ಕೋವಿಡ್‌ ಭ್ರಷ್ಟಾಚಾರ; ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ರಾಮ, ಕೃಷ್ಣನ ಲೆಕ್ಕವೆಷ್ಟು?

ಬೆಂಗಳೂರು; ಕೋವಿಡ್‌-19 ನಿರ್ವಹಣೆಗಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಈವರೆವಿಗೆ ಒಟ್ಟು 323 ಕೋಟಿ ರು. ಮಾತ್ರ ಖರ್ಚು ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಮತ್ತು ಸಚಿವ ಬಿ ಶ್ರೀರಾಮುಲು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಅಪೂರ್ಣ ಅಂಕಿ ಅಂಶಗಳನ್ನಷ್ಟೇ ಬಿಡುಗಡೆ ಮಾಡಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.


ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ತೆರೆದಿಡಬೇಕಿದ್ದ ಬಿಜೆಪಿ ಸರ್ಕಾರ, ಭಾಗಶಃ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ ಕಣ್ಣೊರೆಸುವ ತಂತ್ರವನ್ನು ಅನುಸರಿಸಿದೆ. ಅಪೂರ್ಣ ಅಂಕಿ ಅಂಶ ಮತ್ತು ಸಮರ್ಥನೀಯ ದಾಖಲೆಗಳನ್ನು ಬಿಡುಗಡೆ ಮಾಡದ ಸರ್ಕಾರ, ಹಗರಣ ನಡೆದೇ ಇಲ್ಲ ಎಂದು ಸಾಬೀತುಪಡಿಸುವಲ್ಲಿ ವಿಫಲವಾಗಿದೆ.
ಅದೇ ರೀತಿ ಅಶ್ವಥ್‌ ನಾರಾಯಣ್‌ ಮತ್ತು ಬಿ ಶ್ರೀರಾಮುಲು ಅವರು ನೀಡಿರುವ ಅಂಕಿ ಅಂಶಗಳಿಗೂ ಸಚಿವ ಅಶೋಕ್‌, ಎಸ್‌ ಟಿ ಸೋಮಶೇಖರ್‌ ಮತ್ತು ಗೋವಿಂದ ಕಾರಜೋಳ ಅವರು ಹೇಳಿದ್ದ ಖರ್ಚಿನ ಲೆಕ್ಕಾಚಾರಗಳಿಗೆ ತಾಳಮೇಳವೇ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.


ಆರೋಗ್ಯ ಇಲಾಖೆ 290 ಕೋಟಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 33 ಕೋಟಿ ಸೇರಿದಂತೆ ಒಟ್ಟು 323 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ ಬಿಜೆಪಿ ಸರ್ಕಾರ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೇವಲ 104.38 ಕೋಟಿ ರು ಖರ್ಚಿನ ಲೆಕ್ಕ ಕೊಟ್ಟಿದೆ. ಉಳಿದ 219 ಕೋಟಿ ರು. ಖರ್ಚಿನ ಬಗ್ಗೆ ದಾಖಲೆಗಳಿರಲಿ, ಅಂಕಿ ಅಂಶಗಳನ್ನು ಬಿಡುಗಡೆ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಅದೇ ರೀತಿ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿಯ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ ಅವರು ಇಲಾಖೆಯ ಆಯುಕ್ತರಿಗೆ 2020ರ ಏಪ್ರಿಲ್‌ 24ರಂದು ನೀಡಿದ್ದ ವರದಿಯಲ್ಲಿ ಉಲ್ಲೇಖಿಸಿರುವ ಕಂಪನಿಗಳ ಪೈಕಿ ಕೇವಲ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಬಗ್ಗೆ ವಿವರಣೆ ನೀಡಿದ ಶ್ರೀರಾಮುಲು ಅವರು, ಉತ್ಪಾದಕರಲ್ಲದ ಎ ಟೆಕ್‌ ಟ್ರಾನ್‌ (Atech Tron) ಮತ್ತು ರುದ್ರಾಂಶ್‌ ವಿಗ್‌ ಆಗ್ರೋ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ನಿಂದ ಖರೀದಿಸಿದ್ದ ಪಿಪಿಇ ಕಿಟ್‌ಗಳು ಮತ್ತು ಪಾವತಿಸಿರುವ ಮೊತ್ತದ ಬಗ್ಗೆ ಒಂದೇ ಒಂದು ಮಾಹಿತಿ ನೀಡದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಇನ್ನು, ವೆಂಟಿಲೇಟರ್‌ಗಳ ಖರೀದಿ ಕುರಿತು ನೀಡಿರುವ ಮಾಹಿತಿಯೂ ಅಪೂರ್ಣವಾಗಿದೆ. ತಮಿಳುನಾಡು ಸರ್ಕಾರ ಖರೀದಿಸಿದ್ದ ವೆಂಟಿಲೇಟರ್‌ಗಳ ಕುರಿತು ಮಾಹಿತಿ ನೀಡಿರುವ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಖರೀದಿಸಿರುವ ಐಸಿಯು ವೆಂಟಿಲೇಟರ್‌ಗಳಿಗೆ ವಿಭಿನ್ನ ದರಗಳನ್ನು ಪಾವತಿಸಿರುವ ಬಗ್ಗೆ ಸೂಕ್ತ ಸಮರ್ಥನೆಯನ್ನು ನೀಡಲಿಲ್ಲ. ಈಗಾಗಲೇ ಖರೀದಿಸಿರುವ ವೆಂಟಿಲೇಟರ್‌ಗಳ ನಿರ್ದಿಷ್ಟತೆ ಬಗ್ಗೆಯೂ ಮಾಹಿತಿ ಒದಗಿಸಲಿಲ್ಲ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಹಾಗೂ ವೈದ್ಯಕೀಯ ಸಮರ್ಥನೆಗಳನ್ನೂ ನೀಡದೇ ಅಂಕಿ ಅಂಶಗಳನ್ನಷ್ಟೇ ಬಿಡುಗಡೆ ಮಾಡಿ ಸರ್ಕಾರ ನುಣುಚಿಕೊಂಡಂತಾಗಿದೆ.


2020ರ ಏಪ್ರಿಲ್‌ 16ರವರೆಗೆ 5,92, 2, 560 ಕೋಟಿ ರು.ಗೆ ಒಟ್ಟು 693 ವೆಂಟಿಲೇಟರ್‌ಗಳನ್ನು ಖರೀದಿ ಮಾಡಿದೆ ಎಂದು ಪ್ರತಿಪಕ್ಷ ನಾಯಕರಿಗೆ ಆರೋಗ್ಯ ಇಲಾಖೆ ಉತ್ತರ ಒದಗಿಸಿತ್ತು. ಇದರಲ್ಲಿಯೂ ಪ್ರತಿ ವೆಂಟಿಲೇಟರ್‌ನ ನಿರ್ದಿಷ್ಟತೆ ಬಗ್ಗೆ ವಿವರಗಳು ಇರಲಿಲ್ಲ. ಅಲ್ಲದೆ ವಿಭಿನ್ನ ದರಗಳಲ್ಲಿ ವೆಂಟಿಲೇಟರ್‌ಗಳನ್ನು ಖರೀದಿಸಿರುವ ಬಗ್ಗೆಯೂ ಸಮರ್ಥನೆ ಒದಗಿಸದ ಸಚಿವದ್ವಯರು, ತಮಿಳುನಾಡು ಸರ್ಕಾರದಂತೆ ಏಕರೂಪದ ದರದಲ್ಲಿ ವೆಂಟಿಲೇಟರ್‌ಗಳನ್ನೇಕೆ ಖರೀದಿಸಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಿಲ್ಲ.


ಎನ್‌ 95 ಮಾಸ್ಕ್‌ಗಳ ಖರೀದಿಗೆ 11.51 ಕೋಟಿ ಖರ್ಚಾಗಿದೆ ಎಂದು ಅಶ್ವಥ್‌ನಾರಾಯಣ್‌ ಹೇಳಿದ್ದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಿರುವ ಉತ್ತರದಲ್ಲಿ ಮಾಸ್ಕ್‌ ಖರೀದಿಗೆ 7.53 ಕೋಟಿ ರು. ಖರ್ಚಾಗಿದೆ ಎಂಬ ಮಾಹಿತಿ ಇದೆ. ಇನ್ನುಳಿದ 3.98 ಕೋಟಿ ರು. ಖರ್ಚಿನ ಲೆಕ್ಕದ ಬಗ್ಗೆ ಸಚಿವದ್ವಯರು ಮಾಹಿತಿಯನ್ನು ಕೊಡದಿರುವುದು ಅನುಮಾನಗಳನ್ನು ಇನ್ನಷ್ಟು ಬಲಪಡಿಸಿದಂತಾಗಿದೆ.


‘ಇದು ಸಂಪೂರ್ಣವಾಗಿ ರಾಜಕೀಯ ಹೇಳಿಕೆಯೇ ಹೊರತು ಮೂರನೇ ವ್ಯಕ್ತಿಯಿಂದ ಪರಿಶೀಲಿಸಲ್ಪಟ್ಟ ಮಾಹಿತಿಯಲ್ಲ. ಇವರು ಕೊಟ್ಟಿರುವ ಅಂಕಿ ಅಂಶಗಳಲ್ಲಿ ಸುಳ್ಳೂ ಇರಬಹುದು ಅಥವಾ ಸಾಮಗ್ರಿಗಳ ಗುಣಮಟ್ಟವೂ ಕಳಪೆ ಆದರೂ ಆಗಿರಬಹುದು. ಇವೆಲ್ಲವನ್ನೂ ಯಾರು ಪರಿಶೀಲಿಸುತ್ತಾರೆ. ಹಾಗಾಗಿ ಆರೋಪಕ್ಕೆ ಹೇಳಿಕೆ ಮೂಲಕ ಉತ್ತರ ಕೊಡಲಾಗುತ್ತಿದೆಯೇ ಹೊರತು ಇವು ಯಾವುವೂ ಪ್ರಮಾಣೀಕೃತ ದಾಖಲೆಗಳಲ್ಲ. ಹಾಗಾಗಿ ಇಡೀ ಖರೀದಿ ಪ್ರಕ್ರಿಯೆಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ. ಸಿದ್ದರಾಮಯ್ಯ ಅವರೂ ರಾಜಕೀಯ ಲಾಭಕ್ಕಾಗಿ ಬಳಸುವುದನ್ನು ಬಿಟ್ಟು ಅಕ್ರಮಗಳು ಹೊರಬರುವಂತೆ ಕಾನೂನಿನ ಪ್ರಕಾರ ತನಿಖೆ ಅಥವಾ ವಿಚಾರಣೆ ಆಗಲು ಪ್ರಯತ್ನಿಸಬೇಕು,’ ಎನ್ನುತ್ತಾರೆ ರವಿ ಕೃಷ್ಣಾರೆಡ್ಡಿ.


‘ಸಚಿವ ಎಸ್‌ ಟಿ ಸೋಮಶೇಖರ್‌ ಮತ್ತು ಆರ್‌ ಅಶೋಕ್‌ ಅವರು ಆರೋಗ್ಯ ಇಲಾಖೆಯೊಂದರಿಂದಲೇ 550 ಕೋಟಿ ರು. ಖರ್ಚಾಗಿದೆ. ಗೋವಿಂದ ಕಾರಜೋಳ ಅವರು 630 ಕೋಟಿ ರು. ಖರ್ಚಾಗಿದೆ ಎಂದು ಹೇಳಿದ್ದರು. ಸಾರ್ವಜನಿಕವಾಗಿ ಮತ್ತು ಪ್ರತಿಪಕ್ಷ ನಾಯಕರಿಗೆ ಉತ್ತರ ಕೊಡುವ ಉದ್ದೇಶವಿದ್ದಿದ್ದರೆ ದಾಖಲೆ ಸಮೇತ ಉತ್ತರವನ್ನೇಕೆ ಬಿಡುಗಡೆ ಮಾಡಿಲ್ಲ. ಶ್ರೀರಾಮುಲು ಅವರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ನೀಡಿರುವ ಸಮಜಾಯಿಷಿಯೂ ಸೂಕ್ತವಾಗಿಲ್ಲ. ಅಶ್ವಥ್‌ನಾರಾಯಣ್‌ ಅವರು ಕೋವಿಡ್‌-19ರ ಒಟ್ಟು ನಿರ್ವಹಣೆಗೆ ಎಷ್ಟು ಮೊತ್ತ ಖರ್ಚಾಗಿದೆ ಎಂಬ ಮಾಹಿತಿಯನ್ನೂ ಒದಗಿಸಲಿಲ್ಲ,’ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

the fil favicon

SUPPORT THE FILE

Latest News

Related Posts