ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಆಡಳಿತಾಧಿಕಾರಿ; ವಿಧೇಯಕ ತಿದ್ದುಪಡಿಗೆ ಮುಂದಾದ ಬಿಜೆಪಿ ಸರ್ಕಾರ?

ಬೆಂಗಳೂರು; ಅಲ್ಪಸಂಖ್ಯಾತ ಸಂಘ, ಸಂಸ್ಥೆಗಳನ್ನು ನಿಯಂತ್ರಣಕ್ಕೊಳಪಡಿಸುವ ಸಂಬಂಧ ರಾಜ್ಯ ಬಿಜೆಪಿ ಸರ್ಕಾರ ಕರಡು ವಿಧೇಯಕವನ್ನು ಮಂಡಿಸಲು ಮುಂದಾಗಿದೆ. ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಸಂಬಂಧ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ಗೆ ತಿದ್ದುಪಡಿ ತರಲು ಸಚಿವ ಸಂಪುಟದ ಮುಂದೆ ಪ್ರಸ್ತಾವಿಸಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಮಹತ್ವ ದಾಖಲೆಗಳು ಲಭ್ಯವಾಗಿವೆ.


ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿ ನೇಮಿಸುವುದು ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ 33 ವರ್ಷದ (1987) ಹಿಂದೆ ತೀರ್ಪು ನೀಡಿತ್ತು. ಆ ನಂತರ ಯಾವ ಸರ್ಕಾರಗಳೂ ಅಲ್ಪಸಂಖ್ಯಾತ ಸಂಘ, ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಿಸಿರಲಿಲ್ಲ. ಆದರೀಗ ರಾಜ್ಯ ಬಿಜೆಪಿ ಸರ್ಕಾರ ಆಡಳಿತಾಧಿಕಾರಿ ನೇಮಕಕ್ಕೆ ಚಾಲನೆ ನೀಡಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.


ಕೊರೊನಾ ಸಂದರ್ಭದಲ್ಲೇ ಕರ್ನಾಟಕ ಸಂಘಗಳ ಅಧಿನಿಯಮದಲ್ಲಿ ಲೋಪಗಳನ್ನು ಸರಿಪಡಿಸುವ ನೆಪವನ್ನೊಡ್ಡಿರುವ ರಾಜ್ಯ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸಂಬಂಧ ಸಹಕಾರ ಇಲಾಖೆ ಈಗಾಗಲೇ ಕರಡು ವಿಧೇಯಕವನ್ನು ಸಚಿವ ಸಂಪುಟದ ಮಂಡಿಸಿದೆ. ಕರಡು ವಿಧೇಯಕಕ್ಕೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಈಗಾಗಲೇ ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.


ವಿಶೇಷವೆಂದರೆ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಅಧಿನಿಯಮ ತಿದ್ದುಪಡಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಚಾಲನೆ ದೊರೆತಿತ್ತು. 2016ರಲ್ಲಿದ್ದ ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ಸೆಕ್ಷನ್‌ 27(ಎ)ಗೆ ತಿದ್ದುಪಡಿ ಅಗತ್ಯವಿದೆ ಮತ್ತು ಈ ತಿದ್ದುಪಡಿಗೆ ರಾಷ್ಟ್ರಪತಿಗಳ ಅನುಮೋದನೆಗೆ ಕಾಯ್ದಿರಿಸಬೇಕಾಗುತ್ತದೆ ಎಂದು 2016ರ ಮೇ 17ರಂದು ಕಡತದಲ್ಲಿ ಅಭಿಪ್ರಾಯಿಸಿದ್ದರು ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

ಖುರೇಷಿ ಎಜುಕೇಷನ್‌ ಸೊಸೈಟಿ ಮತ್ತು ಇತರರ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಂಘಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಅವಕಾಶವು ಸಂವಿಧಾನದ ಅನುಚ್ಛೇದ 31 ಮತ್ತು 31ಎ(1)(ಬಿ) ರಲ್ಲಿ ಅಲ್ಪಸಂಖ್ಯಾತರಿಗೆ ಒದಗಿಸಿರುವ ಹಕ್ಕುಗಳಿಗೆ ವಿರುದ್ಧವಾಗಿದೆಯಲ್ಲದೆ, ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ) ಅಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನ ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ 1987ರಲ್ಲೇ ಆದೇಶಿಸಿತ್ತು.


‘ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 27(ಎ)ರಡಿ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶವನ್ನು ನ್ಯಾಯಾಲಯವು ಸಂವಿಧಾನಬಾಹಿರವೆಂದು Struck down ಮಾಡಿ 1987ರಲ್ಲೇ ಆದೇಶಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಸಂಘಗಳ ನೋಂದಣಿ ಅಧಿನಿಯಮ, 1960ರ ಪ್ರಕರಣ 27(ಎ)ಗೆ ತಿದ್ದುಪಡಿ ಮಾಡುವ ಅಗತ್ಯವಿದೆ,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿದ್ದಾರೆ.


ತಿದ್ದುಪಡಿ ನಂತರ ನಿಯಮದಲ್ಲೇನಿರುತ್ತೆ?


ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಲ್ಲಿನ ವ್ಯಾಜ್ಯಗಳು ಇತ್ಯರ್ಥಗೊಳ್ಳದೇ ಬಾಕಿ ಇದ್ದಲ್ಲಿ ಅಥವಾ ವಾರ್ಷಿಕ ಮಹಾಸಭೆಗಳನ್ನು ನಡೆಸದೇ ಇದ್ದ ಪಕ್ಷದಲ್ಲಿ ಸೆಕ್ಷನ್‌ 27(ಎ) ತಿದ್ದುಪಡಿ ಪ್ರಕಾರ ಆಡಳಿತಾಧಿಕಾರಿ ನೇಮಿಸಬಹುದು. ಸಂಘದ ಪದಾಧಿಕಾರಿಗಳು ಅಥವಾ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡ ಬಳಿಕವೂ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದೇ ಇದ್ದಲ್ಲಿ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ವಿಚಾರಣೆಗೆ ಆದೇಶಿಸಿದ್ದರೆ ಸಾರ್ವಜನಿಕ ಹಿತಾಸಕ್ತಿ ಅನ್ವಯ ಆಡಳಿತಾಧಿಕಾರಿ ನೇಮಿಸಬಹುದು.


‘ಕರ್ನಾಟಕ ಸಂಘಗಳ ಅಧಿನಿಯಮ 1960ರ ಪ್ರಕರಣ 27(ಎ)ಗೆ ಸೂಕ್ತ ತಿದ್ದುಪಡಿ ತಂದು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳಿಗೂ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಅನುವಾಗುವಂತೆ ಕಾಯ್ದೆಯಲ್ಲಿ ಈಗಿರುವ ಲೋಪವನ್ನು ತಿದ್ದುಪಡಿ ಮೂಲಕ ಸರಿಪಡಿಸುವುದು ಸರ್ಕಾರದ ಹೊಣೆಗಾರಿಕೆ. ಆಡಳಿತಾಧಿಕಾರಿ ನೇಮಕಾತಿ ವಿಷಯದಲ್ಲಿ ಸಾಮಾನ್ಯ ಮತ್ತು ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ಪ್ರತ್ಯೇಕಿಸಿ ನೋಡುವುದನ್ನು ತಪ್ಪಿಸಬಹುದಾಗಿರುತ್ತದೆ,’ ಎಂದು ಇಲಾಖೆ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ.


‘ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿ ನೇಮಕ ಸರಿಯಲ್ಲ. ವಿಧೇಯಕಕ್ಕೆ ತಿದ್ದುಪಡಿ ತಂದರೆ ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಈ ಸಮುದಾಯದಲ್ಲಿ ಶಿಕ್ಷಣ, ಉದ್ಯೋಗ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.12.91ರಷ್ಟು ಅಲ್ಪಸಂಖ್ಯಾತರಿದ್ದಾರೆ. ಬೇರೆ ಸಮುದಾಯಕ್ಕೆ ಹೋಲಿಸಿದಲ್ಲಿ ಅಲ್ಪಸಂಖ್ಯಾತ ಸಮುದಾಯ ಎಲ್ಲಾ ವಲಯಗಳಲ್ಲೂ ಹಿಂದುಳಿದಿದೆ. ಸಂಘ ಸಂಸ್ಥೆಗಳು ಸಮುದಾಯದ ಏಳ್ಗೆಗಾಗಿ ದುಡಿಯುತ್ತಿವೆ. ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಬೇಕೇ ವಿನಃ ಆಡಳಿತಾಧಿಕಾರಿಗಳನ್ನು ನೇಮಿಸುವ ಮೂಲಕ ಅಲ್ಪಸಂಖ್ಯಾತ ಸಂಘ ಸಂಸ್ಥೆಗಳನ್ನು ತಮ್ಮ ಕೈವಶ ಮಾಡಿಕೊಳ್ಳುವ ಹುನ್ನಾರವಾಗಿದೆ. ತಕ್ಷಣವೇ ತಿದ್ದುಪಡಿ ಪ್ರಸ್ತಾಪವನ್ನು ಹಿಂತೆಗೆದುಕೊಳ್ಳಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಎಂ ಎಂ ಬುಡನ್‌ಖಾನ್‌.


ಮಠಗಳನ್ನು ಸರಕಾರದ ನಿಯಂತ್ರಣಕ್ಕೊಳಪಡಿಸುವ ಸಂಬಂಧ ಕಾನೂನು ರೂಪಿಸಲು ಹಿಂದಿನ ಕಾಂಗ್ರೆಸ್‌ ಸರಕಾರ ಮುಂದಾಗಿತ್ತು. ಸಂವಿಧಾನದ ಕಲಂ 162ರ 31-ಎ ಅನ್ವಯ ಮಠಗಳಲ್ಲಿ ದುರಾಡಳಿತ, ಅವ್ಯವಹಾರ ಹಾಗೂ ಆಸ್ತಿ ದುರುಪಯೋಗ ನಡೆದ ಸಂದರ್ಭಗಳಲ್ಲಿ ಸರಕಾರ ಮಧ್ಯ ಪ್ರವೇಶ ಮಾಡಿ ಕ್ರಮ ಜರುಗಿಸಲು ಅವಕಾಶವಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಕಾನೂನು ರೂಪಿಸುವಂತೆ ಸೋಸಲೆ ವ್ಯಾಸರಾಜ ಮಠದ ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.


ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಗಳನ್ನು ಉದ್ದೇಶಿತ ಕಾಯಿದೆಯಡಿ ತರುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಹಿಂದಿನ ಮುಜುರಾಯಿ ಸಚಿವ ಪ್ರಕಾಶ್‌ ಹುಕ್ಕೇರಿ ಸ್ಪಷ್ಟಪಡಿಸಿದ್ದರು. ಈ ಕಾಯಿದೆಯು ಹಿಂದೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಮಾತ್ರ ರೂಪಿತವಾಗಿರುವುದರಿಂದ ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆಗಳನ್ನು ಇದರ ವ್ಯಾಪ್ತಿಗೆ ತರಲು ಅವಕಾಶವಿಲ್ಲ ಎಂದು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts