ಕೋವಿಡ್‌-19; ಬೊಕ್ಕಸದಲ್ಲಿ 27,000 ಕೋಟಿ ಇದ್ದರೂ ಪರಿಹಾರ ನೀಡಿದ್ದು ಕೇವಲ 403 ಕೋಟಿಯಷ್ಟೇ

ಬೆಂಗಳೂರು; ಕೋವಿಡ್‌-19ರ ಸಂಕಷ್ಟದಲ್ಲೇ ರಾಜ್ಯದ ಬೊಕ್ಕಸಕ್ಕೆ 2020ರ ಏಪ್ರಿಲ್‌ ಮತ್ತು ಜೂನ್‌ವರೆಗೆ ವಾಣಿಜ್ಯ ತೆರಿಗೆ, ಆರ್‌ಬಿಐನಿಂದ ಪಡೆದಿರುವ ಸಾಲ ಮತ್ತು ನೋಂದಣಿ, ಮುದ್ರಾಂಕ ಶುಲ್ಕ ಸಂಗ್ರಹ ಸೇರಿದಂತೆ ಒಟ್ಟು 27,091.76 ಕೋಟಿ ರು. ಬೊಕ್ಕಸಕ್ಕೆ ಜಮೆ ಆಗಿದೆ ಎಂದು ತಿಳಿದು ಬಂದಿದೆ. ವಿಪರ್ಯಾಸವೆಂದರೆ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ತತ್ತರಿಸಿ ಹೋಗಿರುವ ಹಣ್ಣು, ತರಕಾರಿ, ಹೂವು ಬೆಳೆಗಾರರು, ಮೆಕ್ಕೆಜೋಳ ರೈತರು, ಸವಿತಾ ಸಮಾಜ, ಆಟೋ, ಟ್ಯಾಕ್ಸಿ ಚಾಲಕರಿಗೆ ಈವರೆವಿಗೆ ರಾಜ್ಯ ಬಿಜೆಪಿ ಸರ್ಕಾರ ನೀಡಿರುವುದು ಕೇವಲ 403 ಕೋಟಿ ರು.ಗಳಷ್ಟೇ.


ಕೋವಿಡ್‌-19 ಸಂಕಷ್ಟವನ್ನೇ ನೆಪವಾಗಿರಿಸಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿ ಮಾರಾಟ ಮತ್ತು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಬಿಜೆಪಿ ಸರ್ಕಾರ, ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೇಳುತ್ತಿರುವ ಬೆನ್ನಲ್ಲೇ ತೆರಿಗೆ ಸೇರಿದಂತೆ ಇನ್ನಿತರೆ ಮೂಲಗಳಿಂದ ಸಂಗ್ರಹವಾಗಿರುವ ಹಣಕಾಸಿನ ವಿವರಗಳೂ ಇದೀಗ ಬಹಿರಂಗಗೊಂಡಿವೆ.


ಏಪ್ರಿಲ್‌-ಜೂನ್‌ 2020ರವರೆಗಿನ ಮೊದಲ ತ್ರೈಮಾಸಿಕದಲ್ಲಿ ವಾಣಿಜ್ಯ ತೆರಿಗೆ 13,245 ಕೋಟಿ, ಅಬಕಾರಿ ತೆರಿಗೆ 3,846.76 ಕೋಟಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಜುಲೈ 2019ರಿಂದ ಜೂನ್‌ 2020ರವರೆಗೆ ಶೇ.91.14ರಷ್ಟು ತೆರಿಗೆ ವಸೂಲಾಗಿದೆ ಎಂದು ಸರ್ಕಾರ ಮುದ್ರಿಸಿರುವ ಪುಸ್ತಕದಲ್ಲಿ ವಿವರಿಸಲಾಗಿದೆ.


ಇದರ ಪ್ರಕಾರ 9,932.84 ಕೋಟಿ ರು.ಗೆ ಎದುರಾಗಿ 9,052.43 ಕೋಟಿ ರು.ಸಂಗ್ರಹವಾದಂತಾಗಿದೆ. ಈ ಪೈಕಿ 2019ರಿಂದ ಜೂನ್‌ 2020ರವರೆಗೆ ಖರ್ಚಾಗಿರುವ ಮೊತ್ತವನ್ನು ಹೊರತುಪಡಿಸಿ ಅಂದಾಜು 2,000 ಕೋಟಿ ಸೇರಿದರೆ 19,091.76 ರು. ಆಗಲಿದೆ. ಆರ್‌ಬಿಐನಿಂದ ಈವರೆಗೆ ಒಟ್ಟು 8,000 ಕೋಟಿ ರು.ಗಳನ್ನು ಸಾಲವಾಗಿ ಪಡೆದಿರುವುದು ತಿಳಿದು ಬಂದಿದೆ. ಇದೆಲ್ಲ ಸೇರಿದರೆ ಒಟ್ಟು 27,091 ಕೋಟಿ ರು ಜಮೆ ಆದಂತಾಗಿದೆ.


ಆದರೂ ರಾಜ್ಯ ಬಿಜೆಪಿ ಸರ್ಕಾರ ಈಗಲೂ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳಿಕೊಳ್ಳುತ್ತಿದೆಯಲ್ಲದೆ ಬೊಕ್ಕಸದಲ್ಲಿ ಹಣವಿಲ್ಲ ಎಂದು ಕೈಚೆಲ್ಲಿ ಕೂತಿದೆ. ಬೊಕ್ಕಸದಲ್ಲಿ 27 ಸಾವಿರ ಕೋಟಿ ರು ಇದ್ದರೂ ಸಣ್ಣ, ಮಧ್ಯಮ ಬೆಳೆಗಾರರು, ಕೂಲಿ ಕಾರ್ಮಿಕರಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ.


ಹಣವಿದ್ದರೂ ಪರಿಹಾರ ವಿತರಿಸಲು ಅಡ್ಡಿಯೇನು?


ಹಣ್ಣು, ತರಕಾರಿ ಬೆಳೆಗಾರರಿಗೆ ಹೆಕ್ಟೇರ್‌ಗೆ 15,000 ರು.ನಂತೆ ಒಟ್ಟು 137 ಕೋಟಿ ರು. ವಿತರಿಸಲಾಗುವುದು ಎಂದು ಹೇಳಿದ್ದ ಸರ್ಕಾರ, ಈವರೆವಿಗೂ ಒಂದೇ ಒಂದು ಬಿಡಿಗಾಸನ್ನೂ ನೀಡಿಲ್ಲ. ಹೂ ಬೆಳೆಗಾರರಿಗೆ (11,887 ಹೆಕ್ಟೇರ್‌) ಒಂದು ಹೆಕ್ಟೇರ್‌ಗೆ 25,000 ರು.ನಂತೆ ಈವರೆಗೆ ಕೇವಲ 16 ಕೋಟಿ ರು. ಮಾತ್ರ ವಿತರಿಸಲಾಗಿದೆ. 15 ಕೋಟಿಯನ್ನು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.


ಮಡಿವಾಳರಿಗೆ ತಲಾ 5,000 ರು.ನಂತೆ ಪರಿಹಾರ ನೀಡಲಾಗುವುದು ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಸರ್ಕಾರ ಈವರೆವಿಗೆ ಕೇವಲ 19,887 ಮಂದಿಗೆ ತಲಾ 5,000 ಲೆಕ್ಕದಲ್ಲಿ 9.94 ಕೋಟಿ ರು. ಮಾತ್ರ ನೀಡಿದೆ. ಅದೇ ರೀತಿ ಸವಿತಾ ಸಮಾಜದ 2.30 ಲಕ್ಷ ಜನರಿಗೆ ತಲಾ 5,000 ಎಂದು ಹೇಳಿದ್ದ ಸರ್ಕಾರ, ಈವರೆವಿಗೆ 20,287 ಮಂದಿಗೆ ತಲಾ 5,000ದಂತೆ ಒಟ್ಟು 10.14 ಕೋಟಿ ರು.ಮಾತ್ರ ವಿತರಿಸಿರುವುದು ಗೊತ್ತಾಗಿದೆ.


1 ಲಕ್ಷ ಆಟೋ ಚಾಲಕರಿಗೆ ಮಾತ್ರ ಪರಿಹಾರ


ಹಾಗೆಯೇ 7.75 ಲಕ್ಷ ಸಂಖ್ಯೆಯಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ 5,000 ರು.ನಂತೆ ಈವರೆವಿಗೆ ಕೇವಲ 57.71 ಕೋಟಿ ರು.ಮಾತ್ರ ವಿತರಿಸಿದೆ. ಆದರೆ ಸರ್ಕಾರ ನೀಡಿದ್ದ ಪತ್ರಿಕಾ ಜಾಹೀರಾತಿನ ಪ್ರಕಾರ ಒಟ್ಟು 7.75 ಲಕ್ಷ ಪೈಕಿ 1,14,341 ಜನರಿಗೆ ವಿತರಿಸಿದೆ.


