ಕೋವಿಡ್‌ನಲ್ಲೂ ಕೃಷಿ ಸಾಲ ವಸೂಲಿ ; ಆರ್‌ಬಿಐ ಕ್ರಮದಿಂದಾಗಿ ಸರ್ಕಾರಕ್ಕೆ 40 ಕೋಟಿ ಹೊರೆ

ಬೆಂಗಳೂರು; ಕೋವಿಡ್‌-19 ರ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರ ಕೃಷಿ ಮತ್ತು ಸ್ವ ಸಹಾಯ ಗುಂಪುಗಳಿಂದ ಸಾಲ ವಸೂಲಾತಿಯನ್ನು ಮುಂದುವರೆಸಿದೆ. 2020ರ ಮಾರ್ಚ್‌ 1ರಿಂದ ಜೂನ್‌ 30ರ ಅವಧಿಗೆ ವಸೂಲಾತಿಗಿದ್ದ ಅವಧಿಯನ್ನೀಗ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆದೇಶದಿಂದ ಆಗಸ್ಟ್‌ 31ರವರೆಗೆ ವಿಸ್ತರಿಸಿರುವ ರಾಜ್ಯ ಸರ್ಕಾರಕ್ಕೀಗ 40 ಕೋಟಿ ರು.ಗಳ ಹೊರೆ ಬಿದ್ದಿದೆ.


ಸ್ವ ಸಹಾಯ ಗುಂಪುಗಳು ಮತ್ತು ಕೃಷಿ ಸಾಲ ವಸೂಲಾತಿ ಕುರಿತು ಸಹಕಾರ ಇಲಾಖೆ ನಡೆಸಿದ್ದ ಪರಿಶೀಲನೆ ವೇಳೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

‘ಕೋವಿಡ್‌-19ರ ಪರಿಸ್ಥಿತಿಯಲ್ಲೂ ಸಹ ಸಹಕಾರ ಸಂಘಗಳಲ್ಲಿ 2020-21ರಲ್ಲಿ 2020ರ ಜೂನ್‌ 30ರ ಅಂತ್ಯಕ್ಕೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ವಸೂಲಾತಿ ಕ್ರಮವಾಗಿ ಶೇ.91.99, 78.54 ಮತ್ತು 27.21ರಷ್ಟಿದೆ,’ ಎಂಬ ಮಾಹಿತಿ ಪರಿಶೀಲನೆ ಸಭೆಯ ನಡವಳಿಯಿಂದ ತಿಳಿದು ಬಂದಿದೆ.


ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರು. ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಇದೀಗ ಆಶಾ ಕಾರ್ಯಕರ್ತೆಯರಿಗೆ ಸ್ವ ಸಹಾಯ ಗುಂಪುಗಳನ್ನು ರಚಿಸುವ ಮೂಲಕ ಸಾಲ ಸೌಲಭ್ಯವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲು ಯೋಜನೆ ರೂಪಿಸಲು ಪರಿಶೀಲಿಸುತ್ತಿದೆ ಎಂದು ಗೊತ್ತಾಗಿದೆ.


2019-20ರಲ್ಲಿ 22.58 ಲಕ್ಷ ರೈತರಿಗೆ 13,577 ಕೋಟಿ ರು. ಕೃಷಿ ಸಾಲ ವಿತರಣೆಯಾಗಿದ್ದರೆ 2020-21ನೇ ಸಾಲಿನಲ್ಲಿ 24.80 ಲಕ್ಷ ರೈತರಿಗೆ 15,300 ಕೋಟಿ ರು. ಕೃಷಿ ಸಾಲ ವಿತರಿಸಲು ಗುರಿ ಹೊಂದಿದೆ. 2020ರ ಜೂನ್‌ 30ರ ಅಂತ್ಯಕ್ಕೆ 6.41 ಲಕ್ಷ ರೈತರಿಗೆ 4,510.74 ಕೋಟಿ ರು.ಕೃಷಿ ಸಾಲ ವಿತರಿಸಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ. 


2019ರ ಜೂನ್‌ 30ರ ಅಂತ್ಯಕ್ಕೆ 5.74 ಲಕ್ಷ ರೈತರಿಗೆ 3,638 ಕೋಟಿ ರು. ಕೃಷಿ ಸಾಲ ವಿತರಣೆಯಾಗಿತ್ತು. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ 68 ಲಕ್ಷ ರೈತರಿಗೆ 872 ಕೋಟಿ ರು.ನಷ್ಟು ಹೆಚ್ಚುವರಿ ಸಾಲ ನೀಡಿದೆ. ಇನ್ನು, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಬಡ್ಡಿ ಮನ್ನಾಕ್ಕೆ ಸಂಬಂಧಿಸಿದಂತೆ 92,525 ರೈತರಿಗೆ 466.14 ಕೋಟಿ ರು. ಬಡ್ಡಿ ಮನ್ನಾ ಪ್ರಯೋಜನ ದೊರೆಯಲಿದೆ.


200 ಕೋಟಿ ಅಸಲು ವಸೂಲಿ


ಈವರೆವಿಗೆ 45,020 ರೈತರಿಂದ ಅಂದಾಜು 200 ಕೋಟಿ ಅಸಲು ವಸೂಲಾಗಿದೆ. ಇದರಿಂದಾಗಿ 75.00 ಕೋಟಿ ರು. ಬಡ್ಡಿ ಮನ್ನಾ ಆಗಿದೆ. ಸರ್ಕಾರದಿಂದ 50 ಕೋಟಿ ರು.ಗಳ ಅನುದಾನವೂ ಬಿಡುಗಡೆ ಆಗಿದೆ. ಹಾಗೆಯೇ ಬೆಂಬಲ ಬೆಲೆ ಯೋಜನೆಯಡಿ 38,250 ಮೆಟ್ರಿಕ್‌ ಟನ್‌ ಎಫ್‌ ಎ ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಸಲು ಆದೇಶಿಸಿದೆ. ಇದರ ಪ್ರಕಾರ 2020ರಲ್ಲಿ 10,300 ರು.ನಂತೆ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಂದ ಖರೀದಿಸಲಿದೆ.


ಪ್ರತಿ ರೈತರಿಂದ ಪ್ರತಿ ಎಕರೆಗೆ 6 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್‌ ಉಂಡೆ ಕೊಬ್ಬರಿ ಖರೀದಿಸಲು 2020ರ ಜೂನ್‌ 11ರಂದೇ ಆದೇಶ ಹೊರಡಿಸಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರುಕಾಳು, ತೊಗರಿ, ಶೇಂಗಾ, ಕಡಲೆಕಾಳು, ಕೊಬ್ಬರಿ ಇತ್ಯಾದಿ ಉತ್ಪನ್ನಗಳನ್ನು 4,44,389 ರೈತರಿಂದ 41,13,694 ಕ್ವಿಂಟಾಲ್‌ಗಳನ್ನು 2379.92 ಕೋಟಿ ರು.ಮೌಲ್ಯದಲ್ಲಿ ಖರೀದಿಸಲು ಮುಂದಾಗಿದೆ.

the fil favicon

SUPPORT THE FILE

Latest News

Related Posts