ಬೆಂಗಳೂರು; ಸ್ಯಾನಿಟೈಸರ್ ಸೇರಿದಂತೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಾಗಿರುವ ಅಕ್ರಮಗಳ ಬಗ್ಗೆ ಪೆನ್ ಡ್ರೈವ್‌ನಲ್ಲಿ ದಾಖಲೆಗಳಿವೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದ ಆಡಳಿತ ಪಕ್ಷದ ಶಾಸಕ ಮುರುಗೇಶ್ ನಿರಾಣಿ ಅವರು ಇದೀಗ ಪಲಾಯನ ದಾರಿ ಹಿಡಿದಿದ್ದಾರೆ.
ಪೆನ್‌ಡ್ರೈವ್‌ನಲ್ಲಿ 125 ಪುಟಗಳ ದಾಖಲೆಗಳಿವೆ ಎಂದು ‘ದಿ ಫೈಲ್’ 2020ರ ಜೂನ್ 3 ಮತ್ತು ಜುಲೈ 6 ರಂದು ದಾಖಲೆ ಸಮೇತ ಹೊರಗೆಡವಿದ್ದ ಸ್ಫೋಟಕ ಮಾಹಿತಿ, ಒಂದು ತಿಂಗಳ ನಂತರ ಸಾರ್ವಜನಿಕ ಅಂಗಳದಲ್ಲಿ ಮುನ್ನೆಲೆಗೆ ಬರುತ್ತಿದ್ದಂತೆ ಮುರುಗೇಶ್ ನಿರಾಣಿ ಅವರು ದಿಢೀರ್ ಎಂದು ರಾಗ ಬದಲಾಯಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
‘ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರಗಳು ನಡೆದಿವೆ ಎಂಬುದಕ್ಕೆ ದಾಖಲೆಗಳಿರುವ ಯಾವುದೇ ಪೆನ್‌ಡ್ರೈವ್ ನನ್ನ ಬಳಿ ಇಲ್ಲ,’ ಎಂದು ಹೇಳಿಕೆ ನೀಡಿ ಬೆನ್ನು ತಿರುಗಿಸಿದ್ದರೂ ಪ್ರತಿಪಕ್ಷ ಕಾಂಗ್ರೆಸ್ ನಿರಾಣಿ ಪೆನ್ ಡ್ರೈವ್ ಪ್ರಕರಣವನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿದೆ. ‘ದಿ ಫೈಲ್’ ಹೊರಗೆಡವಿದ್ದ ನಡವಳಿ ದಾಖಲೆಯನ್ನೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಮೇ 28ರಂದು ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಕೋವಿಡ್ ಭ್ರಷ್ಟಾಚಾರದ ಬಗ್ಗೆ ಬಾಯ್ಬಿಟ್ಟಿದ್ದ ಮುರುಗೇಶ್ ನಿರಾಣಿ ಅವರು ಆ ನಂತರ ನಡೆದ ಸಭೆಯಲ್ಲಿ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಅಕ್ರಮಗಳ ಬಗ್ಗೆ ದಾಖಲೆಗಳಿವೆ ಎಂದು ಹೇಳಿ ಆ ನಂತರ ದಾಖಲೆಗಳನ್ನು ಸಮಿತಿಗೆ ನೀಡಿರಲಿಲ್ಲ. ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದು ಸಮಿತಿ ಸಭೆಯ ನಡವಳಿಯಲ್ಲಿ ದಾಖಲಾಗಿದ್ದರೂ ಹೇಳಿಕೆಯಿಂದ ನುಣುಚಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಸಭೆಯಲ್ಲಿ ನಿರಾಣಿ ಹೇಳಿದ್ದೇನು?
‘ಬಿಜಾಪುರದಿಂದ ಬರುವಾಗ ನನ್ನೊಂದಿಗೆ ಒಬ್ಬರು ಅಧಿಕಾರಿ ಬಂದಿದ್ದರು. ಸುಮಾರು 125 ಪುಟಗಳ ದಾಖಲೆಗಳ ಪೆನ್ ಡ್ರೈವ್ ತಂದಿದ್ದರು. ಅದನ್ನು ತಮಗೆ ಕಳಿಸಿಕೊಡುತ್ತೇನೆ. ಅದರಲ್ಲಿ ಖರೀದಿ ಮಾಡಿರುವ ಪಿಪಿಇ ಕಿಟ್ ಬಗ್ಗೆ ಲೋಕಲ್ ಸ್ಯಾನಿಟೈಸರ್ ಬಗ್ಗೆ, 70-80 ರು. ಬೆಲೆ ಬಾಳುವ ಬಕೆಟ್‌ಗಳಿಗೆ 500 ರು. ದರ ಬಿಲ್ ಹಾಕಿರುವುದು, 30 ರು. ಬೆಲೆ ಬಾಳುವ ಉಪಕರಣಗಳಿಗೆ 3,000 ರು. ದರದ ಬಿಲ್ ಹಾಕಿದ್ದಾರೆ,’ ಎಂದು ಸಾಕ್ಷ್ಯಾಧಾರಗಳ ಸಮೇತ ತಂದಿದ್ದಾರೆ,’ ಎಂದು ಸಭೆ ಗಮನಕ್ಕೆ ತಂದಿರುವುದು ನಡವಳಿಯಲ್ಲಿ ದಾಖಲಾಗಿದೆ.
‘ನಾನು ಪಿಎಸಿ ಸಭೆಯಲ್ಲಿ ಈ ವಿಚಾರವನ್ನು ಮಾತನಾಡಿಲ್ಲ ಎಂದು ನಿರಾಣಿ ಅವರು ಹೇಳಿರುವುದರಿಂದ ಈ ಕೂಡಲೇ ಎಚ್ ಕೆ ಪಾಟೀಲ್ ರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸುಳ್ಳು ಮಾತುಗಳನ್ನು ಸೇರಿಸಿರುವುದರಿಂದ ಅವರನ್ನು ಜೈಲಿಗೆ ಅಟ್ಟಬೇಕು. ಇಲ್ಲ ಅದು ಸತ್ಯವಾಗಿದ್ದಲ್ಲಿ ಎಚ್ ಕೆ ಪಾಟೀಲರು ಈ ಕೂಡಲೇ ಪಿಎಸಿ ಸಮಿತಿಯಿಂದ ಈ ಕೂಡಲೇ ವಜಾಗೊಳಿಸಿ ಸಮಿತಿಯನ್ನು ತಪ್ಪುದಾರಿಗೆ ಎಳೆದಿದ್ದಕ್ಕೆ ಕಾನೂನುರೀತಿಯ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಇಬ್ಬರಲ್ಲಿ ಒಬ್ಬರಿಗೆ ಶಿಕ್ಷೆ ಆಗಲೇಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ.
ಕೊರೊನಾ ಕಿಟ್, ಇತರ ಪರಿಕರ ಖರೀದಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಪೈಸೆ ಪೈಸೆ ಲೆಕ್ಕ ಇದೆ. ಸಿದ್ದರಾಮಯ್ಯ ಕೇಳಿದರೆ ಈ ಲೆಕ್ಕ ಕೊಡಲು ಸಿದ್ಧ. ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರಿಸಿದ್ದ ಸಿದ್ದರಾಮಯ್ಯ ಅವರು ‘ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಕೊರೊನಾ ವೈರಸ್ ಸೋಂಕು ನಿಯಂತ್ರಣ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ. ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು. ದಾಖಲೆಗಳನ್ನು ಬಿಡುಗಡೆ ಮಾಡಬೇಕು,’ ಎಂದು ಟ್ವಿಟರ್‌ನಲ್ಲಿ ಆಗ್ರಹಿಸಿದ್ದನ್ನು ಸ್ಮರಿಸಬಹುದು.