ಮಾಸ್ಕ್‌ ಖರೀದಿ; ವಿಧಾನಪರಿಷತ್‌ ಸಚಿವಾಲಯದ ಉನ್ನತ ಅಧಿಕಾರಿಗೆ ಖಾಸಗಿ ಆಸ್ಪತ್ರೆ ನಂಟು?

ಬೆಂಗಳೂರು; ಏಪ್ರಿಲ್‌ನಲ್ಲಿ ಮಾಸ್ಕ್‌ ಖರೀದಿಗೆ ಮುಂದಾಗಿದ್ದ ವಿಧಾನಪರಿಷತ್‌ ಸಚಿವಾಲಯದ ಬಳಿ ಹಣವೇ ಇರಲಿಲ್ಲ!. ಹೀಗಾಗಿ ಕ್ರೆಡಿಟ್‌ ಆಧಾರದ ಮೇಲೆ ಮಾಸ್ಕ್‌ ಸರಬರಾಜು ಮಾಡಲು ಹಲವು ಕಂಪನಿಗಳಿಗೆ ಮೊರೆ ಇಟ್ಟಿತ್ತು.


ಆದರೆ ಕ್ರೆಡಿಟ್‌ ಆಧಾರದ ಮೇಲೆ ಯಾವ ಕಂಪನಿಯೂ ಮಾಸ್ಕ್‌ಗಳನ್ನು ಸರಬರಾಜು ಮಾಡಲು ಮುಂದೆ ಬಂದಿರಲಿಲ್ಲ. ಹೀಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಿಂದ 500 ಸಂಖ್ಯೆಯ ಕೆ ಎನ್‌ 95 ಮಾಸ್ಕ್‌ಗಳನ್ನು ಕ್ರೆಡಿಟ್‌ ಆಧಾರದ ಮೇರೆಗೆ ಖರೀದಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.


ಏಪ್ರಿಲ್‌ನಲ್ಲಿ ಮಾಸ್ಕ್‌ಗಳನ್ನು ಸರಬರಾಜು ಮಾಡಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹಣ ಮಂಜೂರು ಮಾಡಿದ ಆದೇಶ ಹೊರಬೀಳುತ್ತಿದ್ದಂತೆ ವಿಧಾನಪರಿಷತ್‌ ಸಚಿವಾಲಯದ ಸಮರ್ಥನೆಯೂ ಈಗ ಚರ್ಚೆಗೊಳಗಾಗಿದೆ.


ಔಷಧಾಲಯ ಮತ್ತು ಔಷಧ ಮಳಿಗೆಗಳಲ್ಲೂ ಮಾಸ್ಕ್‌ ನಿಯಮಿತವಾಗಿ ದೊರೆಯದ ಕಾರಣ ವಿಧಾನಪರಿಷತ್‌ ಸಚಿವಾಲಯ, ಮಾರುಕಟ್ಟೆಯ ದರಕ್ಕಿಂತ ದುಪ್ಪಟ್ಟು ದರದಲ್ಲಿ ಖರೀದಿಸಿರುವುದನ್ನು ವಿಧಾನಪರಿಷತ್‌ ಸಚಿವಾಲಯ ಸಮರ್ಥಿಸಿಕೊಂಡಿದೆ.


ವಿಧಾನಪರಿಷತ್‌ ಸಚಿವಾಲಯಕ್ಕೆ ಮಲ್ಲೇಶ್ವರಂನಲ್ಲಿರುವ ಪ್ರಾಣ ಹೆಲ್ತ್‌ ಸಿಸ್ಟಂ ಸರಬರಾಜು ಮಾಡಿದ್ದ ಮಾಸ್ಕ್‌ಗಳ ಗುಣಮಟ್ಟದ ಬಗ್ಗೆ ಸಮಾಧಾನಕರವಾಗದ ಕಾರಣ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರಿಗೆ ಪರಿಚಿತರು ಎನ್ನಲಾಗಿರುವ ಡಾ ಅರುಣ್‌ ಕುದುವ ಅವರ ಮೂಲಕ ಮಂಗಳೂರಿನ ಅನಂತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಿಂದ ಮಾಸ್ಕ್‌ಗಳನ್ನು ಖರೀದಿಸಿತ್ತು ಎಂಬುದು ಗೊತ್ತಾಗಿದೆ.


ಕೋವಿಡ್‌ ಸೋಂಕು ಇದೀಗ ವಿಧಾನಸೌಧಕ್ಕೂ ಹಬ್ಬಿದ್ದರೂ ವಿಧಾನಸೌಧದ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವ ವಿಧಾನಸಭೆ ಮತ್ತು ವಿಧಾನಪರಿಷತ್‌ ಸಚಿವಾಲಯದ ಅಧಿಕಾರಿ, ನೌಕರರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಚಿತವಾಗಿ ಈವರೆವಿಗೂ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿಲ್ಲ ಎಂಬುದು ತಿಳಿದು ಬಂದಿದೆ.

ಕರ್ನಾಟಕ ವಿಧಾನಪರಿಷತ್‌ ಸಚಿವಾಲಯ ಮುಕ್ತ ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟು ದರ ತೆತ್ತು ಕೆಎನ್‌ 95 ಮಾಸ್ಕ್‌ಗಳನ್ನು ಖರೀದಿ ಮಾಡಿದ್ದು ವಿವಾದಕ್ಕೆಡೆ ಮಾಡಿಕೊಟ್ಟಿತ್ತು. ಚೀನಾ ತಯಾರಿಸಿರುವ ಕೆಎನ್‌ 95 ಮಾಸ್ಕ್‌ಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಿರುವುದರ ಹಿಂದೆ ಕಮಿಷನ್‌ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.


ಕರ್ನಾಟಕ ವಿಧಾನಪರಿಷತ್‌ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎ,ಬಿ, ಸಿ ಮತ್ತು ಡಿ ಗುಂಪಿನ ಅಧಿಕಾರಿ, ನೌಕರ ವರ್ಗದವರ ಬಳಕೆಗಾಗಿ ಮಾಸ್ಕ್‌ವೊಂದಕ್ಕೆ ಅಂದಾಜು 200 ರು. ದರದಲ್ಲಿ ಒಟ್ಟು 500 ಮಾಸ್ಕ್‌ಗಳಿಗೆ 1,05,000 ರು.ಗಳನ್ನು ಪಾವತಿಸಲು 2020ರ ಮೇ 13ರಂದು ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಇದಕ್ಕೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಅನುಮೋದಿಸಿದ್ದರು.

ಮಾರುಕಟ್ಟೆಯಲ್ಲಿ 40 ರು.ನಿಂದ 120 ರು.ವರೆಗೆ ಕೆಎನ್‌ 95 ಮಾಸ್ಕ್‌ಗಳು ದೊರೆಯುತ್ತವೆ. ಇದೇ ಮಾಸ್ಕ್‌ಗೆ ಇಂಡಿಯಾ ಮಾರ್ಟ್‌ನಲ್ಲಿ 100 ರು., ಟ್ರೇಡ್‌ ಇಂಡಿಯಾದಲ್ಲಿ 120 ರು. ದರವಿದೆ. ಸಗಟು ರೂಪದಲ್ಲಿ ಒಂದು ಕೆಎನ್‌ 95 ಮಾಸ್ಕ್‌ಗೆ 20-25 ರು. ದರದಲ್ಲಿ ಖರೀದಿಸಲು ಸಾಧ್ಯವಿದ್ದರೂ ದುಪ್ಪಟ್ಟು ದರದಲ್ಲಿ ಖರೀದಿಸಿದ್ದರ ಹಿಂದೆ ಅವ್ಯವಹಾರ ನಡೆದಿದೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.


ಚೀನಾವು ದೇಣಿಗೆ ರೂಪದಲ್ಲಿ ಮಿಲಿಯನ್‌ ಪ್ರಮಾಣದಲ್ಲಿ ನೀಡಿದ್ದ ಕೆಎನ್‌ 95 ಮಾಸ್ಕ್‌ಗಳನ್ನು ಅಮೇರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗ ನಿಷೇಧಿಸಿತ್ತು ಎಂದು ನ್ಯೂಯಾರ್ಕ್‌ ಟೈಮ್ಸ್‌ ಮೇ 13ರಂದು ವರದಿ ಮಾಡಿದ್ದನ್ನು ಸ್ಮರಿಸಬಹುದು.
ಹಾಗೆಯೇ ಕೆಎನ್‌ 95 ಮಾಸ್ಕ್‌ಗಳು ಪ್ರಯೋಗಾಲಯದಲ್ಲಿ ನಿಗದಿಪಡಿಸಿದ್ದ ಮಾನದಂಡಗಳ ಪ್ರಕಾರ ಇರಲಿಲ್ಲ. ಅಲ್ಲಿನ ದಂತ ವೈದ್ಯರು ಕೂಡ ಈ ಮಾಸ್ಕ್‌ಗಳನ್ನು ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ನ್ಯೂಯಾರ್ಕ್‌ ಟೈಮ್ಸ್‌ ವರದಿಯಿಂದ ತಿಳಿದು ಬಂದಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts