ಅಂತ್ಯ ಸಂಸ್ಕಾರ; ವಿಚಾರಣೆಗೆ ಹಾಜರಾಗಲು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ನೋಟೀಸ್‌

ಬೆಂಗಳೂರು; ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡುತ್ತಿರುವ ಪ್ರಕರಣ, ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಗುಣಮಟ್ಟವಿಲ್ಲದ ಪಿಪಿಇ ಕಿಟ್‌ ನೀಡಿರುವ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಇದೀಗ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟೀಸ್‌ ಜಾರಿಗೊಳಿಸಿದೆ. ಅಲ್ಲದೆ ಆಗಸ್ಟ್‌ 3ರಂದು ನಡೆಯುವ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.


ಎಚ್‌ ಕೆ ಪಾಟೀಲ್‌ ಅವರು ನೀಡಿರುವ ದೂರಿನ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆಯನ್ನು ಆಯೋಗದ ಪೂರ್ಣ ಪೀಠಕ್ಕೆ ವರ್ಗಾಯಿಸಿ ಆಯೋಗದ ಅಧ್ಯಕ್ಷ ಡಿ ಎಚ್‌ ವಘೇಲಾ ಅವರು ಆದೇಶಿಸಿದ್ದರು.


ಆಗಸ್ಟ್‌ 3ರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ವಿಚಾರಣೆಗೆ ಎಚ್‌ ಕೆ ಪಾಟೀಲ್‌ ಅವರು ಹಾಜರಾಗಲಿದ್ದಾರೆ. ಆಯೋಗದ ಪೂರ್ಣ ಪೀಠದಲ್ಲಿ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಅಮಾನವೀಯವಾಗಿ ನಡೆಸುತ್ತಿರುವ ಅಂತ್ಯ ಸಂಸ್ಕಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪುರಾವೆಗಳನ್ನೊದಗಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಅಮಾನವೀಯ ಅಂತ್ಯ ಸಂಸ್ಕಾರಗಳು ನಡೆಯುತ್ತಿದ್ದರೂ ಮೌನ ವಹಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗ ಭಂಡ ನಿರ್ಲಕ್ಷ್ಯವನ್ನು ಪ್ರದರ್ಶಿಸಿತ್ತು. ಈ ಕುರಿತು 2020ರ ಜುಲೈ 8ರಂದು ‘ದಿ ಫೈಲ್‌’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.


‘ಗೌರವಯುತ ಶವ ಸಂಸ್ಕಾರ, ಅಗತ್ಯ ಸಂದರ್ಭದಲ್ಲಿ ಆಂಬುಲೆನ್ಸ್‌ ವ್ಯವಸ್ಥೆ, ಸಕಾಲಕ್ಕೆ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವ ಅನುಕೂಲತೆ ಮತ್ತು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವೆ ನೀಡದೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ,’ ಎಂದು ಎಚ್‌ ಕೆ ಪಾಟೀಲ್ ಅವರು 2020ರ ಜುಲೈ 10ರಂದು ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು.
ಅಲ್ಲದೆ ಮಾನವ ಹಕ್ಕುಗಳನ್ನು ರಕ್ಷಿಸುವ ಪ್ರಜಾಸತ್ತಾತ್ಮಕ ಕರ್ತವ್ಯ ಹೊಂದಿರುವ ಸರ್ಕಾರವೇ ಇವುಗಳ ಉಲ್ಲಂಘನೆ ಬಗ್ಗೆ ಸುಮ್ಮನೆ ಕುಳಿತಿರುವುದು ಜನವಿರೋಧಿ ಕ್ರಮವಾಗುತ್ತದೆ. ಕಳೆದ ಕೆಲ ತಿಂಗಳಿನಿಂದ ಕೊರೊನಾ ಸೋಂಕಿನಿಂದಾಗಿ ರಾಜ್ಯದ ಜನ ವಿಲವಿಲ ಒದ್ದಾಡುತ್ತಿದ್ದಾರೆ. ರಾಜ್ಯದಲ್ಲಿ ದಿನವೊಂದಕ್ಕೆ 2,000ಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ ದೂರಿನಲ್ಲಿ ಗಮನ ಸೆಳೆದಿದ್ದರು.


ಪ್ರತಿ ನಿತ್ಯ 30-40 ಮಂದಿ ಸಾವಿಗೀಡಾಗುತ್ತಿದ್ದಾರೆ. ಆದರೆ ಸರ್ಕಾರ ನಿಷ್ಕ್ರೀಯತೆಯಿಂದಾಗಿ ಕೋವಿಡ್‌ ಕೇಂದ್ರಗಳು ಮತ್ತು ಆಂಬುಲೆನ್ಸ್‌ ಸೇವೆಯಲ್ಲಿ ಅಸಮರ್ಪಕವಾಗಿದೆ. ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ ಗುಣಮಟ್ಟದ ಪಿಪಿಇ ಕಿಟ್‌ ಒದಗಿಸದ ಕಾರಣ ಅವರ ಜೀವಕ್ಕೂ ಗಂಡಾಂತರ ಬಂದೊದಗಿದೆ,’ ಎಂದೂ ವಿವರಿಸಿದ್ದರು.


ಬಳ್ಳಾರಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಭಾವನೆಗಳಿಗೆ ಘಾಸಿಯಾಗುವ ರೀತಿಯಲ್ಲಿ ಶವಗಳ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದ್ದ ಎಚ್‌ ಕೆ ಪಾಟೀಲ್‌ ಅವರು ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದರು.


