ಆರ್‌ಬಿಐ ಗೌಪ್ಯ ವರದಿ; ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಎನ್‌ಪಿಎ ಪ್ರಮಾಣ ಹೆಚ್ಚಳ

ಬೆಂಗಳೂರು; ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿನ ಆರ್ಥಿಕ ಅಶಿಸ್ತು, ವಿವೇಚನೆಯಿಲ್ಲದ ಮತ್ತು ಲಾಭಾಂಶವಿಲ್ಲದ ಹೂಡಿಕೆಗಳು ಮತ್ತು ಇದರಿಂದ ಆಗಿರುವ ನಷ್ಟವನ್ನು ಹೊರಗೆಡವಿರುವ ಆರ್‌ಬಿಐ, ಎನ್‌ಪಿಎ ಪ್ರಮಾಣ ಹೆಚ್ಚುತ್ತಿರುವುದನ್ನು ಬಹಿರಂಗಗೊಳಿಸಿದೆ.


ರಾಯಚೂರಿನ ಮಸ್ಕಿಯಲ್ಲಿರುವ ಮಲ್ಲಿಕಾರ್ಜುನ ಪಟ್ಟಣ ಸಹಕಾರಿ ಬ್ಯಾಂಕ್‌ವೊಂದೇ 24 ಕೋಟಿ ರು.ಗೂ ಅಧಿಕ ಮೊತ್ತದ ಎನ್‌ಪಿಎ ಹೊಂದುವ ಮೂಲಕ 61.91 ಕೋಟಿ ರು. ನಷ್ಟ ಹೊಂದಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗೌಪ್ಯ ವರದಿ ಹೊರಗೆಡವಿದೆ.


ಎಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅಂಕಿತ ಹಾಕಿದ ಬೆನ್ನಲ್ಲೇ ಕರ್ನಾಟಕದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಕ್ರಮಗಳ ಕುರಿತು ಆರ್‌ಬಿಐ ನೀಡಿರುವ ಗೌಪ್ಯ ವರದಿಗಳು ಮುನ್ನೆಲೆಗೆ ಬಂದಿವೆ. ಇಲ್ಲಿನ ಅಕ್ರಮಗಳು, ಆಡಳಿತ ಮಂಡಳಿಯ ಹಸ್ತಕ್ಷೇಪ, ಬೇಕಾಬಿಟ್ಟಿ ಸಾಲ ನೀಡಿಕೆಯಂತಹ ಪ್ರಕರಣಗಳ ಕುರಿತು ಆರ್‌ಬಿಐ ಬೆಳಕು ಚೆಲ್ಲಿದೆ.


ಅದೇ ರೀತಿ ಬನಹಟ್ಟಿಯ ಕಾಡಸಿದ್ದೇಶ್ವರ, ಬಸವನಬಾಗೇವಾಡಿಯ ಶ್ರೀ ಬಸವೇಶ್ವರ ಕೋ ಆಪರೇಟೀವ್‌ ಬ್ಯಾಂಕ್‌, ಹಡಗಲಿ ಕೋ ಆಪರೇಟೀವ್‌ ಬ್ಯಾಂಕ್‌, ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌, ತಾಳಿಕೋಟೆ ಸಹಕಾರಿ ಬ್ಯಾಂಕ್‌, ಛತ್ರಪತಿ ಶಿವಾಜಿ ಮಹಾರಾಜ್ ಸಹಕಾರಿ ಬ್ಯಾಂಕ್‌ಗಳಲ್ಲಿನ ಆಡಳಿತದಲ್ಲಿನ ಅದಕ್ಷತೆ ಮತ್ತು ಆಡಳಿತ ಮಂಡಳಿಯ ಹಸ್ತಕ್ಷೇಪದಿಂದಾಗಿ ಕೋಟ್ಯಂತರ ರು.ಪ್ರಮಾಣದಲ್ಲಿ ನಷ್ಟ ಅನುಭವಿಸಿರುವುದು ಗೌಪ್ಯ ವರದಿಯಿಂದ ತಿಳಿದು ಬಂದಿದೆ.


ರಾಯಚೂರಿನ ಮಸ್ಕಿಯಲ್ಲಿರುವ ಮಲ್ಲಿಕಾರ್ಜುನ ಪಟ್ಟಣ ಸಹಕಾರ ಬ್ಯಾಂಕ್‌ನ ಬಂಡವಾಳ ಮೊತ್ತ ಮತ್ತು ಮೂಲ ಬಂಡವಾಳ ಮೊತ್ತದಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸವಿದೆ. 21.09 ಲಕ್ಷ ರು.ಗೂ ಅಧಿಕ ಮೊತ್ತದ ವ್ಯತ್ಯಾಸ ಇರುವುದನ್ನು ತಪಾಸಣೆ ವೇಳೆಯಲ್ಲಿ ಹೊರಗೆಡವಿರುವ ಆರ್‌ಬಿಐ, ರಾಯಚೂರು ಡಿಸಿಸಿ ಬ್ಯಾಂಕ್‌ನಲ್ಲಿ 125.89 ಲಕ್ಷ ರು. ಹೂಡಿರುವ ಈ ಬ್ಯಾಂಕ್‌ ಶೇ.10ಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿ ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ವರದಿಯಲ್ಲಿ ವಿವರಿಸಿದೆ.

2019ರಲ್ಲಿ 6.46 ಕೋಟಿ ರು. ಮೊತ್ತದಲ್ಲಿ ಸಾಲದ ಮುಂಗಡ ಮತ್ತು ಇತರೆ ಮುಂಗಡಗಳಿದ್ದರೆ 2020ರಲ್ಲಿ 7.60 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ 247.94 ಲಕ್ಷ ರು. ಎನ್‌ಪಿಎ ಹೊಂದಿದೆ. ಇದೇ ಬ್ಯಾಂಕ್‌ನಲ್ಲಿ ನಡೆದಿರುವ ಶಾಸನಬದ್ಧ ಲೆಕ್ಕಪರಿಶೋಧನೆಗೂ ಆರ್‌ಬಿಐ ಮೌಲ್ಯಮಾಪನ ವರದಿಯ ನಡುವೆ ವ್ಯತ್ಯಾಸಗಳಿವೆ. ಶಾಸನಬದ್ಧ ಲೆಕ್ಕಪರಿಶೋಧನೆ ವೇಳೆಯಲ್ಲಿ 226.06 ಲಕ್ಷ ರು. (ಶೇ.29.71) ಎನ್‌ಪಿಎ ಎಂದು ಹೇಳಲಾಗಿದ್ದರೆ ಆರ್‌ಬಿಐ ಮೌಲ್ಯಮಾಪನ ಪ್ರಕಾರ 247.94 ಲಕ್ಷ ರು. (ಶೇ.32.59) ಇದೆ.

ಬನಹಟ್ಟಿಯ ಕಾಡಸಿದ್ದೇಶ್ವರ ಬ್ಯಾಂಕ್‌ನ ಲಿಕ್ವಿಡಿಟಿ ಸರಾಸರಿ ಶೇ.11.74ರಿಂದ 11.45ಕ್ಕೆ ಇಳಿದಿದೆ. 70.4 ಕೋಟಿ ರು.ಗಳನ್ನು ಎಸ್‌ಎಲ್‌ಆರ್‌ ಹೂಡಿಕೆ ಮಾಡಲಾಗಿದೆಯಾದರೂ ಈ ಪೈಕಿ 32 ಕೋಟಿ ರು.ಗಳನ್ನು ಎಚ್‌ಟಿಎಂ ವಿಭಾಗದಲ್ಲಿಡಲಾಗಿದೆ. ಹೀಗಾಗಿ ಬ್ಯಾಂಕ್‌ನ ಹಣ ನಿಷ್ಫಲವಾಗಿದೆ ಎಂದು ಆರ್‌ಬಿಐ ಮೌಲ್ಯಮಾಪನ ವರದಿಯಲ್ಲಿ ವಿವರಿಸಿದೆ.

ಎನ್‌ಪಿಎ ಹೊಂದಿಲ್ಲ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ಘೋಷಣೆ ಮಾಡಿದ್ದರೆ, ಆರ್‌ಬಿಐ ಮೌಲ್ಯಮಾಪನ ಪ್ರಕಾರ 30.99 ಲಕ್ಷ ರು. ಎನ್‌ಪಿಎ ಇದೆ. ಬ್ಯಾಂಕ್‌ ಕಾರ್ಯನಿರ್ವಹಣೆ ವೆಚ್ಚ 2016-17ರಲ್ಲಿ 39.48 ಲಕ್ಷ ರು.ಗಳಿದ್ದರೆ 2018-19ರಲ್ಲಿ 60.20 ಲಕ್ಷ ರು.ಗೆ ಹೆಚ್ಚಳವಾಗಿದೆ. ಒಂದೇ ಒಂದು ವರ್ಷದಲ್ಲಿ 17.58 ಲಕ್ಷ ರು. ಏರಿಕೆ ಆಗಿರುವುದು ಮೌಲ್ಯಮಾಪನ ವರದಿಯಿಂದ ತಿಳಿದು ಬಂದಿದೆ.


ಹಡಗಲಿ ಅರ್ಬನ್‌ ಕೋ ಆಪರೇಟೀವ್‌ ಬ್ಯಾಂಕ್‌ ಕೂಡ 70.3 ಕೋಟಿ ರು.ಗಳನ್ನು ಎಚ್‌ಟಿಎಂ ವಿಭಾಗದಲ್ಲಿರಿಸಿದೆಯಲ್ಲದೆ ಯಾವುದೇ ವಹಿವಾಟು ನಡೆಸಿಲ್ಲ. ಬ್ಯಾಂಕ್‌ನ ಆಡಳಿತ ಮಂಡಳಿ ಧೋರಣೆಯಿಂದ ಇದೊಂದು ಲಾಭಾಂಶವಿಲ್ಲದ ಹೂಡಿಕೆಯಾಗಿದೆ. ಬಡ್ಡಿ ಹೊರತುಪಡಿಸಿ ಯಾವುದೇ ಲಾಭಾಂಶ ದೊರೆಯುವುದಿಲ್ಲ. ಇದು ಬ್ಯಾಂಕ್‌ಗೆ ಆಗಿರುವ ನಷ್ಟ ಎಂದು ವರದಿ ವಿವರಿಸಿದೆ.


ಸಾಲ ಮತ್ತು ಮುಂಗಡದಲ್ಲಿ 14.47 ಕೋಟಿ ರು.ನಿಂದ 23.03 ಕೋಟಿ ರು.ಗೆ ಏರಿಕೆಯಾಗಿದೆ. ಸಾಲ ಮತ್ತು ಮುಂಗಡದಲ್ಲಿ ಮಾಡಿರುವ ಏರಿಕೆಗೆ ಬ್ಯಾಂಕ್‌ನ ಆಡಳಿತ ಮಂಡಳಿಯ ಅನುಮತಿಯನ್ನೇ ಪಡೆದಿಲ್ಲ ಎಂಬ ಸಂಗತಿ ಮೌಲ್ಯಮಾಪನ ವರದಿ ಬಹಿರಂಗಗೊಳಿಸಿದೆ.


ಬೆಳಗಾವಿಯಲ್ಲಿನ ಛತ್ರಪತ್ರಿ ಶಿವಾಜಿ ಎಸ್‌ಎಲ್‌ಆರ್‌ನಲ್ಲಿ 66 ಕೋಟಿ ರು. ಹೂಡಿಕೆ ಮಾಡಿದೆಯಾದರೂ ಅದನ್ನು ಎಚ್‌ಟಿಎಂ ವಿಭಾಗದಲ್ಲಿರಿಸಿದೆ. ಹೀಗಾಗಿ ಬ್ಯಾಂಕ್‌ಗೆ ಯಾವುದೇ ಲಾಭಾಂಶವೂ ದೊರೆಯುವುದಿಲ್ಲ. ಅಲ್ಲದೆ ಈ ಹಣದಿಂದ ಯಾವುದೇ ವಹಿವಾಟೂ ನಡೆದಿಲ್ಲ ಎಂಬ ಸಂಗತಿ ಆರ್‌ಬಿಐ ಮೌಲ್ಯಮಾಪನ ವರದಿಯಿಂದ ಗೊತ್ತಾಗಿದೆ.
ಒಟ್ಟು 27.62 ಕೋಟಿ ರು. ಸಾಲದ ಮೊತ್ತ ಎಂದು ಆಡಳಿತ ಮಂಡಳಿ ಹೇಳಿದೆಯಾದರೂ ಈ ಪೈಕಿ 4.30 ಕೋಟಿ ರು. ಮೊತ್ತದ ಬಗ್ಗೆ ತಪಾಸಣೆ ನಡೆಸಿಲ್ಲ. ಸಾಲ ಮಂಜೂರು ಮಾಡಿದ್ದ ಬ್ಯಾಂಕ್‌ ಆಡಳಿತ ಮಂಡಳಿ, ಮಂಜೂರು ಮಾಡಿದ ನಂತರವೂ ಮೇಲ್ವಿಚಾರಣೆ ನಡೆಸಿಲ್ಲ ಎಂಬುದು ಮೌಲ್ಯಮಾಪನ ವರದಿಯಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ 264 ಪಟ್ಟಣ ಬ್ಯಾಂಕ್‌ಗಳಿದ್ದು, 1,129 ಶಾಖೆಗಳನ್ನು ಹೊಂದಿವೆ. ಮಾರ್ಚ್‌ 2019ರ ಅಂತ್ಯಕ್ಕೆ 25.29 ಲಕ್ಷ ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್‌ಗಳಲ್ಲಿ ಒಟ್ಟು 41,827 ಕೋಟಿ ರು.ಮೊತ್ತದ ಠೇವಣಿ ಹೊಂದಿವೆ. ಅಲ್ಲದೆ 42,221 ಕೋಟಿ ರು. ದುಡಿಯುವ ಬಂಡವಾಳ ಹೊಂದಿರುವ ನಗರ/ ಪಟ್ಟಣ ಸಹಕಾರ ಬ್ಯಾಂಕ್‌ಗಳು 17,239 ಕೋಟಿ ಹೂಡಿಕೆ ಮಾಡಿವೆ. ಈವರೆವಿಗೂ 26,325 ಕೋಟಿ ರು.ಗಳನ್ನು ಸಾಲ ಮತ್ತು ಮುಂಗಡ ರೂಪದಲ್ಲಿ ವಿತರಿಸಿವೆ.

SUPPORT THE FILE

Latest News

Related Posts