ಬೆಂಗಳೂರು; ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನದಲ್ಲಿರುವ ವಿಧಾನಸೌಧದ ಕೊಠಡಿಗಳು ಮತ್ತು ಶಾಸಕರ ಭವನದಲ್ಲಿರುವ ವಿಧಾನಸಭೆ ಸದಸ್ಯರ ಕೊಠಡಿಗಳನ್ನು ಸ್ಯಾನಿಟೈಸೇಷನ್ ಮಾಡಲು ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆಯೇ ನಿರ್ದಿಷ್ಟ ಕಂಪನಿಯೊಂದಕ್ಕೆ ಒಂದು ವರ್ಷದ ಗುತ್ತಿಗೆ ನೀಡಲು ವಿಧಾನಸಭೆ ಸಚಿವಾಲಯ ಮುಂದಾಗಿರುವುದು ಬಹಿರಂಗವಾಗಿದೆ.
ಪ್ರತಿ ದಿನವೂ ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಲು ತಿಂಗಳಿಗೆ 98.00 ಲಕ್ಷ ರು ಲೆಕ್ಕದಲ್ಲಿ ಒಂದು ವರ್ಷಕ್ಕೆ 11.76 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿದೆ. ವಿಧಾನಸಭೆ ಸಚಿವಾಲಯದ ಆಡಳಿತ ಶಾಖೆ ಈ ಕುರಿತು ಕಳಿಸಿದ್ದ ಪ್ರಸ್ತಾವನೆ ಕಡತಕ್ಕೆ ಆರ್ಥಿಕ ಇಲಾಖೆ ಅನುಮೋದನೆಯನ್ನೂ ನೀಡಿದೆ ಎಂದು ತಿಳಿದು ಬಂದಿದೆ.
ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಗಳನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿರುವ ಪ್ರತಿಪಕ್ಷ ಕಾಂಗ್ರೆಸ್, ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿರುವ ಹೊತ್ತಿನಲ್ಲೇ ಟೆಂಡರ್ ಪ್ರಕ್ರಿಯೆ ಇಲ್ಲದೆಯೇ 11.75 ಕೋಟಿ ರು. ಅಂದಾಜು ವೆಚ್ಚದಲ್ಲಿ ಶಾಸಕರ ಭವನಗಳಿಗೆ ಸ್ಯಾನಿಟೈಸೇಷನ್ ಗುತ್ತಿಗೆ ಪ್ರಕರಣ ಹೊರಬಿದ್ದಿದೆ. ವಿಧಾನಸಭೆ ಸಚಿವಾಲಯವೇ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರವನ್ನು ಕೊಟ್ಟಂತಾಗಿದೆ.
ಬೆಂಗಳೂರಿನ ಗಂಗಾ ನಗರದಲ್ಲಿರುವ ನಿರ್ದಿಷ್ಟ ಕಂಪನಿಯೊಂದಕ್ಕೆ ಒಂದು ವರ್ಷದ ಗುತ್ತಿಗೆ ನೀಡಲು ಮುಂದಾಗಿರುವ ವಿಧಾನಸಭೆ ಸಚಿವಾಲಯ, ಈ ಸಂಬಂಧ ಆರ್ಥಿಕ ಇಲಾಖೆಯಿಂದ 4(ಜಿ) ವಿನಾಯಿತಿಯನ್ನೂ ಪಡೆಯುವುದರಲ್ಲಿ ಸಫಲವಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.
ಒಟ್ಟು 5 ಸಮುಚ್ಛಯಗಳನ್ನೊಂದಿರುವ ಶಾಸಕರ ಭವನದಲ್ಲಿ ಅಂದಾಜು 400 ಕೊಠಡಿಗಳಿವೆ ಎನ್ನಲಾಗಿದೆ. ಈ ಪೈಕಿ ವಿಧಾನಸಭೆ ಸದಸ್ಯರಿಗೆ 300 ಕೊಠಡಿಗಳು ಮೀಸಲಾಗಿವೆ. ಇಷ್ಟೂ ಕೊಠಡಿಗಳಿಗೆ ಅಡಿ ಲೆಕ್ಕದಲ್ಲಿ ಪ್ರತಿ ದಿನವೂ ಸ್ಯಾನಿಟೈಸೇಷನ್ ಮಾಡಿಸಲಿದೆ ಎಂದು ತಿಳಿದು ಬಂದಿದೆ.
ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ. ಅಲ್ಪಾವಧಿ ಟೆಂಡರ್ ಕರೆಯಲು ಸಾಕಷ್ಟು ಅವಕಾಶಗಳು ಇದ್ದರೂ ಸಹ ಅದರ ಗೊಡವೆಗೆ ಹೋಗದ ವಿಧಾನಸಭೆ ಸಚಿವಾಲಯ ಆರ್ಥಿಕ ಇಲಾಖೆಯಿಂದ 4(ಜಿ) ಪಡೆದಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
1.00 ಲಕ್ಷ ರು. ಮೊತ್ತದ ಒಳಗಿನ ಕಾಮಗಾರಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವ ಅಧಿಕಾರ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಿದೆ. ಅದೇ ರೀತಿ 5.00 ಲಕ್ಷ ರು.ಮಿತಿಯೊಳಗೆ ಅನುಮೋದನೆ ನೀಡಲು ಸ್ಪೀಕರ್ ಕಾರ್ಯಾದೇಶ ಹೊರಡಿಸಬಹುದು. ಆದರೆ ಸ್ಯಾನಿಟೈಸೇಷನ್ ಮಾಡಿಸಲು ತಿಂಗಳಿಗೆ 98.00 ಲಕ್ಷ ರು.ವೆಚ್ಚ ಎಂದು ಅಂದಾಜಿಸಿರುವಾಗ ಟೆಂಡರ್ ಇಲ್ಲದೆಯೇ ನಿರ್ದಿಷ್ಟ ಕಂಪನಿಯೊಂದಕ್ಕೆ ಒಂದು ವರ್ಷದ ಅವಧಿಗೆ ಗುತ್ತಿಗೆ ನೀಡಲು ಮುಂದಾಗಿರುವುದರ ಹಿಂದೆ ಅಕ್ರಮ ನಡೆದಿರುವ ಶಂಕೆ ಇದೆ.
ಟೆಂಡರ್ ಕರೆಯಲು ಕಾಲಾವಕಾಶ ಇಲ್ಲದೇ ಇದ್ದ ಪಕ್ಷದಲ್ಲಿ ಕಂಪನಿಗಳಿಂದ ದರಪಟ್ಟಿ ಕರೆಯಬಹುದಿತ್ತು. ಆದರೆ ಈ ಪ್ರಕ್ರಿಯೆಯೂ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಪಾವಧಿ ಟೆಂಡರ್, ದರ ಪಟ್ಟಿ ಪಡೆಯದೇ ಏಕಪಕ್ಷೀಯವಾಗಿ ನಿರ್ದಿಷ್ಟ ಕಂಪನಿಗೆ ನೀಡಿರುವುದರ ಹಿಂದೆ ಕಮಿಷನ್ ವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅದೇ ರೀತಿ ಶಾಸಕರ ಭವನ ಗಣ್ಯಾತಿಗಣ್ಯರಿರುವ ಪ್ರದೇಶ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಉಚಿತವಾಗಿಯಾದರೂ ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಿಸಲು ಅವಕಾಶಗಳಿದ್ದವು. ಶಿವಾಜಿನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಕಾರಣ ಅಲ್ಲಿನ ಕಾರ್ಪೋರೇಟರ್ ಮತ್ತು ಬಿಬಿಎಂಪಿ ಆಯುಕ್ತರ ನೆರವು ಪಡೆಯಲು ಅವಕಾಶವಿತ್ತು. ಆದರೆ ಇದಾವುದರ ಗೊಡವೆಗೆ ವಿಧಾನಸಭೆ ಸಚಿವಾಲಯ ಹೋಗಿಲ್ಲದಿರುವುದು ಸಹಜವಾಗಿ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯ 28 ವಿಧಾನಸಭೆ ಕ್ಷೇತ್ರಗಳ ಸದಸ್ಯರೂ ಸೇರಿದಂತೆ ರಾಜ್ಯದ 224 ಸದಸ್ಯರು ಶಾಸಕರ ಭವನಗಳಿಗೆ ಬರುತ್ತಿಲ್ಲ. ಕೊಠಡಿಗಳಲ್ಲಿ ಬಹುತೇಕ ಶಾಸಕರು ತಂಗುತ್ತಿಲ್ಲ.
ಅಲ್ಲದೆ, 2020ರ ಮಾರ್ಚ್‌ನಲ್ಲಿ ಅಧಿವೇಶನ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ 2 ತಿಂಗಳು ಕಾಲ ಲಾಕ್‌ಡೌನ್ ಘೋಷಿಸಲಾಗಿತ್ತು. ಹತ್ತಿರಹತ್ತಿರ 4 ತಿಂಗಳಿನಿಂದಲೂ ಬಹುತೇಕ ಶಾಸಕರ ಕೊಠಡಿಗಳ ಬಾಗಿಲು ತೆರೆದಿಲ್ಲ. ಕೊರೊನಾ ವೈರಸ್ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಅಧಿವೇಶನ ನಡೆಸುವ ಬಗ್ಗೆ ವಿಧಾನಮಂಡಲದ ವಿಶೇಷ ಮಂಡಳಿಯೂ ಚರ್ಚಿಸಿಲ್ಲ. ಹೀಗಿರುವಾಗ ಶಾಸಕರ ಭವನದ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಿಸುವ ಔಚಿತ್ಯವೇನಿತ್ತು ಎಂಬ ಪ್ರಶ್ನೆಗಳು ಕೇಳಿ ಬಂದಿವೆ.
‘ಶಾಸಕರ ಭವನವನ್ನು ಕೋಟ್ಯಂತರ ರು. ವೆಚ್ಚದಲ್ಲಿ ಸ್ಯಾನಿಟೈಸೇಷನ್ ಮಾಡುತ್ತಿಲ್ಲ, ಇಡೀ ಶಾಸಕರ ಭವನವನ್ನೇ ಸ್ಯಾನಿಟೈಸರ್‌ನಿಂದ ಮುಳುಗಿಸಲಿದ್ದಾರೆ ಎಂದು ಕಾಣಿಸುತ್ತಿದೆ. ಬಿಬಿಎಂಪಿ ಉಚಿತವಾಗಿ ಮಾಡಬಹುದಾದ ಕೆಲಸವನ್ನು ದುಡ್ಡು ಕೊಳ್ಳೆ ಹೊಡೆಯಲೇಬೇಕು ಎಂದು ತೀರ್ಮಾನಿಸಿರುವ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಅಥವಾ ಸ್ಪೀಕರ್ ಕಾರ್ಯಾಲಯ ಈ ನಾಚಿಕೆಗೆಟ್ಟ, ಜನದ್ರೋಹಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನು ಈ ಕೂಡಲೇ ನಿಲ್ಲಿಸಬೇಕು. ಗುತ್ತಿಗೆ ಕಾರ್ಯಾದೇಶವನ್ನು ಯಾವುದೇ ಸಂದರ್ಭದಲ್ಲೂ ಹೊರಡಿಸಬಾರದು. ಬಿಬಿಎಂಪಿ ಸೇವೆಯನ್ನೇ ಪಡೆಯಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ.