ಕಳಪೆ ವೆಂಟಿಲೇಟರ್‌ ಖರೀದಿ; ಬಿಜೆಪಿ ಮಾಜಿ ಶಾಸಕರ ದೂರಿನ ಮೇಲೆ ವಿವರಣೆ ಕೇಳಿದ ಲೋಕಾಯುಕ್ತ

ಬೆಂಗಳೂರು; ಐಎಸ್‌ಒ ಗುಣಮಟ್ಟ ಸೂಚಿಸುವ ಪ್ರಮಾಣ ಪತ್ರ ಮತ್ತು ಸೂಕ್ತ ಪುರಾವೆಗಳೇ ಇಲ್ಲದಿರುವುದು, ಆಸ್ಪತ್ರೆಗಳಲ್ಲಿ ಹಲವು ವರ್ಷಗಳ ಕಾಲ ಬಳಸಿರುವ, ಮುರಿದಿರುವ ಮತ್ತು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆದಿರುವ ಪ್ರಕರಣವನ್ನು ಬಿಜೆಪಿಯ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಇದೀಗ ಲೋಕಾಯುಕ್ತಕ್ಕೆ ಕೊಂಡೊಯ್ದಿದ್ದಾರೆ.


ಡಾ ಸಾರ್ವಭೌಮ ಬಗಲಿ ಅವರು 2020ರ ಮೇ ನಲ್ಲಿ ಕರ್ತವ್ಯ ಲೋಪದಡಿ ನೀಡಿದ್ದ ದೂರನ್ನು 2020ರ ಜೂನ್‌ 9ರಂದು ಸ್ವೀಕರಿಸಿರುವ ಲೋಕಾಯುಕ್ತ ಸಂಸ್ಥೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಪ್ರತಿವಾದಿಯಾಗಿರುವ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್ಸ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿಯ ಮುಖ್ಯ ಪರಿವೀಕ್ಷಕ ಡಾ ಮಹೇಶ್‌ಕುಮಾರ್‌ಗೆ ಜೂನ್‌ 25ರಂದು ವಿವರಣೆ ಕೇಳಿದೆ.


ಇದೇ ಪ್ರಕರಣದಲ್ಲಿ ಡಾ ಪ್ರಿಯಲತಾ ಮತ್ತು ಡಾ ಲತಾ ಪರಿಮಳ ಅವರು ಕ್ರಮವಾಗಿ 2 ಮತ್ತು 3ನೇ ಪ್ರತಿವಾದಿಯಾಗಿದ್ದಾರೆ. ಪ್ರಕರಣವನ್ನು ‘ದಿ ಫೈಲ್‌’ 2020ರ ಮೇ 4ರಂದು ಹೊರಗೆಡವಿತ್ತು.

ಕೋವಿಡ್‌-19ರ ನಿರ್ವಹಣೆ ಸಂಬಂಧ ವೈದ್ಯಕೀಯ ಪರಿಕರಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಯಾಗಿವೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಕೂಡ ಆರೋಪಿಸಿದ್ದರಲ್ಲದೆ ಪೆನ್‌ಡ್ರೈವ್‌ ಇದೆ ಎಂದು ಮಾಹಿತಿ ಹೊರಗೆಡವಿದ್ದ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಲೋಕಾಯುಕ್ತದಲ್ಲಿ ದಾಖಲಿಸಿರುವ ದೂರು ಮಹತ್ವ ಪಡೆದುಕೊಂಡಿದೆ.

 

ಪ್ರಕರಣ ವಿವರ


ದೆಹಲಿ ಮೂಲದ ಆರ್‌ ಕೆ ಮೆಡಿಕಲ್‌ ಸೊಲ್ಯೂಷನ್ಸ್‌ ಕಂಪನಿ ರಾಜ್ಯಕ್ಕೆ 3.88 ಕೋಟಿ ರು ಮೊತ್ತದ ಡ್ರ್ಯಾಗರ್‌ ಹೆಸರಿನ ಒಟ್ಟು 15 ವೆಂಟಿಲೇಟರ್‌ಗಳನ್ನು 2020ರ ಏಪ್ರಿಲ್‌ 14ರಂದು ಪೂರೈಸಿತ್ತು. ಆದರೆ ಈ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ, ಸಿಎ ಮತ್ತು ಎಫ್‌ಡಿಎ, ಮಾಡಲ್‌, ಉತ್ಪಾದನೆ ವಿವರ ಮತ್ತು ಉತ್ಪಾದನೆ ವರ್ಷಕ್ಕೆ ಸಂಬಂಧಿಸಿದಂತೆ ಯಾವ ಪುರಾವೆಗಳೂ ಇಲ್ಲ. ಆದರೂ ಈ ಉಪಕರಣಗಳನ್ನು ಅಧಿಕಾರಿಗಳು ದಾಸ್ತಾನಿಗೆ ತೆಗೆದುಕೊಂಡಿದ್ದರು. ಈ ಪ್ರಕರಣದಲ್ಲಿ ಅಧಿಕಾರಿಗಳ ಕರ್ತವ್ಯಲೋಪ ಎಸಗಿದ್ದಾರೆ ಎಂದು ಡಾ ಸಾರ್ವಭೌಮ ಬಗಲಿ ಅವರು ದೂರಿದ್ದಾರೆ.

ಕ್ರಮ ಸಂಖ್ಯೆ ಎಆರ್‌ಎನ್‌ಕೆ-0251, ಇವಿಐಟಿಎ-4, 04.22 ಮಾಡಲ್‌ ವೆಂಟಿಲೇಟರ್‌ 2007ರ ಜನವರಿ 1ರಂದು ಉತ್ಪಾದನೆಯಾಗಿದೆ. ಈ ಉಪಕರಣ 46583 ಗಂಟೆಗಳ ಕಾಲ ಬಳಕೆಯಾಗಿದೆ. ಖರೀದಿ ಆದೇಶ ಪ್ರಕಾರ ಈ ಉಪಕರಣದ ಮೇಲೆ ತಾಂತ್ರಿಕತೆಗೆ ಸಂಬಂಧಿಸಿದಂತೆ ನಿರ್ದಿಷ್ಟ ವಿವರಗಳಿಲ್ಲ. ಅಲ್ಲದೆ ಈ ಉಪಕರಣವನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಮೂಲ ಉತ್ಪಾದಕ ಕಂಪನಿ ತನ್ನ ಪ್ರತಿನಿಧಿಯನ್ನು ನಿಯೋಜಿಸಿರಲಿಲ್ಲ.


ಪ್ರಕರಣ ಕುರಿತು ತಡವಾಗಿ ಕ್ರಮ ಕೈಗೊಂಡಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಹೆಚ್ಚುವರಿ ನಿರ್ದೇಶಕರಾದ ಮಂಜುಶ್ರೀ ಅವರು ದೆಹಲಿ ಮೂಲದ ಸರಬರಾಜುದಾರ ಆರ್‌ ಕೆ ಮೆಡಿಕಲ್‌ ಸೊಲ್ಯೂಷನ್‌ ಕಂಪನಿಗೆ 2020ರ ಏಪ್ರಿಲ್‌ 28ರಂದು ನೋಟೀಸ್‌ ಜಾರಿಗೊಳಿಸಿದ್ದರು.


ಅಲ್ಲದೆ ಈ ಕಂಪನಿ ಸರಬರಾಜು ಮಾಡಿರುವ ಹಲವು ವೆಂಟಿಲೇಟರ್‌ಗಳು 13 ವರ್ಷಗಳ ಹಿಂದೆಯೇ ಉತ್ಪಾದನೆಗೊಂಡಿದ್ದವು. ಅಲ್ಲದೆ ಹಲವು ವೆಂಟಿಲೇಟರ್‌ಗಳು ಆಸ್ಪತ್ರೆಗಳಲ್ಲಿ ಬಹುಕಾಲ ಬಳಕೆ ಆಗಿದ್ದವು. ಆದರೆ ಅಧಿಕಾರಿಗಳು ಇದಾವುದನ್ನೂ ಪರಿಶೀಲಿಸದೆಯೇ ದಾಸ್ತಾನಿಗೆ ಪಡೆದಿದ್ದಾರೆ. ಇದಲ್ಲದೆ ಹಲವು ಸರಬರಾಜುದಾರರು ಪೂರೈಸಿರುವ ವೆಂಟಿಲೇಟರ್‌ಗಳ ಮೇಲೆ ಗುಣಮಟ್ಟ ಪ್ರಮಾಣಾಂಕನ ಸಂಸ್ಥೆಯ ಪ್ರಮಾಣಪತ್ರಗಳೇ ಇರಲಿಲ್ಲ.


ಸರಬರಾಜುದಾರು ಪೂರೈಸಿದ್ದ ವೆಂಟಿಲೇಟರ್‌ಗಳನ್ನು ಪರಿಶೀಲನೆ ಮಾಡದೆಯೇ ಸ್ವೀಕರಿಸಿ ದಾಸ್ತಾನಿಗೆ ಪಡೆದಿರುವುದರ ಹಿಂದೆ ಭಾರೀ ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರು.ನಷ್ಟ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿತ್ತು.


ಕೋಟ್ಯಂತರ ರು. ಮೌಲ್ಯದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆಯುವ ಮುನ್ನ ಅದರ ಗುಣಮಟ್ಟ, ತಯಾರಿಕೆ ವರ್ಷ ಮತ್ತು ತಾಂತ್ರಿಕ ಇನ್ನಿತರೆ ಗುಣಮಟ್ಟ ಅಂಶಗಳನ್ನು ಪರಿಶೀಲನೆ ಕುರಿತು ಹೊಣೆಗಾರಿಕೆ ನಿಭಾಯಿಸಬೇಕಿದ್ದ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯ ತಾಂತ್ರಿಕ ಮತ್ತು ವೈದ್ಯಕೀಯ ಅಧಿಕಾರಿಗಳ ಬಹುದೊಡ್ಡ ಲೋಪವೂ ಈ ಪ್ರಕರಣದಲ್ಲಿ ಬಹಿರಂಗವಾಗಿತ್ತು.


ಯಾವುದೇ ಒಂದು ವೈದ್ಯಕೀಯ ಉಪಕರಣಕ್ಕೆ ಕನಿಷ್ಠ 7 ವರ್ಷ ಬಾಳಿಕೆ ಇದೆ. 7 ವರ್ಷದ ನಂತರ ಉಪಕರಣ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಆದರೆ ಲಾಭಕೋರ ಸರಬರಾಜುದಾರರು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.


ಖಾಸಗಿ ಆಸ್ಪತ್ರೆಗಳು ಬಳಸಿ ಬಿಸಾಡಿದ್ದವು ಎನ್ನಲಾಗಿರುವ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿರುವ ಸರಬರಾಜುದಾರರಿಗೆ ನೋಟೀಸ್‌ ಕೊಟ್ಟು ಕೈ ತೊಳೆದುಕೊಂಡಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಸರಬರಾಜುದಾರನಿಗೆ ಮುಂಗಡವಾಗಿ ಕೋಟ್ಯಂತರ ರು.ಗಳನ್ನು ಪಾವತಿ ಮಾಡಿತ್ತು.


ತೀವ್ರ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳನ್ನು ವೆಂಟಿಲೇಟರ್‌ಗಳಲ್ಲಿಡಲಾಗುತ್ತದೆ. ದೇಹಕ್ಕೆ ನಿರ್ದಿಷ್ಟವಾಗಿ ಆಮ್ಲಜನಕವನ್ನು ಈ ಉಪಕರಣ ಪೂರೈಸುತ್ತದೆ.

the fil favicon

SUPPORT THE FILE

Latest News

Related Posts