ಗೌರವಯುತ ಅಂತ್ಯ ಸಂಸ್ಕಾರಗಳು ಅತ್ಯಂತ ಪ್ರಮುಖವಾದ ಮಾನವ ಹಕ್ಕುಗಳು. ಇವುಗಳನ್ನು ರಾಜ್ಯದಲ್ಲಿ ದಿನನಿತ್ಯ ಉಲ್ಲಂಘಿಸಲಾಗುತ್ತಿದೆ. ಅಮಾನವೀಯ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಸರ್ಕಾರದ ವಿರುದ್ಧ ಈವರೆವಿಗೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.


ಅದಷ್ಟೇ ಅಲ್ಲ, ಕೊರೊನಾ ಸೋಂಕಿತರಿಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಅಂಬುಲೆನ್ಸ್‌ಗಳ ಕೊರತೆ ತೀವ್ರವಾಗಿವೆಯಲ್ಲದೆ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 2-3 ದಿನ ವಿಳಂಬವಾಗುತ್ತಿದೆ. ಸೂಕ್ತ ಸಮಯದಲ್ಲಿ ಅಂಬುಲೆನ್ಸ್‌ ಸಿಗದ ಕಾರಣ ಮನೆ ಬಾಗಿಲಲ್ಲೇ ಹಲವರು ಮೃತಪಟ್ಟಿದ್ದರೂ ಅಂಬುಲೆನ್ಸ್‌ಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಮಾನವ ಹಕ್ಕುಗಳ ಆಯೋಗ ಚಾಟಿಯನ್ನೂ ಬೀಸಿರಲಿಲ್ಲ.


ಕಾನೂನು ಸುವ್ಯವಸ್ಥೆ ಮತ್ತು ನ್ಯಾಯಾಂಗದಲ್ಲಿ ಉನ್ನತ ಸ್ಥಾನದಲ್ಲಿದ್ದವರೇ ಆಯೋಗದಲ್ಲಿದ್ದರೂ ಅಮಾನವೀಯ ರೀತಿಯಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೂ ಆಯೋಗದ ಕಚೇರಿಯಿಂದ ಹೊರಬರುತ್ತಿಲ್ಲ. ಕನಿಷ್ಠ ತುಟಿ ಬಿಚ್ಚುತ್ತಿಲ್ಲ, ಮುಖ್ಯ ಕಾರ್ಯದರ್ಶಿಗೆ ನೋಟೀಸ್‌ ಕೂಡ ಜಾರಿ ಮಾಡಿರಲಿಲ್ಲ.


ಮೃತ ಅಂತ್ಯ ಸಂಸ್ಕಾರ ನಡೆಸುವ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ಇವುಗಳು ಪರಿಣಾಮಕಾರಿಯಾಗಿ ಪಾಲನೆಯಾಗುತ್ತಿಲ್ಲ. ಮಾರ್ಗಸೂಚಿಗಳ ಪಾಲನೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನೂ ಹೊರಡಿಸಿಲ್ಲ. ಆದರೂ ಸರ್ಕಾರದಿಂದ ಈ ಕುರಿತು ವರದಿ ನೀಡುವಂತೆ ಆಯೋಗ ನಿರ್ದೇಶನ ನೀಡಿರಲಿಲ್ಲ.


ಆರೋಗ್ಯ ಸಚಿವ ಬಿ ಶ್ರೀರಾಮುಲು ತವರು ಜಿಲ್ಲೆ ಬಳ್ಳಾರಿಯಲ್ಲಿ ಮೃತಪಟ್ಟಿದ್ದ ಸೋಂಕಿತರ ಶವಗಳನ್ನು ವೈದ್ಯಕೀಯ ಸಿಬ್ಬಂದಿ ಗುಂಡಿಯಲ್ಲಿ ಬಿಸಾಡಿದ್ದರು. ಒಂದೇ ಗುಂಡಿಯಲ್ಲಿ ಹಲವು ಮೃತ ದೇಹಗಳನ್ನು ಮುಚ್ಚಿ ಹಾಕಿದ ಘಟನೆಗಳೂ ನಡೆದಿವೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಸೋಂಕಿತನ ಶವವನ್ನು ಜೆಸಿಬಿ ಯಂತ್ರದ ಮೂಲಕ ಮಣ್ಣು ಮಾಡಲಾಗಿತ್ತು.
ಮಂಗಳೂರಿನಲ್ಲಿ ಸೋಂಕಿತನ ಶವದ ಅಂತ್ಯ ಸಂಸ್ಕಾರಕ್ಕೆ ಅಡ್ಡಿಯುಂಟಾಗಿತ್ತು.

 

ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಸೋಂಕಿತನ ಶವ ಸಾಗಿಸಲು ಅಂಬುಲೆನ್ಸ್‌ ಸಿಗದ ಕಾರಣ ಮನೆ ಮುಂಬಾಗಿಲಲ್ಲೇ ಹಲವು ಗಂಟೆಗಳ ಕಾಲ ಇರಿಸಲಾಗಿತ್ತು. ಶವಗಳನ್ನು ಅರೆಬೆಂದ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದ ಕಾರಣ ನಾಯಿಗಳು ತಿಂದು ಹಾಕಿದ್ದ ಪ್ರಕರಣ ದಾವಣಗೆರೆ ನಗರದಲ್ಲಿ ವರದಿಯಾಗಿತ್ತು.


ಬಸ್‌ ತಂಗುದಾಣವೊಂದರಲ್ಲಿ ಮೃತ ಶರೀರ ಬಿಟ್ಟು ಹೋಗಿದ್ದ ಪ್ರಕರಣ ವರದಿಯಾಗಿತ್ತು. ಇಷ್ಟೆಲ್ಲಾ ಅಮಾನವೀಯ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗ ಗಮನಿಸಿರಲಿಲ್ಲ.

the fil favicon

SUPPORT THE FILE

Latest News

Related Posts