ಬೆಂಗಳೂರು; ಲಾಕ್‌ಡೌನ್ ಅವಧಿಯಲ್ಲಿ ವಲಸೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರದ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳ ಕಿಟ್ ಖರೀದಿಗೆ 69.90 ಕೋಟಿ ಮತ್ತು ಸ್ಯಾನಿಟೈಸರ್, ಮಾಸ್ಕ್ ಗೆ 4.10 ಕೋಟಿ ರು.ಮತ್ತು ಪರಿಹಾರದ ಮೊತ್ತ ಸೇರಿದಂತೆ ಒಟ್ಟು 739.19 ಕೋಟಿ ರು. ಖರ್ಚಾಗಿದೆ ಎಂದು ಕಾರ್ಮಿಕ ಇಲಾಖೆ ಲೆಕ್ಕ ತೋರಿಸಿದೆ. ಖರ್ಚಿನ ಲೆಕ್ಕ ನೋಡಿರುವ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಹುಬ್ಬೇರಿಸಿದೆ.
ಲಾಕ್‌ಡೌನ್ ಅವಧಿಯಲ್ಲಿ ಸಾವಿರಾರು ಸಂಖ್ಯೆಯ ಕಟ್ಟಡ ಕಾರ್ಮಿಕರು ಒಪ್ಪೊತ್ತಿನ ಗಂಜಿಗಾಗಿ ಪರದಾಡುತ್ತಿದ್ದರೂ ಇಲಾಖೆಯಿಂದ ಆಹಾರ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಸಮರ್ಪಕವಾಗಿರಲಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬಂದಿರುವ ನಡುವೆಯೇ ಕಾರ್ಮಿಕ ಇಲಾಖೆ ತೋರಿಸಿರುವ ಖರ್ಚು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಟ್ಟಡ ಕಾರ್ಮಿಕರಿಗೆ ನೀಡಿರುವ ಪರಿಹಾರದ ಮೊತ್ತ ಸೇರಿದಂತೆ ಇನ್ನಿತರೆ ನೆರವು ನೀಡಿರುವ ಕುರಿತು 2020ರ ಜೂನ್ 9ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ನೀಡಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕಟ್ಟಡ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಸೋಪ್ ಖರೀದಿಗೆ 2020ರ ಮಾರ್ಚ್ 18ರಂದು 41 ಕಾರ್ಮಿಕ ಅಧಿಕಾರಿ ಕಚೇರಿಗಳಿಗೆ ತಲಾ 10 ಲಕ್ಷ ರು.ನಂತೆ ಒಟ್ಟು 4.10 ಕೋಟಿ ರು. ಬಿಡುಗಡೆ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಅದೇ ರೀತಿ ಕಟ್ಟಡ, ವಲಸೆ ಮತ್ತು ಕಟ್ಟಡ ಕಾರ್ಮಿಕರಿಗೆ 2020ರ ಮಾರ್ಚ್ 30ರಿಂದ ಇದುವರೆಗೆ ಒಟ್ಟು 83.39 ಲಕ್ಷ ಸಿದ್ಧಪಡಿಸಿದ ಆಹಾರ ಪ್ಯಾಕೇಟ್, 5,08,000 ಸಂಖ್ಯೆಯ ಆಹಾರ ಸಾಮಗ್ರಿ ಕಿಟ್ ವಿತರಿಸಿದೆ ಎಂದು ಲೆಕ್ಕ ತೋರಿಸಿರುವ ಕಾರ್ಮಿಕ ಇಲಾಖೆ, ಇಲಾಖೆಗೆ ಒದಗಿಸಿದ್ದ ಒಟ್ಟು 2,79,960 ಆಹಾರ ಧಾನ್ಯ ಕಿಟ್ ವಿತರಣೆ ಮಾಡಿದೆ ಎಂಬ ಮಾಹಿತಿ ನೀಡಿರುವುದು ಗೊತ್ತಾಗಿದೆ.
ಕಾರ್ಮಿಕ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ಅಕ್ಷಯ ಪಾತ್ರೆ ಸಂಘಟನೆ ಮೂಲಕ ಬೊಮ್ಮನಹಳ್ಳಿ, ಮಹದೇವಪುರ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಯಲಹಂಕ ಭಾಗದಲ್ಲಿ 2020ರ ಏಪ್ರಿಲ್ 3ರಿಂದ 7ರವರೆಗೆ ಒಟ್ಟು 60,000 ಆಹಾರದ ಪ್ಯಾಕೇಟ್‌ಗಳನ್ನು ವಿತರಿಸಿದ್ದರೆ, ಏಪ್ರಿಲ್ 8ರಂದು ಕಾರ್ಮಿಕ ಇಲಾಖೆ ನೇರವಾಗಿ 4,471 ಸೇರಿದಂತೆ ಒಟ್ಟು 64,471 ಆಹಾರ ಪೊಟ್ಟಣಗಳನ್ನು ವಿತರಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಇನ್ನು, 21,78,019 ಕಾರ್ಮಿಕರ ಪೈಕಿ ಬ್ಯಾಂಕ್ ಖಾತೆ ವಿವರ, ಆಧಾರ್ ವಿವರ ನೀಡಿದ್ದ 11.62,247 ಫಲಾನುಭವಿಗಳಿಗೆ ನೇರವಾಗಿ ಮಂಡಳಿಯಿಂದ ಪ್ರತಿ ಕಾರ್ಮಿಕರಿಗೆ 5,000 ರು.ನಂತೆ ಒಟ್ಟು 581.12 ಕೋಟಿ ರು. ಪರಿಹಾರ ವಿತರಿಸಿದೆ. ಕಾರ್ಮಿಕ ಅಧಿಕಾರಿಗಳು 3,10,138 ಕಾರ್ಮಿಕರಿಂದ ದಾಖಲೆ ಪಡೆದು ಬ್ಯಾಂಕ್‌ಗೆ ಕಳಿಸಿದೆ. ಆ ಎಲ್ಲಾ ಕಾರ್ಮಿಕರಿಗೆ 158.06 ಕೋಟಿ ರು. ಪಾವತಿಯಾಗಿದೆ ಎಂದು ಕಾರ್ಮಿಕ ಇಲಾಖೆ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಮಾಹಿತಿ ಒದಗಿಸಿದೆ.
ಇನ್ನುಳಿದ 6,99,634 ಕಾರ್ಮಿಕರು ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಯ ದಾಖಲೆ ಪಡೆದು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿರುವ ಇಲಾಖೆ, ಇದುವರೆಗೆ 14,78,388 ಕಾರ್ಮಿಕರಿಗೆ ಒಟ್ಟು 739.19 ಕೋಟಿ ರು.ಪರಿಹಾರ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಕಲ್ಯಾಣ ಮಂಟಪ ಸೇರಿದಂತೆ ಇನ್ನಿತರೆ ಸಭಾ ಭವನಗಳಲ್ಲಿ ತಂಗಿದ್ದ ವಲಸೆ ಕಾರ್ಮಿಕರಿಗೆ ಸಿದ್ಧ ಆಹಾರವನ್ನು ಸರ್ಕಾರೇತರ ಸಂಸ್ಥೆಗಳೂ ಪೂರೈಸಿದ್ದವು. ಸಿದ್ಧ ಆಹಾರದ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳನ್ನು ಪೂರೈಸಿದೆ ಎಂದು ಕಾರ್ಮಿಕ ಇಲಾಖೆ ಹೇಳಿತ್ತಾದರೂ ಬಹುತೇಕ ಕಾರ್ಮಿಕರಿಗೆ ಈ ಪೊಟ್ಟಣಗಳು ದೊರೆತಿರಲಿಲ್ಲ. ಆದರೂ ಆಹಾರ ಪೊಟ್ಟಣಗಳು ಮತ್ತು ಆಹಾರ ಸಾಮಗ್ರಿಗಳಿಗೆ 69 ಕೋಟಿ ರು. ಖರ್ಚು ಮಾಡಿದೆ ಎಂದು ಖರ್ಚಿನ ಲೆಕ್ಕ ಒದಗಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಲಾಕ್‌ಡೌನ್ ಜಾರಿಯಾದ ಆರಂಭದ ದಿನಗಳಲ್ಲಿ ಕೇಂದ್ರ ಕಿಚನ್‌ನಿಂದ ಅಂದಾಜು 2 ಲಕ್ಷ ಆಹಾರ ಪೊಟ್ಟಣಗಳು ಮತ್ತು 1 ಲಕ್ಷ ಸಂಖ್ಯೆಯಲ್ಲಿ ಆಹಾರ ಸಾಮಗ್ರಿಗಳ ಹ್ಯಾಂಪರ್ಸ್‌ಗಳನ್ನು ವಿತರಿಸಲಾಗಿದೆ ಎಂದು ಇಲಾಖೆ ಹೇಳಿತ್ತು. ಆದರೆ ಬಹುತೇಕ ಕಾರ್ಮಿಕರಿಗೆ ಇದಾವುದೂ ತಲುಪಿರಲಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು. ಸುಸಜ್ಜಿತ ಸಹಾಯವಾಣಿ ಕೇಂದ್ರ ಮತ್ತು 1 ಲಕ್ಷ ಫುಡ್‌ಹ್ಯಾಂಪರ್ಸ್‌ಗಳನ್ನು ಸಿದ್ಧಪಡಿಸಿಕೊಂಡಿತ್ತು ಎಂದು ಪ್ರಚಾರ ಗಿಟ್ಟಿಸಿಕೊಂಡಿತ್ತಾದರೂ ಇದು ಕೂಡ ಆರ್ಹ ಫಲಾನುಭವಿಗಳ ಕೈ ಸೇರಿಲ್ಲ ಎಂದು ಹೇಳಲಾಗಿತ್ತು.
ಲಾಕ್‌ಡೌನ್ ದಿನಗಳಲ್ಲಿ ವಲಸೆ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಂಡಿಲ್ಲ ಎಂಬ ಬಲವಾದ ಆರೋಪಗಳು ಕೇಳಿಬಂದಿದ್ದವು.ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದರು. ಬೆಂಗಳೂರು ನಗರದಲ್ಲಿ ಕಾರ್ಮಿಕರಿಗೆ ಸಿದ್ಧ ಆಹಾರ ಮತ್ತು ಆಹಾರ ಸಾಮಗ್ರಿಗಳ ವಿತರಣೆಯಲ್ಲಿಯೂ ರಾಜಕೀಯ ಬೆರೆಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಸಿದ್ಧ ಅಹಾರ ಮತ್ತು ಆಹಾರ ಸಾಮಗ್ರಿಗಳನ್ನು ವಿತರಣೆಯಲ್ಲಿ ಅಕ್ರಮಗಳಾಗಿವೆ. ಇದರಲ್ಲಿ ಪಾರದರ್ಶಕತೆಯೇ ಇಲ್ಲ ಎಂದು ಆರೋಪಿಸಿದ್ದ ಪ್ರತಿಪಕ್ಷ ಕಾಂಗ್ರೆಸ್ ಕೂಡ ತನಿಖೆಗೆ ಒತ್ತಾಯಿಸಿತ್ತು. ಕಟ್ಟಡ ನಿರ್ಮಾಣ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯಿಂದ ನೀಡಲಾಗಿದ್ದ ಆಹಾರದ ಪೊಟ್ಟಣಗಳನ್ನು ಬಿಜೆಪಿ ಶಾಸಕರು ಮತ್ತು ಮಹಾನಗರಪಾಲಿಕೆ ಸದಸ್ಯರು ಬೇಕಾಬಿಟ್ಟಿಯಾಗಿ ಹಂಚಿದ್ದರು ಎಂದು ಆರೋಪಗಳ ಸುರಿಮಳೆಗೈದಿತ್ತು.
ಇಲಾಖೆಯ ಈ ಬಹುದೊಡ್ಡ ಲೋಪದಿಂದಾಗಿ ಅರ್ಹ ಫಲಾನುಭವಿಗಳಾದ ಕಟ್ಟಡ, ಇತರ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿ ಕ್ಷೇತ್ರದ ಕಾರ್ಮಿಕರು ತಮ್ಮದೇ ಕಲ್ಯಾಣ ಮಂಡಳಿಯ ನಿಧಿಯಿಂದ ನೀಡಲಾಗಿದ್ದ ಸಿದ್ಧ ಆಹಾರ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳಿಂದ ವಂಚಿತರಾಗಿದ್ದರು ಎಂದು ಹೇಳಲಾಗಿತ್ತು.
ಆಹಾರ ಸಾಮಗ್ರಿಗಳ ವಿತರಣೆ ಹೊಣೆಯನ್ನು ಆರ್‌ಎಸ್‌ಎಸ್‌ಸೇರಿದಂತೆ ಬಿಜೆಪಿ ನಾಯಕರ ನೇತೃತ್ವದ ಸೇವಾ ಸಂಸ್ಥೆಗಳಿಗೆ ವಹಿಸಿದ್ದು ಪ್ರತಿಪಕ್ಷಗಳ ಕೆಂಗಣ್ಣಿಗೆ ಕಾರ್ಮಿಕ ಇಲಾಖೆ ಗುರಿಯಾಗಿತ್ತು. ಈ ಸಂಸ್ಥೆಗಳು ಮತ್ತು ಕಾರ್ಮಿಕ ಇಲಾಖೆ ಮೂಲಕ ಆಹಾರ ಪೊಟ್ಟಣ ಮತ್ತು ಆಹಾರ ಸಾಮಗ್ರಿಗಳ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದನ್ನು ಸ್ಮರಿಸಬಹುದು.