ಬಯೋಕಾನ್‌ನ ಕಿರಣ್‌ ಮಜುಂದಾರ್‌ರಿಂದಲೂ ಅನಧಿಕೃತ ಬಡಾವಣೆ; ತಹಶೀಲ್ದಾರ್‌ ವರದಿ

ಬೆಂಗಳೂರು; ದೇಶದ ಖ್ಯಾತ ಐ ಟಿ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಸೇರಿದಂತೆ ಹಲವು ಪ್ರಭಾವಿಗಳು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 5 ತಾಲೂಕುಗಳಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಿರುವುದು ಇದೀಗ ಬಹಿರಂಗವಾಗಿದೆ.


ಈವರೆವಿಗೆ ಒಟ್ಟು 4,798 ಎಕರೆ 01 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ 2,515 ಮಂದಿ ಪ್ರಭಾವಿಗಳು ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿದ್ದಾರೆ ಎಂದು 5 ತಾಲೂಕುಗಳ ತಹಶೀಲ್ದಾರ್‌ಗಳು ವಿಧಾನಮಂಡಲದ ಅಂದಾಜು ಸಮಿತಿಗೆ ದಾಖಲೆ ಸಮೇತ ವರದಿ ಸಲ್ಲಿಸಿದ್ದಾರೆ. 2020ರ ಜೂನ್‌ 10ರಂದು ಈ ಸಭೆ ನಡೆದಿದೆ. ಸಭೆಗೆ ತಹಶೀಲ್ದಾರ್‌ ಸಲ್ಲಿಸಿದ್ದ ಅಕ್ರಮ ಬಡಾವಣೆಗಳ ವಿವರ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


ಒತ್ತುವರಿ ಆಗಿರುವ ಮತ್ತು ಅನಧಿಕೃತವಾಗಿ ಬಡಾವಣೆ ನಿರ್ಮಿಸಿರುವ ಈ ಜಮೀನುಗಳು ಬಹು ಕೋಟಿ ರು. ಬೆಲೆ ಬಾಳಲಿವೆ. ಹಸಿರು ಪಟ್ಟಿ ವಲಯದಲ್ಲಿ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿದ್ದರೂ ಸಂಬಂಧಪಟ್ಟ ಸಕ್ಷಮ ಯೋಜನಾ ಪ್ರಾಧಿಕಾರಗಳು ಯಾವುದೇ ಕ್ರಮ ವಹಿಸಿಲ್ಲ. ಆರೋಪಿತ ಪ್ರಭಾವಿಗಳಿಗೆ ನೋಟೀಸ್‌ ನೀಡಿ ಕೈತೊಳೆದುಕೊಂಡಿರುವ ಯೋಜನಾ ಪ್ರಾಧಿಕಾರಗಳು, ಅನಧಿಕೃವಾಗಿ ನಿರ್ಮಿಸಿರುವ ಬಡಾವಣೆಗಳನ್ನು ವಶಕ್ಕೆ ತೆಗೆದುಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಆನೇಕಲ್‌ ತಾಲೂಕಿನ ಜಿಗಣಿ, ಸರ್ಜಾಪುರ ಹೋಬಳಿಯೊಂದರಲ್ಲೇ 411 ಎಕರೆ 18 ಗುಂಟೆ ವಿಸ್ತೀರ್ಣದಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಿದ್ದಾರೆ. ಅನಧಿಕೃತವಾಗಿ ಬಡಾವಣೆ ನಿರ್ಮಿಸಿರುವವರ ಪಟ್ಟಿಯಲ್ಲಿ ದೇಶದ ಖ್ಯಾತ ಐ ಟಿ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಕಿರಣ್‌ ಮಜುಂದಾರ್‌ ಅವರ ಹೆಸರಿರುವುದು ವರದಿಯಿಂದ ಗೊತ್ತಾಗಿದೆ.

ಕಿರಣ್‌ ಮಜುಂದಾರ್‌ ಅವರು ಸರ್ಜಾಪುರ ಹೋಬಳಿಯ ಗೂಳಿಮಂಗಲದ ಸರ್ವೆ ನಂಬರ್‌ 58ರಲ್ಲಿ 7 ಎಕರೆ 7 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಿದ್ದಾರೆ ಎಂದು ಆನೇಕಲ್‌ ತಹಶೀಲ್ದಾರ್‌ ಅವರು ಸಲ್ಲಿಸಿರುವ ವರದಿಯಿಂದ ತಿಳಿದು ಬಂದಿದೆ. 2001-02ರಿಂದಲೂ ಕಿರಣ್‌ ಮಜುಂದಾರ್‌ ಅವರು ಭೂಮಿಯನ್ನು ಉಪಯೋಗಿಸುತ್ತಿದ್ದಾರೆ. ಇದು ಖುಷ್ಕಿ ಜಾಗ ಎಂಬ ಮಾಹಿತಿ ಆರ್‌ಟಿಸಿಯಿಂದ ಗೊತ್ತಾಗಿದೆ.

ಸರ್ವೆ ನಂಬರ್‌ 58ರಲ್ಲಿನ ಒಟ್ಟು 7 ಎಕರೆಯನ್ನು ಅಚ್ಚಮ್ಮ ಜಾಕೋಬ್‌ ಎಂಬುವರಿಂದ 1980ರಲ್ಲಿ ಕಿರಣ್‌ ಮಜುಂದಾರ್‌ ಅವರು ಖರೀದಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ. ಈ ಜಾಗದಲ್ಲೇ ಅನಧಿಕೃತ ಬಡಾವಣೆ ನಿರ್ಮಿಸಿದ್ದಾರೆ ಎಂಬ ಮಾಹಿತಿ ತಹಶೀಲ್ದಾರ್‌ ನೀಡಿರುವ ವರದಿಯಲ್ಲಿದೆ.

‘ಅನಧಿಕೃತ ಬಡಾವಣೆಗಳಿಗೆ ಅಧಿಕಾರಿಗಳೇ ಕುಮ್ಮಕ್ಕು ಕೊಡುತ್ತಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೆ ತೀವ್ರ ಹಾನಿಯಾಗಲಿದೆ. ಫಾರ್ಮ್‌ ಹೌಸ್‌ ಹೆಸರಿನಲ್ಲಿ ಐದೈದು ಗುಂಟೆ ಲೆಕ್ಕದಲ್ಲಿ ಎಕರೆಗಟ್ಟಲೇ ಮಾರಾಟವಾಗುತ್ತಿದೆ. ಇದಕ್ಕೆ ಅಧಿಕಾರಿಗಳೇ ಖುದ್ದು ರಸ್ತೆ ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಪಂಚಾಯ್ತಿಗಳಲ್ಲೂ ಖಾತೆಗಳಾಗುತ್ತಿವೆ. ಸರ್ಕಾರ ಇನ್ನಾದರೂ ಕೂಲಂಕಷವಾಗಿ ಪರಿಶೀಲಿಸಿ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಅನಧಿಕೃತ ಬಡಾವಣೆಗಳನ್ನು ವಶಕ್ಕೆ ತೆಗೆದುಕೊಂಡು ಮತ್ತೆ ಮೂಲ ಸ್ಥಿತಿಗೆ ತರಬೇಕು,’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾಧವಪ್ರಸಾದ ರೆಡ್ಡಿ.


ಬೆಂಗಳೂರು ಉತ್ತರ ತಾಲೂಕಿನಲ್ಲಿ 960 ಮಂದಿ 1,760 ಎಕರೆ 07 ಗುಂಟೆ, ದಕ್ಷಿಣ ತಾಲೂಕಿನಲ್ಲಿ 588 ಮಂದಿ 1,267 ಎಕರೆ 39 ಗುಂಟೆ, ಪೂರ್ವ ತಾಲೂಕಿನಲ್ಲಿ 233 ಮಂದಿ 354 ಎಕರೆ, ಉತ್ತರ (ಅಪರ) ತಾಲೂಕಿನಲ್ಲಿ 432 ಮಂದಿ 1,004 ಎಕರೆ 17 ಗುಂಟೆ ಮತ್ತು ಅನೇಕಲ್‌ ತಾಲೂಕಿನಲ್ಲಿ 302 ಮಂದಿ 411 ಎಕರೆ 18 ಗುಂಟೆ ಸೇರಿದಂತೆ ಒಟ್ಟು 4,798 ಎಕರೆ 01 ಗುಂಟೆಯಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಿದ್ದಾರೆ ಎಂದು ತಹಶೀಲ್ದಾರ್‌ಗಳ ವರದಿ ಹೊರಗೆಡವಿದೆ.


ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ(1) ಅಡಕಮಾರನಹಳ್ಳಿ, ಮಾಕಳಿ, ತೊರೆನಾಗಸಂದ್ರ, ಮುನಿಯನಪಾಳ್ಯ, ಹಾರ್ಕೋಯಟ್ನಹಳ್ಳಿ, ಆಲೂರು, ಕುದುರೆಗೆರೆ, ಹೆಗ್ಗಡದೇವನಪುರ, ಮಾದನಾಯಕನಹಳ್ಳಿ, ಹನುಮಂತಸಾಗರ, ಸಿದ್ದನಹೊಸಹಳ್ಳಿ, ದೊಂಬ್ರಹಳ್ಳಿ, ಕದರನಹಳ್ಳಿ, ಕಮ್ಮಸಂದ್ರ, ಕಡಬಗೆರೆ, ಗಿಡ್ಡೇನಹಳ್ಳಿ, ಬ್ಯಾಹಂಡಹಳ್ಳಿ, ಬೆಟ್ಟಹಳ್ಳಿ, ಸೊಂಡೆಕೊಪ್ಪ, ಲಕ್ಕೇನಹಳ್ಳಿ, ಹುಲ್ಲೇಗೌಡನಹಳ್ಳಿ, ವೆಂಕಟಾಪುರ, ಶಿವನಪುರ, ಗೌಡಹಳ್ಳಿ, ಅವ್ವೇರಹಳ್ಳಿ, ಗೆಜ್ಜಿಗದಹಳ್ಳಿ, ರಾವುತ್ತನಹಳ್ಳಿ, ಹುಣ್ಣಿಗೆರೆ, ಕೆಂಗನಹಳ್ಳಿ, ಕಿತ್ತನಹಳ್ಳಿ, ಮಲ್ಲಸಂದ್ರ, ಕೊಡಿಗೆಹಳ್ಳಿ, ಕನ್ನಲ್ಲಿ, ಮಂಗನಹಳ್ಳಿ, ಸೀಗೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೆ ಹಿಡುವಳಿ ಜಮೀನುಗಳಲ್ಲಿ ಮತ್ತು ಹಸಿರು ಪಟ್ಟಿ ವಲಯದಲ್ಲಿ 2003ರ ಹಿಂದಿನಿಂದಲೂ ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣಗೊಂಡಿರುವುದು ತಹಶೀಲ್ದಾರ್‌ ಸಲ್ಲಿಸಿರುವ ವರದಿಯಿಂದ ತಿಳಿದು ಬಂದಿದೆ.


ಬೆಂಗಳೂರು ಉತ್ತರ ಅಪರ ತಾಲೂಕಿನ ಹೆಸರಘಟ್ಟ, ಅದ್ದಿಗಾನಹಳ್ಳಿ, ಚೊಕ್ಕನಹಳ್ಳಿ, ಮಾದಪ್ಪನಹಳ್ಳಿ, ಮೈಲಪ್ಪನಹಳ್ಳಿ ಸುರದೇನಪುರ,ಶ್ಯಾನುಭೋಗನಹಳ್ಳಿ,ಮುತ್ತುಗದಹಳ್ಳಿ,ಮಹದೇವಕೊಡಿಗೆಹಳ್ಳಿ, ಬಾಗಲೂರು, ಬೆಟ್ಟಹಲಸೂರು, ಮಾರಸಂದ್ರ, ಯಲಹಂಕದ ಜಾಲ, ಕೃಷ್ಣರಾಜಸಾಗರ,ಬೆಳ್ಳಹಳ್ಳಿ, ಸಿಂಗನಾಯಕನಹಳ್ಳಿ, ಹುಣಸಮಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಟ್ಟು 1,004 ಎಕರೆ 17 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿಕೊಂಡಿರುವ ವರದಿ ನೀಡಿರುವ ತಹಶೀಲ್ದಾರ್, ಬಡಾವಣೆಗಳ ಮಾಲೀಕರ ಹೆಸರನ್ನು ಉಲ್ಲೇಖಿಸಿಲ್ಲ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95(2) ಮತ್ತು 96ರ ಅಡಿ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವುದು ವರದಿಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts