜರಾತ್ ಮೂಲದ ಆಕ್ಯುಲೈಫ್ ಕಂಪನಿಯಿಂದ ಗ್ಲೂಕೂಸ್ ಖರೀದಿಸಿರುವ ಅಧಿಕಾರಿಗಳ ವಿವರ ಒದಗಿಸುವುದು ಮತ್ತು ಈ ಸಂಬಂಧ ಯಾರ ವಿರುದ್ಧ ಶಿಸ್ತು ಕ್ರಮ ಜರುಗಿಸಿರುವ ವಿವರ ಒದಗಿಸುವುದು.


21. ಸಿರಿಂಜ್ ಉಪಕರಣಗಳ ಖರೀದಿಯಲ್ಲಿ ಸರ್ಕಾರಕ್ಕೆ ಆಗಿರುವ ನಷ್ಟದ ಕುರಿತು ವಿವರ ಒದಗಿಸುವುದು. ಸಿರಿಂಜ್ ಉಪಕರಣವನ್ನು ಯಾವ ಕಂಪನಿಯಿಂದ ಖರೀದಿಸಲಾಗಿದೆ? ಮೆಡಿ ಅರ್ಥ್ ಕೇರ್ ಲಿಮಿಟೆಡ್‌ನಿಂದ ಯಾವ ದರದಲ್ಲಿ ಉಪಕರಣಗಳನ್ನು ಖರೀದಿಸಲಾಗಿದೆ? ಮುಕ್ತ ಮಾರುಕಟ್ಟೆ ದರಕ್ಕಿಂತಲೂ ದುಬಾರಿ ದರದಲ್ಲಿ ಖರೀದಿಸಲು ಯಾವ ಅಧಿಕಾರಿ ಸೂಚಿಸಿದ್ದರು? ಮುಕ್ತ ಮಾರುಕಟ್ಟೆ ದರಕ್ಕಿಂತಲೂ ದುಬಾರಿ ದರದಲ್ಲಿ ಉಪಕರಣ ಖರೀದಿಯಿಂದ ಸರ್ಕಾರಕ್ಕೆ ನಷ್ಟವಾಗುವುದಂತಾಗುವುದಿಲ್ಲವೇ? ಹಾಗಾದರೆ ಎಷ್ಟು ನಷ್ಟವಾಗಿದೆ? ವಿವರ ಒದಗಿಸುವುದು


22. ಕೋವಿಡ್ 19ಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಚಾರಕ್ಕಾಗಿ ಬಾಡಿಗೆ ಆಧಾರದ ಮೇಲೆ ಪಡೆದಿರುವ ವಾಹನಗಳ ವಿವರ ಒದಗಿಸುವುದು( ಏಜೆನ್ಸಿ, ವಾಹನಗಳ ಸಂಖ್ಯೆ) ಈ ವಾಹನಗಳು ಯಾವ ಯಾವ ಸ್ಥಳದಲ್ಲಿ ಸಂಚರಿಸಿದೆ. (ದಿನಾಂಕವಾರು- ಕಿಲೋ ಮೀಟರ್ ವಾರು) ಬಳಸದೇ ಇರುವ ವಾಹನಗಳಿಗೂ ಎಷ್ಟು ಮೊತ್ತ ಪಾವತಿಸಲಾಗಿದೆ?


23. ಚೀನಾದ ಬಿವೈಡಿ ಕಂಪನಿಯಿಂದ ಆಮದು ಮಾಡಿಕೊಂಡ ಮಾಸ್ಕ್ ಖರೀದಿ ವಿವರ ಒದಗಿಸುವುದು. ಆಮದು ಮಾಡಿಕೊಂಡ ಕಂಪನಿಗಳು ಇಲಾಖೆಗೆ ಸಲ್ಲಿಸಿರುವ ಬಿಲ್ ಆಫ್ ಎಂಟ್ರಿಗಳನ್ನು ಒದಗಿಸುವುದು. ಬಿಲ್ ಆಫ್ ಎಂಟ್ರಿ ಸಲ್ಲಿಸದೇ ಇರುವ ಕಂಪನಿಗಳಿಗೆ ಈವರೆವಿಗೂ ಎಷ್ಟು ಹಣ ಪಾವತಿ ಆಗಿದೆ? ಕಂಪನಿವಾರು ಮೊತ್ತವಾರು ವಿವರ ಒದಗಿಸುವುದು.


24. ಕೋವಿಡ್-19ನಿಂದ ಬಳಲುತ್ತಿದ್ದ ಮಕ್ಕಳಿಗೆ ಆಮ್ಲಜನಕ ಪೂರೈಸುವ ಸಾಧನವನ್ನು ಎಷ್ಟು ಪ್ರಮಾಣದಲ್ಲಿ ಖರೀದಿಸಲಾಗಿದೆ? ಕಂಪನಿಗಳು ನಮೂದಿಸಿರುವ ದರ ಪಟ್ಟಿ ಒದಗಿಸುವುದು. ಈ ಉಪಕರಣಗಳ ಖರೀದಿಗೂ ಮುನ್ನ ಬೇರೆ ರಾಜ್ಯಗಳು ಇದೇ ನಿರ್ದಿಷ್ಟತೆಯ ಉಪಕರಣಗಳಿಗೆ ನಮೂದಿಸಿದ್ದ ದರವನ್ನು ಪರಿಶೀಲಿಸಿದ್ದರೆ ಅದರ ವಿವರ ಒದಗಿಸುವುದು.


25. ಕೋವಿಡ್-19 ನಿರ್ವಹಣೆಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಯು ಎಷ್ಟು ಸಂಖ್ಯೆಯಲ್ಲಿ ಎನ್-95 ಮಾಸ್ಕ್ಗಳನ್ನು ಖರೀದಿಸಿದೆ? ಯಾವ್ಯಾವ ಕಂಪನಿಯಿಂದ ಮಾಸ್ಕ್ಗಳನ್ನು ಯಾವ ದರದಲ್ಲಿ ಖರೀದಿಸಲಾಗಿದೆ? ( ಕಂಪನಿವಾರು-ದರವಾರು ಒದಗಿಸುವುದು)


26. ಎನ್-95 ಮಾಸ್ಕ್ ಖರೀದಿ ಸಂಬಂಧ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆ ನಡವಳಿಗಳ ಪ್ರತಿ ಒದಗಿಸುವುದು.


27. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರೆ ವೈದ್ಯಕೀಯ ಉಪಕರಣಗಳ ಖರೀದಿ ಸಂಬಂಧ ತಜ್ಞರು ಮಾಡಿದ್ದ ಶಿಫಾರಸ್ಸುಗಳ ವಿವರ ಒದಗಿಸುವುದು.


28. ತಜ್ಞರ ಶಿಫಾರಸ್ಸಿಲ್ಲದೆ ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳನ್ನೂ ಖರೀದಿಸಲಾಗಿದೆಯೇ? ಇದಕ್ಕೆ ಸಂಬಂಧಿಸಿದಂತೆ ಯಾವ ಹಂತದ ಅಧಿಕಾರಿ, ಸಿಬ್ಬಂದಿ ಮೇಲೆ ಹೊಣೆಗಾರಿಕೆ ನಿಗದಿಪಡಿಸಲಾಗಿದೆ? ವಿವರ ಒದಗಿಸುವುದು.


29. ಅಂಬುಲೆನ್ಸ್ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿ ಅಂದಾಜು ವೆಚ್ಚವನ್ನು 815ಕೋಟಿ ರೂ.ಗೆ ಏರಿಕೆ ಆಗಿರುವುದಕ್ಕೆ ತಜ್ಞರು ಅಥವಾ ಅಧಿಕಾರಿಗಳು ಸಭೆಯಲ್ಲಿ ನೀಡಿರುವ ಸಮರ್ಥನೆಗಳನ್ನು ಸಭಾ ನಡವಳಿಗಳೊಂದಿಗೆ ಒದಗಿಸುವುದು.


30. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ /ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಕೋವಿಡ್-19ರ ನಿರ್ವಹಣೆಗೆ ಖರೀದಿಸಿರುವ ಸ್ಯಾನಿಟೈಸರ್‌ , ಪಿಪಿಇ ಕಿಟ್, ವೆಂಟಿಲೇಟರ್, ಆಂಬುಲೆನ್ಸ್ ಖರೀದಿಸಿರುವ ವಿವರ ಒದಗಿಸುವುದು. (ಪ್ರತಿ ಸಾಮಗ್ರಿ-ಉಪಕರಣವಾರು-ದರವಾರು-ಕಂಪನಿವಾರು-ಸ್ವಾಯತ್ತ ಮೆಡಿಕಲ್ ಕಾಲೇಜುವಾರು)

SUPPORT THE FILE

Latest News

Related Posts