ನೇಕಾರರಿಗೆ ಸಿಕ್ಕಿದ್ದು ಕೇವಲ 6.61 ಕೋಟಿ


ಇನ್ನು, ನೇಕಾರ್‌ ಸಮ್ಮಾನ್‌ ಯೋಜನೆಯಡಿಯಲ್ಲಿ ಒಳಗೊಳ್ಳುವ 54,789 ನೇಕಾರರ ಪೈಕಿ ಕೇವಲ 33,075 ಜನರಿಗೆ ತಲಾ 2,000 ರು.ನಂತೆ ಒಟ್ಟು 6.61 ಕೋಟಿ ರು. ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ವಿದ್ಯುತ್‌ ಮಗ್ಗದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ತಲಾ 2,000 ರು.ನಂತೆ ಈವರೆವಿಗೆ 1.20 ಕೋಟಿ ರು. ನೀಡಿದೆ. 6,0004 ಜನರಿಗೆ ಮಾತ್ರ ತಲಾ 2,000 ರು.ನೀಡಿದ್ದರೂ ಜಾಹೀರಾತಿನಲ್ಲಿ 8,897 ಜನರಿಗೆ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.


ಲಾಕ್‌ಡೌನ್‌ ದಿನಗಳಿಂದ ಈವರೆವಿಗೆ ಸುಮಾರು 11 ಮಂದಿ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಸರ್ಕಾರ, ಬೊಕ್ಕಸದಲ್ಲಿ 26 ಸಾವಿರ ಕೋಟಿ ರು. ಇದ್ದರೂ ಪರಿಹಾರ ಮೊತ್ತ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.


40,250 ಸಂಖ್ಯೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರು.ನಂತೆ ಈವರೆವಿಗೆ 12.50 ಕೋಟಿ ರು. ನೀಡಲಾಗಿದೆ ಎಂದು ಸರ್ಕಾರ ಹೇಳಿದೆಯಾದರೂ ಇನ್ನೂ ಅರ್ಧದಷ್ಟು ಸಂಖ್ಯೆಯ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಹಣ ದೊರೆತಿಲ್ಲ ಎಂದು ತಿಳಿದು ಬಂದಿದೆ.


1/3 ಭಾಗದ ರೈತರಿಗೆ ಸಾಲ ದೊರೆತಿಲ್ಲ


ಇನ್ನು ಕೃಷಿ ಸಾಲ ವಿತರಣೆಯಲ್ಲಿಯೂ ಸರ್ಕಾರ ಭಾರೀ ಹಿನ್ನಡೆ ಅನುಭವಿಸಿದೆ. 2019-20ರಲ್ಲಿ 22.58 ಲಕ್ಷ ರೈತರಿಗೆ 13,577 ಕೋಟಿ ಸಾಲ ವಿತರಿಸಿದ್ದರೆ, ಪ್ರಸಕ್ತ ವರ್ಷದ ಈವರೆವಿಗೆ ಕೇವಲ 6.61 ಲಕ್ಷ ರೈತರಿಗೆ ಒಟ್ಟು 3,042.32 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಈ ಅಂಕಿ ಅಂಶಗಳ ಪ್ರಕಾರ 1/3 ಭಾಗದ ರೈತರಿಗೂ ಇನ್ನೂ ಸಾಲ ದೊರೆತಿಲ್ಲ ಎಂಬುದು ಗೊತ್ತಾಗುತ್ತದೆ. ವಾಣಿಜ್ಯ ಬ್ಯಾಂಕ್‌ಗಳಿಂದ ಸುಮಾರು 28 ಲಕ್ಷ ರೈತರು ಸುಮಾರು 15,000 ಕೋಟಿ ಸಾಲ ಪಡೆಯುತ್ತಾರೆ. ಆದರೆ ಈ ಬಾರಿ ರೈತರಿಗೆ ಸಮರ್ಪಕವಾದ ಸಾಲ ದೊರೆತಿಲ್ಲ ಎಂದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts