ಎಸ್‌ಎಸ್‌ಎಲ್‌ಸಿ ಪರೀಕ್ಷೆ ; ಪ್ರೌಢಶಿಕ್ಷಣ ಮಂಡಳಿ ಕಾಯ್ದೆ ಉಲ್ಲಂಘಿಸಿದ ಸರ್ಕಾರ?

ಬೆಂಗಳೂರು; ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಾಯ್ದೆ ಉಲ್ಲಂಘಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದೆ ಎಂಬ ಹೊಸ ಅಂಶ ಇದೀಗ ಹೊರಬಿದ್ದಿದೆ. ಮಂಡಳಿಯ ಹಲವು ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದೆ ಎಂಬ ಆರೋಪಕ್ಕೆ ರಾಜ್ಯ ಬಿಜೆಪಿ ಸರ್ಕಾರ ಇದೀಗ ಗುರಿಯಾಗಿದೆ.


ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಹಲವು ಆಕ್ಷೇಪಗಳಿಗೆ ಗುರಿಯಾಗಿರುವ ಬೆನ್ನಲ್ಲೇ ಮಂಡಳಿಯ ಕಾಯ್ದೆ ಮತ್ತು ಹಲವು ನಿಯಮಗಳು ಮುನ್ನೆಲೆಗೆ ಬಂದಿದೆ.


ಎಸ್‌ಎಸ್ಎಲ್‌ಸಿ ಪರೀಕ್ಷೆ ನಡೆಸುವ ಸಂಬಂಧ ನಿರ್ಧಾರ ಪ್ರಕಟಿಸಿದ್ದ ಸಚಿವ ಸುರೇಶ್‌ಕುಮಾರ್‌ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಡಿಸಿಪಿ ಚೇತನ್‌ಸಿಂಗ್‌ ರಾಠೋಡ್‌ ಅವರಿಗೆ ದೂರು ನೀಡಿರುವ ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಅವರು ಇದೀಗ ಮಂಡಳಿಯ ಕಾಯ್ದೆ ಮತ್ತು ನಿಯಮಗಳನ್ನು ಮುಂದೊಡ್ಡಿದ್ದಾರೆ.


ಕೋವಿಡ್‌-19ರ ಹಿನ್ನೆಲೆಯಲ್ಲಿ ಎದುರಾಗಿರುವ ಆತಂಕಗಳ ಮಧ್ಯೆಯೆ ಪರೀಕ್ಷೆ ನಡೆಸಲು ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರ ನೇತೃತ್ವದಲ್ಲಿ 2020ರ ಮೇ 18ರಂದು ನಡೆದಿರುವ ಸಭೆಯಲ್ಲಿ ಕೋರಂ ಇರಲಿಲ್ಲ ಎಂಬುದನ್ನು ಜನಾಧಿಕಾರ ಸಂಘರ್ಷ ಪರಿಷತ್‌ ಬಹಿರಂಗಗೊಳಿಸಿದೆ.


ಸಭೆಯಲ್ಲಿ ಕೋರಂ ಕೊರತೆ


ಪರೀಕ್ಷೆ ದಿನಾಂಕ ಸೇರಿದಂತೆ ಪರೀಕ್ಷೆ ಚಟುವಟಿಕೆಗಳನ್ನು ನಿರ್ಧರಿಸಿಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಮೊದಲ ಬೈಲಾ 1966ರ ಪ್ರಕಾರ 6ನೇ ನಿಯಮದಂತೆ ಮಂಡಳಿಯ ಸಭೆಯಲ್ಲಿ 15 ಮಂದಿಯ ಕೋರಂ ಇರಬೇಕು. ಇಲ್ಲದಿದ್ದರೆ ಸಭೆಯನ್ನು ಮುಂದೂಡಬೇಕು. 5 ದಿವಸದ ನಂತರ ಸಭೆ ಡೆಸುವ ಬಗ್ಗೆ ನೋಟೀಸ್‌ ನೀಡಬೇಕು. ಅ ಸಭೆಯಲ್ಲಿಯೂ 10 ಮಂದಿಗಿಂತ ಕಡಿಮೆ ಇರಬಾರದು.


ಆದರೆ 2020ರ ಮೇ 18ರಂದು ನಡೆದ ಸಭೆಯಲ್ಲಿ 8 ಮಂದಿಯಷ್ಟೇ ಹಾಜರಿದ್ದರು. ಈ ಪೈಕಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸಂಬಂಧಿಸಿದವರು ಕೇವಲ 4 ಮಂದಿ ಮಾತ್ರ ಇದ್ದರು. ಮಂಡಳಿ ಅಧ್ಯಕ್ಷ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ ಜಿ ಜಗದೀಶ್‌, ಇಲಾಖೆಯ ಸರ್ಕಾರ ಪ್ರಧಾನ ಕಾರ್ಯದರ್ಶಿ ಎಸ್‌ ಆರ್‌ ಉಮಾಶಂಕರ್‌, ಮಂಡಳಿಯ ನಿರ್ದೇಶಕಿ ಸುಮಂಗಲಾ, ಪಿ ಯು ಮಂಡಳಿಯ ಎಂ ಕನಗವಲ್ಲಿ ಮಾತ್ರ ಹಾಜರಿದ್ದರೇ, ಇನ್ನುಳಿದ 4 ಮಂದಿಯಲ್ಲಿ ಸಚಿವ ಸುರೇಶ್‌ಕುಮಾರ್‌, ಆರೋಗ್ಯ ಇಲಾಖೆಯ ನಿರ್ದೇಶಕ ಡಾ ಓಂ ಪ್ರಕಾಶ್‌ ಪಾಟೀಲ್‌, ಎಬಿಆರ್‌ಕೆಯ ಸಹ ನಿರ್ದೇಶಕ ಸುರೇಶ್‌ಶಾಸ್ತ್ರಿ, ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕ ಡಾ ಎಂ ಟಿ ರೇಜು ಹಾಜರಿದ್ದರು ಎಂಬುದು ಸಭೆ ನಡವಳಿಯಿಂದ ಗೊತ್ತಾಗಿದೆ.

‘ಮಂಡಳಿಗೆ ಸಂಬಂಧಿಸಿದ 6 ಸದಸ್ಯರ ಕೊರತೆ ಇದ್ದರೂ ಪರೀಕ್ಷೆ ನಡೆಸಲು ಕೈಗೊಂಡಿರುವ ನಿರ್ಧಾರಕ್ಕೆ ಮಂಡಳಿಯ ಕಾಯ್ದೆ ಮತ್ತು ನಿಯಮ ಸಮ್ಮತಿಸುವುದಿಲ್ಲ. ನಿಯಮಬಾಹಿರವಾಗಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ,’ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಆದರ್ಶ ಐಯ್ಯರ್‌ ಅವರು ಹೇಳುತ್ತಾರೆ.

ಅದೇ ರೀತಿ ಮಂಡಳಿಯ ಸೆಕ್ಷನ್‌ 17ರ ಪ್ರಕಾರ ಪರೀಕ್ಷೆಗಳನ್ನು ನಡೆಸುವ ಸಕ್ಷಮ ಅಧಿಕಾರ ಕೇವಲ ಮಂಡಳಿ ಅಧ್ಯಕ್ಷರಿಗೆ ಮಾತ್ರ ಇದೆ. ಒಂದು ವೇಳೆ ಮಂಡಳಿ ಅಧ್ಯಕ್ಷರು ಗೈರು, ಅನುಪಸ್ಥಿತಿ, ಕಾಯಿಲೆಯಿಂದ ಬಳಲುತ್ತಿದ್ದರೆ, ಮಂಡಳಿಯಿಂದ ಅನ್ಯ ಕಾರ್ಯನಿಮಿತ್ತ ನಿಯೋಜನೆಗೊಂಡಿದ್ದರೆ, ಅಧ್ಯಕ್ಷ ಹುದ್ದೆ ಖಾಲಿ ಇದ್ದರೆ, ಮಂಡಳಿಯ ಉಪಾಧ್ಯಕ್ಷರು ಸಕ್ಷಮ ಅಧಿಕಾರ ಹೊಂದಿರುತ್ತಾರೆ. ಒಂದು ವೇಳೆ ಉಪಾಧ್ಯಕ್ಷರು ಗೈರಾಗಿದ್ದರೇ ರಾಜ್ಯ ಸರ್ಕಾರ ನಿಯೋಜಿಸುವ ಅಧಿಕಾರಿಗೆ ಪರೀಕ್ಷೆ ದಿನಾಂಕ ನಿಗದಿಪಡಿಸುವ ಅಧಿಕಾರವಿದೆ.


2020ರ ಮೇ 18ರಂದು ನಡೆದಿರುವ ಸಭೆಯಲ್ಲಿ ಮಂಡಳಿಯ ಅಧ್ಯಕ್ಷರೂ ಹಾಜರಿದ್ದರು. ಅದರೆ ಸಭೆಯಲ್ಲಿ ಕೋರಂ ಇರಲಿಲ್ಲ ಮತ್ತು ನಡವಳಿಯ ನಿರ್ಧಾರಕ್ಕೆ ಸಚಿವ ಸುರೇಶ್‌ಕುಮಾರ್‌ ಮಾತ್ರ ಸಹಿ ಮಾಡಿದ್ದಾರೆ. ಉಳಿದವರಾರು ನಡವಳಿಗೆ ಸಹಿ ಮಾಡದೆಯೇ ನಿರ್ಧಾರವನ್ನು ಅನುಮೋದಿಸಿಲ್ಲ ಎಂಬ ಅಂಶವನ್ನು ಮುನ್ನೆಲೆಗೆ ತಂದಿರುವ ಜನಾಧಿಕಾರ ಸಂಘರ್ಷ ಪರಿಷತ್, ವಿಶೇಷ ಮತ್ತು ಪೂರಕ ಪರೀಕ್ಷೆ ನಡೆಸುವ ಬಗ್ಗೆ ಮಂಡಳಿಯ ಕಾಯ್ದೆ ಹಾಗೂ ನಿಯಮಗಳನ್ನು ಸರ್ಕಾರ ತಪ್ಪಾಗಿ ವ್ಯಾಖ್ಯಾನಿಸಿದೆ ಎಂದು ಆರೋಪಿಸಿದೆ.


ಮಂಡಳಿಯ ಮೊದಲನೇ 1966ರ ನಿಯಮ 31ರ ಪ್ರಕಾರ ಏಪ್ರಿಲ್‌-ಜೂನ್‌ನಲ್ಲಿ ಪರೀಕ್ಷೆ ನಡೆಸಬಹುದು. ಅಥವಾ ಬೇರೆ ತಿಂಗಳಲ್ಲಿ ಪರೀಕ್ಷೆ ನಡೆಸಬಹುದಾದರೂ ಅದು ಚಾಲ್ತಿಯಲ್ಲಿರುವ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಪರೀಕ್ಷೆ ನಡೆಸಬಹುದು. ಆದರೆ ಅದು ವಿಶೇಷ ಮಕ್ಕಳಿಗೆ ಮಾತ್ರ ಎಂದು ಕಾಯ್ದೆಯಲ್ಲಿ ಹೇಳಲಾಗಿದೆಯಲ್ಲದೆ, ಸೆಕ್ಷನ್‌ 2 ಉಪಬಂಧ 35ರ ಪ್ರಕಾರ ವಿಶೇಷ ಎಂದರೆ ಅಂಗವೈಕಲ್ಯ, ಸಂಗೀತ, ನೃತ್ಯ, ನಾಟಕ, ಕಲೆ, ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಪರೀಕ್ಷೆಗಳು ಎಂದು ಸ್ಪಷ್ಟಪಡಿಸಿದೆ. ಅದೇ ರೀತಿ ಕರ್ನಾಟಕ ಪ್ರೌಢಶಿಕ್ಷಣದ ಮೊದಲನೇ ಬೈಲಾ 1966ರ ಅನುಬಂಧ 3ರಲ್ಲಿರುವ ನಿಯಮದ ಪ್ರಕಾರ ವಿಷಯ ಮತ್ತು ನಿಯಮ 25ರ ಪ್ರಕಾರ ಅಂಧ, ಅಂಗವೈಕಲ್ಯ ವಿದ್ಯಾರ್ಥಿಗಳಿಗಷ್ಟೇ ವಿಶೇಷ ಪರೀಕ್ಷೆ ನಡೆಸಬಹುದು.


ಆದರೆ ವಿಶೇಷ ಪರೀಕ್ಷೆ ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿರುವ ಸರ್ಕಾರ ಇದನ್ನು ಪೂರಕ ಪರೀಕ್ಷೆ ಎಂದೇ ವ್ಯಾಖ್ಯಾನಿಸಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಆರೋಪಿಸಿದೆ.ಮಂಡಳಿಯ ಮೊದಲನೇ ನಿಯಮ 39 1(ಎ) ಪ್ರಕಾರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೆಪ್ಟಂಬರ್‌ ಬದಲಿಗೆ ಜೂನ್‌ನಲ್ಲಿ ಪೂರಕ ಪರೀಕ್ಷೆ ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ.

 

ಆದರೆ ಸರ್ಕಾರ ವಿಶೇಷ ಮಕ್ಕಳ ಪರೀಕ್ಷೆಯನ್ನು ಸಾಮಾನ್ಯ ಮಕ್ಕಳಿಗೂ ಅನ್ವಯಿಸಿ ಅದನ್ನು ಪೂರಕ ಪರೀಕ್ಷೆ ಎಂದು ತಪ್ಪಾಗಿ ವ್ಯಾಖ್ಯಾನಿಸಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್‌ 22ರ ಪ್ರಕಾರ ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಆಂತರಿಕ ಮೌಲ್ಯಮಾಪನದ ಮೂಲಕ ಉತ್ತೀರ್ಣಗೊಳಿಸಲು ಅವಕಾಶವಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಈ ಕಲಂನ್ನು ಏಕೆ ಬಳಸಿಕೊಂಡಿಲ್ಲ ಎಂದು ಪ್ರಶ್ನಿಸುತ್ತಾರೆ ಪರಿಷತ್‌ನ ಆದರ್ಶ ಐಯ್ಯರ್‌.

ರಾಜ್ಯದಲ್ಲಿ ಕೊರೊನಾ ವೈರಸ್‌ ತನ್ನ ಜಾಲವನ್ನು ವಿಶಾಲವಾಗಿ ಪಸರಿಸಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಚಿವ ಸುರೇಶ್‌ಕುಮಾರ್‌ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಪೋಷಕರು ಸೇರಿ ಶಿಕ್ಷಕರ ಕುಟುಂಬಗಳಿಗೆ ಕಷ್ಟವಾಗಲಿದ್ದು, ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಹೀಗಿದ್ದರೂ ಸಚಿವರು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆದರ್ಶ ಐಯ್ಯರ್‌ ಅವರು ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts